Asianet Suvarna News Asianet Suvarna News

ಪುಟ್ಟರಾಜುಗೆ ನೋಡಿದ ಹುಡ್ಗೀನಾ ಎಚ್‌ಡಿಕೆ ಮದುವೆಯಾಗೋದು ಸರಿನಾ?: ಸಚಿವ ಎನ್.ಚಲುವರಾಯಸ್ವಾಮಿ

ಪುಟ್ಟರಾಜುಗೆ ನೋಡಿದ ಹುಡ್ಗೀನಾ ಕುಮಾರಸ್ವಾಮಿಯವರು ಮದುವೆಯಾಗೋದು ಸರಿನಾ? ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

Minister N Cheluvarayaswamy Slams On HD Kumaraswamy At Mandya gvd
Author
First Published Mar 27, 2024, 4:23 AM IST

ಮಂಡ್ಯ (ಮಾ.27): ನಮ್ಮ ಮಂಡ್ಯ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ. ನಾವು ನಮ್ಮ ಜಿಲ್ಲೆಯನ್ನು ಹೇಗೋ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ. ಆದರೆ, ನೀವು ಮಾತ್ರ ನಮ್ಮ ಜಿಲ್ಲೆಗೆ ಬರಬೇಡಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿಯುವ ಮಾಜಿ ಸಿಎಂ ಕುಮಾರಸ್ವಾಮಿ ಕುರಿತು ಮನವಿ ಮಾಡಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನೀವು ಇನ್ನೊಮ್ಮೆ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾದರೂ ನಮಗೆ ಸಂತೋಷ. ನಿಮ್ಮ ಬಗ್ಗೆ ನಾವು ಕೆಟ್ಟದಾಗಿ ಮಾತನಾಡುವುದಿಲ್ಲ. ಜಿಲ್ಲೆಯ ಕಡೆ ಮಾತ್ರ ನಿಮ್ಮ ದೃಷ್ಟಿ ಬೀಳದಿರಲಿ ಎಂದರು.

ಕುಮಾರಸ್ವಾಮಿ ನನಗೆ ಯಾವತ್ತೂ ವೈರಿಯಲ್ಲ. ಅವರು ನನ್ನನ್ನು ವೈರಿ ಅಂತ ಕರೆದಿದ್ದಾರೆ. ಅವರು ನನಗೆ ಸ್ನೇಹಿತರು. ಬುಟ್ಟಿಯೊಳಗೆ ಕರಿ ನಾಗರಹಾವು ಇದೆ, ಬಿಳಿ ನಾಗರಹಾವಿದೆ. ನಾಳೆ ಬಿಡ್ತೀವಿ, ನಾಡಿದ್ದು ಬಿಡ್ತೀವಿ ಎಂದು ಹೇಳುತ್ತಲೇ ಇದ್ದಾರೆ. ಇವರನ್ನು ನಂಬಿಕೊಂಡು ಪುಟ್ಟರಾಜು ಸಭೆ ಮಾಡಿದರು. ಧರ್ಮಸ್ಥಳ, ಚುಂಚನಗಿರಿ, ಅಯೋಧ್ಯೆಗೆಲ್ಲಾ ಹೋಗಿ ಬಂದರು. ಎಸ್.ಎಂ.ಕೃಷ್ಣ ಅವರ ಮನೆಗೂ ಹೋಗಿ ಬಂದರು. ಈಗ ಯಾಕೋ ಆಗ್ತಾ ಇಲ್ಲ ಕಣಯ್ಯ. ನೀನು ನೋಡಿದ ಹುಡುಗಿ ಸ್ವಲ್ಪ ಚೆನ್ನಾಗಿದ್ದಾಳೆ. ಹಾಗಾಗಿ ನಾನೇ ಮದುವೆಯಾಗಬೇಕು ಅಂತ ಬಯಸಿದ್ದೇನೆ.

ನಿನಗೆ ಮುಂದೆ ಒಳ್ಳೆಯ ಹುಡುಗಿ ನೋಡೋಣ ಅಂದಿದ್ದಾರಂತೆ. ಮಗನ ಮದುವೆ ಮಾಡೋಕೆ ಹೋಗೆ ಅಪ್ಪನೇ ಮದುವೆಯಾದ ಎಂಬಂತಾಗಿದೆ ಎಂದು ಕುಹಕವಾಡಿದರು. ಈಗ ಪುಟ್ಟರಾಜು ಕತೆ ಏನಾಗಬೇಕು. ನಾನು ಹೇಗೋ ಕಾಂಗ್ರೆಸ್ ಸೇರಿ ಬಚಾವಾದೆ. ಆದರೆ, ಪುಟ್ಟರಾಜು ಕತೆ ಮುಗಿತು. ಅವರೂ ನಮ್ಮ ಸ್ನೇಹಿತರೇ. ಅವರೂ ಕೂಡ ಜೆಡಿಎಸ್‌ನೊಳಗೆ ಸಂತೋಷದಿಂದ ಏನೂ ಇಲ್ಲ ಎಂದರು. ಕಳೆದ ಚುನಾವಣಾ ಸಮಯದಲ್ಲಿ ಸುಮಲತಾ ಅವರನ್ನು ಸಾಕಷ್ಟು ಹೀಯಾಳಿಸಿದರು. ಇವತ್ತು ನಮ್ಮ ಅಕ್ಕ ಅಂತಾರೆ. ಅವತ್ತೇ ಅಕ್ಕ ಅಂದಿದ್ದರೆ ಅಂಬರೀಶ್ ಅಣ್ಣನವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. 

ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈ ಹಿಡಿತ ತಪ್ಪಿಸಲೆಂದೇ ನನ್ನ ಸ್ಪರ್ಧೆ: ಕೆ.ಎಸ್‌.ಈಶ್ವರಪ್ಪ

ನಮ್ಮ ಅಕ್ಕ ಚುನಾವಣೆಗೆ ನಿಂತಿದ್ದಾರೆ. ಅವರು ಗೆದ್ದರೂ ಒಂದೇ, ನಮ್ಮ ಅಣ್ಣ ಗೆದ್ದರೂ ಒಂದೇ ಎಂದಿದ್ದರೂ ಆಗುತ್ತಿತ್ತು. ಈಗ ಅವರ ಓಲೈಕೆ ಮಾಡಿಕೊಳ್ಳೋಕೆ ಅಕ್ಕ ಅಂತಿದ್ದಾರೆ ಎಂದು ದೂಷಿಸಿದರು. ಸಭೆಯಲ್ಲಿ ಅಭ್ಯರ್ಥಿ ಸ್ಟಾರ್‌ ಚಂದ್ರು, ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಿದಂಬರಂ, ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios