Asianet Suvarna News Asianet Suvarna News

ಲಾಕ್‌ಡೌನ್‌ ಮುಗಿಯುವ ಮೊದಲು ಈ ತಿಂಡಿಗಳ ರುಚಿ ನೋಡಿ..

ಕೊರೋನಾ ಮನೆವಾಸದ ಹೊತ್ತಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗುತ್ತಲೇ, ಮನೆಯ ಮಕ್ಕಳನ್ನೂ ಸಂತೋಷವಾಗಿಡಲಿಕ್ಕೆ ಒಂದಷ್ಟುರುಚಿಕಟ್ಟಾದ ತಿಂಡಿಗಳನ್ನು ಮಾಡಿದರೆ ತಪ್ಪೇನಿಲ್ಲ. ದಿನ ನಿತ್ಯ ಮಾಡುವ ಅವವೇ ತಿಂಡಿಗಳ ಬದಲು ಈ ಹೊಸ ರೀತಿಯ ಅಡುಗೆಗಳನ್ನು ಯತ್ನಿಸಿ. ಅಂದಹಾಗೆ, ಇವು ಅಂಗಡಿಯಿಂದ ಹೊಸದಾಗಿ ಏನನ್ನೂ ತರದೇ, ಮನೆಯಲ್ಲೇ ಇರುವ ಪರಿಕರಗಳನ್ನು ಬಳಸಿ ತಯಾರಿಸಬಲ್ಲ ತಿಂಡಿಗಳು.

Mouth watering recipes to try before coronavirus lockdown ends
Author
Bangalore, First Published Apr 19, 2020, 9:22 AM IST

ವೀಳ್ಯದೆಲೆಯುಂಡೆ

-ಶುಭಶ್ರೀ ಭಟ್ಟ

ಸಾಮಗ್ರಿ: ವೀಳ್ಯದೆಲೆ 10, ಗೋಡಂಬಿ-10, ಬಾದಾಮಿ-10, ಖರ್ಜೂರದ ಪೇಸ್ಟ್‌, ತೆಂಗಿನ ತುರಿ ಸ್ವಲ್ಪ, ಕಂಡೆನ್ಸ್‌$್ಡ ಮಿಲ್‌್ಕ ( ಅಥವಾ ಅರ್ಧ ಕಾಯಿಸಿದ ದಪ್ಪ ಹಾಲು), ಏಲಕ್ಕಿ ಪುಡಿ ಸ್ವಲ್ಪ

ವಿಧಾನ: ಮೊದಲಿಗೆ ಬಾದಾಮಿ ಗೋಡಂಬಿಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಈ ಪುಡಿಗೆ ಖರ್ಜೂರದ ಪೇಸ್ಟ್‌ ಸೇರಿಸಿ ಸಿಹಿ ಮಿಶ್ರಣ ತಯಾರಿಟ್ಟುಕೊಳ್ಳಿ. ನಂತರ ವೀಳ್ಯದೆಲೆ ಕೊಬ್ಬರಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಚೂರು ತುಪ್ಪ ಸವರಿದ ಬಾಣಲೆಯಲ್ಲಿ ನೋಡಿಕೊಂಡು ಕಂಡೆನ್ಸ್ಡ್‌ ಮಿಲ್ಕ್‌ ಹಾಕಿ ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಗಟ್ಟಿಯಾಗುವ ತನಕ ಕೈಯಾಡಿಸಿ ತಿರುವಿರಿ. ಇದನ್ನು ಆರಲು ಬಿಟ್ಟು ತುಪ್ಪ ಸವರಿದ ಕೈಯೊಳಗೆ ಉಂಡೆ ಕಟ್ಟಿಕೊಳ್ಳಿ.

ಈ ಉಂಡೆಯೊಳಗೆ ಖರ್ಜೂರದ ಸಿಹಿ ಮಿಶ್ರಣ ಸೇರಿಸಿ ಮತ್ತೆ ಉಂಡೆ ಕಟ್ಟಿ. ಇದನ್ನು ಕೊಬ್ಬರಿ ತುರಿಯಲ್ಲಿ ಉರುಳಾಡಿಸಿ ಸವಿಯಿರಿ??

