ಗಲ್ಲಿಗೇರಿಸುವ ಮುನ್ನ ಕೊನೆಯಾಸೆ ಕೇಳಲ್ಲ; ತಿಹಾರ್ ಜೈಲಿನ ಅಧಿಕಾರಿ

ನಿರ್ಭಯಾ ಮೇಲೆ ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಂದ ನಾಲ್ವರನ್ನು ಈ ತಿಂಗಳ 22ರಂದು ದೆಹಲಿಯ ತಿಹಾರ ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತಿದೆ. ಅದೇ ಜೈಲಿನಲ್ಲಿ ಎಂಟು ಮಂದಿಯನ್ನು ಗಲ್ಲಿಗೇರಿಸುವ ಕಾರ್ಯಕ್ಕೆ ಈ ಹಿಂದೆ ಮೇಲ್ವಿಚಾರಕರಾಗಿದ್ದ ಅಧಿಕಾರಿಯ ಕುತೂಹಲಕರ ಅನುಭವನ ಕಥನ ಇಲ್ಲಿದೆ.

Tihar jail retired officer shares a experience of hanging process

ನವದೆಹಲಿ (ಜ. 14):  1982ರ ಜನವರಿ 31. ಆವತ್ತು ನನ್ನ 35 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ಗಲ್ಲುಶಿಕ್ಷೆಯೊಂದರ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಕುಖ್ಯಾತ ಕ್ರಿಮಿನಲ್‌ಗಳಾದ ಬಿಲ್ಲಾ ಮತ್ತು ರಂಗಾನನ್ನು ಗಲ್ಲಿಗೇರಿಸಲು ವಾರಂಟ್‌ ಜಾರಿಯಾಗಿತ್ತು. ಆ ವಿಷಯ ಕಿವಿಗೆ ಬಿದ್ದ ಮೇಲೆ ಹಿಂದಿನ ದಿನದ ರಾತ್ರಿ ನನ್ನ ಗಂಟಲಿನಲ್ಲಿ ಊಟ ಇಳಿದಿರಲಿಲ್ಲ.

ಬಿಲ್ಲಾ ಮತ್ತು ರಂಗಾ ಬಗ್ಗೆ ನೀವೂ ಕೇಳಿರುತ್ತೀರಿ. ಅವರು ದೆಹಲಿಯ ಕುಖ್ಯಾತ ಅತ್ಯಾಚಾರಿಗಳು ಹಾಗೂ ಹಂತಕರು. ಜಸ್ಬೀರ್‌ ಸಿಂಗ್‌ ಅಲಿಯಾಸ್‌ ಬಿಲ್ಲಾ, ಕುಲ್ಜೀತ್‌ ಸಿಂಗ್‌ ಅಲಿಯಾಸ್‌ ರಂಗಾ ಖುಷ್‌. 1978ರಲ್ಲಿ ದೆಹಲಿಯಲ್ಲಿ ಅಪ್ರಾಪ್ತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನೂ ಆಕೆಯ 14 ವರ್ಷದ ಅಣ್ಣನನ್ನೂ ನಿರ್ದಯವಾಗಿ ಕೊಂದುಹಾಕಿದ್ದರು. ಕಾರಿನಲ್ಲಿ ಲಿಫ್ಟ್‌ ಕೊಡುತ್ತೇವೆಂದು ಅಣ್ಣ-ತಂಗಿಯನ್ನು ಹತ್ತಿಸಿಕೊಂಡಿದ್ದ ಇವರು ಕಿರ್ಪಾನ್‌ನಿಂದ (ಸಿಖ್ಖರು ಆತ್ಮರಕ್ಷಣೆಗಾಗಿ ಧರಿಸುವ ಚೂರಿ) ಮೊದಲು ಅಣ್ಣನನ್ನು ಹತ್ಯೆಗೈದರು. ನಂತರ ತಂಗಿಯ ಮೇಲೆ ಅತ್ಯಾಚಾರ ಎಸಗಿ, ಇರಿದು ಕೊಂದಿದ್ದರು.

