Asianet Suvarna News Asianet Suvarna News

ಉಪಗ್ರಹ ಬಳಸಿ ತೆರಿಗೆ ವಂಚನೆ ಪತ್ತೆ!

ಶ್ರೀಮಂತ ರೈತರ ಜಮೀನಿನ ಮೇಲೆ ಈಗ ಪಗ್ರಹ ಕಣ್ಣು | ಇಸ್ರೋ ಉಪಗ್ರಹ ಚಿತ್ರ ಬಳಸಿ ಮೋಸ ತಡೆಗಟ್ಟುತ್ತಿರುವ ಐಟಿ

IT department Takes Satellite Route to Find Tax Defaulters

ನವದೆಹಲಿ: ತೆರಿಗೆ ವಂಚಕರ ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆನ್‌ಲೈನ್ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿರುವುದಾಗಿ ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಈ ವಿಷಯದಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಆದಾಯ ತೆರಿಗೆ ಇಲಾಖೆ, ಇದೀಗ ಉಪಗ್ರಹಗಳನ್ನೇ ಬಳಸಿಕೊಂಡು ತೆರಿಗೆ ವಂಚನೆ ಪತ್ತೆ ಮಾಡಿದ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಕೃಷಿಯ ಹೆಸರಲ್ಲಿ ತೆರಿಗೆ ವಂಚನೆ ಮಾಡುತ್ತಿದ್ದವರ ಬಣ್ಣ ಬಯಲು ಮಾಡಲು ತೆರಿಗೆ ಇಲಾಖೆ ಅಧಿಕಾರಿಗಳು ಇಂಥದ್ದೊಂದು ವಿನೂತನ ತಂತ್ರ ಬಳಸಿದ್ದಾರೆ.

ಹೀಗಾಗಿ ಕೃಷಿಗಾಗಿ ಜಮೀನನ್ನು ಬಳಸದೇ ಹೋದರೂ ಆ ಜಮೀನನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಕೃಷಿ ಜಮೀನು ಎಂದು ಹೇಳಿ ತೆರಿಗೆ ವಿನಾಯ್ತಿ ಪಡೆಯಲು ಯತ್ನಿಸುತ್ತಿದ್ದ ಶ್ರೀಮಂತರ ಆಟ ಇನ್ನು ನಡೆಯದೇ ಹೋಗಬಹುದು.

ಹೌದು.. ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಜಮೀನನ್ನು ಮಾರಾಟ ಮಾಡುವ ವ್ಯಕ್ತಿಯ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇರಿಸುತ್ತಿದೆ ಎಂದು ವಿದೇಶೀ ಸುದ್ದಿಸಂಸ್ಥೆಯೊಂದು ಮಂಗಳವಾರ ವರದಿ ಮಾಡಿದೆ.

ಒಂದು ಜಮೀನನ್ನು ಮಾರಾಟ ಮಾಡುವಾಗ, ಅದು ಕೃಷಿ ಜಮೀನಾಗಿದ್ದರೆ ಮಾರಾಟ ಮಾಡುವ ಮುಂಚಿನ 2 ವರ್ಷ ಕಾಲ ಅದರಲ್ಲಿ ಒಕ್ಕಲುತನ ಮಾಡಿರಬೇಕು.

ಇದರಲ್ಲಿ ಕೃಷಿ ಮಾಡಲಾಗಿದೆ ಎಂಬುದಕ್ಕೆ ಸಾಕ್ಷ್ಯವಾಗಿ ಅಲ್ಲಿ ಬೆಳೆದ ಬೆಳೆಗಳನ್ನು ಮಾರಿದ ರಸೀದಿಗಳನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು. ಆಗ ಮಾತ್ರ ಮಾರಾಟದಿಂದ ಬಂದ  ಹಣಕ್ಕೆ ತೆರಿಗೆ ವಿನಾಯ್ತಿ ಲಭಿಸುತ್ತದೆ.

ಆದರೆ ಕೆಲವರು ಖೊಟ್ಟಿ ರಸೀದಿಗಳನ್ನು ಸೃಷ್ಟಿ ಮಾಡಿ ಅದರಲ್ಲಿ ಕೃಷಿ ಮಾಡಲಾಗುತ್ತಿತ್ತು ಎಂದು ಸುಳ್ಳು ಹೇಳಿ ಎಂದು ವಂಚನೆ ಮಾಡುತ್ತಿದ್ದರು ಎಂಬ ಆಪಾದನೆಗಳೂ ಕೇಳಿಬಂದಿದ್ದವು. ಅಂತೆಯೇ ಇತ್ತೀಚೆಗೆ ಅಸ್ಸಾಮಿ ವ್ಯಕ್ತಿಯೊಬ್ಬ ತಾನು ಕೃಷಿ ಜಮೀನು ಮಾರಿದ್ದಾಗಿ ಹೇಳಿ, ತೆರಿಗೆ ವಿನಾಯ್ತಿಯನ್ನು ಆದಾಯ ತೆರಿಗೆ ಇಲಾಖೆಯಿಂದ ಬಯಸಿದ್ದ.

ಆಗ ಈ ಜಮೀನಿನಲ್ಲಿ ನಿಜವಾಗಿಯೂ ಕೃಷಿ ಮಾಡಲಾಗುತ್ತಿತ್ತೇ ಎಂಬುದನ್ನು ಪರೀಕ್ಷಿಸಲು ಆದಾಯ ತೆರಿಗೆ ಅಧಿಕಾರಿಗಳು ಇಸ್ರೋವನ್ನು ಸಂಪರ್ಕಿಸಿದರು. ಆಗ ಇಸ್ರೋದವರು ಆ ನಿರ್ದಿಷ್ಟ ಜಮೀನಿನ ಉಪಗ್ರಹ ಚಿತ್ರವನ್ನು ಒದಗಿಸಿದಾಗ 3 ವರ್ಷಗಳಿಂದ ಅಲ್ಲಿ ಕೃಷಿ ಚಟುವಟಿಕೆಯೇ ನಡೆದಿಲ್ಲ ಎಂದು ತಿಳಿದುಬಂತು. ಹೀಗಾಗಿ ತೆರಿಗೆ ವಂಚನೆಯ ಯತ್ನ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ಬೆಳಕಿಗೆ ಬಂತು ಎಂದು ಹೇಳಲಾಗಿದೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios