Asianet Suvarna News Asianet Suvarna News

ಚುನಾವಣೆ ಮುಗಿಯುವವರೆಗೂ ಅಮೇಠಿ, ರಾಯ್‌ಬರೇಲಿ ಪ್ರಿಯಾಂಕಾ ಠಿಕಾಣಿ, ಸಹೋದರನನ್ನು ಗೆಲ್ಲಿಸಲು ಪಣ

ತಮ್ಮ ಸೋದರ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ರಾಯ್‌ಬರೇಲಿ, ಆಪ್ತ ಕಣಕ್ಕಿಳಿದಿರುವ ಅಮೇಠಿ ಕ್ಷೇತ್ರದಲ್ಲಿ ಪಕ್ಷ ಗೆಲ್ಲಿಸುವ ಹೊಣೆಯನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೊತ್ತುಕೊಂಡಿದ್ದಾರೆ. ಹೀಗಾಗಿ ಚುನಾವಣೆವರೆಗೂ ಅವರು ಅಲ್ಲೇ ಠಿಕಾಣಿ ಹೂಡಲಿದ್ದಾರೆ.

Congress leader Priyanka Gandhi Vadra will lead the Lok Sabha poll campaign in Rae Bareli and Amethi gow
Author
First Published May 6, 2024, 9:56 AM IST

ನವದೆಹಲಿ (ಮೇ.6): ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಷ್ಠೆಯ ಕ್ಷೇತ್ರಗಳಾಗಿರುವ ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಅಮೇಠಿಯಲ್ಲಿ ಪಕ್ಷವನ್ನು ಗೆಲ್ಲಿಸುವ ಹೊಣೆಯನ್ನು ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಾವೇ ಹೊತ್ತುಕೊಂಡಿದ್ದಾರೆ. ಚುನಾವಣೆ ಮುಗಿಯುವವರೆಗೆ ಅವರು ಅಲ್ಲೇ ಠಿಕಾಣಿ ಹೂಡಲಿದ್ದು, ರಾಯ್‌ಬರೇಲಿಯಲ್ಲಿ ಸಹೋದರ ರಾಹುಲ್‌ ಗಾಂಧಿ ಹಾಗೂ ಅಮೇಠಿಯಲ್ಲಿ ತಮ್ಮ ಕುಟುಂಬದ ಆಪ್ತ ಕಿಶೋರಿ ಲಾಲ್‌ ಶರ್ಮಾ ಪರ ಸತತವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ಶೆಹಜಾದಾ ಎನ್ನುವ ಮೋದಿ ಶೆಹೆನ್‌ಶಾ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಸಾಕಷ್ಟು ವಿಳಂಬ ಮಾಡಿ ಈ ಎರಡು ಕ್ಷೇತ್ರಗಳಿಗೆ ಶುಕ್ರವಾರ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿತ್ತು. ರಾಯ್‌ಬರೇಲಿಗೆ ಎರಡು ದಶಕದಿಂದ ಸೋನಿಯಾ ಗಾಂಧಿ ಸಂಸದೆಯಾಗಿದ್ದು, ಈ ಬಾರಿ ಆ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸಿದ್ದಾರೆ. ಇನ್ನು, ಅಮೇಠಿಯಲ್ಲಿ ರಾಹುಲ್‌ ಕಳೆದ ಬಾರಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದು, ಈ ಬಾರಿ ಅಲ್ಲಿಗೆ ಕಿಶೋರಿ ಲಾಲ್‌ ಶರ್ಮಾ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಸ್ಮೃತಿ ಇರಾನಿಯೇ ಅಭ್ಯರ್ಥಿ. ರಾಯ್‌ಬರೇಲಿಯಲ್ಲಿ ಕಳೆದ ಬಾರಿ ಸೋನಿಯಾ ವಿರುದ್ಧ ಸೋತಿದ್ದ ದಿನೇಶ್‌ ಪ್ರತಾಪ್‌ ಸಿಂಗ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಮುಂಬೈ ದಾಳಿಯಲ್ಲಿ ಅಧಿಕಾರಿ ಕರ್ಕರೆ ಕೊಂದಿದ್ದು ಉಗ್ರನಲ್ಲ ಆರ್‌ಎಸ್‌ಎಸ್‌ ಪೊಲೀಸ್‌, ವಿವಾದವೆಬ್ಬಿಸಿದ ಕಾಂಗ್ರೆಸಿಗ