ಸೂಚನೆ: ಕಂಡೆನ್ಸ್ಡ್‌  ಮಿಲ್ಕ್‌ ಡಬ್ಬಿ ಸಿಗದಿದ್ದರೆ ಒಂದು ತಪ್ಪಲೆಯಿಂದ ಕಾಲು ತಪ್ಪಲೆ ಸಕ್ಕರೆ ಹಾಕಿ ಕಾಯಿಸಿದ ದಪ್ಪ ಹಾಲು ಉಪಯೋಗಿಸಿ.

-*-

ಬಸಳೆ ಸೊಪ್ಪಿನ ಫ್ರೈ

- ಪ್ರಭಾ ಭಟ್‌ ಹೊಸ್ಮನೆ

ಬೇಕಾಗುವ ಸಾಮಗ್ರಿಗಳು: ಬಸಳೆ ಎಲೆಗಳು -20, ಬಾಂಬೆ ರವೆ - 1/2 ಕಪ್‌, ಖಾರದ ಪುಡಿ - 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅಡಿಗೆ ಎಣ್ಣೆ

ವಿಧಾನ: ಬಸಳೆ ಎಲೆಗಳನ್ನು ಚೆನ್ನಾಗಿ ತೊಳೆದು ನೀರು ಆರುವಂತೆ ಬಟ್ಟೆಯ ಸಹಾಯದಿಂದ ವರಿಸಿಕೊಳ್ಳಿ. ರವೆಗೆ ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಬಸಳೆ ಎಲೆಗಳಿಗೆ ಸ್ವಲ್ಪ ಎಣ್ಣೆ ಸವರಿಕೊಂಡು ಮಿಶ್ರಣದಲ್ಲಿ ಹೊರಳಿಸಿ ತವಾ ಮೇಲೆ ಫ್ರೈ ಮಾಡಿ. ಸ್ವಲ್ಪ ಸ್ವಲ್ಪ ಎಣ್ಣೆಯನ್ನು ಹಾಕುತ್ತಾ ಎಲೆಗಳ ಎರಡೂ ಬದಿಗಳನ್ನು ಫ್ರೈ ಮಾಡಿದರೆ ಬಸಳೆ ಫ್ರೈ ಸವಿಯಲು ಸಿದ್ಧ.

ಇದೇ ಮಾದರಿಯಲ್ಲಿ ಬೆಂಡೆ, ಬದನೆ, ಬಟಾಟೆ, ಕ್ಯಾಪ್ಸಿಕಂ ಮೊದಲಾದ ತರಕಾರಿಗಳ ಸ್ಪೈಸಿ ಫ್ರೈ ತಯಾರಿಸಿಕೊಳ್ಳಬಹುದು. ಇದು ಅನ್ನ-ರಸಂ ನೊಟ್ಟಿಗೆ ಒಳ್ಳೆಯ ಕಾಂಬಿನೇಶನ್‌.

