Asianet Suvarna News Asianet Suvarna News

ಆಲೂ ಪೂರಿ ಮುಂದೆ ಮೊಟ್ಟೆ, ಓಟ್ಸ್ ವೇಸ್ಟ್!

ಮಾಡುವುದು ಸರಳವಾದರೂ ನಾಲಿಗೆಯೊಂದಿಗೆ ಸರಸವಾಡುವ ತಿಂಡಿ ಆಲೂ ಪೂರಿ. ಭಾನುವಾರದ ಆರಂಭವನ್ನು ಸ್ಪೆಶಲ್ ಮಾಡುವ ತಾಕತ್ತು ಆಲೂ ಪೂರಿಗಿದೆ. ಸಾಮಾನ್ಯವಾಗಿ ಮಾಡುವ ಪೂರಿಗಳು ಹಳತೆನಿಸತೊಡಗಿದಾಗ ಉತ್ತರ ಭಾರತದಿಂದ ಹೆಕ್ಕಿ ತಂದ ರೆಸಿಪಿ ಆಲೂ ಪೂರಿ ಟ್ರೈ ಮಾಡಿ. 

Nothing Beats The Magic Of Aloo Puri For Breakfast
Author
Bangalore, First Published Sep 20, 2019, 1:19 PM IST

ಬೆಳಗಿನ ಹೊತ್ತು ರಾಜನ ಹಾಗೆ, ಮಧ್ಯಾಹ್ನ ಮಂತ್ರಿಯ ಹಾಗೂ ಸಂಜೆಗೆ ಸೇವಕನಂತೆ ತಿನ್ನು ಎನ್ನುವ ಮಾತೊಂದಿದೆ. ಹೌದು, ಬೆಳಗಿನ ಹೊತ್ತು ಹೊಟ್ಟೆ ತುಂಬಾ ಆರೋಗ್ಯಯುತವಾದ ಆಹಾರವನ್ನು ಚೆನ್ನಾಗಿ ತಿನ್ನಬೇಕು. ಆಗಲೇ ಇಡೀ ದಿನ ಕೆಲಸ ಮಾಡಲು ಎನರ್ಜಿ ಇರುವುದು. ತಿಂಡಿ ಎನ್ನುವುದು ನಮ್ಮ ಹೊಟ್ಟೆ ತುಂಬಿಸುವ ಜೊತೆಗೆ ಮನಸ್ಸಿಗೂ ಮುದ ನೀಡಬೇಕು. ಆಹಾರದ ಮೂಲಕ ಖುಷಿ ಸಿಕ್ಕರೆ ಅದು ಇಡೀ ದಿನ ಉಳಿಯುತ್ತದೆ. ಹೀಗೆ ಖುಷಿ ಕೊಡುವ ರುಚಿಯಾದ ತಿಂಡಿಯಲ್ಲೊಂದು ಆಲೂ ಪೂರಿ. ನೀವಿದರ ರುಚಿ ನೋಡಿದ್ದೀರಾದರೆ, ಓಟ್ಸ್, ಮೊಟ್ಟೆ, ಕಾರ್ನ್ ಫ್ಲೇಕ್ಸ್, ಸ್ಯಾಂಡ್‌ವಿಚ್ ಬೇರಾವ ತಿಂಡಿಯೂ ಇದರ ಹತ್ತಿರಕ್ಕೂ ಸುಳಿಯದು. 

ಆಧುನಿಕ ಆಹಾರಗಳು ಎಷ್ಟೇ ಫ್ಯಾನ್ಸಿಯಾಗಿರಲಿ, ದೇಸಿ ತಿಂಡಿಗಳನ್ನು ಅವು ಮೀರಿಸಲಾರವು. ಅಂದ ಹಾಗೆ ಪೂರಿಗಳು ಸಿಕ್ಕಾಪಟ್ಟೆ ಎಣ್ಣೆ ಕುಡಿಯುತ್ತದೆ ಎಂದು ಬಹುತೇಕರು  ಪೂರಿಯನ್ನು ದೂರವಿಡುತ್ತಾರೆ. ಆದರೆ, ಅದು ಅಡುಗೆಯ ತಂತ್ರಗಳು ಗೊತ್ತಿಲ್ಲದವರ ಒಣಮಾತಷ್ಟೇ.  ಹಿಟ್ಟನ್ನು ಚೆನ್ನಾಗಿ ನಾದಿದ್ದರೆ ಖಂಡಿತಾ ಅದು ಹೆಚ್ಚು ಎಣ್ಣೆ ಹೀರಿಕೊಳ್ಳುವುದಿಲ್ಲ. ಜೊತೆಗೆ, ಕಡೆಯಲ್ಲಿ ಪೂರಿಯನ್ನು ಟಿಶ್ಯೂ ಪೇಪರ್ ಮೇಲೆ ಹಾಕಿ ಎಣ್ಣೆ ಹೀರಿಕೊಳ್ಳಲು ಬಿಡಬೇಕು.

ಬೆಳಗಿನ ತಿಂಡಿಯನ್ನು ಆಕರ್ಷಕಗೊಳಿಸುವ ಎಲೆಕೋಸಿನ ಪರೋಟ!

ತಯಾರಿ ಸಮಯ: 15 ನಿಮಿಷ
ಕುಕಿಂಗ್ ಟೈಂ: 15 ನಿಮಿಷ
ಸರ್ವಿಂಗ್ಸ್: 15 ಪೂರಿಗಳು

ಬೇಕಾಗುವ ಸಾಮಗ್ರಿಗಳು: 

- 2 ಮಧ್ಯಮ ಗಾತ್ರದ ಆಲೂಗಡ್ಡೆ(ಬೇಯಿಸಿಟ್ಟುಕೊಂಡಿದ್ದು)
- 1 ಕಪ್ ಗೋಧಿ ಹಿಟ್ಟು
- 1 ಚಮಚ ಸೂಜಿ ರವೆ
- 3/4 ಚಮಚ ಕೆಂಪು ಮೆಣಸಿನ ಪುಡಿ
- 1/4 ಚಮಚ ಗರಂ ಮಸಾಲಾ
- ರುಚಿಗೆ ತಕ್ಕಷ್ಟು ಉಪ್ಪು
- 1/4 ಚಮಚ ಅಜ್ವಾನ್
- 1 ಚಮಚ ಎಣ್ಣೆ
- 1/2 ಚಮಚ ಆಮ್‌ಚೂರ್ ಪುಡಿ
- ಹಿಟ್ಟನ್ನು ಕಲಸಲು ನೀರು
- ಕರಿಯಲು ಎಣ್ಣೆ

ತಯಾರಿಸುವ ವಿಧಾನ: 

ಉಳಿದ ಅನ್ನ ಎಸೆಯಬೇಡಿ, ಅದರಿಂದ ರುಚಿಯಾದ ಕಟ್ಲೆಟ್ ಮಾಡಿ!

ದೊಡ್ಡ ಬಟ್ಟಲೊಂದರಲ್ಲಿ ಬೇಯಿಸಿಕೊಂಡ ಆಲೂಗಡ್ಡೆಯನ್ನು ತುರಿದುಕೊಳ್ಳಿ. ಇದಕ್ಕೆ 1 ಕಪ್ ಗೋಧಿ ಹಿಟ್ಟು ಸೇರಿಸಿ. ಜೊತೆಗೆ 1 ಚಮಚ  ಸೂಜಿರವೆಯನ್ನೂ ಸೇರಿಸಿ. ಇದು ಪೂರಿಯನ್ನು ಗರಿಗರಿಯಾಗಿಸುತ್ತದೆ. ಈಗ ಮಸಾಲೆ ಪದಾರ್ಥಗಳಾದ ಗರಂ ಮಸಾಲೆ, ಕೆಂಪು ಮೆಣಸಿನ ಪುಡಿ, ಡ್ರೈ ಮ್ಯಾಂಗೋ ಪೌಡರ್, ಅಜ್ವಾನ್ ಹಾಗೂ ಉಪ್ಪನ್ನು ಸೇರಿಸಿ. 1 ಚಮಚ ಎಣ್ಣೆ ಹಾಕಿ, ಚೆನ್ನಾಗಿ ಕಲೆಸಿ. ಈಗ ನಿಧಾನವಾಗಿ ನೀರನ್ನು ಸೇರಿಸುತ್ತಾ ಹಿಟ್ಟನ್ನು ಕಲೆಸುತ್ತಾ ಪೂರಿ ಹಿಟ್ಟಿನ ಹದಕ್ಕೆ ತನ್ನಿ. ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿಸಿಕೊಂಡು ಲಟ್ಟಣಿಗೆಯಲ್ಲಿ ವೃತ್ತಾಕಾರದಲ್ಲಿ ಲಟ್ಟಿಸಿ. 

ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಸ್ಟೌ ಆನ್ ಮಾಡಿ. ಎಣ್ಣೆ ಕಾದ ಬಳಿಕ ಪೂರಿಯನ್ನು ಎಣ್ಣೆಗೆ ಬಿಡಿ. ಸೆಟುಗದಲ್ಲಿ ನಿಧಾನವಾಗಿ ಮಧ್ಯ ಭಾಗಕ್ಕೆ ಒತ್ತುತ್ತಾ ಬಂದರೆ ಪೂರಿ ಚೆನ್ನಾಗಿ ಉಬ್ಬುತ್ತದೆ. ಉಬ್ಬಿದ ಬಳಿಕ ತಾನಾಗಿಯೇ ಮಗುಚಿಕೊಳ್ಳುತ್ತದೆ. ತಿಳಿಯಾದ ಕಂದು ಬಣ್ಣಕ್ಕೆ ತಿರುಗಿದ ಬಳಿಕ ತೆಗೆದು ಪಾತ್ರೆಯಲ್ಲಿಟ್ಟುಕೊಂಡ ಟಿಶ್ಯೂ ಪೇಪರ್ ಮೇಲೆ ಹಾಕಿ. ನಿಮ್ಮಿಷ್ಟದ ಕರಿಯೊಂದಿಗೆ ಸವಿಯಲು ನೀಡಿ. 

ಮಳೆಗಾಲವನ್ನು ಬೆಚ್ಚಗಾಗಿಸುವ ಚೈನೀಸ್ ಆಲೂ ರೆಸಿಪಿಗಳು!

ನ್ಯೂಟ್ರಿಶನಲ್ ವ್ಯಾಲ್ಯೂ:

ಒಂದು ಪ್ಲೇಟ್ ಆಲೂ ಪೂರಿಯು 748 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಲ್ಲಿ 324 ಕ್ಯಾಲೋರಿ ಕಾರ್ಬೋಹೈಡ್ರೇಟ್ಸ್, 40 ಕ್ಯಾಲೋರಿ ಪ್ರೋಟೀನ್, 384 ಕ್ಯಾಲೋರಿ ಉತ್ತಮ ಫ್ಯಾಟ್ ಇರುತ್ತದೆ. ಅಂದ ಹಾಗೆ 18 ವರ್ಷ ದಾಟಿದ ವ್ಯಕ್ತಿಗೆ ದಿನವೊಂದಕ್ಕೆ ಸುಮಾರು 2000 ಕ್ಯಾಲೋರಿಗಳ ಅಗತ್ಯವಿದ್ದು, ಆಲೂ ಪೂರಿಯು ಈ ಅವಶ್ಯಕತೆಯ ಶೇ.37 ಪಾಲನ್ನು ತುಂಬುತ್ತದೆ. ವಿಟಮಿನ್ ಬಿ1, ಬಿ3, ಪಾಸ್ಪರಸ್, ಫೈಬರ್, ವಿಟಮಿನ್ ಸಿ, ಫೋಲಿಕ್ ಆ್ಯಸಿಡ್, ಜಿಂಕ್, ಮೆಗ್ನೀಶಿಯಂ ಇದರಿಂದ ದೇಹಕ್ಕೆ ಸಿಗುತ್ತದೆ. ಆದರೂ ಕೂಡಾ  ಎಣ್ಣೆಯ  ತಿಂಡಿಯಾದ ಕಾರಣದಿಂದ ಆಲೂ ಪೂರಿಯನ್ನು ಅಪರೂಪಕ್ಕೊಮ್ಮೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. 

Follow Us:
Download App:
  • android
  • ios