ಈ ಎರಡೂ ಕ್ಷೇತ್ರಗಳ ಜವಾಬ್ದಾರಿಯನ್ನು ಪ್ರಿಯಾಂಕಾ ಈಗಾಗಲೇ ತೆಗೆದುಕೊಂಡಿದ್ದು, ಸೋಮವಾರದಿಂದಲೇ ಸತತ ಪ್ರಚಾರ ನಡೆಸಲಿದ್ದಾರೆ. ಎರಡೂ ಕ್ಷೇತ್ರದಲ್ಲಿ ತಲಾ 250ರಿಂದ 300 ಹಳ್ಳಿಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಿಯಾಂಕಾ ಸ್ಪರ್ಧೆಯಿಂದ ದಿಂದೆ ಸರಿದಿದ್ಯಾಕೆ?: ಸೋನಿಯಾ ತೆರವು ಮಾಡಿದ ರಾಯ್‌ಬರೇಲಿಯಿಂದ ಇನ್ನೇನು ಪ್ರಿಯಾಂಕಾ ಸ್ಪರ್ಧಿಸಿಯೇ ಬಿಟ್ಟರು ಎನ್ನುವ ಹೊತ್ತಿನಲ್ಲಿ ಅವರು ಸ್ಪರ್ಧೆಯಿಂದಲೇ ದೂರ ಉಳಿಯುವ ನಿರ್ಧಾರದ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ ಇಂಥದ್ದೊಂದು ನಿರ್ಧಾರದ ಹಿಂದೆ ಉಳಿದ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಅಸ್ತ್ರ ತಪ್ಪಿಸುವ ಅಂಶ ಉದ್ದೇಶ ಇದೆ ಎನ್ನಲಾಗಿದೆ.

ಈಗಾಗಲೇ ಗಾಂಧಿ ಕುಟುಂಬದಿಂದ ಸೋನಿಯಾ ರಾಜ್ಯಸಭೆ ಪ್ರವೇಶ ಮಾಡಿದ್ದಾರೆ. ರಾಹುಲ್‌ ವಯನಾಡಿನಲ್ಲಿ ಗೆಲುವುದು ಬಹುತೇಕ ಖಚಿತ. ಹೀಗಿರುವಾಗ ಅದೇ ಕುಟುಂಬದ ಮೂರನೇ ವ್ಯಕ್ತಿಯಾಗಿ ತಾವು ಕಣಕ್ಕೆ ಇಳಿದರೆ, ಅದು ಈಗಾಗಲೇ ತಮ್ಮ ಕುಟುಂಬದ ವಿರುದ್ಧ ವಂಶಪಾರಂಪರ್ಯ ರಾಜಕೀಯದ ಸತತ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಗೆ ಮತ್ತೊಂದು ದೊಡ್ಡ ಅಸ್ತ್ರ ನೀಡಿದಂತಾಗುತ್ತದೆ. ಅದನ್ನು ತಪ್ಪಿಸಲು ಸದ್ಯಕ್ಕೆ ಚುನಾವಣೆಯಿಂದ ದೂರ ಇರುವುದೇ ಉತ್ತಮ ಎಂಬ ನಿರ್ಧಾರಕ್ಕೆ ಸ್ವತಃ ಪ್ರಿಯಾಂಕಾ ಬಂದರು ಎನ್ನಲಾಗಿದೆ.

Follow Us:
Download App:
  • android
  • ios