ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್
ಚುನಾವಣಾ ಪ್ರಚಾರಕ್ಕೆ ಬಂದರೆ ಸಾಗರೋಪಾದಿಯಲ್ಲಿ ಮಹಿಳೆಯರು, ಮಕ್ಕಳೇನ್ನದೆ ಅಬಾಲ ವೃದ್ಧರವರೆಗೂ ಬಂದು ಸೇರುತ್ತಿರುವ ಜನರ ಪ್ರೀತಿಯೇ ನಿದರ್ಶನವಾಗಿದೆ. ಕಳೆದ 10 ವರ್ಷಗಲ್ಲಿ ತಾವು ಶಾಸಕನಾಗಿ ಕ್ಷೇತ್ರದ ಜನತೆಗೆ ನೀಡಿದ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪಿದೆ.
ಚಿಕ್ಕಬಳ್ಳಾಪುರ (ಏ.27): ಚುನಾವಣಾ ಪ್ರಚಾರಕ್ಕೆ ಬಂದರೆ ಸಾಗರೋಪಾದಿಯಲ್ಲಿ ಮಹಿಳೆಯರು, ಮಕ್ಕಳೇನ್ನದೆ ಅಬಾಲ ವೃದ್ಧರವರೆಗೂ ಬಂದು ಸೇರುತ್ತಿರುವ ಜನರ ಪ್ರೀತಿಯೇ ನಿದರ್ಶನವಾಗಿದೆ. ಕಳೆದ 10 ವರ್ಷಗಲ್ಲಿ ತಾವು ಶಾಸಕನಾಗಿ ಕ್ಷೇತ್ರದ ಜನತೆಗೆ ನೀಡಿದ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪಿದೆ. ಹಾಗಾಗಿ ಈ ರೀತಿ ಸೇರಿ ಎಲ್ಲರೂ ಉತ್ಸಾಹದಿಂದ ತಮ್ಮನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ತಮ್ಮಲ್ಲಿ ಧನ್ಯತಾ ಭಾವ ಮೂಡುತ್ತಿದೆ. ಪ್ರತಿ ಗ್ರಾಪಂನಲ್ಲಿ ಸಾವಿರಾರು ಮಂದಿ ಬಂದು ಆಶೀರ್ವಾದ ಮಾಡುತ್ತಿದ್ದಾರೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ತಾಲೂಕಿನ ಎಸ್.ಗೊಲ್ಲಹಳ್ಳಿ, ಅವಲ ಗುರ್ಕಿ ಮತ್ತು ಹಾರೋಬಂಡೆ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಎಸ್.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಜರಮೊಡಗು ಜಲಾಶಯದಿಂದ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡುವ ಜೊತೆಗೆ ಎಲ್ಲ ಗ್ರಾಮಗಳ ಪ್ರತಿ ಮನೆಗೆ ನಲ್ಲಿ ಮೂಲಕ ಶುದ್ಧ ನೀರು ನೀಡುವ ಕೆಲಸ ಮಾಡಲಾಗುವುದು. ಅಲ್ಲದೆ ಯುವಕರ ಭವಿಷ್ಯ ರೂಪಿಸಲು ಈ ಭಾಗಕ್ಕೆ ಕೈಗಾರಿಕೆಗಳನ್ನು ತಂದು ಉದ್ಯೋಗ ಸೃಷ್ಟಿಸಲಾಗುವುದು ಎಂದು ಹೇಳಿದರು.
ಭರವಸೆ ಈಡೇರಿಸದಿದ್ದರೆ ಮುಂದಿನ ಚುನಾವಣೆಗೆ ನಿಲ್ಲೋಲ್ಲ: ಸಚಿವ ಸುಧಾಕರ್
ಉದ್ಯೋಗ ನೀಡಿಯೇ ಮತ್ತೆ ಮತ ಕೇಳುವೆ: ಪ್ರಸ್ತುತ ಚುನಾವಣೆಗಳು ಮುಗಿದ ನಂತರ ಐದು ವರ್ಷದಲ್ಲಿ ಈ ಭಾಗವನ್ನು ಕೈಗಾರಿಕಾ ವಲಯವಾಗಿ ರೂಪಿಸಲಾಗುವುದು. ಆ ಮೂಲಕ ಪ್ರತಿ ಮನೆಗೆ ಉಧ್ಯೋಗ ನೀಡಲಾಗುವುದು. ಒಂದು ವೇಳೆ ಮುಂದಿನ ಐದು ವರ್ಷದಲ್ಲಿ ಉದ್ಯೋಗ ನೀಡದಿದ್ದರೆ 2028ರಲ್ಲಿ ಮತ ಕೇಳಲು ಮತ್ತೆ ಬರುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಪ್ರತಿ ಕೆರೆಯಲ್ಲಿ ನೀರು ತುಂಬಿಸಲಾಗುವುದು, ಪ್ರತಿ ರೈತನ ಬದುಕು ಬಂಗಾರ ಮಾಡಲು ಯೋಜನೆ ರೂಪಿಸಲಾಗುವುದು. ಮಹಿಳೆಯರ ಸಬಲೀಕರಣಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಲಾಗುವುದು. ಮಹಿಳೆಯರ ಸಬಲೀಕಣಕ್ಕಾಗಿ ಈಗಾಗಲೇ ಕ್ಷೇತ್ರದಲ್ಲಿ 4 ಸಾವಿರ ಸ್ತ್ರೀ ಶಕ್ತಿ ಸಂಘಗಳನ್ನು ರಚನೆ ಮಾಡಲಾಗಿದೆ. ಇದರಿಂದ ಸುಮಾರು 50 ಸಾವಿರ ಮಹಿಳೆಯರಿಗೆ ಆರ್ಥಿಕ ಚೈತನ್ಯ ಸಿಕ್ಕಿದೆ ಎಂದರು.
ಜನರ ಬಗ್ಗೆ ಬದ್ಧತೆ ಇದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ವೈದ್ಯಕೀಯ ಕಾಲೇಜು ನಿದರ್ಶನ. ಈಗ ಚಿಕ್ಕಬಳ್ಳಾಪುರದಲ್ಲಿ ಎಲ್ಲಿ ನೋಡಿದರೂ ನೀರು, ಎಲ್ಲಿ ನೋಡಿದರೂ ಹಸಿರು ಕಾಣಿಸಿ, ಮಲೆನಾಡಾಗಿ ಪರಿವರ್ತನೆಯಾಗುತ್ತಿದೆ. ಹೂವು, ಹಣ್ಣು ಯಥೇಚ್ಛವಾಗಿ ಬೆಳೆದು ರೈತರು ನೆಮ್ಮದಿಯಾಗಿ ಬದುಕಲು ಕಾರಣ ಬಿಜೆಪಿ ಸರ್ಕಾರ ಎಂಬುದನ್ನು ಅರಿಯಬೇಕು ಎಂದರು. ತಮ್ಮ ಮೊದಲ ಅವಧಿಯಲ್ಲಿ 1,400 ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗಿದೆ. ವೈದ್ಯಕೀಯ ಕಾಲೇಜಿನ ನಿರ್ಮಾಣಕ್ಕಾಗಿಯೇ 800 ಕೋಟಿ ಅನುದಾನ ತರಲಾಗಿದೆ. ಎರಡನೇ ಅವಧಿಯಲ್ಲಿ 2,200 ಕೋಟಿ ಅನುದಾನ ತರಲಾಗಿದೆ.
ಈ ಹಿಂದೆ ಎಷ್ಟು ಶಾಸಕರು, ಸಚಿವರು, ಕೇಂದ್ರ ಸಚಿವರಾಗಿದ್ದರು, ಅವರು ಯಾಕೆ ತರಲಿಲ್ಲ ಎಂದು ಪ್ರಶ್ನಿಸಿದರು. ಅವರಿಗೆ ಜನರ ಮೇಲೆ ಕಾಳಜಿ ಇರಲಿಲ್ಲವೇ, ಇವೆಲ್ಲವನ್ನೂ ತರಲು ಸುಧಾಕರ್ ಬರಬೇಕಾಯಿತಲ್ಲ. ಇಂತಹ ಸಂದರ್ಭದಲ್ಲಿ ಮತ ಕೇಳಲು ನಿಮಗೆ ಯಾವ ನೈತಿಕತೆ ಇದೆ. ಸಾವಿರಾರು ನಿವೇಶನ ನೀಡುತ್ತಿರುವುದು ಸುಧಾಕರ್ ಹೊರತು ಕಾಂಗ್ರೆಸ್ ಅಲ್ಲ. ನಿವೇಶನ ಸಿಗದವರಿಗೆ ಚುನಾವಣೆ ನಂತರ ನೀಡುವ ಕೆಲಸವಾಗಲಿದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯದಲ್ಲಿ ಕ್ರಾಂತಿಕಾರ ಯೋಜನೆ: ಡಬಲ್ ಎಂಜಿನ್ ಸರ್ಕಾರ ಯಾಕೆ ಬೇಕು ಎಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಪ್ರತಿಯೊಂದು ಕುಟುಂಬದ ಬಗ್ಗೆ ಅವರು ಕಾಳಜಿ ವಹಿಸಿದ್ದಾರೆ. ಆಯುಷ್ಮಾನ್ ಭಾರತ್ ಮೂಲಕ ಪ್ರತಿ ಕುಟುಂಬಕ್ಕೆ 5 ಲಕ್ಷ ರುಪಾಯಿ ಆರೋಗ್ಯ ವಿಮೆ ನೀಡಲಾಗುತ್ತಿದೆ. ಇಂತಹ ಆರೋಗ್ಯ ಭದ್ರತೆ ನೀಡಿದ ಸರ್ಕಾರ ವಿಶ್ವದಲ್ಲಿಯೇ ಎಲ್ಲಿಯೂ ಇಲ್ಲ ಎಂದರು.
