Asianet Suvarna News Asianet Suvarna News

ಬರ ಭೀಕರ: ಬೆಳೆ ಹರಗುತ್ತಿರುವ ರೈತರು..!

ಕಳೆದ 15 ದಿನಗಳಿಂದ ಮಳೆಯ ಅಭಾವ ಶೇ.70-90ರಷ್ಟುಇರುವುದರಿಂದ ಬಹುತೇಕ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಇನ್ನೇನು ಅವು ಫಲ ಕೊಡುವುದು ಅಷ್ಟಕಷ್ಟೇ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

Farmers Faces Problems for No Rain in Koppal grg
Author
First Published Aug 27, 2023, 1:30 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.27):  ವ್ಯಥೆ 1: ಕೊಪ್ಪಳ ತಾಲೂಕಿನ ಹಾಸಗಲ್‌ ಗ್ರಾಮದ ರೈತ ಸಂಗಪ್ಪ ದೊಡ್ಡಿಹಾಳ ಅವರ ಹೊಲದಲ್ಲಿ ಬೆಳೆದಿದ್ದ ಹತ್ತಿ ಬೆಳೆ ಮಳೆ ಇಲ್ಲದೇ ಒಣಗಿ ಹೋಗಿದೆ. ಈಗ ಅದರಿಂದ ಒಂದೇ ಒಂದು ಕಾಯಿ ಸಹ ನಿರೀಕ್ಷೆ ಮಾಡದಂತಹ ಪರಿಸ್ಥಿತಿ ಇದೆ.

ವ್ಯಥೆ 2:

ಕೊಪ್ಪಳ ತಾಲೂಕಿನ ಕಾಮನೂರ ಗ್ರಾಮದ ರೈತ ನಾಗಪ್ಪ ಅವರ ಹೊಲದಲ್ಲಿ ಬೆಳೆದಿರುವ ಮೆಕ್ಕೆಜೋಳ ಸಂಪೂರ್ಣ ಒಣಗಿ, ಗಲಗಲ ಎನ್ನುತ್ತಿದೆ. ಕೊಯ್ದುಕೊಂಡು ಬಂದರೂ ಜಾನುವಾರು ತಿನ್ನದಂತಾಗಿದೆ. ಹೀಗಾಗಿ, ಹೊಲದಲ್ಲಿ ಹಾಗೆ ಬಿಡಲಾಗಿದೆ.

ಪಂಚಮಸಾಲಿ ಸಮಾಜಕ್ಕೆ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ಸಿಗಲಿ: ಜಯಮೃತ್ಯುಂಜಯ ಸ್ವಾಮೀಜಿ

ವ್ಯಥೆ 3:

ಕನಕಗಿರಿ ತಾಲೂಕಿನ ಹಿರೇಕೇಡಾ ಗ್ರಾಮದ ರೈತ ಅಂಬರೀಶ ದೇವರಮನಿ ಅವರ ಹೊಲದಲ್ಲಿ ಬೆಳೆದಿರುವ ಸಜ್ಜೆಯೂ ಮಳೆ ಇಲ್ಲದೆ ಬೆಳೆ ಬಾರದಂತೆ ಆಗಿದೆ. ಇದರಿಂದ ತಾನೇ ಬಿತ್ತಿದ ಬೆಳೆಯನ್ನು ತಾನೇ ಹರಗುತ್ತಿದ್ದಾನೆ. ಈ ದೃಶ್ಯ ರೈತ ಸಮುದಾಯವನ್ನೇ ಕಣ್ಣೀರು ಹಾಕುವಂತಾಗಿದೆ.

ವ್ಯಥೆ 4:

