Asianet Suvarna News Asianet Suvarna News

ವಿಶ್ವಗುರು: ಭಾರತದ ಜಾಗತಿಕ ಪಾರಮ್ಯಕ್ಕಾಗಿ ಮೋದಿಯವರ ಪ್ರಯತ್ನ

ವಿಶ್ವಗುರು ಎಂಬ ಪರಿಕಲ್ಪನೆ ಹೆಚ್ಚು ಪ್ರಚಲಿತವಾಗಿದ್ದು, ಜಿ-20 ಶೃಂಗಸಭೆಯಲ್ಲಿ ಈ ಪದ ಎಲ್ಲೆಡೆ ಪ್ರಚಾರವಾಗುವಂತೆ ಮಾಡಲಾಯಿತು. ವಿಭಿನ್ನ ವಿದೇಶಾಂಗ ನೀತಿಗಳ ಮೂಲಕ ಮೋದಿ ಶ್ರೀಸಾಮಾನ್ಯನಿಗೂ ಈ ಬಗ್ಗೆ ಅರಿವು ಮೂಡುವಂತೆ ಮಾಡಿದ್ದಾರೆ. 

indian prime minster narendra modi tries to make India vishwaguru and simple foreign policy
Author
First Published Mar 28, 2024, 5:45 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದು, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಾವು ಭಾರತದಲ್ಲಿ ಯಾವ ರೀತಿಯ ಬದಲಾವಣೆಗಳು ಮತ್ತು ಅಭಿವೃದ್ಧಿಯನ್ನು ತಂದಿದ್ದೇನೆ ಎಂಬ ಆಧಾರದಲ್ಲಿ ತಮ್ಮ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಭಾರತದ ಚುನಾವಣಾ ಚರ್ಚೆಗಳು ಸಾಮಾನ್ಯವಾಗಿ ವಿದೇಶಾಂಗ ನೀತಿಯ ಕುರಿತ ಅಭಿಪ್ರಾಯಗಳನ್ನು ಒಳಗೊಂಡಿರುವುದಿಲ್ಲ. ಆದರೆ, ನರೇಂದ್ರ ಮೋದಿಯವರ ನೀತಿ ಈ ವಿಷಯದಲ್ಲಿ ಹೊರತು. ತಮ್ಮ ಚುನಾವಣಾ ಪ್ರಚಾರ ಕಾರ್ಯದ ಆರಂಭಕ್ಕೂ ಮುನ್ನ, ಬಿಜೆಪಿ ಭಾರತವನ್ನು ಜಾಗತಿಕ ಮುಖಂಡನನ್ನಾಗಿಸುವ ನರೇಂದ್ರ ಮೋದಿಯವರ ಕನಸಿಗೆ ಒತ್ತು ನೀಡಿದ್ದು, ಇದಕ್ಕೆ 'ವಿಶ್ವಗುರು' ಎಂಬ ಪದವನ್ನು ಬಳಸುತ್ತಿದೆ. ಕಳೆದ ವರ್ಷ ಭಾರತ ಜಿ-20 ಶೃಂಗಸಭೆಯನ್ನು ಆಯೋಜಿಸಿದಾಗ, ವಿಶ್ವಗುರು ಎಂಬ ಪದ ಜಾಗತಿಕ ಮಟ್ಟದಲ್ಲಿ ಹೆಚ್ಚು ಹೆಚ್ಚು ಗಮನ ಸೆಳೆಯಿತು. ನರೇಂದ್ರ ಮೋದಿಯವರು ಮತ್ತು ಜಿ-20 ಶೃಂಗದ ವಿವಿಧ ಸಭೆಗಳ ಭಿತ್ತಿಚಿತ್ರಗಳು ದೇಶಾದ್ಯಂತ ಅಳವಡಿಸಲ್ಪಟ್ಟಿದ್ದವು.

