Asianet Suvarna News Asianet Suvarna News

ಗ್ರಾಹಕರ ಹಣಕಾಸಿನ ಮಾಹಿತಿ ಸೋರಿಕೆ, 17,000 ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿದ ಐಸಿಐಸಿಐ ಬ್ಯಾಂಕ್

ಗ್ರಾಹಕರ ಹಣಕಾಸಿನ ಮಾಹಿತಿ ಸೋರಿಕೆ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ 17,000 ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡಿದೆ. ಅಲ್ಲದೆ,ಈ ಗ್ರಾಹಕರಿಗೆ ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಣೆ ಮಾಡೋದಾಗಿ ತಿಳಿಸಿದೆ. 


 

ICICI Bank Blocks 17000 Credit Cards After Data Breach What Should Customers Do anu
Author
First Published Apr 26, 2024, 2:32 PM IST

ನವದೆಹಲಿ (ಏ.26): ಅನಧಿಕೃತ ವ್ಯಕ್ತಿಗಳು ಕನಿಷ್ಠ 17,000 ಹೊಸ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಪಡೆದ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕ್ ತುರ್ತು ಕ್ರಮ ಕೈಗೊಂಡಿದೆ. ಮಾಹಿತಿ ಸೋರಿಕೆಗೆ ಪ್ರತಿಯಾಗಿ ಕ್ರಮ ಕೈಗೊಂಡಿರುವ ಐಸಿಐಸಿಐ ಬ್ಯಾಂಕ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರೆಡಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡೋದಾಗಿ ತಿಳಿಸಿದೆ. ಅಲ್ಲದೆ, ಸಮಸ್ಯೆಗೊಳಗಾಗಿರುವ ಗ್ರಾಹಕರಿಗೆ ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಣೆ ಮಾಡೋದಾಗಿ ತಿಳಿಸಿದೆ. ಐಸಿಐಸಿಐ ಬ್ಯಾಂಕ್ ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕಿನ ಐಮೊಬೈಲ್ ಪೇ ಆ್ಯಪ್‌ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಳಿಕವಷ್ಟೇ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಡ್ ಪೂರ್ಣ ಸಂಖ್ಯೆ ಹಾಗೂ ಕಾರ್ಡ್ ವೆರಿಫಿಕೇಷನ್  ವ್ಯಾಲ್ಯೂ (ಸಿವಿವಿ) ಸೇರಿದಂತೆ ಕ್ರೆಡಿಟ್ ಕಾರ್ಡ್ ಸೂಕ್ಷ್ಮ ಮಾಹಿತಿ ಆ್ಯಪ್‌ ನಲ್ಲಿ ಎಲ್ಲರಿಗೂ ಕಾಣಿಸುತ್ತಿರುವ ಬಗ್ಗೆ ಬಳಕೆದಾರರು ಬ್ಯಾಂಕಿಗೆ ವರದಿ ಮಾಡಿದ್ದರು.

ಹಣಕಾಸಿಗೆ ಸಂಬಂಧಿಸಿದ ಸುದ್ದಿಗಳನ್ನು ಬಿತ್ತರಿಸುವ ವೇದಿಕೆ 'ಟೆಕ್ನೋ ಫಿನೋ' ನಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಬಳಕೆದಾರರು iMobile ಪೇ ಆ್ಯಪ್‌ ಬಳಸುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳಿಗೆ ಸಂಬಂಧಿಸಿದ ಕಾರ್ಡ್ ಗಳ ಸಂಪೂರ್ಣ ಮಾಹಿತಿ ಕಾಣಿಸುತ್ತಿರುವ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದರು. ಈ ಮಾಹಿತಿ ಕಳವು ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರ ಮಾಹಿತಿಗಳನ್ನು ಸಂರಕ್ಷಿಸಲು ಅನುಷ್ಠಾನಗೊಳಿಸಿರುವ ಸುರಕ್ಷಿತಾ ವಿಧಾನಗಳ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.

ಪೇಟಿಎಂ ಆ್ಯಪ್‌ ನಲ್ಲಿ ಹೊಸ ಐಡಿ ಸಕ್ರಿಯಗೊಳಿಸಲು ಹೀಗೆ ಮಾಡಿ..

