Asianet Suvarna News Asianet Suvarna News

ಬ್ಯಾಂಕ್‌ ಸೇವಾ ಶುಲ್ಕದ ವಿವರ ಇಲ್ಲಿದೆ, ಗೊತ್ತು ಮಾಡ್ಕೊಂಡು ಸೇವ್ ಮಾಡಿ!

ಬ್ಯಾಂಕ್‌ಗಳು ಈ ವರ್ಷ ಕೆಲವು ಫೀಸ್‌ಗಳನ್ನು ಕಡಿತ ಮಾಡಿವೆ. ಕೆಲವನ್ನು ರದ್ದುಗೊಳಿಸಿವೆ. ಆದರೆ ನೀವು ಊಹಿಸಲೂ ಸಾಧ್ಯವಿಲ್ಲದ ಕಡೆ ಅವು ನಿಮ್ಮ ಜೇಬಿನಿಂದ ಹಣ ಸೆಳೆಯುತ್ತವೆ. ಅವುಗಳ ಬಗ್ಗೆ ಹುಷಾರಾಗಿರೋಣ.

you should know these bank service charges to save more
Author
Bengaluru, First Published Jan 8, 2020, 12:59 PM IST

ಈ ವರ್ಷದಿಂದ, ನೀವು ಬ್ಯಾಂಕ್‌ ವಹಿವಾಟಿನಲ್ಲಿ ಆನ್‌ಲೈನ್‌ ಮೂಲಕ ನೆಫ್ಟ್‌ (ನ್ಯಾಷನಲ್‌ ಎಲೆಕ್ಟ್ರಾನಿಕ್‌ ಫಂಡ್ಸ್‌ ಟ್ರಾನ್ಸ್ಫರ್‌) ಅಥವಾ ಆರ್‌ಟಿಜಿಎಸ್‌ (ರಿಯಲ್‌ ಟೈಮ್‌ ಗ್ರಾಸ್‌ ಸೆಟಲ್ಮೆಂಟ್‌) ಮಾಡುವುದಾದರೆ ಶುಲ್ಕ ಪಾವತಿಸಬೇಕಿಲ್ಲ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ನೆಫ್ಟ್‌ ಮತ್ತು ಆರ್‌ಟಿಜಿಎಸ್‌ ವಹಿವಾಟಿನ ಮೇಲಿನ ಶುಲ್ಕಗಳನ್ನು ರದ್ದುಪಡಿಸಿದೆ. ಆದರೆ ಬ್ಯಾಂಕುಗಳು ವಿವಿಧ ಸೇವೆಗಳಿಗೆ ವಿಧಿಸುವ ಶುಲ್ಕಗಳ ಬಗ್ಗೆ ಹೆಚ್ಚಿನ ಗ್ರಾಹಕರಿಗೆ ತಿಳಿದಿಲ್ಲ. ಅಂತಹ ಫೀಸುಗಳನ್ನು ತಿಳಿಯೋಣ ಬನ್ನಿ.

ಕ್ಯಾಶ್‌ ಹ್ಯಾಂಡಲಿಂಗ್‌
ಕ್ಯಾಶ್‌ ವರ್ಗಾವಣೆಯ ಮೇಲೆ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಒಂದು ನಿರ್ದಿಷ್ಟ ಮೊತ್ತದ ಮಿತಿಯನ್ನು ಮೀರಿದರೆ ಅದಕ್ಕನುಗುಣವಾಗಿ ಶುಲ್ಕವೂ ಏರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಮೊದಲ ಕೆಲವು ವಹಿವಾಟುಗಳು ಉಚಿತವಾಗಿರುತ್ತವೆ. ಸಾಮಾನ್ಯವಾಗಿ ನಿಮ್ಮ ಹೋಮ್‌ ಬ್ರಾಂಚ್‌ನಲ್ಲಿ ಮಾಡುವ ವಹಿವಾಟುಗಳಿಗೆ ಶುಲ್ಕ ಕಡಿಮೆ. ಬೇರೆ ಕಡೆ ಮಾಡುವುದಾದೆ ಅಧಿಕ. ಈ ಶುಲ್ಕ ಸುಮಾರು 50 ರೂ.ಗಳಿಂದ 150 ರೂ.ಗಳವರೆಗೆ ಇರಬಹುದು.

ಫಂಡ್‌ ಟ್ರಾನ್ಸ್‌ಫರ್‌
ನೆಫ್ಟ್‌, ಆರ್‌ಟಿಜಿಎಸ್‌ಗಳಿಗೆ ಶುಲ್ಕಗಳಿಲ್ಲವಾದರೂ, ಐಎಂಪಿಎಸ್‌(ಇಮ್ಮೀಡಿಯೇಟ್‌ ಪೇಮೆಂಟ್‌ ಸರ್ವಿಸ್‌)ಗಳಿಗೆ ನೀವು ಫೀಸ್‌ ತೆತ್ತಲೇ ಬೇಕು. ಈ ಫೀಸ್‌ ಹೆಚ್ಚಾಗಿ ವರ್ಗಾವಣೆಯಾಗುವ ಮೊತ್ತ ಮತ್ತು ಆಯಾ ಬ್ಯಾಂಕಿನ ಪಾಲಿಸಿಯನ್ನು ಅವಲಂಬಿಸಿರುತ್ತದೆ.ಸಾಮಾನ್ಯವಾಗಿ ಇದು 1 ರೂಪಾಯಿಯಿಂದ 25 ರೂ.ವರೆಗೆ ಇರಬಹುದು.

