Asianet Suvarna News Asianet Suvarna News

ಓಟಿಎಸ್‌ ಸ್ಕೀಂನಿಂದ ಬಿಬಿಎಂಪಿ ಆದಾಯಕ್ಕೆ ಕುತ್ತು!

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಶೇಕಡ 50ರಷ್ಟು ದಂಡ ಹಾಗೂ ಬಡ್ಡಿ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಿ ‘ಒನ್‌ ಟೈಮ್ ಸೆಟ್ಲಮೆಂಟ್‌’ (ಓಟಿಎಸ್‌) ಯೋಜನೆ ಜಾರಿ.

BBMP revenue decline due to OTS scheme gvd
Author
First Published Mar 29, 2024, 8:57 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಮಾ.29): ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಶೇಕಡ 50ರಷ್ಟು ದಂಡ ಹಾಗೂ ಬಡ್ಡಿ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಿ ‘ಒನ್‌ ಟೈಮ್ ಸೆಟ್ಲಮೆಂಟ್‌’ (ಓಟಿಎಸ್‌) ಯೋಜನೆ ಜಾರಿಗೊಳಿಸಿದ ಬಳಿಕ ಆಸ್ತಿ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ ಉಂಟಾದ ಪರಿಣಾಮ ಬಿಬಿಎಂಪಿಯು ₹4 ಸಾವಿರ ಕೋಟಿ ಗಡಿಯನ್ನು ತಲುಪುವುದಕ್ಕೆ ಸಾಧ್ಯವಾಗಿಲ್ಲ. ಹಲವಾರು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಂದ ಬಾಕಿ ಮೊತ್ತ ವಸೂಲಿಗೆ ರಾಜ್ಯ ಸರ್ಕಾರವೂ ಒಂದು ಅವಕಾಶ ನೀಡಿ ಕಳೆದ ಫೆ.23ರಂದು ಓಟಿಎಸ್‌ ಯೋಜನೆ ಜಾರಿಗೊಳಿಸಿ ಜುಲೈ 31ರವರೆಗೆ ಬಾಕಿ ಪಾವತಿಗೆ ಗಡುವು ನೀಡಿ ಆದೇಶಿಸಿತ್ತು. 

ಆರ್ಥಿಕ ವರ್ಷದ ಅಂತ್ಯದಲ್ಲಿ ಹೆಚ್ಚಿನ ಪ್ರಮಾಣದ ತೆರಿಗೆ ವಸೂಲಿ ಆಗುವುದು ವಾಡಿಕೆ. ಆದರೆ, ಈ ಬಾರಿ ಒಟಿಎಸ್‌ ಜಾರಿಯಿಂದ ತೆರಿಗೆ ಸಂಗ್ರಹದಲ್ಲಿ ಹಿನ್ನೆಡೆಯಾಗಿದೆ. ಒಟಿಎಸ್‌ ಯೋಜನೆ ಜಾರಿಗೆ ಬರುವ ಹಿಂದಿನ ತಿಂಗಳು (ಜ.-23ರಿಂದ ಫೆ-22ರ ಅಧಿಯಲ್ಲಿ) ಬರೋಬ್ಬರಿ ₹215 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಜಾರಿ ಬಳಿಕ ಅಂದರೆ ಫೆ.23ರಿಂದ ಮಾ.22ರ ಅವಧಿಯಲ್ಲಿ ಕೇವಲ ₹157 ಕೋಟಿ ಮಾತ್ರ ಆಸ್ತಿ ತೆರಿಗೆ ವಸೂಲಿಯಾಗಿದೆ. ಕೇವಲ ಒಂದು ತಿಂಗಳಲ್ಲಿ ₹65 ಕೋಟಿಗೂ ಅಧಿಕ ಮೊತ್ತ ಕಡಿಮೆ ವಸೂಲಿಯಾಗಿದೆ.

ಜೆಡಿಎಸ್‌ ಎಲ್ಲಿ ಎಂದು ತೋರುವ ಶಕ್ತಿ ಮೈತ್ರಿಗಿದೆ: ಎಚ್.ಡಿ.ದೇವೇಗೌಡ

ಕುಸಿತಕ್ಕೆ ಕಾರಣಗಳು: ಒಟಿಎಸ್‌ ಲಾಭ ಪಡೆಯುವುದಕ್ಕೆ ಜುಲೈ 31ರವರೆಗೆ ಅವಕಾಶವಿದೆ. ಸದ್ಯ ಬಾಕಿ ಪಾವತಿ ಮಾಡಿದರೂ ಮತ್ತು ಜುಲೈ ಅಂತ್ಯದಲ್ಲಿ ಬಾಕಿ ಪಾವತಿ ಮಾಡಿದರೂ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ ಎಂಬ ಕಾರಣಕ್ಕೆ ಸುಸ್ತಿದಾರರು ಆಸ್ತಿ ತೆರಿಗೆ ಪಾವತಿಗೆ ಮುಂದಾಗುತ್ತಿಲ್ಲ. ಜತೆಗೆ, ಭಾರೀ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಶ್ರೀಮಂತರು ಮತ್ತು ಉದ್ಯಮಿಗಳಾಗಿದ್ದಾರೆ. ಪಾವತಿಸುವ ಬಾಕಿ ಮೊತ್ತದಿಂದ ನಾಲ್ಕು ತಿಂಗಳು ಲಾಭ ಪಡೆಯುವ ಉದ್ದೇಶ ಹೊಂದಿದ್ದಾರೆ. ಈ ನಡುವೆ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಕಿ ವಸೂಲಿಗೆ ಒತ್ತು ನೀಡುತ್ತಿಲ್ಲ. ಹಾಗಾಗಿ, ಸಂಗ್ರಹದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.