ಕಾಂಗ್ರೆಸ್ ಪರಿಶಿಷ್ಟರಿಗೆ ಮೀಸಲಾತಿ ನೀಡಲಿಲ್ಲ: ಅನೇಕ ವರ್ಷಗಳಿಂದ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುವುದು, ಸುಳ್ಳು ಮಾತುಗಳನ್ನು ಹೇಳಿ ಮತ ಪಡೆಯುತ್ತಿತ್ತು. ಆದರೆ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಲಿಲ್ಲ, ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ, ಒಳ ಮೀಸಲಾತಿ ನೀಡಿದ್ದು ಬಿಜೆಪಿ. ಬಲಿಜ ಸಮುದಾಯಕ್ಕೆ ಇದ್ದ 2ಎ ಮೀಸಲಾತಿ ತೆಗೆದಿದ್ದು ಕಾಂಗ್ರೆಸ್, ಆದರೆ ಬಿಜೆಪಿ ಸರ್ಕಾರ 2ಎ ಶೈಕ್ಷಣಿಕ ಮೀಸಲಾತಿ ನೀಡಿದೆ. 2ಸಿ ಮೀಸಲಾತಿಯಡಿ ಉದ್ಯೋಗಕ್ಕೆ ಶೇ.4ರಿಂದ 6ಕ್ಕೆ ಹೆಚ್ಚಿಸಲಾಗಿದೆ ಎಂದರು.
ನಾನೂ ರಕ್ತದಲ್ಲಿ ಬರೆದುಕೊಡುವೆ ಕಾಂಗ್ರೆಸ್ ಸರ್ಕಾರ ರಚಿಸಲ್ಲ: ಸಚಿವ ಸುಧಾಕರ್
ಅನ್ನದಾತರಾದ ಒಕ್ಕಲಿಗರಿಗೆ ಜೆಡಿಎಸ್ ಮೀಸಲಾತಿ ಹೆಚ್ಚಿಸಲಿಲ್ಲ, ಪ್ರತಿ ವರ್ಗದ ಜನರಿಗೆ ನ್ಯಾಯ ಕೊಟ್ಟಿದ್ದು ಬಿಜೆಪಿ. ತಮಗೆ ಮತ ನೀಡಿದರೆ ಮೋದಿ ಅವರಿಗೆ ಶಕ್ತಿ ನೀಡಿದಂತಾಗುತ್ತದೆ. ಪುರುಷರಿಗೆ ಸಮಾನವಾಗಿ ಮಹಿಳೆಯರಿಗೆ ಕಲ್ಪಿಸಲು 10 ವರ್ಷ ಶ್ರಮಿಸಲಾಗಿದೆ ಎಂದರು. ತಾವೇ ಸುಧಾಕರ್ ಎಂದು ಕ್ಷೇತ್ರದ ಪ್ರತಿ ಮನೆಗೆ ಭೇಟಿ ನೀಡಿ ಕಾರ್ಯಕರ್ತರೇ ಮತ ಯಾಚನೆ ಮಾಡಬೇಕು. ಚುನಾವಣೆ ನಂತರ ಪ್ರತಿ ಗ್ರಾಮಕ್ಕೆ ಬಂದು ಮಾತನಾಡಿಸಲಾಗುವುದು. ಮೂರು ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷ ಸೂಚಿಸಿದೆ. ಹಾಗಾಗಿ ತಾವು ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿ ತೊಡಗಲು ಸಾಧ್ಯವಿಲ್ಲ. ಇಂದಿನಿಂದ ತಮ್ಮ ಪರವಾಗಿ ನೀವೇ ಮತಯಾಚನೆ ಮಾಡಬೇಕು ಎಂದು ಮನವಿ ಮಾಡಿದರು ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.