ಉಳಿಸಲು ಏನೂ ಇಲ್ಲವೆಂದಾಗಲೂ ಸ್ವಲ್ಪ ಹಣ ಉಳಿಸಿ
ಎಲ್ಲೂ ಅತಿವ್ಯಯ ಮಾಡದೆ ಸಾಧ್ಯವಾದಷ್ಟು ಮಿತಿಯಲ್ಲಿ ಬದುಕುತ್ತಿದ್ದೇನೆ, ಇನ್ನೂ ಹಣ ಉಳಿಸಬೇಕೆಂದರೆ ಹೇಗೆ ಉಳಿಸಲಿ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಉತ್ತರಕ್ಕಾಗಿ ಮುಂದೆ ಓದಿ...
ನೀವು ಜುಗ್ಗರಲ್ಲ. ಹಾಗಂತ ಅನಗತ್ಯ ಖರ್ಚು ಮಾಡುವವರೂ ಅಲ್ಲ. ಇಷ್ಟೆಲ್ಲ ಟೈಟ್ ಬಜೆಟ್‌ನಲ್ಲಿ ಬದುಕುತ್ತಿದ್ದರೂ ಹೆಚ್ಚು ಸೇವ್ ಮಾಡಲಾಗುತ್ತಿಲ್ಲ ಎಂಬುದು ನಿಮ್ಮ ಗೋಳಾಗಿದ್ದರೆ, ಇನ್ನೊಂದಿಷ್ಟು ಸಾವಿರ ರುಪಾಯಿಗಳು ಪ್ರತಿ ತಿಂಗಳೂ ನಿಮ್ಮ ಸೇವಿಂಗ್ಸ್‌ಗೆ ಸೇರುವಂತೆ ಮಾಡಲು ಇಲ್ಲಿವೆ ಟಿಪ್ಸ್. ಅಯ್ಯೋ ಏನೋ ಒಂದೆರಡು ಸಾವಿರ ಉಳಿಸಿದರೆ ಎಷ್ಟು ಮಹಾ ಉಳಿಸಲಾದೀತು ಎನ್ನಬೇಡಿ. ಹನಿಹನಿಗೂಡಿಯೇ ಹಳ್ಳವಾಗುವುದು ಎಂಬುದು ನೆನಪಿನಲ್ಲಿಟ್ಟುಕೊಂಡು ಮುಂದುವರೆಯಿರಿ.
ಬಟ್ಟೆಗಳು
ಇಂದಿನ ಜೀವನಶೈಲಿ ಹೇಗಾಗಿದೆ ಎಂದರೆ ಆನ್‌ಲೈನ್ ಆ್ಯಪ್‌ಗಳು ಶೇ.70-80ರಷ್ಟು ಡಿಸ್ಕೌಂಟ್ ಎಂದು ಅನೌನ್ಸ್ ಮಾಡಿದ ಕೂಡಲೇ ಬೇಕೋ ಬೇಡವೇ ಬಿಟ್ರೆ ಈ ಆಫರ್ ಸಿಗುವುದಿಲ್ಲ ಎಂದು ಸುಮ್ಮನಾದರೂ ಒಂದೆರಡು ಜೊತೆ ಬಟ್ಟೆ ಖರೀದಿಸುವುದು ಅಭ್ಯಾಸವಾಗಿ ಹೋಗಿದೆ. ಒಂದು ಕೆಲಸ ಮಾಡಿ, ಫೋನ್‌ನಿಂದ ಎಲ್ಲ ಶಾಪಿಂಗ್ ಆ್ಯಪ್‌ಗಳನ್ನು ಮೊದಲು ಅನ್‌ಇನ್ಸ್ಟಾಲ್ ಮಾಡಿ. ನಂತರ ಪತಿಪತ್ನಿ ಇಬ್ಬರೂ ಕುಳಿತು ವರ್ಷದ ಕಾಲ ಒಂದೂ ಬಟ್ಟೆ ಕೊಳ್ಳುವುದಿಲ್ಲ ಎಂದು ಶಪಥ ಮಾಡಿ. ಮಕ್ಕಳಿದ್ದಾಗ ಇದು ಸ್ವಲ್ಪ ಕಷ್ಟದ ಚಾಲೆಂಜ್. ಆದರೂ ಚಾಲೆಂಜ್ ಕಷ್ಟವಿದ್ದಾಗಲೇ ಮಜವಿರುವುದು. ಹಬ್ಬಕ್ಕೂ ಇಲ್ಲ, ಹರಿದಿನಕ್ಕೂ ಇಲ್ಲ ಎಂದು ಪೂರ್ತಿ ಒಂದು ವರ್ಷದ ಕಾಲ ನಿಮ್ಮ ಮನೋಶಕ್ತಿಗೆ ಸವಾಲೊಡ್ಡುತ್ತಾ ಸಾಗಿ. ಇರುವ ಬಟ್ಟೆಗಳಲ್ಲೇ ಎಷ್ಟು ಸಲೀಸಾಗಿ ವರ್ಷದ ಜೀವನ ಸಾಗುತ್ತದೆ ಎಂಬುದು ನಿಮಗೇ ಆಶ್ಚರ್ಯವಾದೀತು. ಅಷ್ಟೇ ಅಲ್ಲ, ಅವುಗಳಿಗೆ ಕೊಟ್ಟ ಹಣವೂ ಸದುಪಯೋಗವಾದಂತಾಯಿತು. ಮತ್ತೊಂದಷ್ಟು ಅನಗತ್ಯ ಬಟ್ಟೆಗಳಿಗೆ ಹಾಕುವ ಖರ್ಚೂ ಉಳಿದೀತು. ಇನ್ನು ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಬಹಳ ಬೇಗ ಅವು ಬೆಳೆಯುವುದರಿಂದ ಅವರಿಗೆ ಹೊಸ ಬಟ್ಟೆ ಬೇಕಾದೀತು. ಮೊದಲು ಕೊಳ್ಳುವಾಗಲೇ ಸ್ವಲ್ಪ ದೊಡ್ಡ ಗಾತ್ರದ ಬಟ್ಟೆ ಕೊಳ್ಳುವುದು ಜಾಣತನ. ತದ ನಂತರದಲ್ಲೇ ಕೊಳ್ಳಲೇಬೇಕಾದರೆ ಸೆಕೆಂಡ್ಸ್ ಸೇಲ್ಸ್‌ನಲ್ಲಿ ತನ್ನಿ. ಮಕ್ಕಳೇನೂ ಬೇಜಾರು ಮಾಡಿಕೊಳ್ಳುವುದಿಲ್ಲ. ಬಟ್ಟೆ ಅಗತ್ಯವೇ ಹೊರತು ಲಕ್ಷುರಿಯಲ್ಲ ಎಂಬುದು ಅವರಿಗೂ ಅರ್ಥವಾಗುತ್ತದೆ. ವರ್ಷಾಂತ್ಯದಲ್ಲಿ ಕೊಳ್ಳದೇ ಇದ್ದ ಬಟ್ಟೆಗಳಿಂದಾಗಿಯೇ ಕನಿಷ್ಠ ಹತ್ತಿಪ್ಪತ್ತು ಸಾವಿರ ಉಳಿತಾಯವಾಗಿರುತ್ತದೆ.
ಬಿಲ್ಸ್
ಮನೆ ಎಂದ ಮೇಲೆ ಎಲೆಕ್ಟ್ರಿಸಿಟಿ ಬಿಲ್, ವಾಟರ್ ಬಿಲ್, ಗ್ಯಾಸ್ ಬಿಲ್, ಕೇಬಲ್ ಬಿಲ್ ಮುಂತಾದ ಹತ್ತು ಹಲವು ಬಿಲ್‌ಗಳು ಸಾಮಾನ್ಯ. ಇವುಗಳನ್ನು ಉಳಿಸುವ ಬಗ್ಗೆ ಹೆಚ್ಚಿನವರಿಗೆ ಅಸಡ್ಡೆ. ಎಷ್ಟು ಮಹಾ ಉಳಿಸಬಹುದು ಎಂದು. ಆದರೆ, ಸಾಧ್ಯವಾದಲೆಲ್ಲ ನೀರಿನ ಬಳಕೆ ಕಡಿಮೆ ಮಾಡಿ. ನೆಲ ಒರೆಸಿದ ನೀರನ್ನು ಗಿಡಗಳಿಗೆ ಹಾಕಿ. ಬಟ್ಟೆ ಒಗೆದ ನೀರನ್ನು ಬಚ್ಚಲು ತೊಳೆಯಲು ಬಳಸಿ. ಮಳೆಗಾಲದಲ್ಲಿ ಮಳೆನೀರನ್ನೇ ದಿನದ ಖರ್ಚಿಗೆ ಬಳಸಿ. ಹೀಗೆ ಮಾಡುವುದರಿಂದ ವಾಟರ್ ಬಿಲ್‌ನಲ್ಲಿ ತಿಂಗಳಿಗೆ 300 ರೂ. ಹತ್ತಿರತ್ತಿರ ಉಳಿಸಬಹುದು. ಇನ್ನು ವೃಥಾ ಫ್ಯಾನ್ ಹಾಕುವುದು, ಲೈಟ್ ಉರಿಸುವುದು ತಪ್ಪಿಸಿ, ಟಿವಿಯನ್ನು ನೋಡುವುದು ಕಡಿಮೆ ಮಾಡಿ. ಫ್ರಿಡ್ಜ್ ಇಡೀ ದಿನ ಬಳಸುವುದು ಅಗತ್ಯವಿಲ್ಲ. ದಿನದಲ್ಲಿ 8-10 ಗಂಟೆಗಳು ಫ್ರಿಡ್ಜ್ ಆಪ್ ಮಾಡಬಹುದು. ಸೋಲಾರ್ ಹಾಕಿಸಿ. ಇವೆಲ್ಲದರಿಂದ ವಿದ್ಯುತ್ ಬಿಲ್‌ನಲ್ಲಿ ಕೂಡಾ ತಿಂಗಳಿಗೆ 200-300 ರೂ ಉಳಿಸಬಹುದು. ಇನ್ನು, ಲ್ಯಾಪ್‌ಟಾಪ್, ಫೋನ್‌ನಲ್ಲೇ ಮೂವಿ, ನ್ಯೂಸ್ ನೋಡುವವರು ನೀವಾದರೆ ಟಿವಿ ಎಂಬುದು ಮನೆಗೆ ಅಗತ್ಯವಿಲ್ಲ. ಕೇಬಲ್ ತೆಗೆಸಿಬಿಡಬಹುದು. ಈ ಮೂಲಕ ತಿಂಗಳಿಗೆ 350 ರೂ. ಹತ್ತಿರತ್ತಿರ ಉಳಿಸಬಹುದು. ಇನ್ನುಳಿದ ಎಲ್ಲ ಬಿಲ್‌ಗಳಲ್ಲೂ ಸಾಧ್ಯವಾದಷ್ಟು ಉಳಿತಾಯ ಮಾಡಿ. ಇವೆಲ್ಲವೂ ಪರಿಸರಕ್ಕೂ ಪೂರಕ. ಇವೆಲ್ಲದರಿಂದ ತಿಂಗಳಿಗೆ ಸಾವಿರ ರೂಪಾಯಿ ಎಂದರೂ ವರ್ಷಕ್ಕೆ 12 ಸಾವಿರ ರೂಪಾಯಿ ಸೇವಿಂಗ್ಸ್ ಅಕೌಂಟ್‌ಗೆ ಸೇರಿಸಬಹುದು.