ಮೋದಿಯವರು ಬಹಿರಂಗವಾಗಿ ಭಾರತದ ವಿದೇಶಾಂಗ ನೀತಿಯ ಕುರಿತಾದ ಚರ್ಚೆಗಳನ್ನು ನಡೆಸುತ್ತಿರುವುದು ಹಿಂದಿನ ಸರ್ಕಾರಗಳ ಕ್ರಮಕ್ಕೆ ಹೋಲಿಸಿದರೆ ಸಂಪೂರ್ಣ ಭಿನ್ನ. ಹಿಂದೆ ಇಂತಹ ವಿಚಾರಗಳು ಜನಸಾಮಾನ್ಯರ ಗಮನಕ್ಕೂ ಬರ್ತಾ ಇರ್ಲಿಲ್ಲ. ಕೇವಲ ದೆಹಲಿಯ ಅಧಿಕಾರ ವಲಯಕ್ಕೆ ಮಾತ್ರವೇ ಗಿರಕಿ ಹೊಡೆಯುತ್ತಿದ್ದವು. ಇಂತಹ ಮುಕ್ತತೆಯ ಕಾರಣದಿಂದಾಗಿ, ಹೆಚ್ಚಿನ ಮಾಹಿತಿಯುಳ್ಳ ಚರ್ಚೆಗಳು ನಡೆದು, ಜನರಿಗೂ ವಿದೇಶಾಂಗ ನೀತಿಗಳ ಫಲಿತಾಂಶಗಳು ತಿಳಿದುಬಂದರೆ, ಇದರಿಂದಾಗಿ ಧನಾತ್ಮಕ ಬದಲಾವಣೆಗಳಾಗಿವೆ. 

ಮಾಲ್ಡೀವ್ಸ್ ಜೊತೆ ಮುನಿಸು:
ಇತ್ತೀಚೆಗೆ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಭಿನ್ನಾಭಿಪ್ರಾಯವನ್ನು ಗಮನಿಸಬಹುದು. ಈ ವರ್ಷದ ಆರಂಭದಲ್ಲಿ, ಮಾಲ್ಡೀವ್ಸ್ ಭಾರತಕ್ಕೆ ತನ್ನ ದ್ವೀಪಸಮೂಹದಿಂದ ಭಾರತೀಯ ಸೈನಿಕರನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡಿತು. ಮಾಲ್ಡೀವ್ಸ್‌ನ ಮೂವರು ಸಚಿವರು ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ, ಭಾರತದ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಪತ್ರಕರ್ತರು ಕೋಪದಿಂದ ಪ್ರತಿಕ್ರಿಯಿಸತೊಡಗಿದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಮಾಲ್ಡೀವ್ಸ್ ಸರ್ಕಾರ ಮೂವರು ಸಚಿವರನ್ನು ವಜಾಗೊಳಿಸಿತಾದರೂ, ಮಾಲ್ಡೀವ್ಸ್ ಮೇಲೆ ಆರ್ಥಿಕ ನಿಷೇಧ (Financial Restrictions) ಹೇರಬೇಕೆಂದು ಆಗ್ರಹಿಸುತ್ತಿದ್ದ ಭಾರತೀಯರಿಗೆ ಆ ಕ್ರಮಗಳು ಸಾಲದಾದವು. ಇದರೊಂದಿಗೆ ಕಳೆದ ಕೆಲವು ತಿಂಗಳುಗಳಲ್ಲಿ ಮಾಲ್ಡೀವ್ಸ್‌ಗೆ ತೆರಳುವ ಭಾರತೀಯ ಪ್ರವಾಸಿಗರ ಸಂಖ್ಯೆಯೂ ಆಲ್ಮೋಸ್ಟ್ ಸ್ಟಾಪ್ ಆಗಿದೆ.

ವಿದೇಶಾಂಗ ನೀತಿಯನ್ನು ಹೆಚ್ಚು ಹೆಚ್ಚು ಸಾರ್ವಜನಿಕಗೊಳಿಸುವ ಉಪಕ್ರಮವನ್ನು ಅನುಸರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಜಾತ್ಯಾತೀತ ಪ್ರಜಾಪ್ರಭುತ್ವ ಎಂಬ ಭಾರತದ ಗುರುತನ್ನು ಹಿಂದೂ ನಾಗರಿಕತೆಯ ಬುನಾದಿಯಡಿ ನಿರ್ಮಿತವಾಗಿರುವ ರಾಷ್ಟ್ರ ಎಂಬ‌ ಗುರುತಿನೆಡೆಗೆ ಸಾಗಿಸತೊಡಗಿದರು.

