Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಬಿಕ್ಕಟ್ಟು ಶಮನಕ್ಕೆ ಇಂದು ಯಡಿಯೂರಪ್ಪ ದಾವಣಗೆರೆಗೆ

ಸೋಮವಾರ ಬೆಂಗಳೂರಿನಲ್ಲಿ ಕ್ಷೇತ್ರದ ಮುಖಂಡರ ಸಭೆ ಕರೆದಿದ್ದರೂ ಅಸಮಾಧಾನಗೊಂಡಿರುವ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್‌.ಎ.ರವೀಂದ್ರನಾಥ್ ಮತ್ತಿತರರು ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ತಾವೇ ಅಲ್ಲಿಗೆ ತೆರಳಿ ಅತೃಪ್ತ ಮುಖಂಡರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ ಯಡಿಯೂರಪ್ಪ

BS Yediyurappa will be go to Davanagere for Ticket Crisis in BJP of Lok Sabha Election 2024 grg
Author
First Published Mar 26, 2024, 6:15 AM IST

ಬೆಂಗಳೂರು(ಮಾ.26):  ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತಿತರ ನಾಯಕರು ಮಂಗಳವಾರ ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಕ್ಷೇತ್ರದ ಮುಖಂಡರ ಸಭೆ ಕರೆದಿದ್ದರೂ ಅಸಮಾಧಾನಗೊಂಡಿರುವ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್‌.ಎ.ರವೀಂದ್ರನಾಥ್ ಮತ್ತಿತರರು ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ತಾವೇ ಅಲ್ಲಿಗೆ ತೆರಳಿ ಅತೃಪ್ತ ಮುಖಂಡರೊಂದಿಗೆ ಮಾತುಕತೆ ನಡೆಸಲು ಯಡಿಯೂರಪ್ಪ ಅವರು ನಿರ್ಧರಿಸಿದರು ಎಂದು ತಿಳಿದು ಬಂದಿದೆ.

ಯಾವುದೇ ಕಾರಣಕ್ಕೂ ಸಿದ್ದೇಶ್ವರ್ ಅಥವಾ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬಾರದು ಎಂದು ರೇಣುಕಾಚಾರ್ಯ, ರವೀಂದ್ರನಾಥ್ ಮತ್ತಿತರರು ಆಗ್ರಹಿಸಿಕೊಂಡೇ ಬಂದಿದ್ದರು. ಇದೀಗ ಸಿದ್ದೇಶ್ವರ್ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಹೀಗಾಗಿ, ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರವಾಗಿದೆ.

ಲೋಕಸಭಾ ಚುನಾವಣೆ 2024: ಈ ಸಲ 100 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್‌ ಮಿಸ್‌..!

ಯಡಿಯೂರಪ್ಪ ಅವರೊಂದಿಗೆ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್‌, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಮತ್ತಿತರರು ದಾವಣಗೆರೆಗೆ ತೆರಳಲಿದ್ದಾರೆ ಎನ್ನಲಾಗಿದೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಅತೃಪ್ತಿ ಶಮನ 

ಕೊಪ್ಪಳ: ಸಂಸದ ಸಂಗಣ್ಣ ಕರಡಿ ಅವರ ಮೂರು ಪ್ರಶ್ನೆಗಳಿಗೂ ರಾಜ್ಯ ಬಿಜೆಪಿ ಮುಖಂಡರು ದೆಹಲಿ ಹೈಕಮಾಂಡ್‌ನತ್ತ ಬೊಟ್ಟು ಮಾಡಿ, ಕೈ ಚೆಲ್ಲಿದ್ದು, ಸೋಮವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದಲ್ಲಿದ್ದುಕೊಂಡು ಕಾರ್ಯನಿರ್ವಹಿಸುವಂತೆ ಕರಡಿಗೆ ಸೂಚನೆ ನೀಡಿ, ಕಳುಹಿಸಿದ್ದಾರೆ. ಇದರೊಂದಿಗೆ ಭಾರಿ ಕುತೂಹಲ ಕೆರಳಿಸಿದ್ದ ಕರಡಿ ಟಿಕೆಟ್ ವಿವಾದ ಒಂದು ಹಂತಕ್ಕೆ ತಣ್ಣಗಾದಂತೆ ಕಾಣುತ್ತಿದೆ.

ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮೊದಲು ಕರಡಿ ಬೆಂಬಲಿಗರು ಸೇರಿದಂತೆ ಬಹಿರಂಗವಾಗಿ ಸಭೆ ನಡೆಸಲಾಯಿತು. ಇದಾದ ಮೇಲೆ ಕರಡಿ ಹಾಗೂ ಕೆಲವೇ ಕೆಲವು ಆಪ್ತರೊಂದಿಗೆ ಚರ್ಚೆ ಮಾಡಲಾಯಿತು.
ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯಂದ್ರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಎನ್. ರವಿಕುಮಾರ ಮತ್ತು ಕರಡಿ ಹಾಗೂ ಅವರನ್ನು ಬೆಂಬಲಿಸಿ ಬಂದಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪ್ರಮುಖರಿದ್ದರು.

ಸಭೆಯಲ್ಲಿ ಆಗಿದ್ದೇನು?