ಅವರನ್ನು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಬೇಕು ಎಂದು ನ್ಯಾಯಾಲಯ ವಾರಂಟ್‌ ಹೊರಡಿಸುವವರೆಗೆ ನಾನು ಬಿಲ್ಲಾ ಮತ್ತು ರಂಗಾನ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ ಅಷ್ಟೆ. ಆದರೆ, ನಾನೇ ಅವರನ್ನು ಗಲ್ಲಿಗೇರಿಸುವ ಕಾರ್ಯದ ಉಸ್ತುವಾರಿ ನೋಡಿಕೊಳ್ಳಬೇಕಾಗಿ ಬಂದಾಗ ಅದರ ಅನುಭವ ಬೇರೆಯೇ ರೀತಿಯಿತ್ತು. ಸಾಮಾನ್ಯವಾಗಿ ಗಲ್ಲಿಗೇರುವ ಕೈದಿಗೆ ಒಂದು ವಾರದ ಮೊದಲೇ ನಿಮ್ಮನ್ನು ಇಂಥಾ ದಿನ ಗಲ್ಲಿಗೇರಿಸಲು ನ್ಯಾಯಾಲಯ ವಾರಂಟ್‌ ಹೊರಡಿಸಿದೆ ಎಂಬ ಸುದ್ದಿ ತಿಳಿಸಬೇಕು. ಅವರು ತಮ್ಮ ಕುಟುಂಬದವರ ಜೊತೆಗೆ ಅಥವಾ ಸ್ನೇಹಿತರ ಜೊತೆಗೆ ಮಾತನಾಡಿಕೊಳ್ಳಲು ಹಾಗೂ ಉಯಿಲು ಬರೆಯುವುದಿದ್ದರೆ ಅದಕ್ಕೆ ಅನುಕೂಲವಾಗಲಿ ಎಂದು ಮೊದಲೇ ತಿಳಿಸಲಾಗುತ್ತದೆ. ಜೈಲಿನ ಸುಪರಿಂಟೆಂಡೆಂಟ್‌ ಈ ಮಾಹಿತಿಯನ್ನು ಕೈದಿಗೆ ತಿಳಿಸುತ್ತಾರೆ.

ಅತ್ತ ಗಲ್ಲಿಗೆ ಪ್ರ್ಯಾಕ್ಟೀಸ್, ಇತ್ತ ಆಪ್ತರ ಮೀಟಿಂಗ್ಸ್: INSIDE ತಿಹಾರ್!

ಒಬ್ಬ ಖುಷ್‌, ಇನ್ನೊಬ್ಬ ಅಳುಬುರುಕ

ತಿಹಾರ್‌ ಜೈಲಿನ ಸುಪರಿಂಟೆಂಡೆಂಟ್‌ ಬಿಲ್ಲಾ ಮತ್ತು ರಂಗಾನಿಗೆ ಗಲ್ಲುಶಿಕ್ಷೆಯ ವಿಷಯ ತಿಳಿಸಿದರು. ರಂಗಾ ಬಹಳ ಜಾಲಿ ಮನುಷ್ಯ. ಯಾವಾಗಲೂ ಖುಷಿಖುಷಿಯಾಗಿರುತ್ತಿದ್ದ. ‘ರಂಗಾ ಖುಷ್‌’ ಎಂದು ಸದಾ ಹೇಳುತ್ತಿದ್ದ. ತದ್ವಿರುದ್ಧವಾಗಿ ಬಿಲ್ಲಾ ಯಾವಾಗಲೂ ಕಣ್ಣೀರು ಹಾಕುತ್ತಾ, ನನಗೆ ಈ ಗತಿ ಬರಲು ರಂಗಾನೇ ಕಾರಣ ಎಂದು ಬೈಯುತ್ತಿರುತ್ತಿದ್ದ. ಒಂದು ವಾರದ ನಂತರ ಗಲ್ಲಿಗೇರಿಸುವ ಸುದ್ದಿ ತಿಳಿಸಿದಾಗಲೂ ಅವರ ಪ್ರತಿಕ್ರಿಯೆ ಹೀಗೇ ಇತ್ತು.

ಗಲ್ಲಿಗೇರುವ ಹಿಂದಿನ ರಾತ್ರಿ ರಂಗಾ ಹೊಟ್ಟೆತುಂಬಾ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡಿದ್ದ. ಆದರೆ, ಬಿಲ್ಲಾ ತನ್ನ ಕೋಣೆಯಲ್ಲಿ ಆತಂಕದಿಂದ ಶತಪಥ ಹಾಕುತ್ತಾ, ಏನೋ ಗೊಣಗುತ್ತಿದ್ದ. ಮರುದಿನ ಗಲ್ಲಿಗೇರಿಸುವಾಗ ಬಿಲ್ಲಾ ಅಳುತ್ತಿದ್ದ. ಆದರೆ, ರಂಗಾ ‘ಜೋ ಬೋಲೆ ಸೋ ನಿಹಾಲ್‌ ಸತ್‌ ಶ್ರೀ ಅಕಾಲ್‌’ ಎಂದು ಕೂಗಿದ್ದ.