ಇನ್ನಷ್ಟು ರಿಯಾಯಿತಿ ನಿರೀಕ್ಷೆಯಲ್ಲಿ: ಸುಸ್ತಿದಾರರಿಗೆ ದಂಡ ಪ್ರಮಾಣದಲ್ಲಿ ಅರ್ಧದಷ್ಟು ಕಡಿತಗೊಳಿಸಿ ಬಡ್ಡಿ ಮನ್ನಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕೆಲವು ಸುಸ್ತಿದಾರರು ಬಾಕಿ ಪಾವತಿಗೆ ಮುಂದಾಗುತ್ತಿಲ್ಲ. ಕಚೇರಿಗೆ ಆಗಮಿಸಿ ಈ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

₹4 ಸಾವಿರ ಕೋಟಿ ತಲುಪದ ಆಸ್ತಿ ತೆರಿಗೆ: 2023-24ನೇ ಸಾಲಿನ ಆರ್ಥಿಕ ವರ್ಷ ಬಹುತೇಕ ಮುಕ್ತಾಯಕ್ಕೆ ಬಂದಿದ್ದು, ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹ ಕನಿಷ್ಠ ₹4 ಸಾವಿರ ಕೋಟಿ ಸಹ ತಲುಪಿಲ್ಲ. ಆಸ್ತಿ ತೆರಿಗೆ ಬಾಕಿ ವಸೂಲಿಗೆ ಹಲವು ಕ್ರಮಗಳನ್ನು ಕೈಗೊಂಡರೂ ನಿರೀಕ್ಷಿತ ಗುರಿ ಮಾತ್ರ ಮುಟ್ಟುವುದಕ್ಕೆ ಸಾಧ್ಯವಾಗಿಲ್ಲ. ಮಾ.28ರವರೆಗೆ ಒಟ್ಟು ₹3,801 ಕೋಟಿ ಮಾತ್ರ ಸಂಗ್ರಹಿಸಲು ಬಿಬಿಎಂಪಿ ಕಂದಾಯ ವಿಭಾಗ ಶಕ್ತವಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಸುಮಾರು ₹500 ಕೋಟಿಯಷ್ಟು ಮಾತ್ರ ಹೆಚ್ಚಿನ ಮೊತ್ತ ಸಂಗ್ರಹಿಸಲಾಗಿದೆ.

ಗುರಿ ಸಾಧನೆಯಲ್ಲಿ ಮತ್ತೆ ವಿಫಲ: ಬಿಬಿಎಂಪಿ ರಚನೆ ಆಗಿದಾಗಿನಿಂದ ಈವರೆಗೆ ಬಜೆಟ್‌ನಲ್ಲಿ ಆಸ್ತಿ ಸಂಗ್ರಹಣೆ ಬಗ್ಗೆ ಘೋಷಣೆ ಮಾಡಿಕೊಂಡ ಗುರಿಯನ್ನು ಒಂದೇ ಒಂದು ಬಾರಿಯೂ ಬಿಬಿಎಂಪಿ ಸಾಧಿಸಿಲ್ಲ. 2021-22ನೇ ಸಾಲಿನಲ್ಲಿ ₹4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯಲ್ಲಿ ₹3,088 ಕೋಟಿ ಸಂಗ್ರಹಿಸಿತ್ತು. 2022-23ರಲ್ಲಿ ₹4,189 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಹಾಕಿಕೊಂಡಿತ್ತು. ₹3,332.72 ಕೋಟಿ ಸಂಗ್ರಹಿಸಿತ್ತು. ಈ ಬಾರಿ 2023-24ರಲ್ಲಿ ₹4,412 ಕೋಟಿ ವಸೂಲಿ ಮಾಡುವ ಗುರಿ ಹಾಕಿಕೊಂಡಿತ್ತು. ಆದರೆ, ಮಾ.28ರವರೆಗೆ ಕೇವಲ ₹3,801.61 ಕೋಟಿ ವಸೂಲಿ ಮಾಡಿದೆ.

2023-24ರ ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ ₹)
ವಲಯ ಸಂಗ್ರಹ
ಬೊಮ್ಮನಹಳ್ಳಿ 434.44
ದಾಸರಹಳ್ಳಿ 117.28
ಪೂರ್ವ 672.16
ಮಹದೇವಪುರ 1,023.23
ಆರ್‌.ಆರ್‌.ನಗರ 262.17
ದಕ್ಷಿಣ 547.92
ಪಶ್ಚಿಮ 403.78
ಯಲಹಂಕ 340.63
ಒಟ್ಟು 3,801.61 (ಮಾ.28)

ಸಿಎಂ ಸಿದ್ದರಾಮಯ್ಯ ತವರಲ್ಲಿ ಬಿಜೆಪಿ ಅತೃಪ್ತಿಗೆ ಮದ್ದರೆದ ಬಿ.ವೈ.ವಿಜಯೇಂದ್ರ!

ಕಳೆದ ಆರು ವರ್ಷ ತೆರಿಗೆ ಸಂಗ್ರಹ ವಿವರ
ವರ್ಷ ಗುರಿ ಸಂಗ್ರಹ
2018-19 3,100 2,529
2019-20 3,500 2,659
2020-21 3,500 2,860
2021-22 4,000 3,089
2022-23 4,189 3,332
2023-24 4,412 3,801

Follow Us:
Download App:
  • android
  • ios