ಸಂಸದರು ಕೇಳಿದ ಮೂರು ಪ್ರಶ್ನೆಗಳಿಗೂ ದೆಹಲಿ ಹೈಕಮಾಂಡ್ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ. ನಾವು ಸಹ ನಿಮ್ಮ ಹೆಸರನ್ನೇ ಕಳುಹಿಸಿದ್ದೆವು. ನಿಮ್ಮ ಸೇವೆಯ ಬಗ್ಗೆ ನಮಗೆ ಅಪಾರ ಗೌರವ ಇದೆ. ಸರ್ವೇ ವರದಿಯಲ್ಲಿಯೂ ನಿಮ್ಮ ಪರವಾಗಿಯೇ ಬಂದಿದೆ. ಆದರೆ, ಇದೆಲ್ಲದರ ಆಧಾರದ ಮೇಲೆ ಟಿಕೆಟ್‌ಗಾಗಿ ಕಳುಹಿಸಿದ ಯಾದಿಯಲ್ಲಿ ನಿಮ್ಮ ಹೆಸರನ್ನು ಸಹ ಕಳುಹಿಸಿದ್ದು, ಅಂತಿಮವಾಗಿ ಹೈಕಮಾಂಡ್ ತೀರ್ಮಾನದಂತೆ ಟಿಕೆಟ್ ಹಂಚಿಕೆಯಾಗಿದೆ. ಹೀಗಾಗಿ ಎಲ್ಲರೂ ಒಪ್ಪಲೇಬೇಕು ಎಂದಿದ್ದಾರೆ.

ಕರಡಿ ಅವರ ಬೆಂಬಲಿಗರು ಈಗಲಾದರೂ ಟಿಕೆಟ್‌ನ್ನು ಪುನರ್ ಪರಿಶೀಲನೆ ಮಾಡಿ, ಬದಲಾವಣೆ ಮಾಡಿ ನೀಡುವಂತೆ ಆಗ್ರಹಿಸಿದರು. ಇದರ ಕುರಿತು ಮಾತನಾಡಿದ ಸಂಗಣ್ಣ ಅವರು, ಇದು ನನ್ನ ಬೆಂಬಲಿಗರ ಬೇಡಿಕೆಯಾಗಿದೆ. ನಾನಂತು ಅಂಥ ಬೇಡಿಕೆ ಇಟ್ಟಿಲ್ಲ, ಆದರೆ, ನನಗೆ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ, ಟಿಕೆಟ್ ತಪ್ಪಲು ಕಾರಣವೇನು? ಎಂದಾದರೂ ಹೇಳಿ ಎಂದಿದ್ದಾರೆ.

Lok Sabha Election 2024: ಅಭ್ಯರ್ಥಿಗಳ ಆಯ್ಕೆ ವೇಳೆ ಬಿಜೆಪಿಗರಿಗೆ ಮೋದಿ ಕ್ಲಾಸ್‌..!

ಆಗ ನಿಮ್ಮ ಬೆಂಬಲಿಗರ ಬೇಡಿಕೆಯನ್ನು ದೆಹಲಿ ಹೈಕಮಾಂಡ್ ಗಮನಕ್ಕೆ ತರಲಾಗುತ್ತದೆ. ಹಾಗೆಯೇ ನೀವು ಪಕ್ಷದಲ್ಲಿಯೇ ಇರಿ, ಪಕ್ಷದ ಅಭ್ಯರ್ಥಿಯ ಪರವಾಗಿ ಕಾರ್ಯನಿರ್ವಹಿಸಿ. ಪ್ರಚಾರವನ್ನು ನಿಮ್ಮ ನೇತೃತ್ವದಲ್ಲಿಯೇ ಮಾಡಿ ಎಂದಿದ್ದಾರೆ. ಆಗ ಕರಡಿ, ನಾನು ಪಕ್ಷದಲ್ಲಿಯೇ ಇರುತ್ತೇನೆ, ಆದರೆ, ನನಗೆ ನೇತೃತ್ವ ಬೇಡ ಎಂದು ತಿಳಿಸಿದ್ದಾರೆ. ಅಲ್ಲಿಗೆ ಸಭೆ ಮುಕ್ತಾಯ ಮಾಡಲಾಗಿದ್ದು, ಟಿಕೆಟ್ ವಿವಾದ ಬಹುತೇಕ ಅಂತ್ಯಗೊಂಡಂತಾಗಿದೆ ಎಂದೇ ಬಿಜೆಪಿ ಪಾಳೆಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಪಕ್ಷದ ನಾಯಕರು ನಮ್ಮೆಲ್ಲ ಪ್ರಶ್ನೆಗಳಿಗೂ ದೆಹಲಿ ಹೈಕಮಾಂಡ್ ನಿರ್ಧಾರ ಎಂದಿದ್ದಾರೆ. ಈಗ ನಾನಂತೂ ಪಕ್ಷದಲ್ಲಿಯೇ ಇರುತ್ತೇನೆ. ಚುನಾವಣೆಯಲ್ಲಿ ನಾಯಕತ್ವ ವಹಿಸುವುದಿಲ್ಲ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.  

Follow Us:
Download App:
  • android
  • ios