ಬಾಯಿಗೆ ರುಚಿ, ದೇಹಕ್ಕೆ ಹಿತ ನೀಡುವ ಬಸಳೆ-ಅಲಸಂದೆ ಕಾಳು ಸಾಂಬಾರ್

ಹೆಸರುಕಾಳು ಕಟ್ಲೆಟ್‌

-ಸೌಮ್ಯ ಸುಮ ಎಂ ವಿ

1. 1 ಕಪ್‌ ಹೆಸರುಕಾಳು

2. 1 ಆಲೂಗಡ್ಡೆ

3. 1 ಕ್ಯಾರೆಟ್‌

4. ಒಂದು ಹಿಡಿ ಹಸಿ ಬಟಾಣಿ

ಎಲ್ಲವನ್ನೂ ಚೆನ್ನಾಗಿ ಬೇಯಿಸಿಕೊಂಡು ... ಕಲೆಸಿಕೊಂಡು ರುಚಿಗೆ ತಕ್ಕಷ್ಟುಉಪ್ಪು ಅಚ್ಚಖಾರದ ಪುಡಿ ಹಾಕಿ ಕಟ್ಲೇಟ್‌ ಆಕಾರ ಮಾಡಿ ರವೆ ಅಥವಾ ಮೇಲೆ ಹೊರಳಿಸಿ ಕಾವಲಿ ಮೇಲೆ ಎರಡೂ ಕಡೆ ರೋಸ್ಟ್‌ ಮಾಡಿ ತಟ್ಟೆಗೆ ಹಾಕಿ ಅದರ ಮೇಲೆ ಸಣ್ಣಗೆ ಹಚ್ಚಿದ ಈರುಳ್ಳಿ ಟೊಮೆಟೋ ಹಾಗೂ ತುರಿದ ಕ್ಯಾರೆಟ್‌ ಹಾಕಿ ಅದರ ಮೇಲೆ ಗಟ್ಟಿಮೊಸರು ಹಾಕಿದರೆ ತಿನ್ನಲು ರೆಡಿ.

ಚಪಾತಿ ರುಚಿ ಹೆಚ್ಚಿಸೋ ಹೆಸರು ಕಾಳು ಪಲ್ಯ ಮಾಡೋದು ಹೀಗೆ

ಶ್ಯಾಮಲಾ ಆರ್‌ ಭಟ್‌ ಮೂರು ರೆಸಿಪಿಗಳು

ಅಕ್ಕಿ ಉಂಡೆ

ಬೇಕಾಗುವ ಸಾಮಗ್ರಿಗಳು: ಎರಡು ಕಪ್‌ ಕೆಂಪಕ್ಕಿ, ಒಂದು ಕಪ್‌ ಬೆಲ್ಲ, ಒಂದು ಕಪ್‌ ಕಾಯತುರಿ, ಗೋಡಂಬಿ, ದ್ರಾಕ್ಷಿ, ಚಿಟಿಕೆ ಏಲಕ್ಕಿ ಪುಡಿ.

ವಿಧಾನ: ಕೆಂಪಕ್ಕಿಯನ್ನು ತೊಳೆದು ನೆರಳಿನಲ್ಲಿ ಒಣಗಿಸಿ. ಒಣಗಿದ ನಂತರ ಬಾಣಲೆಗೆ ಹಾಕಿ ಹುರಿಯಿರಿ. ಹುರಿದಿಟ್ಟಅಕ್ಕಿಯನ್ನು ಮಿಕ್ಸಿ ಯಲ್ಲಿ ಹಾಕಿ ನಯವಾದ ಪುಡಿ ಮಾಡಿಟ್ಟುಕೊಳ್ಳಿ. ಈಗ ಬಾಣಲೆಗೆ 1 ಕಪ್‌ ನೀರು ಹಾಕಿ ಅದಕ್ಕೆ ಬೆಲ್ಲ ಸೇರಿಸಿ ಕುದಿಸಿ , ಪಾಕದ ಹದಕ್ಕೆ ಬಂದ ಮೇಲೆ ಬೆಂಕಿ ಆರಿಸಿ ಅದಕ್ಕೆ ಕಾಯಿತುರಿ, ಪುಡಿ ಮಾಡಿಟ್ಟಅಕ್ಕಿ , ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿಯನ್ನು ಸೇರಿಸಿ ಉಂಡೆ ಮಾಡಿ. ರುಚಿಯಾದ, ಆರೋಗ್ಯಕರ ಅಕ್ಕಿ ಉಂಡೆ ರೆಡಿ. ಇದಕ್ಕೆ ನಮ್ಮ ತುಳು ನಾಡಲ್ಲಿ ಕೆಡ್ಡಸ ಉಂಡೆ ಅಂತ ಹೆಸರಿದೆ.

ಹಬೆ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು: 3 ಕಪ್‌ ಕೆಂಪಕ್ಕಿ, ಒಂದು ಕಪ್‌ ದೋಸೆ ಅಕ್ಕಿ, 2 ಕಪ್‌ ಕಾಯಿ ತುರಿ, 1 ಕಪ್‌ ಬೆಲ್ಲ, ರುಚಿಗೆ ತಕ್ಕಷ್ಟುಉಪ್ಪು, 10 ಬಾಳೆ ಎಲೆ.