ಆಹಾರ
ನೀವು ಈಗಾಗಲೇ ಚಾಟ್ಸ್ ತಿನ್ನುವುದು ಬಿಟ್ಟಿರಬಹುದು. ವರ್ಷದ ಕಾಲ ಹೋಟೆಲನ್ನು ಕೂಡಾ ಸಂಪೂರ್ಣ ಬಿಟ್ಟು ಬಿಡಿ. ಇನ್ನು ಸ್ವಿಗ್ಗಿ,ಜೊಮ್ಯಾಟೋ ಆ್ಯಪ್‌ಗಳು ಸುಮ್ಮನೆ ಫೋನ್‌ನೊಳಗೆ ಕುಳಿತು ಏನು ಮಾಡುತ್ತವೆ? ಅವನ್ನೂ ಅನ್‌ಇನ್‌ಸ್ಟಾಲ್ ಮಾಡಿ. ಮನೆಯಡಿಗೆ ಆರೋಗ್ಯಕ್ಕೂ ಒಳ್ಳೆಯದು. ಸಿಂಪಲ್ ಆದರೂ ರುಚಿಕರ. ಅಲ್ಲದೆ, ಟೆರೇಸ್ ಗಾರ್ಡನಿಂಗ್ ಅಥವಾ ಅಂಗಳ, ಹಿತ್ತಲಿನಲ್ಲಿ ಜಾಗವಿದ್ದರೆ ಮನೆಗಾಗುವಷ್ಟು ಸೊಪ್ಪು ಸದೆ ಬೆಳೆಯುವುದು ಬಹಳ ಸುಲಭ. ಈ ಮೂಲಕ ಹಣ್ಣು ತರಕಾರಿಗೆ ಹೆಚ್ಚು ಖರ್ಚು ಮಾಡದೆ, ಕೆಮಿಕಲ್‌ರಹಿತ ಆಹಾರಗಳನ್ನು ಸೇವಿಸಬಹುದು. ಇದರಿಂದ ವರ್ಷಕ್ಕೆ 10ರಿಂದ 15ಸಾವಿರದಷ್ಟು ಉಳಿಸಬಹುದು.
ಪೋಸ್ಟ್ ಆಫೀಸ್ ಸೇವಿಂಗ್ಸ್ ಬಗ್ಗೆ ಗೊತ್ತಿರಲಿ 10 ಅಂಶಗಳು
ಪೆಟ್ರೋಲ್
ಅಂಗಡಿಗೆ ಹೋಗಿ ಸಣ್ಣ ಪುಟ್ಟ ಸಾಮಾನು ತರುವುದಕ್ಕೂ ಕಾರು, ಬೈಕಿನ ಅಗತ್ಯವಿಲ್ಲ. ನಡಿಗೆ ಕಷ್ಟವೆನಿಸಿದರೆ ಸೈಕಲ್ ಬಳಸಿ. ಇದು ಎನ್ವಿರಾನ್‌ಮೆಂಟಲ್ ಫ್ರೆಂಡ್ಲಿ ಜೊತೆಗೆ ನಿಮ್ಮ ಬೊಜ್ಜನ್ನೂ ಖರ್ಚಿಲ್ಲದೆ ಕರಗಿಸುತ್ತದೆ. ಇಂಡೈರೆಕ್ಟ್ ಆಗಿ ಆನಾರೋಗ್ಯದ ಬಿಲ್ ಕೂಡಾ ಉಳಿತಾಯವಾಗುತ್ತದೆ. ಆಫೀಸ್‌ಗೆ ಕೂಡಾ ಕಾರ್ ಪೂಲ್ ಮಾಡುವುದು ಅಥವಾ ಸಾಧ್ಯವಾದಷ್ಟು ವರ್ಕ್ ಫ್ರಂ ಹೋಂ ಮಾಡುವುದು ಟ್ರೈ ಮಾಡಿ. ಒಂದೊಂದು ಕೆಲಸಕ್ಕೂ ಒಮ್ಮೊಮ್ಮೆ ವೆಹಿಕಲ್ ತೆಗೆದುಕೊಂಡು ಓಡಾಡುವ ಬದಲು, ಪಟ್ಟಿ ಮಾಡಿಕೊಂಡು ಹೋಗಿ ಒಮ್ಮೆ ಹೊರ ಹೋದಾಗ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡು ಬನ್ನಿ. ಮನೆಗೆ ಒಂದೇ ಕಾರು ಸಾಕು, ಇನ್ನೊಂದೆರಡು ಧೂಳು ಹೊಡೆಸಿಕೊಂಡು ಕುಳಿತಿದ್ದರೆ ಅವನ್ನು ತಕ್ಷಣ ಮಾರಿಬಿಡಿ. ಇದರಿಂದ ಪೆಟ್ರೋಲ್ ಖರ್ಚಿನಲ್ಲಿ ಸಾವಿರಾರು ರೂಪಾಯಿ ಉಳಿಸಬಹುದು.