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಐಸಿಐಸಿಐ ಬ್ಯಾಂಕ್ ವಕ್ತಾರ, ಇತ್ತೀಚಿನ ದಿನಗಳಲ್ಲಿ ವಿತರಿಸಿದ ಸುಮಾರು 17,000 ಹೊಸ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಬ್ಯಾಂಕ್ ಡಿಜಿಟಲ್ ಚಾನೆಲ್ ಒಳಗ ಅಸಮರ್ಪಕ ಬಳಕೆದಾರರಿಗೆ ತಪ್ಪಾಗಿ ಲಿಂಕ್ ಮಾಡಲಾಗಿತ್ತು. ಈ ತಪ್ಪಿನ ಹೊರತಾಗಿ ಇಲ್ಲಿಯ ತನಕ ಮಾಹಿತಿಗಳ ದುರ್ಬಳಕೆಗೆ ಸಂಬಂಧಿಸಿ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದ ಸಂತ್ರಸ್ಥ ಗ್ರಾಹಕರಿಗೆ ಇದರಿಂದ ಯಾವುದೇ ಹಣಕಾಸಿನ ನಷ್ಟ ಉಂಟಾಗಿದ್ದರೆ ಅದಕ್ಕೆ ಸಮರ್ಪಕ ಪರಿಹಾರಧನ ನೀಡೋದಾಗಿ ಐಸಿಐಸಿಐ ಬ್ಯಾಂಕ್ ಭರವಸೆ ನೀಡಿದೆ. 

iMobile Pay ಆ್ಯಪ್‌ ಅಂದ್ರೇನು?
iMobile Pay ಆ್ಯಪ್‌ ಐಸಿಐಸಿಐ ಬ್ಯಾಂಕಿನ ಅಧಿಕೃತ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌. ಇದು  400ಕ್ಕೂ ಅಧಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಈ ಆ್ಯಪ್‌ ಐಸಿಐಸಿಐ ಬ್ಯಾಂಕಿನ ಗ್ರಾಹಕರು ಹಾಗೂ ಗ್ರಾಹಕರಲ್ಲದವರಿಗೂ ಕೂಡ ಪ್ರವೇಶಿಸಲು ಅವಕಾಶ ನೀಡುತ್ತದೆ. ಈ ಆ್ಯಪ್‌ ಬಳಸಿಕೊಂಡು ಗ್ರಾಹಕರು ಒಂದಕ್ಕಿಂತ ಹೆಚ್ಚಿನ ಕಾರ್ಡ್ ಗಳನ್ನು ನಿರ್ವಹಣೆ ಮಾಡಬಹುದು. ಹಾಗೆಯೇ ಹಣ ವರ್ಗಾವಣೆ ಮಾಡಬಹುದು, ಸಾಲಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು, ಆರ್ ಡಿ ಹಾಗೂ ಎಫ್ ಡಿ ತೆರೆಯಬಹುದು. ಹೀಗೆ ಅನೇಕ ಕಾರ್ಯಗಳನ್ನು ಮಾಡಬಹುದು. 

ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ; ಆನ್ ಲೈನ್ ಅಥವಾ ಮೊಬೈಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆಗೆ ತಡೆ

ಗ್ರಾಹಕರು ಏನ್ ಮಾಡ್ಬೇಕು?
ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ರೆ ನಿಮ್ಮ ಹಣಕಾಸಿನ ಮಾಹಿತಿಗಳನ್ನು ಸುರಕ್ಷಿತವಾಗಿಡಲು ತಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕು.
1.ಯಾವುದೇ ಅನುಮಾನಾಸ್ಪದ ವರ್ಗಾವಣೆಗಳು ಅಥವಾ ಅನಧಿಕೃತ ಶುಲ್ಕಗಳನ್ನು ವಿಧಿಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಸಮರ್ಪಕವಾಗಿ ಗಮನಿಸಿ.
2.ಐಸಿಐಸಿಐ ಬ್ಯಾಂಕ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಹಾಗೂ ಹೊಸ ಸಂಖ್ಯೆ ಹಾಗೂ ಸುರಕ್ಷತಾ ಕೋಡ್ ಹೊಂದಿರುವ ಪರ್ಯಾಯ ಕ್ರೆಡಿಟ್ ಕಾರ್ಡ್ ಗೆ ಮನವಿ ಸಲ್ಲಿಕೆ ಮಾಡಿ.
3.ಒಂದು ವೇಳೆ ನೀವು ಯಾವುದೇ ಅನಧಿಕೃತ ವಹಿವಾಟುಗಳನ್ನು ಗಮನಿಸಿದ್ರೆ ತಕ್ಷಣ ಬ್ಯಾಂಕಿಗೆ ಆ ಬಗ್ಗೆ ಮಾಹಿತಿ ನೀಡಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡಿ.
4.ನಿಮ್ಮ ಕ್ರೆಡಿಟ್ ಕಾರ್ಡ್ ಗಳನ್ನು ವಹಿವಾಟು ನಡೆಸಿದ ತಕ್ಷಣ ನಿಮಗೆ ಅಲರ್ಟ್ ಬರುವಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಿ. ಇದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ವಹಿವಾಟು ನಡೆದರೆ ತಕ್ಷಣ ನಿಮಗೆ ಮಾಹಿತಿ ಬರುತ್ತದೆ. 
 

Follow Us:
Download App:
  • android
  • ios