ಹಲವು ವರ್ಷಗಳ ಕಾಲ, ಭಾರತ ಬೆಳೆಯುತ್ತಿರುವ ರಾಷ್ಟ್ರಗಳ ಪೈಕಿ ಉದಾರವಾದಿ ಜಾತ್ಯಾತೀತ ರಾಷ್ಟ್ರಕ್ಕೆ ಒಂದು ಉದಾಹರಣೆಯಾಗಿತ್ತು. ನವದೆಹಲಿಯಲ್ಲಿ ಈ ಮೊದಲು ಇದ್ದ ಸರ್ಕಾರಗಳು ಭಾರತದ ವೈವಿಧ್ಯಮಯವಾದ, ಬಹು ಧರ್ಮಗಳ ಸಮಾಜವನ್ನು ಮತ್ತು ಬದಲಾವಣೆಗಳನ್ನು ಗುರುತಿಸಿ, ಸ್ವಾಗತಿಸುವ ಪ್ರತಿಭೆಯನ್ನು ಬೆಂಬಲಿಸಿದ್ದವು. ಆದರೆ, ಆ ಸಂದರ್ಭದಲ್ಲಿ ಭಾರತದ ನೆರೆಹೊರೆ ರಾಷ್ಟ್ರಗಳಿಗೆ ಇನ್ನೂ ನಾಗರಿಕ ಸಂಘರ್ಷಗಳು, ಧಾರ್ಮಿಕ ಭಿನ್ನಾಭಿಪ್ರಾಯಗಳಿದ್ದವು.

ಆದರೆ, ನರೇಂದ್ರ ಮೋದಿಯವರು ಬಹುತೇಕ ಹಿಂದೂ ರಾಷ್ಟ್ರೀಯವಾದಿ ಧೋರಣೆಗಳನ್ನು ವಿದೇಶಾಂಗ ನೀತಿ ಮೂಲಕ ಉತ್ತೇಜಿಸುತ್ತಿದ್ದರು. ಈ ನೀತಿ ಒಂದು ರೀತಿ ಹಳೆಯ ಹಿಂದೂ ಸಂಪ್ರದಾಯಗಳನ್ನು ಪಸರಿಸುವ, ಇಸ್ಲಾಮಿಕ್ ಕಲೆ ಮತ್ತು ಇತಿಹಾಸದ ಅಂಶಗಳನ್ನು ತೆಗೆದುಹಾಕುವ ಮತ್ತು ಇತರ ರಾಷ್ಟ್ರಗಳಲ್ಲಿ ಹಿಂದೂ ದೇವಾಲಯಗಳನ್ನು ಸ್ಥಾಪಿಸುವ ಕ್ರಮಗಳನ್ನು ಅನುಸರಿಸಿತ್ತು.

ಆ್ಯಂಟೆನಾ ಸರಿಹೊಂದಿಸುವಿಕೆ: ಮುಂದೂಡಲ್ಪಟ್ಟ ನಿಸಾರ್ ಉಡಾವಣೆ

ಈ ರೀತಿಯ ಬದಲಾವಣೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಲಕ್ಷಣಗಳಲ್ಲೂ ಬದಲಾವಣೆ ತಂದಿದೆ. ವಿದೇಶಗಳಲ್ಲಿರುವ ಅತಿದೊಡ್ಡ ಸಮುದಾಯವಾದ ಭಾರತೀಯ ಸಮುದಾಯ ಮೊದಲಿನಿಂದಲೂ ನವದೆಹಲಿಗೆ ಪೂರಕವಾಗುವ ನೀತಿಗಳನ್ನು ಬೆಂಬಲಿಸುತ್ತಾ ಬಂದಿದೆ. ಅದರಲ್ಲೂ 2000ನೇ ದಶಕದಲ್ಲಿ, ಭಾರತದ ಮೇಲೆ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದಕ್ಕಾಗಿ ನಿರ್ಬಂಧಗಳನ್ನು ಹೇರಿದ ಬಳಿಕ, ಭಾರತವನ್ನು ಜಗತ್ತಿನಾದ್ಯಂತ ಒಂದು ಅಣ್ವಸ್ತ್ರ ಶಕ್ತಿ ಎಂದು ಗುರುತಿಸುವಂತೆ ಮಾಡಲು ವಿವಿಧ ಅನಿವಾಸಿ ಭಾರತೀಯ ಗುಂಪುಗಳು ಕಾರ್ಯಾಚರಿಸಿದ್ದವು. ಇದರ ಪರಿಣಾಮವಾಗಿ, ಭಾರತ ಮತ್ತು ಅಮೆರಿಕ ನಡುವೆ ಪರಮಾಣು ಒಪ್ಪಂದಗಳು (Automic Treat) ನೆರವೇರಿದರೆ, ಆಸ್ಟ್ರೇಲಿಯಾದಂತಹ ದೇಶಗಳು ಪರಮಾಣು ರಫ್ತಿನ ಮೇಲೆ ಹೇರಿದ್ದ ನಿರ್ಬಂಧಗಳನ್ನು ತೆಗೆಯುವಂತಾಯಿತು.

