Asianet Suvarna News Asianet Suvarna News

ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಬಳಿಕ ಶುರುವಾಗಿದೆ ಗೊಂದಲ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ತೇಜಸ್ವಿ ಸೂರ್ಯ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು,  ಪ್ರಚಾರ ಹೇಗೆ ಮಾಡುವುದು ಎಂಬ ಆತಂಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಕಾಣಿಸಿಕೊಂಡಿದೆ.

BJP Leaders Unhappy Over Tejaswi Surya Contesting In Lok Sabha Elections
Author
Bengaluru, First Published Mar 28, 2019, 8:41 AM IST

ಬೆಂಗಳೂರು :  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೊನೆಯ ಕ್ಷಣದಲ್ಲಿ ತೇಲಿ ಬಂದ ತೇಜಸ್ವಿ ಸೂರ್ಯ ಅವರು ನಾಮಪತ್ರ ಸಲ್ಲಿಸಿದ ಬಳಿಕ ಪಕ್ಷದಲ್ಲಿ ಮೌನ ಆವರಿಸಿದ್ದು, ಪ್ರಚಾರ ಹೇಗೆ ಮಾಡುವುದು ಎಂಬ ಆತಂಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಕಾಣಿಸಿಕೊಂಡಿದೆ.

ಈ ಕ್ಷೇತ್ರದಲ್ಲಿ ನಿರ್ಣಾಯಕರು ಎಂದೇ ಭಾವಿಸಿದ್ದ ಪಕ್ಷದ ನಾಯಕರಾದ ಆರ್‌.ಅಶೋಕ್‌ ಮತ್ತು ವಿ.ಸೋಮಣ್ಣ ಅವರಿಬ್ಬರೂ ಇತರ ಮುಖಂಡರೊಂದಿಗೆ ಚರ್ಚಿಸಿ ಸೂಚಿಸಿದ್ದ ಹೆಸರೇ ತೇಜಸ್ವಿನಿ ಅನಂತಕುಮಾರ್‌. ಇದೀಗ ತೇಜಸ್ವಿನಿ ಅವರಿಗೆ ಟಿಕೆಟ್‌ ತಪ್ಪಿರುವುದು ಇಡೀ ಬಿಜೆಪಿ ಪಾಳೆಯಕ್ಕೇ ಆಘಾತ ತಂದೊಡ್ಡಿದೆ. ಜೊತೆಗೆ ಅಶೋಕ್‌ ಮತ್ತು ಸೋಮಣ್ಣ ಅವರಿಗೆ ತೀವ್ರ ಮುಂಜುಗರವೂ ಉಂಟು ಮಾಡಿದೆ.

ಇದೀಗ ಖುದ್ದು ತೇಜಸ್ವಿನಿ ಅನಂತಕುಮಾರ್‌ ಅವರು ಪಕ್ಷದ ಪರ ಪ್ರಚಾರಕ್ಕೆ ಆಗಮಿಸಿದರೆ ಮಾತ್ರ ಮುಂದಿನ ಹಾದಿ ಸುಗಮವಾಗಲಿದೆ. ಇಲ್ಲದಿದ್ದರೆ ಅವರನ್ನು ಬಿಟ್ಟು ಪ್ರಚಾರಕ್ಕೆ ಹೋದರೆ ಮತದಾರರನ್ನು ಎದುರಿಸುವುದು ಕಷ್ಟವಾದೀತು ಎಂಬ ಚಿಂತೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಪಕ್ಷದ ರಾಜ್ಯ ನಾಯಕರು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಭೆಯೊಂದನ್ನು ಕರೆದು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ತೇಜಸ್ವಿನಿ ಅವರಿಗೂ ಕಾರಣ ಹೇಳಿಲ್ಲ :  ಟಿಕೆಟ್‌ ನೀಡಿಲಿಲ್ಲ ಎಂಬುದಕ್ಕೆ ನಿರ್ದಿಷ್ಟಕಾರಣವನ್ನು ಇದುವರೆಗೂ ಬಿಜೆಪಿ ವರಿಷ್ಠರು ತೇಜಸ್ವಿನಿ ಅನಂತಕುಮಾರ್‌ ಅವರಿಗೆ ತಿಳಿಸಿಲ್ಲ.

ಮಂಗಳವಾರ ತೇಜಸ್ವಿನಿ ಅವರಿಗೆ ದೂರವಾಣಿ ಕರೆ ಮಾಡಿದ್ದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಅವರು ಟಿಕೆಟ್‌ ತಪ್ಪಿದ್ದಕ್ಕಾಗಿ ಬೇಸರಗೊಂಡು ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನು ನೀಡಬಾರದು ಮತ್ತು ಪಕ್ಷದ ಹಿತಕ್ಕೆ ಧಕ್ಕೆ ತರುವಂಥ ನಿರ್ಧಾರ ಕೈಗೊಳ್ಳಬಾರದು ಎಂಬ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಈ ಕಾರಣಕ್ಕಾಗಿಯೇ ತೇಜಸ್ವಿನಿ ಅವರು ತಮಗಾಗಿರುವ ನೋವು ಮತ್ತು ಅಪಮಾನ ನುಂಗಿಕೊಂಡು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶ್ರಮಿಸುವುದಾಗಿ ಹೇಳಿಕೆ ನೀಡಿದರು.  ವಿಚಿತ್ರ ಎಂದರೆ, ಪಕ್ಷಕ್ಕೆ ಮುಜುಗರ ತರುವಂಥ ನಡೆ ಅನುಸರಿಸಬೇಡಿ ಎಂಬ ಮನವಿ ಮಾಡಿದ ರಾಮ್‌ಲಾಲ್‌ ಅವರು ಟಿಕೆಟ್‌ ತಪ್ಪಿದ್ದು ಯಾಕೆ ಎಂಬುದಕ್ಕೆ ಯಾವುದೇ ಕಾರಣವನ್ನಾಗಲಿ ಅಥವಾ ವಿವರಣೆಯನ್ನಾಗಲಿ ನೀಡಲಿಲ್ಲ ಎನ್ನಲಾಗಿದೆ.

Follow Us:
Download App:
  • android
  • ios