ಅಪರಾಧಿಯನ್ನು ಗಲ್ಲಿಗೇರಿಸುವಾಗ ನೇಣು ಕುಣಿಕೆಯ ಲಿವರ್‌ ಎಳೆಯಲು ಎಸ್‌ಪಿ ಅನುಮತಿ ನೀಡಬೇಕು. ಬಿಲ್ಲಾ ಮತ್ತು ರಂಗಾನನ್ನು ಗಲ್ಲಿಗೇರಿಸಲು ಎಸ್ಪಿ ತಮ್ಮ ಕೆಂಪು ಕರ್ಚೀಫನ್ನು ನಾಟಕೀಯವಾಗಿ ಅಲುಗಾಡಿಸುವ ಮೂಲಕ ಸಿಗ್ನಲ್‌ ನೀಡಿದ್ದರು. ನಂತರ ಅನೇಕ ವರ್ಷಗಳ ಕಾಲ ಆ ಕರ್ಚೀಫನ್ನು ಅವರು ‘ಬಿಲ್ಲಾ-ರಂಗಾ ಕರ್ಚೀಫ್‌’ ಎಂದು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತೋರಿಸುತ್ತಿದ್ದರು. ಅದೊಂದು ಸ್ಮರಣಿಕೆಯಂತೆ ಉಳಿದುಕೊಂಡಿತ್ತು.

2 ತಾಸು ಕಳೆದರೂ ನಾಡಿ ಮಿಡಿಯುತ್ತಿತ್ತು!

ಬಿಲ್ಲಾ-ರಂಗಾನ ಗಲ್ಲಿಗೇರಿಸುವ ಪ್ರಕ್ರಿಯೆಯಲ್ಲಿ ಮೈನವಿರೇಳಿಸುವ ವಿದ್ಯಮಾನವೊಂದು ಘಟಿಸಿತ್ತು. ಇಬ್ಬರನ್ನೂ ನೇಣಿಗೇರಿಸಿ ಎರಡು ತಾಸಿನ ಬಳಿಕ ಜೈಲಿನ ವೈದ್ಯರು ನಾಡಿಮಿಡತ ನೋಡಿ ದೃಢೀಕರಿಸಲು ಹೋದರು. ರಂಗಾನ ನಾಡಿ ಇನ್ನೂ ಮಿಡಿಯುತ್ತಿತ್ತು! ಕೆಲವೊಮ್ಮೆ ನೇಣಿಗೆ ಕೊರಳೊಡ್ಡುವ ಕೈದಿಯು ಹೆದರಿಕೆಯಿಂದ ಮೊದಲೇ ಉಸಿರಾಟ ನಿಲ್ಲಿಸಿಬಿಟ್ಟಿರುತ್ತಾನೆ. ಆಗ ದೇಹದಲ್ಲಿ ಗಾಳಿ ಸೇರಿಕೊಳ್ಳುತ್ತದೆ. ಬಹುಶಃ ರಂಗಾನ ಪ್ರಕರಣದಲ್ಲೂ ಹಾಗೇ ಆಗಿರಬೇಕು. ಆಗ ಒಬ್ಬ ಗಾರ್ಡ್‌ಗೆ ರಂಗಾನನ್ನು ಗಲ್ಲಿಗೇರಿಸಿದ್ದ 15 ಅಡಿಯ ಗಲ್ಲು ಕೂಪದೊಳಗೆ ಇಳಿಯಲು ಸೂಚಿಸಲಾಗಿತ್ತು. ಅವನು ಇಳಿದು ನೇಣು ಕುಣಿಕೆಯಲ್ಲಿ ನೇತಾಡುತ್ತಿದ್ದ ರಂಗಾನ ಕಾಲು ಎಳೆದ. ಆಗ ದೇಹದೊಳಗೆ ಸೇರಿಕೊಂಡಿದ್ದ ಗಾಳಿ ಬಿಡುಗಡೆಯಾಗಿ ನಾಡಿಮಿಡಿತ ನಿಂತಿತ್ತು.

ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸುವ ಪವನ್‌ಗೆ ನಟ ಜಗ್ಗೇಶ್‌ರಿಂದ 1 ಲಕ್ಷ ರೂ!

ಗಲ್ಲಿಗೇರಿಸುವ ಸಿದ್ಧತೆ ಹೇಗಿರುತ್ತದೆ?