ಆದರೆ, ನವದೆಹಲಿಯ ಹಿತಾಸಕ್ತಿಗಳನ್ನು ಬೆಂಬಲಿಸಲು ಅನಿವಾಸಿ ಭಾರತೀಯ ಸಮುದಾಯ ಇಂದಿಗೂ ಒಂದು ಒಗ್ಗಟ್ಟಿನ ಬಲವಾಗಿ ಉಳಿದಿದೆಯೇ ಎಂದು ಖಚಿತವಾಗಿ ಹೇಳುವುದು ಕಷ್ಟ. ವಾಷಿಂಗ್ಟನ್‌ನ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಸಂಸ್ಥೆಯ ಅಧ್ಯಯನದ ಪ್ರಕಾರ, ಅಮೆರಿಕದ ಭಾರತೀಯ ಸಮುದಾಯದವರಲ್ಲಿ, 69% ಭಾರತೀಯ ಅಮೆರಿಕನ್ ಹಿಂದೂಗಳು ಮೋದಿಯವರ ಪ್ರಧಾನಿ ಅವಧಿಯನ್ನು ಶ್ಪಾಘಿಸಿದ್ದರೆ, ಅನಿವಾಸಿ ಭಾರತೀಯ ಮುಸ್ಲಿಮರು ಕೇವಲ 20% ಮತ್ತು ಕ್ರೈಸ್ತರು 34% ಸಮ್ಮತಿ ಹೊಂದಿದ್ದಾರೆ.

ಧರ್ಮಾಧಾರಿತವಾದ ಇಂತಹ ಭಿನ್ನತೆಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವ ದಕ್ಷಿಣ ಏಷ್ಯನ್ನರ ನಡುವೆ ಹಿಂಸಾಚಾರ ಜರುಗಲು ಕಾರಣವಾಗಿವೆ. ಇದರಿಂದಾಗಿ ಬೀದಿ ಜಗಳಗಳು, ರಾಜಕೀಯ ಪ್ರತಿಭಟನೆಗಳು, ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿಗಳು ನಡೆದಿವೆ. ಕೆಲವೊಂದು ಸಂದರ್ಭಗಳಲ್ಲಿ, ನವದೆಹಲಿಯೂ ಇಂತಹ ಭಿನ್ನತೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸುವ ಬದಲು, ಅವುಗಳನ್ನು ಬೆಂಬಲಿಸಿದೆ. 2022ರಲ್ಲಿ, ಇಂಗ್ಲೆಂಡಿನ ಲೀಸೆಸ್ಟರ್‌ನಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಗಲಭೆಯ ಬಳಿಕ, ಲಂಡನ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಸಂಪೂರ್ಣವಾಗಿ ಪಕ್ಷಪಾತ ಧೋರಣೆಯ ಹೇಳಿಕೆ ಬಿಡುಗಡೆಗೊಳಿಸಿತು. ಈ ಹೇಳಿಕೆ ಕೇವಲ 'ಹಿಂದೂ ಧಾರ್ಮಿಕ ಕ್ಷೇತ್ರಗಳು ಮತ್ತು ಸಂಕೇತಗಳ' ನಾಶವನ್ನು ಖಂಡಿಸಿ, ಮುಸ್ಲಿಂ ಸಮುದಾಯದ ವ್ಯಕ್ತಿಗಳಿಗಾದ ಹಾನಿಯ ಕುರಿತು ಮೌನ ವಹಿಸಿತ್ತು.

ಮಾಸ್ಕೋ ಮಾರಣಹೋಮ: ಪುಟಿನ್ - ಐಎಸ್-ಕೆ ಪರಸ್ಪರ ದೋಷಾರೋಪಣೆ!

ಒಟ್ಟಾರೆ ಕಾರ್ಯತಂತ್ರ ಮತ್ತು ಜಾಗತಿಕ ರಾಜಕಾರಣದಲ್ಲಿ ಇಷ್ಟೊಂದು ಭಾರೀ ಬದಲಾವಣೆಗಳಾದರೂ ಮೋದಿಯವರ ಕಾರ್ಯವೈಖರಿಯಲ್ಲಿ ಹೆಚ್ಚೇನೂ  ಬದಲಾವಣೆಗಲಾಗಿಲ್ಲ. ಮೊದಲು ಆಡಳಿತ ನಡೆಸಿದ್ದ ನಾಯಕರ ರೀತಿಯಲ್ಲೇ, ಮೋದಿಯವರೂ ಸಹ ವಿವಿಧ ಶಕ್ತಿಶಾಲಿ ರಾಷ್ಟ್ರಗಳನ್ನು ಹೊಂದಿರುವ ಜಗತ್ತಿನಲ್ಲಿ, ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸಬೇಕು ಎಂಬ ಗುರಿ ಹೊಂದಿದ್ದರು. ಈ ಗುರಿಯನ್ನು ಸಾಧಿಸಲು, ಮೋದಿಯವರು ಐತಿಹಾಸಿಕವಾದ ಭಾರತದ ಅಲಿಪ್ತ ನೀತಿಯನ್ನು ಪಾಲಿಸಿ, ತಾನು ಯಾವುದೇ ಪ್ರಬಲ ಅಧಿಕಾರ ಗುಂಪಿನ ಭಾಗವಾಗಿಲ್ಲ ಎಂದೇ ಸೂಚಿಸಿದ್ದು, ಯಾವುದೇ ಪಕ್ಷಕ್ಕೆ ಬೆಂಬಲಿಗನಾಗಿಲ್ಲ.

ನಿರ್ಲಿಪ್ತವಾದ ಭಾರತ:
ಉಕ್ರೇನ್ ಯುದ್ಧ, ಗಾಜಾ ಯುದ್ಧ, ಇರಾನ್ ಮತ್ತು ತೈವಾನ್‌ಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ವಿವಾದಗಳು ಸೇರಿದಂತೆ, ವಿವಿಧ ವಿಚಾರಗಳಲ್ಲಿ ಭಾರತ ನಿರಂತರವಾಗಿ ಒಂದು ನಿರ್ದಿಷ್ಟ ನಿಲುವನ್ನು ಹೊಂದುವುದನ್ನು ತಪ್ಪಿಸುತ್ತಿವೆ. ನವದೆಹಲಿ ಈ ವಿಚಾರಗಳ ಕುರಿತು ಮಾತನಾಡಿದಾಗೆಲ್ಲ, ತಾನು ಯಾವುದೇ ಪಕ್ಷಕ್ಕೂ ಸೇರದೆ, ಅಲಿಪ್ತವಾಗಿ, ಮೌನವಾಗಿ ಉಳಿದುದನ್ನು ಸಮರ್ಥಿಸಿದೆ.

ಇದರ ಫಲಿತಾಶವಾಗಿ, ಪ್ರಧಾನಿ ಮೋದಿಯವರು ಸಹ ಹಿಂದಿನ ಆಡಳಿತಗಾರರ ರೀತಿಯಲ್ಲೇ, ಪರಸ್ಪರ ಬಹಿರಂಗವಾಗಿಯೇ ಎದುರಾಳಿಗಳಾಗಿರುವ ರಾಷ್ಟ್ರಗಳೊಡನೆಯೂ ಸ್ನೇಹ ಸಾಧಿಸಲು ಯತ್ನಿಸಿದ್ದಾರೆ. ಇದರ ಪರಿಣಾಮವಾಗಿ, ಭಾರತ ಕ್ವಾಡ್ ಗುಂಪು (ಅಮೆರಿಕಾ ಮತ್ತು ಅದರ ಸ್ನೇಹ ರಾಷ್ಟ್ರಗಳ ಗುಂಪು) ಮತ್ತು ಶಾಂಘೈ ಕೋ ಆಪರೇಷನ್ ಆರ್ಗನೈಸೇಶನ್ (ಚೀನಾ, ರಷ್ಯಾ ಮತ್ತು ಇತರ ಮಿತ್ರ ರಾಷ್ಟ್ರಗಳು ಸದಸ್ಯರಾಗಿರುವ ಗುಂಪು) ಎರಡೂ ಗುಂಪುಗಳ ಸದಸ್ಯನಾಗಿದೆ. ಭಾರತ ಅಮೆರಿಕಾದಿಂದ ಅತ್ಯಾಧುನಿಕ ಆಯುಧಗಳನ್ನು ಪಡೆದುಕೊಂಡಿದ್ದು, ಇದೇ ವೇಳೆ ರಷ್ಯಾದೊಡನೆಯೂ ಸಂಭಾವ್ಯ ರಕ್ಷಣಾ ಒಪ್ಪಂದಗಳನ್ನು ಕೈಗೊಳ್ಳಲು ಪ್ರಯತ್ನ ನಡೆಸುತ್ತಿದೆ.

