Asianet Suvarna News Asianet Suvarna News

ಹೆಚ್.ಡಿ. ರೇವಣ್ಣಗೆ ಒಂದು ವಾರ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆ ಕಿಡ್ನಾಪ್ ಮಾಡಿದ ಕೇಸ್‌ನಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗುತ್ತದೆ. 

HD Revanna taken into judicial custody in Prajwal Revanna obscene video case sat
Author
First Published May 8, 2024, 3:36 PM IST

ಬೆಂಗಳೂರು (ಮೇ 08): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಬಂಧನವಾಗಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿದ ನ್ಯಾಯಾಲಯ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಮೂರ್ನಾಲ್ಕು ದಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರ ವಶದಲ್ಲಿದ್ದ ರೇವಣ್ಣ ಅವರನ್ನು ಇನ್ನುಮುಂದೆ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗುತ್ತದೆ.

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಮೇಲೆ ಕೆ.ಆರ್.ನಗರದಲ್ಲಿ ದಾಖಲಾದ ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ಬಂಧನವಾದ ನಂತರ ಅವರನ್ನು ಭಾನುವಾರ ಮ್ಯಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಮೂರ್ತಿಗಳ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಮೂರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಲಾಗಿತ್ತು. ಎಸ್‌ಐಟಿಗೆ ಒಪ್ಪಿಸಿದ್ದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಕರೆತರಲಾಗಿತ್ತು. 17ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ಎಸ್‌ಐಟಿ ಪರ ವಕೀಲರು, ಆರೋಪಿಯು ನಕಾರಾತ್ಮಕವಾಗಿ ಉತ್ತರ ನೀಡಿ ತನಿಖೆಗೆ ಸಹಕರಿಸಿಲ್ಲ. ಹೀಗಾಗಿ, ಮತ್ತಷ್ಟು ದಿನಗಳ ಕಾಲ ವಿಚಾರಣೆ ಮಾಡಬೇಕಿದ್ದು, ತಮ್ಮ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್; ಡಿಕೆಶಿ ಭೇಟಿಗಾಗಿ ದೇವರಾಜೇಗೌಡನೇ ದುಂಬಾಲು ಬಿದ್ದಿದ್ದ: ಶಿವರಾಮೇಗೌಡ

ಆದರೆ, ಎಸ್ಐಟಿ ಮನವಿಗೆ ಹೆಚ್.ಡಿ.ರೇವಣ್ಣ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿ, ತನಿಖೆಗೆ ಸಹಕರಿಸಲಿಲ್ಲವೆಂದು ನ್ಯಾಯಾಂಗ ಬಂಧನ ಕೋರುವಂತಿಲ್ಲ . ತಪ್ಪೊಪ್ಪಿಗೆ ನೀಡದಿರುವುದು ತನಿಖೆಗೆ ಅಸಹಕಾರವೆಂದು ಪರಿಗಣಿಸಬಾರದು ಎಂದು ಹೇಳಿದರು. ನಂತರ ಎಸ್‌ಐಟಿ ತಮ್ಮ ವಶಕ್ಕೆ ಒಪ್ಪಿಸುವಂತೆ ಕೇಳುವುದನ್ನು ನಿಲ್ಲಿಸಿತು. ಇನ್ನು ಅನೇಕ ಹಿಂದಿನ ಪ್ರಕರಣಗಳನ್ನ ಉಲ್ಲೇಖಿಸಿ ವಾದ ಮಾಡಿದ ರೇವಣ್ಣ ಪರ ವಕೀಲರಾದ ಮೂರ್ತಿ ಡಿ ನಾಯ್ಕ್ ಅವರು, ಹೊಳೆ ನರಸೀಪುರ ಪ್ರಕರಣದಲ್ಲಿ ಜಾಮೀನು ನೀಡಬಹುದಾದ ಸೆಕ್ಷನ್ ಗಳಿವೆ. ತನಿಖೆಗೆ ಸಹಕರಿಸೋದು ಅಂದರೆ ತಪ್ಪೊಪ್ಪಗೆ ನೀಡಬೇಕೆ? ಮೂರು ದಿನಗಳ ಕಾಲ ನಿರಂತರ ವಿಚಾರಣೆ ಮಾಡಿದ್ದಾರೆ.ಹೀಗಾಗಿ ನ್ಯಾಯಾಂಗ ಬಂಧನಕ್ಕೆ ನೀಡದೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌: ಪೆನ್‌ಡ್ರೈವ್‌ ಹಿಂದಿರೋದು ಬಿಜೆಪಿ ಅಗ್ರಗಣ್ಯ ನಾಯಕ, ಪಿ. ರವಿಕುಮಾ‌ರ್

ರೇವಣ್ಣ ಅವರಿಗೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ನಿಮಗೇನಾದರೂ ತೊಂದರೆ ಆಯ್ತಾ? ಎಂದು ಕೇಳಿದ ಪ್ರಶ್ನೆಗಳಿಗೆ ಅವರು ಸರಿಯಾದ ಉತ್ತರ ನೀಡಿಲ್ಲ. ಸ್ವಲ್ಪ ಹೊತ್ತು ನಿಧಾನಿಸಿ ಮಾತನಾಡಿದ ಅವರು, ಸ್ವಾಮಿ ನಾನು 3 ದಿನದಿಂದ ಮಲಗಿಲ್ಲ. ಹೊಟ್ಟೆ ನೋವು ಬಂದು ಮೂರು ದಿನ ನಿದ್ದೆಯೇ ಬಂದಿಲ್ಲ. ನಾನು ಎಲ್ಲಿಯೂ ಹೋಗಿರಲಿಲ್ಲ. ನನ್ನ ತಂದೆಯವರ ಮನೆಯಲ್ಲೇ ಇದ್ದೆ. ಎಸ್‌ಐಟಿ ಅಧಿಕಾರಿಗಳು ನಿನ್ನೆಯೇ ತನಿಖೆ ಮುಕ್ತಾಯವಾಗಿದೆ ಅಂತ ಹೇಳಿದ್ದರು. ನಾನು ತಪ್ಪು ಮಾಡಿದ್ರೆ ಒಪ್ಪಿಕೊಳ್ಳುತ್ತಿದ್ದೆ. ನನಗೆ ಗೊತ್ತಿಲ್ಲದೆ ಏನ್ ಹೆಳಲಿ ಎಂದು ರೇವಣ್ಣ ನ್ಯಾಯಾಲಯದ ಮುಂದೆ ಕೈಮುಗಿದರು. ಮುಂದುವರೆದು, ನನಗೆ ತುಂಬಾ ಎದೆ ನೋವು ಹಾಗೂ ಹೊಟ್ಟೆ ಉರಿ ಬರ್ತಿದೆ. 25 ವರ್ಷ ಎಂ ಎಲ್ ಎ ಆಗಿದ್ದೇನೆ. ನನ್ನ ಮೇಲೆ ಯಾವುದೇ ಆರೋಪವಿರಲಿಲ್ಲ ಎಂದು ಹೇಳಿದರು.

Follow Us:
Download App:
  • android
  • ios