Asianet Suvarna News Asianet Suvarna News

ಕನ್ನಡ ಮಾಧ್ಯಮ ಕಡೆಗಣನೆ, ಕುಮಾರಸ್ವಾಮಿಗೆ ಕುಟುಕಿದ ಕಂಬಾರ

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆತಿದೆ. ಧಾರವಾಡಲ್ಲಿ ಇಂದಿನಿಂದ ಮೂರು ದಿನ ಕಾಲ ಸಾಹಿತ್ಯ ಜಾತ್ರೆ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ್ ಕಂಬಾರ ಅವರು ಉದ್ಘಾಟನಾ ಭಾಷಣದಲ್ಲಿ ಕನ್ನಡ ಮಾಧ್ಯಮ ಕಡೆಗಣಿಸುವವರನ್ನು ಕುಟುಕಿದ್ದಾರೆ.

Akhila Bharata Kannada Sahitya Sammelana President Chandrashekhar Kambar Speech
Author
Bengaluru, First Published Jan 4, 2019, 5:26 PM IST

ಧಾರವಾಡ[ಜ.04]  84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರ ಉದ್ಘಾಟನಾ ಭಾಷಣ ಮಾಡಿದ್ದು ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ವಿಜ್ಞಾನವನ್ನು ಶಾಲಾ ಕಾಲೇಜುಗಳಲ್ಲಿ ಕನ್ನಡದಲ್ಲಿ ಬೋಧಿಸಿದ್ದರೆ ಈಗಿನ ಭಾಷಾ ಸಮಸ್ಯೆ ಇರುತ್ತಿರಲಿಲ್ಲ. ವಿಜ್ಞಾನದ ಯಾವುದೇ ಪಠ್ಯವಿರಲಿ ಕನ್ನಡಕ್ಕೆ ಅನುವಾದಿಸಿ ಕೊಡಬೇಕು. ಈಗ ಪರಿಸ್ಥಿತಿ ಮೀರಿದ ಕಾರಣ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಬಂದಿದೆ ಎಂದು ಅಭಿಪ್ರಾಯ ಪಟ್ಟರು.

ವ್ಯಾಪಾರ ವಾಣಿಜ್ಯ ವ್ಯವಹಾರದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಸಿಗಬೇಕು. ಪರಭಾಷೆಯ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿ ಮೇಲೆ ಪರಿಣಾಮ ಬೀರಿದೆ. ಇಂಗ್ಲಿಷ್ ಮಾಧ್ಯಮದ‌ ಖಾಸಗಿ ಶಾಲೆಗಳ ಆಡಳಿತ ಮಂಡಳಿಯಲ್ಲಿ ರಾಜಕಾರಣಿಗಳೇ ತುಂಬಿದ್ದಾರೆ. ಆರ್‌ಟಿಇ ಅಡಿ ಪ್ರತಿವರ್ಷ ಒಂದೂವರೆ ಲಕ್ಷ ಮಕ್ಕಳನ್ನು ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರುಸುತ್ತಿರುವುದು ಭಯಾನಕ. ಸರ್ಕಾರವನ್ನು ಪ್ರಶ್ನಿಸಿದ್ರೆ ಅಕಾಡೆಮಿ, ಪ್ರಾಧಿಕಾರ, ಕಾವಲು ಸಮಿತಿಗೆ ನೇಮಕ ಮಾಡುವ ಆಮಿಷವೊಡ್ಡುತ್ತಿದೆ ಎಂಬ ಆತಂಕಕಾರಿ ಅಂಶ ತೆರೆದಿಟ್ಟರು.

ಧಾರವಾಡ ಕನ್ನಡ ಸಮ್ಮೇಳನದ ಚಿತ್ರ ಸಂಪುಟ

ಒಂದರಿಂದ ಏಳನೆಯ ತರಗತಿಯವರೆಗೆ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು. ಎಂಟನೆಯ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇಲ್ಲದಿದ್ದರೆ ರಾಜ್ಯ ಭಾಷೆಗಳಿಗೆ ಭವಿಷ್ಯವಿಲ್ಲ. ಶಿಕ್ಷಕ, ಸರಕಾರ ಮತ್ತು ಜನರು ಸೇರಿದಾಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.

ಸರ್ಕಾರ ಹಂಗಾಮಿ ಶಿಕ್ಷಕರನ್ನು ಅಮಾನವೀಯವಾಗಿ ನಡೆಸಿಕೊಳ್ಳದೆ, ಸೇವೆ ಕಾಯಮಾತಿ ಮಾಡಬೇಕು. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಯಡಿಯೂರಪ್ಪ‌ ಸಹಕರಿಸಿದ್ದರು. ಈಗ ಕನ್ನಡ ತಂತ್ರಾಂಶ, ಜಾಲತಾಣಗಳ ನಿರ್ವಹಣೆಗೆ ಅಧಿಕೃತ ಪ್ರತಿನಿಧಿಗಳಿಲ್ಲ. ಇಂಗ್ಲಿಷ್‌ನಲ್ಲಿ ಬರುವ ಮಾಹಿತಿಪೂರ್ಣ ಚಾನೆಲ್‌ಗಳನ್ನು ಕನ್ನಡಕ್ಕೆ ಡಬ್ ಮಾಡಬೇಕು. ಹೊರದೇಶಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಬೇಕು. ಹೊರನಾಡುಗಳಲ್ಲಿರುವ ಕನ್ನಡ‌ ಪೀಠಗಳನ್ನು ಸರ್ಕಾರ ಮುಚ್ಚುತ್ತಿರುವುದು ದುರ್ದೈವದ ಸಂಗತಿ. ಅಧಿಕಾರದ ಅಮಲಿನಲ್ಲಿ ನಮ್ಮ ತಾಯಿಯಾದ ಕನ್ನಡವನ್ನು ಕೊಲ್ಲುವುದು ಬೇಡ ಎಂದು ಚಂದ್ರಶೇಖರ ಕಂಬಾರ ಹೇಳಿದರು.

ಮಹಾದಾಯಿ ಚರ್ಚೆಗೆ ಸಾಹಿತ್ಯ ಸಮ್ಮೇಳನ ವೇದಿಕೆ: ಕಂಬಾರ

ಕಂಬಾರ ಭಾಷಣದ ಪ್ರಮುಖಾಂಶಗಳು
* ಶಿಕ್ಷಣ ಕೂಡ ಒಂದು ಸೃಜನಶೀಲವಾದ ಕ್ರಿಯೆ, ಇದು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧ, ವ್ಯವಸಾಯದ ಸಂಬಂಧ. ಶಿಕ್ಷಕ ಹೇಳಿದ್ದನ್ನು ವಿದ್ಯಾರ್ಥಿ ಬರೆದುಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯ ಹೊತ್ತಿನಲ್ಲಿ ಅದನ್ನು ತಿರುಗಿ ಶಿಕ್ಷಕನಿಗೇ ಮುಟ್ಟಿಸುವುದು ಶಿಕ್ಷಣವಾಗುವುದಿಲ್ಲ.

* ಎರಡು ಕರ್ನಾಟಕ ಬೇಕೆನ್ನುವ ಮಹಾನುಭಾವರಿದ್ದಾರೆ. ಒಂದೇ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆಂಬವರೂ ಇದ್ದಾರೆ. ಅನೇಕ ಕರ್ನಾಟಕಗಳು ಒಂದಾಗುವುದಕ್ಕೇ ಏನೇನಾಯಿತೆಂದು ಕೊಂಚ ನೆನಪು ಮಾಡಿಕೊಳ್ಳೋಣ. ಒಂದಿರುವ ಜಿಲ್ಲೆಯನ್ನು ಎರಡು ಮಾಡಿ ಇಡೀ ಜಿಲ್ಲೆಯನ್ನು ಕಳೆದುಕೊಳ್ಳದಿರೋಣ. ಕರ್ನಾಟಕವಾಗಿ ಎಪ್ಪತ್ತು ವರ್ಷಳಾದರೂ ಒಂದು ಆಡಳಿತ ಭಾಷೆಯನ್ನುನೂರಾರು ಸರಕಾರೀ ಆಜ್ಞೆಗಳನ್ನು ಹೊರಡಿಸಿದರೂ ತರಲಾಗದೆ ಕೈಸೋತು ಕೂತಿದ್ದೇವೆ ಅದು ಸಾಲದೆ? ಬ್ರಿಟಿಷರು ಕೊಟ್ಟ ಇಂಗ್ಲಿಷನ್ನೇ ಈಗಲೂ ತಿದ್ದುತ್ತ ಕೂತಿದ್ದೇವೆ.

* ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಅಧ್ಯಯನ ಪೀಠವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ವಿದೇಶಿಯರಿಗೆ ಕಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದೀಗ ಪೀಠವು ಕನ್ನಡೇತರರು ಕನ್ನಡವನ್ನು ಕಲಿಯಲು ಸಹಾಯ ಮಾಡುವಂಥ ಕನ್ನಡ ಕಲಿಕೆ ಎಂಬ ಹೊಸಬಗೆಯ ಜಾಲತಾಣವನ್ನು ಸಿದ್ಧಪಡಿಸಿದೆ. ಈಗಾಗಲೇ 16 ಸಾವಿರಕ್ಕೂ ಹೆಚ್ಚು ಜನ ಕನ್ನಡ ಕಲಿಕೆ ಜಾಲತಾಣದ ಮೂಲಕ ಕನ್ನಡವನ್ನು ಕಲಿಯುತ್ತಿದ್ದಾರೆ. ಇಂಥ ಪ್ರುತ್ನಗಳನ್ನು ರಾಜ್ಯ ಸರ್ಕಾರವೂ ಮುಂದುವರಿಸಬೇಕು.

Follow Us:
Download App:
  • android
  • ios