ವಿಧಾನ: ಕೆಂಪಕ್ಕಿ ಮತ್ತು ದೋಸೆ ಅಕ್ಕಿಯನ್ನು 8 ಗಂಟೆಗಳ ಕಾಲ ನೆನೆಸಿ ,ರುಚಿಗೆ ತಕ್ಕಷ್ಟುಉಪ್ಪು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬೆಲ್ಲ ಮತ್ತು ಕಾಯಿಯನ್ನು ಕಲಸಿ ಇಟ್ಟುಕೊಳ್ಳಿ. ಎಲೆಗೆ ಹಿಟ್ಟನ್ನು ಹಚ್ಚಿ ಅದಕ್ಕೆ ಕಲಸಿಟ್ಟ ಬೆಲ್ಲ ಕಾಯಿತುರಿ ಉದುರಿಸಿ ಎಲೆಯನ್ನು ಚಾಪೆಯಂತೆ ಸುತ್ತಿ ಹಬೆಯಲ್ಲಿ 30 ನಿಮಿಷಗಳ ಕಾಲ ಬೇಯಿಸಿ. ರುಚಿಯಾದ ಹಬೆರೊಟ್ಟಿಸಿದ್ಧ.

ಚುರುಮುರಿ ಚೂಡಾ

ಬಾಯಿರುಚಿ ತಣಿಸುವ ತಕ್ಷಣವೇ ಮಾಡಬಹುದಾದ ಉತ್ತರಕರ್ನಾಟಕದ ತಿನಿಸಿದು. ಗರಿ ಗರಿ ಎನ್ನುವ ಕುರುಕಲು. ಚೂಡಾ ಎಂದೇ ಫೇಮಸ್ಸು.

ಬೇಕಾದ ಸಾಮಗ್ರಿ: ಕಡಲೇಪುರಿ/ಚುರುಮುರಿ (2 ಲೀ), ಅಡುಗೆ ಎಣ್ಣೆ (1 ಬಟ್ಟಲು), ಕಡಲೆಬೀಜ/ಶೇಂಗಾ (1 ಬಟ್ಟಲು), ಜೀರಿಗೆ, ಸಾಸುವೆ, ಅರಿಶಿಣ, ಉಪ್ಪು, ಬೆಳ್ಳುಳ್ಳಿ 12-15 ಎಸಳು, ಅಚ್ಚ ಖಾರಪುಡಿ, ಪುಡಿ ಸಕ್ಕರೆ ( ಬೇಕಿದ್ದರೆ ಮಾತ್ರ )

ಮಾಡುವ ವಿಧಾನ: ಒಂದು ದೊಡ್ಡ ಬುಟ್ಟಿಇಲ್ಲವೇ ಅಗಲವಾದ ಕಡಾಯಿಯನ್ನು ಕಾಯಲು ಗ್ಯಾಸ್‌ ಮೇಲಿಟ್ಟು ಅರ್ಧ ಬಟ್ಟಲು ಎಣ್ಣೆ ಹಾಕಬೇಕು. ಅದರಲ್ಲಿ ಕಡಲೆಬೀಜ ಹಾಕಿ ಹುರಿದುಕೊಂಡು ಕೆಂಪು ಬಣ್ಣಕ್ಕೆ ತಿರುಗಿದ ಮೇಲೆ ಅವನ್ನು ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು. ಅದೇ ಎಣ್ಣೆಗೆ ಕರಿಬೇವು ಹಾಕಿ, ಸ್ವಲ್ಪ ಹುರಿದಂತೆ ಮಾಡಿ ಅದರಲ್ಲಿ ಜೀರಿಗೆ ಸಾಸಿವೆ ಸಿಡಿಸಿ, ಸಿಪ್ಪೆ ತೆಗೆದ ಬೆಳ್ಳುಳ್ಳಿ ಎಸಳುಗಳನ್ನು(ಕುಟ್ಟು ಕಲ್ಲಲ್ಲಿ ಸ್ವಲ್ಪ ಸ್ವಲ್ಪ ಕುಟ್ಟಿ) ಹಾಕಬೇಕು. ಹಾಗೆ ಕೈ ಆಡಿಸುತ್ತಿರಬೇಕು. ಗ್ಯಾಸ್‌ ಫುಲ್‌ ಸಿಮ್‌ ಆಗಿರಲಿ. ಹುರಿದಿಟ್ಟುಕೊಂಡ ಕಡಲೆ ಬೀಜಗಳಲ್ಲಿ ಅರ್ಧ ಭಾಗ ಹಾಕಿ, ಒಂದೆರಡು ಎರಡು ಚಿಟಿಕೆ ಅರಿಶಿಣಪುಡಿ , 1 ಇಲ್ಲವೇ 1 1 ಟೀ ಸ್ಪೂನ್‌ ಖಾರದ ಪುಡಿ ಹಾಕಿ ತಿರುವಿ, ತಕ್ಷಣವೇ ಗ್ಯಾಸ್‌ ಆರಿಸಬೇಕು.

