Asianet Suvarna News Asianet Suvarna News

ಕೊರೋನಾ ಆತಂಕ: ಕೊಪ್ಪಳ ಜಿಲ್ಲಾಸ್ಪತ್ರೆ ಕೋವಿಡ್‌- 19ಕ್ಕೆ ಮೀಸಲು

ಕೊಪ್ಪಳಕ್ಕೆ ಲಗ್ಗೆ ಇಟ್ಟವರ ಸಂಖ್ಯೆ 20 ಸಾವಿರ, ಮತ್ತೊಬ್ಬ ಕೊರೋನಾ ಶಂಕಿತ: ಸಚಿವ ಶ್ರೀರಾಮುಲು| ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಏಪ್ರಿಲ್‌ 14ರವರೆಗೆ ಕಡ್ಡಾಯವಾಗಿ ನಿಷೇಧಾಜ್ಞೆ ಜಾರಿ| ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ಶಂಕಿತ ಪತ್ತೆಯಾಗಿದ್ದು, ಈತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ|

Koppal District Hospital is now Covid 19 Hospital
Author
Bengaluru, First Published Apr 1, 2020, 8:06 AM IST

ಕೊಪ್ಪಳ(ಏ.01): ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಇದರ ಆಧಾರದಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಯನ್ನು ಕೋವಿಡ್‌- 19 ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್‌- 19 ಕುರಿತು ಜಿಲ್ಲೆಯ ಬೆಳವಣಿಗೆಯನ್ನು ಪರಿಶೀಲಿಸಿದ ನಂತರ ಅವರು ಈ ವಿಷಯ ತಿಳಿಸಿದರು. ಈಗ ಜಿಲ್ಲಾಸ್ಪತ್ರೆಯಲ್ಲಿರುವ ರೋಗಿಗಳ ಕುರಿತು ಏನು ಮಾಡಬೇಕು? ಎನ್ನುವುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸಿ, ಅವರಿಗೂ ತೊಂದರೆಯಾಗದಂತೆ ಕ್ರಮವಹಿಸುವರು.

ಮದ್ಯವಿಲ್ಲದೆ ವೃದ್ಧ ನೇಣು ಬಿಗಿದು ಆತ್ಮಹತ್ಯೆ

ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಕ್ವಾರಂಟೈನ್‌ ಸ್ಥಾಪಿಸಲು ಜಿಲ್ಲೆಯ ವಿವಿಧ ಆಸ್ಪತ್ರೆಗಳನ್ನು ಗುರುತಿಸಿ ಆರೋಗ್ಯ ಇಲಾಖೆಯ ವಶಕ್ಕೆ ನೀಡಲಾಗಿದೆ

20 ಸಾವಿರ ಜನರ ಲಗ್ಗೆ:

ಕೊಪ್ಪಳ ಜಿಲ್ಲೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ಒಟ್ಟು 20034 ಜನ ಆಗಮಿಸಿದ್ದು, ಈ ಪೈಕಿ ನಗರ ಪ್ರದೇಶಗಳಿಗೆ 1082 ಜನರು ಹಾಗೂ ಗ್ರಾಮೀಣ ಪ್ರದೇಶಗಳಿಗೆ 18852 ಜನರು ಆಗಮಿಸಿದ್ದಾರೆ. ಇದರಲ್ಲಿ ಬೇರೆ ರಾಜ್ಯಗಳಿಂದ 1830 ಮತ್ತು ವಿವಿಧ ಜಿಲ್ಲೆಗಳಿಂದ 18204 ಜನರು ಆಗಮಿಸಿರುತ್ತಾರೆ. ಇವರಲ್ಲಿ ಬಹುತೇಕ ಜನರು ಗುಳೆ ಹೋಗಿರುವವರಾಗಿರುತ್ತಾರೆ. ಬಂದವರಿಗೆಲ್ಲರಿಗೂ ತಪಾಸಣೆ ನಡೆಸಲಾಗಿ ಯಾವುದೇ ಸಂಶಯ ಇಲ್ಲದೆ ಇರುವುದರಿಂದ 14 ದಿನಗಳವರೆಗೆ ಮನೆಯಲ್ಲಿ ಇರಲು ಜಾಗೃತಿ ಮೂಡಿಸಲಾಗಿದೆ. 

ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರಿಗೆ ಐಪಿಸಿ ಕಾಯ್ದೆ 188, 270ರಡಿಯಲ್ಲಿ ಒಟ್ಟು 7 ಪ್ರಕರಣದಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಏಪ್ರಿಲ್‌ 14ರವರೆಗೆ ಕಡ್ಡಾಯವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿರ್ಗತಿಕರಿಗೆ, ವಸತಿರಹಿತರಿಗೆ, ಅಲೆಮಾರಿಗಳಿಗೆ ಸಹಾಯವಾಣಿ ಆರಂಭಿಸಲಾಗಿದ್ದು, ಅವರಿಗೆ ಆಹಾರ ಮತ್ತು ಅಗತ್ಯ ಸಾಮಗ್ರಿಗಳ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಗೂ ಸೋಂಕು ಹರಡದಂತೆ ತಡೆಯಲು ಮನೆ ಮನೆಗೆ ಅಗತ್ಯ ಸಾಮಗ್ರಿ ತಲುಪಿಸಲು ಕ್ರಮವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಹಾಲಪ್ಪ ಬಸಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್‌ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಿಂಗರಾಜು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್‌.ಬಿ. ದಾನರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌, ಡಿವೈಎಸ್‌ಪಿ ವೆಂಕಟಪ್ಪ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ನಂತರ ಸಚಿವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಮತ್ತೊಬ್ಬ ಶಂಕಿತ

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ಶಂಕಿತ ಪತ್ತೆಯಾಗಿದ್ದು, ಈತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರವೇ ಸತ್ಯ ಗೊತ್ತಾಗಬೇಕು. ಈ ಹಿಂದೆಯೂ ಓರ್ವನ ಗಂಟಲು ದ್ರವ ಕಳುಹಿಸಿಕೊಡಲಾಗಿತ್ತು. ಆದರೆ, ನೆಗಟಿವ್‌ ಬಂದಿತ್ತು. ಇನ್ನು ನಿಗಾ ಇಟ್ಟವರ ಸಂಖ್ಯೆ 77ರಿಂದ 79ಕ್ಕೆ ಏರಿಕೆಯಾಗಿದೆ. ಇದರಲ್ಲಿ 45 ಜನರು 14 ದಿನ ಪೂರೈಕೆ ಮಾಡಿದ್ದಾರೆ.
 

Follow Us:
Download App:
  • android
  • ios