ಗಲ್ಲುಶಿಕ್ಷೆ ಜಾರಿಗೆ ನ್ಯಾಯಾಲಯ ವಾರಂಟ್‌ ಹೊರಡಿಸಿ, ಆ ಸುದ್ದಿಯನ್ನು ಕೈದಿಗೆ ತಿಳಿಸಿದ ಮೇಲೆ ತಿಹಾರ್‌ ಜೈಲಿನಲ್ಲಿ ಕೈದಿಯನ್ನು ಜೈಲ್‌ ನಂ.3ಕ್ಕೆ ಕಳಿಸಲಾಗುತ್ತದೆ. ಅಲ್ಲಿ ಆತ ಆತ್ಮಹತ್ಯೆ ಮಾಡಿಕೊಳ್ಳದಂತೆ ನಿಗಾ ವಹಿಸಲಾಗುತ್ತದೆ. ಅದಕ್ಕಾಗಿ ಅವನಲ್ಲಿರುವ ಎಲ್ಲಾ ವಸ್ತುಗಳನ್ನೂ ಕಿತ್ತುಕೊಳ್ಳಲಾಗುತ್ತದೆ. ಪೈಜಾಮಾದ ಲಾಡಿ ಕೂಡ ಅವನ ಬಳಿ ಬಿಡುವುದಿಲ್ಲ. ಏಕೆಂದರೆ ಅದನ್ನು ಅವನು ಕುತ್ತಿಗೆಗೆ ಬಿಗಿದುಕೊಳ್ಳುವ ಸಾಧ್ಯತೆಯಿರುತ್ತದೆ. ನಂತರ ಕೆಲ ತಾಂತ್ರಿಕ ಪ್ರಕ್ರಿಯೆಗಳು ನಡೆಯುತ್ತವೆ. ಕೈದಿಯ ತೂಕ, ಅವನ ಎತ್ತರ ಹಾಗೂ ಕುತ್ತಿಗೆಯ ಉದ್ದ ಅಳೆಯಲಾಗುತ್ತದೆ.

ಅವುಗಳ ಆಧಾರದ ಮೇಲೆ ಗಲ್ಲಿಗೇರಿಸುವ ಪರಿಕರಗಳನ್ನು ಸಿದ್ಧಪಡಿಸಲಾಗುತ್ತದೆ. ಕೈದಿಯ ತೂಕ ಹೆಚ್ಚಿದ್ದಷ್ಟೂಅವನನ್ನು ಗಲ್ಲಿಗೇರಿಸಿದ ನಂತರ ಕೆಳಕ್ಕೆ ಜೀಕಿ ಬಿಡುವ ಅಂತರವನ್ನು ಕಡಿಮೆ ಮಾಡಲಾಗುತ್ತದೆ. ಈ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಗಲ್ಲಿಗೇರಿಸಿದಾಗ ಕತ್ತು ತುಂಡಾಗಿ ಕಳಚಿಕೊಳ್ಳುವ ಅಪಾಯವಿರುತ್ತದೆ. ನಂತರ ಕೈದಿಯ ಒಂದೂವರೆ ಪಟ್ಟು ಹೆಚ್ಚು ತೂಕದ ಮರಳಿನ ಚೀಲ ಬಳಸಿ ಗಲ್ಲಿಗೇರಿಸುವುದರ ಅಣಕು ಕಾರ್ಯಾಚರಣೆ ನಡೆಯುತ್ತದೆ. ಹಗ್ಗದಿಂದ ಕುತ್ತಿಗೆ ಕೊರೆಯದಂತೆ ಮೇಣ ಅಥವಾ ಬೆಣ್ಣೆ ಹಚ್ಚಲಾಗುತ್ತದೆ. ನೇಣಿಗೇರಿಸುವ ಕೆಲ ವ್ಯಕ್ತಿಗಳು ಸೋಪು ಅಥವಾ ಬಾಳೆಹಣ್ಣು ಸವರುವುದೂ ಉಂಟು. ಬಂಗಾಳದ ನಾತಾ ಮಲ್ಲಿಕ್‌ ಹೀಗೆ ಮಾಡುತ್ತಿದ್ದ.