ಹೌಸ್‌ಹೋಲ್ಡ್ ಉತ್ಪನ್ನಗಳು
ಮನೆ ಸ್ವಚ್ಛಗೊಳಿಸಲು ಫ್ಲೋರ್ ಕ್ಲೀನರ್ ಬೇಕೆಂದಿಲ್ಲ, ನೀರಿಗೆ ವಿನೆಗರ್, ನಿಂಬೆರಸ ಹಾಕಿಕೊಂಡರೂ ಆದೀತು, ಬಟ್ಟೆಗಳು ಪರಿಮಳ ಬರಲು ಕಂಫರ್ಟ್‌ನ ಅಗತ್ಯವಿಲ್ಲ. ಗರಿಗರಿಯಾಗಿ ಒಣಗಿಸಿದ ಬಳಿಕ ಹೇಗೂ ಧರಿಸುವಾಗ ಸೆಂಟ್ ಹಾಕಿಕೊಳ್ಳುತ್ತೀರಿ. ಹಳೆಯ ಸೀರೆಗಳಿಂದ ಮ್ಯಾಟ್ ಮಾಡಬಹುದು, ದಿನಸಿಯೊಂದಿಗೆ ಬಂದ ಡಬ್ಬಿಗಳನ್ನೇ ಪಾಟ್ ಆಗಿಸಬಹುದು. ನೀವು ಕ್ರಿಯೇಟಿವ್ ಆಗಿದ್ದಲ್ಲಿ ಹೀಗೆ ಹಲವು ವಸ್ತುಗಳನ್ನು ಮಲ್ಟಿಪರ್ಪೋಸ್‌ಗೆ ಬಳಸಬಹುದು. ಮನೆಯಲ್ಲಿ ಕಸವೂ ಕಡಿಮೆಯಾಗುತ್ತದೆ, ಖರ್ಚೂ ಉಳಿಯುತ್ತದೆ.
ಒಟ್ಟಿನಲ್ಲಿ ಉಳಿಸಲು ಇನ್ನೇನೂ ಉಳಿದಿಲ್ಲ, ಅಚ್ಚುಕಟ್ಟಾಗಿ ಜೀವನ ಮಾಡುತ್ತಿದ್ದೇವೆ ಎಂದುಕೊಂಡವರೂ ಮನಸ್ಸು ಮಾಡಿದರೆ ವರ್ಷಕ್ಕೆ ಲಕ್ಷಗಟ್ಟಲೆ ಹಣ ಸೇವಿಂಗ್ಸ್ ಖಾತೆಗೆ ಸೇರಿಸಬಹುದು. ಟ್ರೈ ಮಾಡಿ ನೋಡಿ. ಒಮ್ಮೆ ಅಭ್ಯಾಸವಾದರೆ, ಉಳಿತಾಯದ ಹಣ ನೋಡಿದರೆ ಮತ್ತೆ ಇದು ನಿಮ್ಮ ಜೀವನಶೈಲಿಯೇ ಆದೀತು.