ಹಣ ಉಳಿಸಬೇಕಂದ್ರೆ ಹೀಗ್ ಮಾಡಿ

ಮಿನಿಮಮ್‌ ಬ್ಯಾಲೆನ್ಸ್‌
ನಿಮ್ಮ ಸೇವಿಂಗ್ಸ್‌ ಖಾತೆಯಲ್ಲಿ ತಿಂಗಳಿಗೆ ಇಷ್ಟು ಅಥವಾ ತ್ರೈಮಾಸಿಕ ಇಂತಿಷ್ಟು ಹಣ ಕಾಯ್ದುಕೊಳ್ಳುವಂತೆ ಬಹುತೇಕ ಎಲ್ಲಾ ಬ್ಯಾಂಕುಗಳು ಒತ್ತಾಯಿಸುತ್ತವೆ. ಉದಾಹರಣೆಗೆ, ಮೆಟ್ರೊಗಳು ಮತ್ತು ನಗರ ಕೇಂದ್ರ ಶಾಖೆಗಳಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ದ ಸೇವಿಂಗ್ಸ್‌ ಅಕೌಂಟ್‌ ಗ್ರಾಹಕರು ತಿಂಗಳಿಗೆ ಸರಾಸರಿ 3,000 ಬ್ಯಾಲೆನ್ಸ್‌ ಕಾಪಾಡಿಕೊಳ್ಳಬೇಕು. ಅರೆ ನಗರ ಶಾಖೆಗಳಲ್ಲಿ 2,000 ಮತ್ತು ಗ್ರಾಮೀಣ ಶಾಖೆಗಳಲ್ಲಿ 1,000 ರೂ. ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಸುಮಾರು 5 ರೂ.ನಿಂದ 15 ರೂ.ವರೆಗೆ ಶುಲ್ಕ ವಿಧಿಸುತ್ತದೆ. ಕೆಲವು ಬ್ಯಾಂಕುಗಳು 200-500 ರೂ.ಗಳಷ್ಟು ಶುಲ್ಕ ವಿಧಿಸುತ್ತವೆ.ಒಂದೊಂದೇ ಅಕೌಂಟ್‌ ಹೊಂದಿರುವವರಿಗೆ ಇದು ಸಮಸ್ಯೆಯಲ್ಲ. ಆದರೆ ಹಲವು ಅಕೌಂಟ್‌ ಹೊಂದಿರುವವರಿಗೆ ಎಲ್ಲ ಶಾಖೆಗಳಲ್ಲೂ ಮಿನಿಮಮ್‌ ಬ್ಯಾಲೆನ್ಸ್‌ ಉಳಿಸಿಕೊಳ್ಳುವುದು ಕಷ್ಟವೇ.

ಎಟಿಎಂ, ಡೆಬಿಟ್‌ ಕಾರ್ಡ್‌ ಮತ್ತು ಚೆಕ್‌
ಎಟಿಎಂಗಳಲ್ಲಿ ನೀವು ಒಂದು ತಿಂಗಳಲ್ಲಿ ಐದಕ್ಕಿಂತ ಅಧಿಕ ಬಾರಿ ಹಣ ಡ್ರಾ ಮಾಡಿದರೆ ಬ್ಯಾಂಕ್‌ಗಳು ಶುಲ್ಕ ವಿಧಿಸಬಹುದು ಎಂಬುದು ಆರ್‌ಬಿಐ ಆದೇಶ. ಈ ಫೀಸ್‌ ಪ್ರತಿ ಟ್ರಾನ್ಸಾಕ್ಷನ್‌ಗೆ  8ರಿಂದ 20 ರೂ.ವರೆಗೆ ಇರಬಹುದು. ಉದಾಹರಣೆಗೆ, ಎಸ್‌ಬಿಐ ಸೇವಿಂಗ್ಸ್‌ ಖಾತೆದಾರರು ಮೆಟ್ರೋ ನಗರಗಳಲ್ಲಿ ಎಸ್‌ಬಿಐ ಎಟಿಎಂಗಳಲ್ಲಿ ಐದು ಬಾರಿ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಬಾರಿ ಉಚಿತವಾಗಿ ಹಣ ತೆಗೆಯಬಹುದು. ಗ್ರಾಮೀಣ ಭಾಗಗಳಲ್ಲಿ ಎಸ್‌ಬಿಐ ಎಟಿಎಂಗಳಲ್ಲಿ ಐದು ಬಾರಿ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಐದು ಬಾರಿ ತೆಗೆಯಬಹುದು.