ರುಚಿಗೆ ತಕ್ಕಷ್ಟುಉಪ್ಪು ಹಾಕಿ ಚಮಚ ಆಡಿಸುತ್ತ, ಕಡಲೇಪುರಿ/ ಚುರುಮುರಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಈಗ ಗ್ಯಾಸ್‌ ಹಚ್ಚಿ, ಪೂರ್ಣ ಸಣ್ಣ ಪ್ರಮಾಣದ ಉರಿ ಇಟ್ಟು, ಉಳಿದ ಎಣ್ಣೆ, ಸ್ವಲ್ಪ ಖಾರದ ಪುಡಿ ಹಾಕಿ, ಉಕ್ಕರಿಸಿದಂತೆ ಮಾಡಬೇಕು(ಎಣ್ಣೆ, ಖಾರ ಒಮ್ಮೆಲೇ ಹಾಕಬಹುದು, ಆದರೆ ಹೀಗೆ ಉಕ್ಕರಿಸುವಾಗ ಹಾಕುವುದರಿಂದ ರುಚಿ ಬದಲಿಸುತ್ತದೆ). ಹೀಗೆ 5-6 ಬಾರಿ ಮಾಡುವುದರೊಳಗಾಗಿ, ಗರಿಗರಿಯಾದ ಚೂಡಾ ಸಿದ್ಧವಾಗಿರುತ್ತವೆ. ಪುಡಿ ಸಕ್ಕರೆ ಬೇಕೆಂದರೆ ಈ ಹಂತದಲ್ಲಿ ಹಾಕಿ ಸ್ವಲ್ಪ ಕೈ ಆಡಿಸಬೇಕು. ಐದತ್ತು ನಿಮಿಷ ಬಿಟ್ಟು ಗಾಳಿಯಾಡದಂತ ಡಬ್ಬದಲ್ಲಿ ಹಾಕಿಟ್ಟರೆ ವಾರದವರೆಗೂ ಸಂಜೆಯ ಚಹಾ ಕಾಫಿಯೊಂದಿಗೆ, ಇಲ್ಲವೇ ಈರುಳ್ಳಿ, ಟೊಮ್ಯಾಟೋ ಸಣ್ಣಗೆ ಕತ್ತರಿಸಿದ ಲಿಂಬೆ ಹುಳಿ ಹಿಂಡಿದ ಸಲಾಡಿನೊಂದಿಗೆ ಇಲ್ಲವೇ ಗಟ್ಟಿಮೊಸರಿನೊಂದಿಗೆ, ಅದೂ ಬೇಡವೆಂದರೆ ಅನ್ನ ಸಾಂಬಾರಿನ ಊಟಕ್ಕೂ ಬೆಸ್ಟ್‌ ಕಂಪ್ಯಾನಿಯನ್‌.

Follow Us:
Download App:
  • android
  • ios