Asianet Suvarna News Asianet Suvarna News

ಬೊಮ್ಮಾಯಿಗೆ ಮೊದಲ ಸಲ ದಿಲ್ಲಿಗೆ ಹೋಗುವ 'ಆನಂದ' ಸಿಗುವುದೇ?

 ಬಿಜೆಪಿ ಭದ್ರಕೋಟೆ ಎನಿಸಿರುವ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿರುವುದು ಗಮನ ಸೆಳೆದಿದೆ. ರಾಜಕೀಯದಲ್ಲಿ ಹಳೆ ಹುಲಿಯಾಗಿರುವ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ ಸವಾಲು ಒಡ್ಡುತ್ತಿದ್ದು, ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಸರ್ವ ಪ್ರಯತ್ನ ನಡೆಸಿದ್ದಾರೆ.

Lok sabha election 2024 in Karnataka haveri bjp candidate basavaraj bommai rav
Author
First Published May 4, 2024, 10:10 AM IST

ನಾರಾಯಣ ಹೆಗಡೆ

ಹಾವೇರಿ (ಮೇ.4) : ಬಿಜೆಪಿ ಭದ್ರಕೋಟೆ ಎನಿಸಿರುವ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿರುವುದು ಗಮನ ಸೆಳೆದಿದೆ. ರಾಜಕೀಯದಲ್ಲಿ ಹಳೆ ಹುಲಿಯಾಗಿರುವ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ ಸವಾಲು ಒಡ್ಡುತ್ತಿದ್ದು, ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಸರ್ವ ಪ್ರಯತ್ನ ನಡೆಸಿದ್ದಾರೆ.

ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಸಂಸದ ಶಿವಕುಮಾರ ಉದಾಸಿಯವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹಲವರು ಪ್ರಯತ್ನ ನಡೆಸಿದ್ದರು. ಕೆ.ಎಸ್‌. ಈಶ್ವರಪ್ಪ ಅವರು ತಮ್ಮ ಪುತ್ರನನ್ನು ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಕ್ಷೇತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಪ್ರಬಲ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೇ ಕಣಕ್ಕಿಳಿಸಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಬೊಮ್ಮಾಯಿ, ಲೋಕಸಭೆ ಪ್ರವೇಶಿಸಲು ಸರ್ವ ಪ್ರಯತ್ನ ನಡೆಸಿದ್ದಾರೆ.

ಬರೀ ಸುಳ್ಳು ಹೇಳುವ ಬೋಗಸ್ ಕ್ಯಾಂಡಿಡೇಟ್ ಬೊಮ್ಮಾಯಿ: ವಿನಯ್ ಕುಲಕರ್ಣಿ ವಾಗ್ದಾಳಿ

1952ರಿಂದ ಧಾರವಾಡ ದಕ್ಷಿಣ ಕ್ಷೇತ್ರದ ಭಾಗವಾಗಿದ್ದ ಜಿಲ್ಲೆ 2008ರಲ್ಲಿ ಕ್ಷೇತ್ರ ಮರುವಿಂಗಡಣೆ ತರುವಾಯ ಹಾವೇರಿ ಕ್ಷೇತ್ರವಾಗಿ ಮಾರ್ಪಟ್ಟಿತು. ಹಾವೇರಿ ಜಿಲ್ಲೆಯ 5 ಹಾಗೂ ಗದಗ ಜಿಲ್ಲೆಯ 3 ಸೇರಿದಂತೆ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಂಡಿದೆ.

2004ರ ಬಳಿಕ ಸತತ ನಾಲ್ಕು ಬಾರಿ ಬಿಜೆಪಿ ಗೆದ್ದಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ಶಿವಕುಮಾರ ಉದಾಸಿ ಜಯಭೇರಿ ಬಾರಿಸಿದ್ದರು. ಈ ಚುನಾವಣೆಯಲ್ಲೂ ಕೇಸರಿ ಬಾವುಟ ಹಾರಿಸಲು ಕಮಲ ಪಡೆ ಸಜ್ಜಾಗಿದೆ. ಸತತ ಸೋಲುಗಳ ಬಳಿಕ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಈ ಸಲ ಯುವಕ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಭದ್ರ ಕೋಟೆಗೆ ಲಗ್ಗೆ ಇಡಲು ಕೈಪಡೆ ಕಸರತ್ತು ನಡೆಸಿದೆ. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರೂ ಕೈ ಮತ್ತು ಕಮಲ ಪಡೆಯ ನಡುವೆಯೇ ನೇರ ಸ್ಪರ್ಧೆ ಏರ್ಪಟ್ಟಿದೆ. ಕೈ, ಕಮಲ ನೇರ ಸ್ಪರ್ಧೆ:

ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರವು ಬಿಜೆಪಿ ಭದ್ರಕೋಟೆ ಎನಿಸಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಮಾಲ್‌ ಮಾಡಿತ್ತು. 8 ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹಾವೇರಿ, ಹಾನಗಲ್ಲ, ಬ್ಯಾಡಗಿ, ಹಿರೇಕೆರೂರು, ರಾಣಿಬೆನ್ನೂರು, ಗದಗ, ರೋಣದಲ್ಲಿ ಕೈ ಶಾಸಕರಿದ್ದರೆ, ಶಿರಹಟ್ಟಿಯಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರ ಲೋಕಸಭೆ ವ್ಯಾಪ್ತಿಯಲ್ಲಿ ಇಲ್ಲದಿರುವುದು ವಿಶೇಷ. ಶಾಸಕರ ಸಂಖ್ಯಾಬಲ ನೋಡಿದರೆ ಕಾಂಗ್ರೆಸ್‌ಗೆ ಅನುಕೂಲಕರವಾಗಿದೆ. ಆದ್ದರಿಂದ ಈ ಸಲ ಕ್ಷೇತ್ರವನ್ನು ವಶಕ್ಕೆ ಪಡೆಯಲು ಕಾಂಗ್ರೆಸ್‌ ಪ್ರಯತ್ನ ನಡೆಸಿದೆ. ಜತೆಗೆ, ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಮಾಜಿ ಸಿಎಂಗೇ ಬೆವರಿಳಿಸುವಂತೆ ಕಾಂಗ್ರೆಸ್‌ ನಾಯಕರು ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಕೂಡ ಮೋದಿ ಅಲೆಯಲ್ಲಿ ತೇಲುತ್ತಿದ್ದು, ಮತ್ತೊಮ್ಮೆ ಕೇಸರಿ ಬಾವುಟ ಹಾರಿಸಲು ಪ್ರಯತ್ನ ನಡೆಸಿದೆ. ತಾವು ಸಿಎಂ ಆಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳೊಂದಿಗೆ ಮೋದಿ ಪ್ರಭಾವದಲ್ಲಿ ಗೆಲುವು ಸುಲಭ ಎಂಬ ಲೆಕ್ಕಾಚಾರದಲ್ಲಿ ಬೊಮ್ಮಾಯಿ ಇದ್ದಾರೆ. ಕ್ಷೇತ್ರದಲ್ಲಿ ತಮಗಿರುವ ಹಿಡಿತ ಬಳಸಿಕೊಂಡು ರಾಜಕೀಯ ಅನುಭವಗಳ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ದೆಹಲಿ ರಾಜಕಾರಣ ಪ್ರವೇಶಿಸುವ ತವಕದಲ್ಲಿ ಬೊಮ್ಮಾಯಿ ಇದ್ದಾರೆ.

ಅಭ್ಯರ್ಥಿಗಳ ಪರಿಚಯ:

ಬಸವರಾಜ ಬೊಮ್ಮಾಯಿ (ಬಿಜೆಪಿ):

ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯ ಪ್ರಭಾವಿ ನಾಯಕರಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿಯೂ ಒಂದೂವರೆ ವರ್ಷ ಆಡಳಿತ ನಡೆಸಿದ ಅನುಭವವಿದೆ. 2008ರಿಂದ ಸತತವಾಗಿ ನಾಲ್ಕು ಬಾರಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಅವರು, ಎರಡು ಬಾರಿ ಮೇಲ್ಮನೆಯನ್ನೂ ಪ್ರತಿನಿಧಿಸಿದ್ದಾರೆ. 2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ, 2019ರಲ್ಲಿ ಗೃಹ ಸಚಿವರಾಗಿ, ಬಳಿಕ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್‌):

ಶಿರಹಟ್ಟಿ ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ ಅವರ ಪುತ್ರರಾಗಿರುವ ಆನಂದಸ್ವಾಮಿ ಗಡ್ಡದೇವರಮಠ ಅವರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ತಂದೆಯ ಗರಡಿಯಲ್ಲಿ ಬೆಳೆದಿರುವ ಅವರು, ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೇ ಲೋಕಸಭೆ ಚುನಾವಣೆಗಾಗಿ ಕ್ಷೇತ್ರದಲ್ಲಿ ಓಡಾಡಿ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯಲ್ಲೇ ಇವರ ಹೆಸರು ಘೋಷಣೆ ಮಾಡಿತು.

ರೈತ ವಿರೋಧಿ ಸರ್ಕಾರ ಕರ್ನಾಟಕದಲ್ಲಿದೆ: ಬಸವರಾಜ ಬೊಮ್ಮಾಯಿ ವಾಗ್ದಾಳಿ

ಜಾತಿ-ಮತ ಲೆಕ್ಕಾಚಾರ:

ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ. ಇದೇ ಕಾರಣಕ್ಕೆ ಎರಡೂ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕಿವೆ. ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಇಬ್ಬರೂ ಲಿಂಗಾಯತ ಸಮುದಾಯದವರು. ಇನ್ನು ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ ಸೇರಿದಂತೆ ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಮತದಾರರ ವಿವರ

  • ಪುರುಷರು- 8, 95, 366.
  • ಮಹಿಳೆಯರು- 8,82,430.
  • ಇತರರು-- 81

ಒಟ್ಟು - 17,77,877.

2019ರ ಫಲಿತಾಂಶ:ಶಿವಕುಮಾರ ಉದಾಸಿ- ಬಿಜೆಪಿ ಗೆಲುವು- 6,82,660.

ಡಿ.ಆರ್. ಪಾಟೀಲ- ಕಾಂಗ್ರೆಸ್- ಸೋಲು- 5, 42, 778.

Follow Us:
Download App:
  • android
  • ios