ಕನಕಗಿರಿ ತಾಲೂಕಿನ ಮಲ್ಲಿಗವಾಡ ಗ್ರಾಮದ ರೈತ ಯಂಕಪ್ಪ ಹಳೆಮನೆ ಅವರ ಹೊಲದಲ್ಲಿ ಬೆಳೆದಿರುವ ಸಜ್ಜೆ ಬೆಳೆ ಸಂಪೂರ್ಣ ಒಣಗಿದೆ. ಹುಡುಕಿದರೂ ಒಂದು ಹಸಿರು ಎಲೆ ಸಿಗದಷ್ಟುಒಣಗಿ ಹೋಗಿದೆ. ಇದಷ್ಟೇ ಅಲ್ಲ, ಜಿಲ್ಲಾದ್ಯಂತ ಸುತ್ತಾಡಿದರೆ ಹೀಗೆ ಬಿತ್ತಿದ ಬೆಳೆ, ಒಣಗಿ ಹೋಗಿರುವ ಹೊಲಗಳು ಸಾಲು ಸಾಲು ಸಿಗುತ್ತವೆ. ಯಾರೊಬ್ಬರ ಹೊಲದಲ್ಲೂ ಬೆಳೆ ಈಗ ಹಸಿರಿನಿಂದ ಕಂಗೊಳಿಸುತ್ತಿಲ್ಲ. ಬಾಡಿ ಹೋಗಿದೆ. ಇಲ್ಲವೇ ಸಂಪೂರ್ಣ ಒಣಗಿ ಹೋಗಿರುವ ದೃಶ್ಯ ಸಾಮಾನ್ಯವಾಗಿದೆ.

ಈ ನಡುವೆ ಕೊಪ್ಪಳ, ಯಲಬುರ್ಗಾ ತಾಲೂಕಿನ ಕೆಲವೊಂದು ಭಾಗದಲ್ಲಿ ಅಲ್ವಸ್ಪಲ್ಪ ಮಳೆಯಾಗಿದ್ದರಿಂದ ಬೆಳೆಗಳು ಜೀವ ಹಿಡಿದುಕೊಂಡಿವೆ. ಇನ್ನು ನಾಲ್ಕಾರು ದಿನಗಳಲ್ಲಿ ಮಳೆಯಾಗದಿದ್ದರೆ ಅವೂ ಒಂದು ಕಾಳು ಸಹ ಬರುವುದಿಲ್ಲ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಬಿತ್ತನೆಗೆ 3,08,000 ಹೆಕ್ಟೇರ್‌ ಗುರಿ ಇದ್ದು, ಈ ಪೈಕಿ ಸುಮಾರು 2.90 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ, ಇದರಲ್ಲಿ ಈಗ ಶೇ.70-80 ಬೆಳೆ ಹಾಳಾಗಿದೆ.
ಕಳೆದ 15 ದಿನಗಳಿಂದ ಮಳೆಯ ಅಭಾವ ಶೇ.70-90ರಷ್ಟುಇರುವುದರಿಂದ ಬಹುತೇಕ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಇನ್ನೇನು ಅವು ಫಲ ಕೊಡುವುದು ಅಷ್ಟಕಷ್ಟೇ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ರಕ್ತದಲ್ಲಿ ಬರೆದು ಕೊಡುವೆ, ನಾನು ಬಿಜೆಪಿ ಬಿಡಲ್ಲ : ಸಂಗಣ್ಣ ಕರಡಿ ಸ್ಪಷ್ಟನೆ

ಬರ ಘೋಷಣೆಗೆ ಆಗ್ರಹ:

ಈ ನಡುವೆ ರೈತರು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಒತ್ತಡ ಬರುತ್ತಲೇ ಇದೆ. ಆದರೆ, ಸರ್ಕಾರ ಇದುವರೆಗೂ ಬರಪೀಡಿತ ಎಂದು ಘೋಷಣೆ ಮಾಡಿಲ್ಲ. ಎಲ್ಲ ತಾಲೂಕಲ್ಲೂ ಬರದ ಛಾಯೆ ಆವರಿಸಿದೆ.

ಸರ್ವೇ ಕಾರ್ಯ:

ಬರದ ಸರ್ವೇ ಕಾರ್ಯ ಕಳೆದೊಂದು ವಾರದಿಂದ ಮಾಡಲಾಗುತ್ತಿದೆ. ಈಗ ಆ್ಯಪ್‌ ಮೂಲಕ ಹೊಲದಲ್ಲಿಯೇ ಸರ್ವೇ ಮಾಡುವ ಕಾರ್ಯವೂ ನಡೆಯುತ್ತಿದೆ. ಈ ಸರ್ವೇಯ ವರದಿ ಬಳಿಕ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಲಿದೆ.
ಮಳೆಯ ಅಭಾವದಿಂದ ಆಗಿರುವ ಹಾನಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಮಸ್ಯೆ ಇದೆ. ಆದರೆ, ಕೊಪ್ಪಳ ತಾಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ತಿಳಿಸಿದ್ದಾರೆ. 

Follow Us:
Download App:
  • android
  • ios