ಅಮೆರಿಕ ಬೆಂಬಲ ಪಡೆದ ಮೋದಿ:
ಜಾಗತಿಕ ರಾಜಕಾರಣದ ಒತ್ತಡಗಳನ್ನು ಹೊಂದಿರುವ ಜಗತ್ತಿನಲ್ಲಿ, ಕೆಲವು ಶಕ್ತಿಶಾಲಿ ರಾಷ್ಟ್ರಗಳು ಮಾತ್ರವೇ ಅಮೆರಿಕಾದ ಅತಿದೊಡ್ಡ ಎದುರಾಳಿಗಳೊಡನೆ ಬಹಿರಂಗವಾಗಿ ವ್ಯವಹರಿಸುತ್ತಾ, ಅಮೆರಿಕಾದೊಡನೆ ಸ್ನೇಹ - ಸಹಯೋಗ ಸಾಧಿಸಿವೆ. ವಾಷಿಂಗ್ಟನ್ ಚೀನಾದ ಕುರಿತು ಹೊಂದಿರುವ ಕಳವಳಗಳ ಲಾಭ ಪಡೆದುಕೊಳ್ಳುತ್ತಾ, ನರೇಂದ್ರ ಮೋದಿಯವರು ಹೆಚ್ಚೇನೂ ಕೊಡುವ ಅವಶ್ಯಕತೆಯಿಲ್ಲದೆಯೇ ಅಮೆರಿಕಾದ ಬೆಂಬಲ ಪಡೆದುಕೊಂಡಿದ್ದಾರೆ.

ಉದಾಹರಣೆಗೆ, ಯುರೋಪ್ ಅಥವಾ ಮಧ್ಯ ಪೂರ್ವ ಪ್ರದೇಶದಲ್ಲಿ ಸೇರಿದಂತೆ, ಅಮೆರಿಕಾದ ಯಾವುದೇ ಮುಖ್ಯ ಭೌಗೋಳಿಕ ರಾಜಕಾರಣದ ಗುರಿಗಳಿಗೆ ಭಾರತ ಬೆಂಬಲಿಸಲು ನಿರಾಕರಿಸಿದೆ. ಅದರೊಡನೆ, ಫಿಲಿಪೈನ್ಸ್ ಈಗಾಗಲೇ ಅಮೆರಿಕಾಗೆ ತನ್ನ ನೆಲದಲ್ಲಿ ಸೇನಾ ನೆಲೆ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಭಾರತ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಯಾವುದೇ ಮಿಲಿಟರಿ ನೆಲೆ ಸ್ಥಾಪನೆಯ ಉದ್ದೇಶವನ್ನು ತಿರಸ್ಕರಿಸಿದೆ. ಏಷ್ಯಾದಲ್ಲಿನ ಇತರ ಅಮೆರಿಕನ್ ಮಿತ್ರರಾಷ್ಟ್ರಗಳ ರೀತಿಯಲ್ಲದೆ, ಒಂದು ವೇಳೆ ಅಮೆರಿಕ ಏನಾದರೂ ಚೀನಾ ಜೊತೆಗೆ ಯುದ್ಧಕ್ಕಿಳಿದರೆ, ಭಾರತ ಅಮೆರಿಕನ್ ಸೇನೆಯೊಡನೆ ಕೈಜೋಡಿಸುವುದಿಲ್ಲ.

ಒಂದು ವೇಳೆ ಮೋದಿಯವರೇನಾದರೂ ಈ ಚುನಾವಣೆಯ ಬಳಿಕವೂ ಅಧಿಕಾರದಲ್ಲಿ ಮುಂದುವರಿದರೆ, ಅವರು ಎದುರಿಸುವ ಪ್ರಮುಖ ಸವಾಲೆಂದರೆ, ಅಮೆರಿಕದ ಜೊತೆಗಿನ ಇಂತಹ ಅಸಮಾನ ಸಂಬಂಧ ಇನ್ನೂ ಎಷ್ಟು ಕಾಲ ಮುಂದುವರಿಯಬಹುದು ಎನ್ನುವುದಾಗಿದೆ.