ತಿಹಾರದಲ್ಲಿ ಮಾಂಸಾಹಾರ ನಿಷಿದ್ಧ

ನನ್ನ ವೃತ್ತಿಜೀವನದಲ್ಲಿ ಎಂಟು ಮಂದಿಯನ್ನು ಗಲ್ಲಿಗೇರಿಸುವ ಕಾರ್ಯಕ್ಕೆ ಸಾಕ್ಷಿಯಾಗಿದ್ದೇನೆ. ಜಮ್ಮು ಕಾಶ್ಮೀರ ಲಿಬರೇಶನ್‌ ಫ್ರಂಟ್‌ನ ಮಕ್ಬೂಲ್‌ ಭಟ್‌ನನ್ನು 1984ರಲ್ಲಿ ಗಲ್ಲಿಗೇರಿಸಿದ್ದೆವು. ಅವನ ಇಂಗ್ಲಿಷ್‌ ಬಹಳ ಚೆನ್ನಾಗಿತ್ತು. ನಾನು ಕೂಡ ಅವನ ಸಹಾಯದಿಂದ ಇಂಗ್ಲಿಷ್‌ ಜ್ಞಾನ ಸುಧಾರಿಸಿಕೊಂಡಿದ್ದೆ. ಜೈಲಿನ ಸಿಬ್ಬಂದಿ ಅಧಿಕೃತ ಸರ್ಕಾರಿ ಮೆಮೋಗಳಿಗೆ ಉತ್ತರಿಸಲು ಅವನ ಸಹಕಾರ ಪಡೆಯುತ್ತಿದ್ದರು. ಸರ್ಕಾರಿ ಅಧಿಕಾರಿಯೊಬ್ಬನನ್ನು ಹತ್ಯೆಗೈದ ಕಾರಣಕ್ಕೆ ಅವನಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು.

ಅವನನ್ನು ಗಲ್ಲಿಗೇರಿಸಲು ಬಹಳ ತರಾತುರಿಯಲ್ಲಿ ಬ್ಲಾಕ್‌ ವಾರಂಟ್‌ ಹೊರಡಿಸಲಾಗಿತ್ತು. ಬ್ರಿಟನ್ನಿನಲ್ಲಿ ಪ್ರತ್ಯೇಕತಾವಾದಿಗಳ ಗುಂಪೊಂದು ಭಾರತೀಯ ರಾಯಭಾರಿ ರವೀಂದ್ರ ಮಾತ್ರೆ ಅವರನ್ನು ಅಪಹರಿಸಿ, ಮಕ್ಬೂಲ್‌ ಭಟ್‌ನನ್ನು ಬಿಡುಗಡೆ ಮಾಡುವಂತೆ ಷರತ್ತು ವಿಧಿಸಿತ್ತು. ಹಾಗಾಗಿ ಕೂಡಲೇ ಅವನನ್ನು ಗಲ್ಲಿಗೇರಿಸಲು ವಾರಂಟ್‌ ಹೊರಬಿದ್ದಿತ್ತು. ಗಲ್ಲಿಗೇರುವಾಗ ಭಟ್‌ ಬಹಳ ಶಾಂತವಾಗಿ, ಸಂಯಮದಿಂದ ವರ್ತಿಸಿದ್ದ.

ಒಂದು ವಿಷಯ ಹೇಳಬೇಕು. ಸಿನಿಮಾಗಳಲ್ಲಿ ತೋರಿಸುವಂತೆ ಅಪರಾಧಿಯನ್ನು ಗಲ್ಲಿಗೇರಿಸುವ ಮುನ್ನ ಯಾರೂ ಅವರ ಬಳಿ ಕೊನೆಯ ಆಸೆಯೇನು ಎಂದು ಕೇಳುವುದಿಲ್ಲ. ಆದರೂ ಕೆಲವರು ತಮ್ಮನ್ನು ಗಲ್ಲಿಗೇರಿಸಬೇಡಿ ಎಂದು ಗೋಗರೆಯುತ್ತಾರೆ. ಇನ್ನು ಕೆಲವರು ಕೊನೆಯದಾಗಿ ಒಂದು ಮಾಂಸದೂಟ ಕೊಡಿ ಎಂದು ಕೇಳುತ್ತಾರೆ. ಅದಕ್ಕೆ ಜೈಲು ಸಿಬ್ಬಂದಿ ಸೊಪ್ಪು ಹಾಕುವುದಿಲ್ಲ. ಇಷ್ಟಕ್ಕೂ ತಿಹಾರದಲ್ಲಿ ಮಾಂಸಾಹಾರ ನಿಷಿದ್ಧ. ಅದು ಸಸ್ಯಾಹಾರಿ ಕಾರಾಗೃಹ.

