ನವದೆಹಲಿ[ಜ.13]: ದಿಲ್ಲಿಯ ನಿರ್ಭಯಾ ಗ್ಯಾಂಗ್‌ರೇಪ್‌, ಕೊಲೆ ಪ್ರಕರಣದ ದೋಷಿಗಳ ನೇಣಿಗೆ ದಿನಗಳು ಸಮೀಪಿಸುತ್ತಿದ್ದಂತೆಯೇ ಭಾನುವಾರದಿಂದ ತಿಹಾರ್‌ ಜೈಲಿನ ಸಿಬ್ಬಂದಿ, ನೇಣು ಹಾಕುವ ಅಣಕು ತಾಲೀಮನ್ನು ಆರಂಭಿಸಿದ್ದಾರೆ. ಮೊದಲ ಬಾರಿಗೆ ತಿಹಾರ್‌ ಜೈಲಿನಲ್ಲಿ 4 ನೇಣುಗಂಬ ಸಿದ್ಧಪಡಿಸಲಾಗಿದ್ದು, ಅಲ್ಲಿ ಈ ತಾಲೀಮು ನಡೆಸಲಾಗಿದೆ.

ಜನವರಿ 22ರ ಬೆಳಗ್ಗೆ 7 ಗಂಟೆಗೆ ಪ್ರಕರಣದ ದೋಷಿಗಳಾದ ಮುಕೇಶ್‌ ಕುಮಾರ್‌, ವಿನಯ್‌ ಶರ್ಮಾ, ಅಕ್ಷಯ್‌ ಸಿಂಗ್‌ ಹಾಗೂ ಪವನ್‌ ಗುಪ್ತಾ ನೇಣಿಗೇರಿಸಲು ಇತ್ತೀಚೆಗೆ ದಿಲ್ಲಿ ಕೋರ್ಟ್‌ ಆದೇಶಿಸಿತ್ತು. ಇದಕ್ಕಾಗಿ ತಾಲೀಮು ಆರಂಭಿಸಿದ ಜೈಲು ಸಿಬ್ಬಂದಿ, ಕಲ್ಲು ಹಾಗೂ ಮರಳು ತುಂಬಿದ್ದ ಗೋಣಿಚೀಲಗಳನ್ನು ನೇಣಿಗೇರಿಸಿದರು.

ನಿರ್ಭಯಾ ಕೇಸ್‌: ಇಬ್ಬರು ದೋಷಿಗಳ ಕ್ಯುರೇಟಿವ್‌ ಜ.14ರಂದು ವಿಚಾರಣೆ

ಜ.22ರಂದು ನೇಣಿಗೆ ಹಾಕಲು ಬಳಸಲಾಗುವ ಹಗ್ಗಗಳನ್ನೇ ತಾಲೀಮಿಗೆ ಬಳಸಲಾಗಿದೆ. ಮೊದಲ ಬಾರಿ ಇಲ್ಲಿ ಅಣಕು ನೇಣು ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ನೇಣಿಗೂ ಮುನ್ನ ಮುಕೇಶ್‌, ವಿನಯ್‌ ಸಲ್ಲಿಸಿರುವ ಕ್ಯುರೇಟಿವ್‌ ಅರ್ಜಿ ಮಂಗಳವಾರ ಸುಪ್ರೀಂ ಕೋರ್ಟ್‌ ಮುಂದೆ ವಿಚಾರಣೆಗೆ ಬರಲಿವೆ. ಕೋರ್ಟ್‌ ತೀರ್ಮಾನ ಆಧರಿಸಿ ನೇಣಿನ ದಿನಾಂಕ ಅಂತಿಮವಾಗಲಿದೆ.