ಹಳೆಯದಾಗುತ್ತಿರುವ ಮಿಗ್-29ಕೆ: ಹೊಸ ಯುದ್ಧ ವಿಮಾನಗಳಿಗೆ ನೌಕಾಪಡೆಯ ಹುಡುಕಾಟ

ಮೋದಿಯವರು ಭಾರತದ ಸಾಂಪ್ರದಾಯಿಕ ವಿಧಾನವಾದ ಅಲಿಪ್ತತೆ ಮತ್ತು ಸ್ವಾತಂತ್ರ್ಯಗಳಲ್ಲಿ ಅತ್ಯಂತ ಕಡಿಮೆ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದು, ಅವರ ಆಡಳಿತಕ್ಕೆ ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ವಿಭಿನ್ನ ಪ್ರೇರಣೆ ಮತ್ತು ಆಸಕ್ತಿಗಳು ಎದುರಾಗಿವೆ. ರಾಜತಾಂತ್ರಿಕರಿಗೆ ಅವಶ್ಯಕವಾದ ಅಂತಾರಾಷ್ಟ್ರೀಯ ಸಂಬಂಧಗಳ ಬರಹಗಾರರಾದ ಜೀ಼ಶನ್ ಅವರು 2021ರಲ್ಲಿ ಪ್ರಕಟಿಸಿದ 'ಫ್ಲೈಯಿಂಗ್ ಬ್ಲೈಂಡ್: ಇಂಡಿಯಾಸ್ ಕ್ವೆಸ್ಟ್ ಫಾರ್ ಗ್ಲೋಬಲ್ ಲೀಡರ್ಶಿಪ್' ಕೃತಿಯಲ್ಲಿ, ಒಂದು ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಆಡಳಿತ ಮತ್ತು ಆರ್ಥಿಕ ಪ್ರಗತಿ ಪಾಶ್ಚಾತ್ಯ ರಾಷ್ಟ್ರಗಳ ಹಿತಾಸಕ್ತಿ ಮತ್ತು ಮೌಲ್ಯಗಳಿಗೆ ಪೂರಕವಾಗಿತ್ತು. ಆದರೆ, ಇತ್ತೀಚಿನ ಸಮಯದಲ್ಲಿ, ಭಾರತದ ಆಂತರಿಕ ರಾಜಕೀಯ ಬೆಳವಣಿಗೆಗಳ ಕಾರಣದಿಂದ, ಮೋದಿಯವರು ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳೊಡನೆ ಹೆಚ್ಚು ಸಾಮ್ಯತೆ ಕಾಣುತ್ತಿದ್ದಾರೆ ಎಂದಿದ್ದಾರೆ. ಇಂತಹ ಹೋಲಿಕೆಗಳು ಮಾನವ ಹಕ್ಕುಗಳು ಮತ್ತು ಉದ್ಯಮ ಹಕ್ಕುಗಳ ನಿರ್ವಹಣೆ, ವಿವಿಧ ನೀತಿ ನಿಯಮಗಳ ವಿಚಾರದಲ್ಲಿ ಸರ್ಕಾರದ ಅಧಿಕಾರದ ವಿಸ್ತರಣೆ, ಮತ್ತು ಅಂತಾರಾಷ್ಟ್ರೀಯ ಆಡಳಿತದ ವಿಚಾರದಲ್ಲಿ ಪಾಶ್ಚಾತ್ಯ ಆದರ್ಶಗಳನ್ನು ತಗ್ಗಿಸುವ ವಿಚಾರಗಳಲ್ಲಿ ಕಂಡುಬರುತ್ತಿವೆ.

ಇಂದಿನ ತನಕವೂ ಅಮೆರಿಕಾದೊಡನೆ ಇಂತಹ ವಿಚಾರಗಳಲ್ಲಿನ ಭಿನ್ನತೆಯನ್ನು ನಿರ್ವಹಿಸಿರುವುದು ವಿದೇಶಾಂಗ ನೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅತಿದೊಡ್ಡ ಸಾಧನೆ ಎನ್ನಬಹುದು.

Follow Us:
Download App:
  • android
  • ios