ಆತಂಕದ ಬೆನ್ನಲ್ಲೇ ಭಾರತಕ್ಕೆ ಗುಡ್ ನ್ಯೂಸ್ ಕೊಟ್ಟ ಅಮೆರಿಕ ಸುಪ್ರೀಂ ಕೋರ್ಟ್
ಡೋನಾಲ್ಡ್ ಟ್ರಂಪ್ ಸರ್ಕಾರ ಅಕ್ರಮ ವಲಸಿಗರ ವಿರುದ್ದ ಕಾರ್ಯಾಚರಣೆ ಆರಂಭಿಸಿದೆ. ಇತ್ತ ಹುಟ್ಟಿದ ಮಕ್ಕಳ ಪೌರತ್ವ ಕುರಿತು ಟ್ರಂಪ್ ಹೊರಡಿಸಿದ ಆದೇಶಕ್ಕೆ ಕೋರ್ಟ್ ತಡೆ ನೀಡಿದರೂ ಬೇರೆ ರೂಪದಲ್ಲಿ ಕಾರ್ಯರೂಪಕ್ಕೆ ಬರವು ಸಾಧ್ಯತೆ ಇದೆ. ಇದರ ನಡುವೆ ಅಮೆರಿಕ ಸುಪ್ರೀಂ ಕೋರ್ಟ್ ಬಾರತಕ್ಕೆ ಗುಡ್ ನ್ಯೂಸ್ ನೀಡಿದೆ.
ವಾಶಿಂಗ್ಟನ್(ಜ.25) ಡೋನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಹೊರಡಿಸಿದ ಹಲವು ಆದೇಶ ಭಾರತೀಯರ ಆತಂಕಕ್ಕೆ ಕಾರಣವಾಗಿತ್ತು. ಅಮೆರಿಕದಲ್ಲಿ ಹುಟ್ಟಿದ ಮಕ್ಕಳ ಪೌರತ್ವ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಅಕ್ರಮವಾಗಿ ನುಸುಳಿರುವವರ ವಿರುದ್ಧ ಕಾರ್ಯಾಚರಣೆ ಆರಂಭಗೊಂಡಿದೆ. ಈ ಎಲ್ಲಾ ಆತಂಕದ ನಡುವೆ ಅಮೆರಿಕ ಸುಪ್ರೀಂ ಕೋರ್ಟ್, ಭಾರತ ಸರ್ಕಾರಕ್ಕೆ ಗುಡ್ ನ್ಯೂಸ್ ಕೊಟ್ಟಿದೆ. 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ರೂವಾರಿ ಪಾಕಿಸ್ತಾನ ಮೂಲದ ಉಗ್ರ ತಹ್ವುರ್ ರಾಣಾನನ್ನ ಶೀಘ್ರದಲ್ಲೇ ಭಾರತಕ್ಕೆ ಗಡೀಪಾರು ಮಾಡಲಿದೆ.
ಪಾಕಿಸ್ತಾನ ಮೂಲಕ ಕೆನಡಾ ಪ್ರಜೆಯಾಗಿರುವ ಉಗ್ರ ರಾಣಾ ಗಡೀಪಾರಿಗೆ ಭಾರತ ಅಮೆರಿಕ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ಗಡೀಪಾರಿನಿಂದ ಬಚಾವ್ ಆಗಲು ರಾಣಾ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಕೊನೆಯ ಅಸ್ತ್ರ ಪ್ರಯೋಗಿಸಿದ್ದರು. ಈ ಕುರಿತು ಮೇಲ್ಮನವಿ ಸಲ್ಲಿಸಿದ್ದರು. ಆದರ ಸುಪ್ರೀಂ ಕೋರ್ಟ್ ರಾಣಾ ಅರ್ಜಿ ತಿರಸ್ಕರಿಸಿದೆ. ಇಷ್ಟೇ ಅಲ್ಲ ಭಾರತದ ಮನವಿಯನ್ನು ಪುರಸ್ಕರಿಸಿದೆ. ಹೀಗಾಗಿ ಇದೀಗ ರಾಣಾ ಗಡೀಪಾರಿಗೆ ಇರುವ ಎಲ್ಲಾ ಅಡೆತಡೆಗಳು ನಿವಾರಣೆಗೊಂಡಿದೆ. ಇದೀಗ ಡೋನಾಲ್ಡ್ ಟ್ರಂಪ್ ಸರ್ಕಾರ ಶೀಘ್ರದಲ್ಲೇ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ.
ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ರಾಣಾ ಗಡಿಪಾರಿಗೆ ಅಮೆರಿಕ ಕೋರ್ಟ್ ಸೂಚನೆ
ಮುಂಬೈ ದಾಳಿ ಪ್ರಕರಣದಲ್ಲಿ ಸೆರೆಸಿಕ್ಕ ಉಗ್ರ ಅಜ್ಮಲ್ ಕಸಾಬ್‌ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಖ್ಯಾತ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಮ್ ಭಾರತದ ಪರ ವಾದಿಸಿದ್ದರು. ಲಾಸ್ ಎಂಜಲೀಸ್ ಜೈಲಿನಲ್ಲಿರುವ ರಾಣಾ, ನವೆಂಬರ್ 13ರಂದು ಅಮೆರಿಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭಾರತಕ್ಕೆ ಗಡೀಪಾರು ಮಾಡದಂತೆ ಮನವಿ ಮಾಡಿದ್ದರು. ಆದರೆ ಜನವರಿ 21ರಂದು ಈ ಮನವಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಳ್ಳಿ ಹಾಕಿತ್ತು.
166 ಜನರನ್ನು ಬಲಿ ಪಡೆದ 2008ರ ಮುಂಬೈ ದಾಳಿಯಲ್ಲಿ ಕೆಲ ಅಮೆರಿಕನ್ನರು ಸಂತ್ರಸ್ತರಾಗಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ತನಿಖಾ ಏಜೆನ್ಸಿಗಳು ಈಗಾಗಲೇ ಈತನನ್ನು ಬಂಧಿಸಿ, ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿವೆ. ಆ ಶಿಕ್ಷೆ ಮುಗಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ರಾಣಾನನ್ನು ತನಗೆ ನೀಡಬೇಕೆಂದು ಅಮೆರಿಕವನ್ನು ಕೋರಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳನ್ನು ನೀಡಿ ರಾಣಾ ತನ್ನನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದಲ್ಲಿ ಕೋರ್ಟ್‌ಗೆ ಹೋಗಿದ್ದ. ಆಗಸ್ಟ್ ತಿಂಗಳಲ್ಲಿ ಅಮೆರಿಕದ ಮೇಲ್ಮನವಿ ನ್ಯಾಯಾಲಯ ಗಡೀಪಾರು ಮಾಡಲು ಒಪ್ಪಿಗೆ ಸೂಚಿಸಿತ್ತು. ಆದರೆ ಈ ತೀರ್ಪು ಪ್ರಶ್ನಿಸಿ ಅಮೆರಿಕ ಸುಪ್ರೀಂ ಕೋರ್ಟ್ ಕದ ತಟ್ಟಿದ ರಾಣಾಗೆ ಇದೀಗ ತೀವ್ರ ಹಿನ್ನಡೆಯಾಗಿದೆ.
ಇದೀಗ ಸುಪ್ರೀಂ ಕೋರ್ಟ್ ರಾಣಾ ಗಡೀಪಾರಿಗಿದ್ದ ಎಲ್ಲಾ ತೊಡಕುಗಳನ್ನು ನಿವಾರಿಸಿದೆ. ಸದ್ಯ ರಾಣಾನನ್ನು ಟ್ರಂಪ್ ಸರ್ಕಾರ ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ. ರಾಣಾ ಗಡೀಪಾರು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಅತೀ ದೊಡ್ಡ ಕಾನೂನಾತ್ಮಕ ಗೆಲುವಾಗಿದೆ.
ಮುಂಬೈ ದಾಳಿ ಸಂಚುಕೋರ ರಾಣಾ ಅಮೆರಿಕದಲ್ಲಿ ಬಂಧನ!