ನಿರ್ಭಯಾ ಕೇಸ್: ತಿಹಾರ್‌ ಜೈಲಿನಲ್ಲಿ ಅಣಕು ನೇಣು!

ಗಲ್ಲಿಗೂ ಮುನ್ನ ಅಫ್ಜಲ್‌ ಜೊತೆ ಟೀ

ನಾನು ಕೊನೆಯದಾಗಿ ಗಲ್ಲಿಗೇರಿಸಿದ ವ್ಯಕ್ತಿ ಮೊಹಮ್ಮದ್‌ ಅಫ್ಜಲ್‌ ಗುರು. 2011ರಲ್ಲಿ ಸಂಸತ್‌ ಭವನದ ಮೇಲೆ ದಾಳಿ ನಡೆಸಿದ್ದಕ್ಕಾಗಿ ಅವನಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಗಲ್ಲುಶಿಕ್ಷೆ ವಿಚಾರದಲ್ಲಿ ನಾನು ಪಕ್ಕಾ ಪ್ರಾಕ್ಟಿಕಲ್‌ ವ್ಯಕ್ತಿಯಾಗಿದ್ದರೂ ಅಫ್ಜಲ್‌ ಗುರು ವಿಷಯದಲ್ಲಿ ಭಾವನಾತ್ಮಕವಾಗಿ ಅಲುಗಾಡಿಹೋಗಿದ್ದೆ.

ತಿಹಾರ್‌ ಜೈಲಿನ ವಾರ್ಡ್‌ ನಂ.8ರಲ್ಲಿರುವ ಜೈಲ್‌ ನಂ.3ಕ್ಕೆ ಫಾಸಿ ಕೋಠಿ ಎನ್ನುತ್ತಾರೆ. ಅದು ಗಲ್ಲಿಗೇರಿಸುವ ಕೊಠಡಿ. ಅಲ್ಲಿಗೆ ಹೋಗುವ ಮುನ್ನ 2013ರ ಫೆ.9ರ ಬೆಳಿಗ್ಗೆ ನಾನು, ಎಸ್‌ಪಿ ಹಾಗೂ ಅಫ್ಜಲ್‌ ಗುರು ಟೀ ಕುಡಿಯಲು ಕುಳಿತಿದ್ದೆವು. ಆಗ ಕೇಸಿನ ಬಗ್ಗೆ ಮಾತನಾಡುತ್ತಾ ಅಫ್ಜಲ್‌ ತಾನು ಭಯೋತ್ಪಾದಕ ಅಲ್ಲ, ವ್ಯವಸ್ಥೆಯ ವಿರುದ್ಧ ಹೋರಾಡಿದ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಹೇಳಿದ. ನಂತರ ಇದ್ದಕ್ಕಿದ್ದಂತೆ ಬಾಲಿವುಡ್‌ ಸಿನಿಮಾ ‘ಬಾದಲ್‌’ನ ಹಾಡು ಹಾಡಲು ಶುರುಮಾಡಿದ. ಅಪ್ನೇ ಲಿಯೇ ಜೀಯೇ ತೋ ಕ್ಯಾ ಜೀಯೇ, ತೂ ಜೀ ಆ ದಿಲ್‌ ಜಮಾನೇ ಕೇ ಲಿಯೇ... ನಮಗಾಗಿ ಬದುಕಿದರೆ ಏನು ಬಂತು, ನೀನು ಹೃದಯದ ಮಾತು ಕೇಳಿ ಬದುಕಿದೆ... ಅವನು ಹಾಡಿದ ರೀತಿ ಕೇಳಿ ನಾನೆಷ್ಟುಭಾವಪರವಶನಾಗಿಬಿಟ್ಟೆಅಂದರೆ ಅವನ ಜೊತೆ ನಾನೂ ಸೇರಿ ಹಾಡಲು ಶುರುಮಾಡಿದ್ದೆ. ನಂತರ ಕಡಿಮೆಯೆಂದರೂ 100 ಸಾರಿ ಆ ಹಾಡು ಕೇಳಿದ್ದೇನೆ.

* ಸುನಿಲ್‌ ಗುಪ್ತಾ ಹಾಗೂ ಪತ್ರಕರ್ತೆ ಸುನೇತ್ರಾ ಚೌಧರಿ ಬರೆದಿರುವ ‘ಬ್ಲಾಕ್‌ ವಾರಂಟ್‌’ ಕೃತಿಯ ಆಯ್ದ ಭಾಗ.

Latest Videos
Follow Us:
Download App:
  • android
  • ios