ಕಾರ್ಡ್‌ ಕಳೆದುಕೊಂಡರೆ
ನೀವು ನಿಮ್ಮ ಡೆಬಿಟ್‌ ಕಾರ್ಡನ್ನು ಕಳೆದುಕೊಂಡರೆ, ಹೊಸ ಕಾರ್ಡ್‌ ಮಾಡಿಸಿಕೊಳ್ಳಲು ಸುಮಾರು 50ರಿಂದ 500 ರೂ. ಶುಲ್ಕ ವಿಧಿಸುತ್ತವೆ. ಎಟಿಎಂ ಪಾಸ್‌ವರ್ಡನ್ನು ನೀವು ಮರೆತುಬಿಟ್ಟರೆ, ಅದನ್ನು ರಿಸೆಟ್‌ ಮಾಡಿಕೊಳ್ಳಲೂ ಚಾರ್ಜ್‌ ವಿಧಿಸುತ್ತವೆ!

ಚೆಕ್‌ ವಟಾವಣೆ
1 ಲಕ್ಷ  ರೂ.ವರೆಗಿನ ಮೌಲ್ಯದ ಚೆಕ್‌ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅದಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್‌ಗಳನ್ನು ವಟಾವಣೆ ಮಾಡಿಸಿಕೊಳ್ಳಲು ಶುಲ್ಕ ಇದೆ. ಆದರೆ ಎಷ್ಟೇ ಮೊತ್ತವಾದರೂ ಪ್ರತಿ ಚೆಕ್‌ಗೆ 150ಕ್ಕಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ. ನಿಮ್ಮ ಚೆಕ್‌ ಬೌನ್ಸ್‌ ಆಗಿದ್ದರೆ, ನೀವು ಚೆಕ್‌ ನೀಡಿದವರೇ ಆಗಲಿ, ಪಡೆದವರೇ ಆಗಿರಲಿ, 100-150 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಚೆಕ್‌ ಪೇಮೆಂಟ್‌ ಸ್ಟಾಪ್‌ ಮಾಡುವುದಕ್ಕೂ ಫೀಸ್‌ ಇದೆ.

ಈ ಸಿಂಪಲ್ ರೂಲ್ ಫಾಲೋ ಮಾಡಿ, ಹಣ ಉಳಿಸಿ

ಸೂಚನೆ ಸಂದೇಶಗಳು
ನಿಮ್ಮ ಖಾತೆಗಳಿಂದ ನಡೆಯುವ ವಹಿವಾಟುಗಳ ಬಗ್ಗೆ ನಿಮಗೆ ಮಾಹಿತಿ ನೀಡುವ ಸೇವೆಗಳು, ಎಸ್‌ಎಂಎಸ್‌ ಸೇವೆಗಳಿಗೆ ಬ್ಯಾಂಕುಗಳು ಪ್ರತಿ ಮೂರು ತಿಂಗಳಿಗೊಮ್ಮೆ 15 ರೂ. ಶುಲ್ಕ ವಿಧಿಸುತ್ತವೆ.ಇಎಂಐ ಅಥವಾ ಆಟೋ ಬಿಲ್‌ ಪೇಮೆಂಟ್‌ ಸೂಚನೆಗಳನ್ನು ನೀವು ನೀಡಿದ್ದರೆ, ಮೊದಲ ಬಾರಿಗೆ ಈ ಸೇವೆಗೆ ಚಾರ್ಜ್‌ ಮಾಡುತ್ತವೆ. ಎಸ್‌ಬಿಐ ಮೊದಲ ಸೂಚನೆಗೆ 50 ರೂ. ಶುಲ್ಕ ವಿಧಿಸುತ್ತದೆ.

ದಾಖಲೆಗಳ ಶುಲ್ಕ
ಪಾಸ್‌ಬುಕ್‌ಗಳ ಕಾಪಿ ಪಡೆಯಲು, ಅಕೌಂಟ್‌ ಸ್ಟೇಟ್‌ಮೆಂಟ್‌ ಪಡೆಯಲು ನೀವು ಸುಮಾರು 50ರಿಂದ 150 ರೂ. ಶುಲ್ಕ ತೆರಲೇಬೇಕು. ಅಟೆಸ್ಟ್‌ಮೆಂಟ್‌ಗೂ ಶುಲ್ಕ ಇದೆ. ಉದಾಹರಣೆಗೆ, ಸಹಿ ಪರಿಶೀಲನೆಗಾಗಿ ಎಸ್‌ಬಿಐ 150 ರೂ. ಫೀ ಹಾಕುತ್ತದೆ.

ಉಳಿಸಲು ಏನೂ ಇಲ್ಲವೆಂದಾಗಲೂ ಹೀಗ್ ಹಣ ಉಳಿಸಬಹುದು

Follow Us:
Download App:
  • android
  • ios