ಆಸ್ಟ್ರೇಲಿಯನ್ ಓಪನ್: ಜೋಕೋವಿಚ್ 25ನೇ ಗ್ರ್ಯಾನ್‌ಸ್ಲಾಂ ಕನಸು ಭಗ್ನ!
ಆಸ್ಟ್ರೇಲಿಯನ್ ಓಪನ್‌ನಲ್ಲಿ ನೋವಾಕ್ ಜೋಕೋವಿಚ್ ಗಾಯದ ಸಮಸ್ಯೆಯಿಂದಾಗಿ ಸೆಮಿಫೈನಲ್‌ನಿಂದ ಹೊರಬಿದ್ದಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರವ್ ವಿರುದ್ಧದ ಪಂದ್ಯದಲ್ಲಿ ಎಡ ಗಾಲಿನ ಗಾಯ ಉಲ್ಬಣಗೊಂಡ ಕಾರಣ ಪಂದ್ಯದಿಂದ ನಿವೃತ್ತಿ ಘೋಷಿಸಿದರು. ಜ್ವೆರವ್ ಫೈನಲ್‌ನಲ್ಲಿ ಸಿನ್ನರ್‌ರನ್ನು ಎದುರಿಸಲಿದ್ದಾರೆ.
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಾಂಪಿಯನ್ ಆಗಿ ಐತಿಹಾಸಿಕ 25ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಎತ್ತಿಹಿಡಿಯವ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್' ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಶುಕ್ರವಾರ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರವ್ ವಿರುದ್ಧ ಸೆಣಸುತ್ತಿದ್ದಾಗ ನೋವಾಕ್ ಎಡ ಗಾಲಿನ ಗಾಯ ಉಲ್ಬಣಿಸಿ ತೀವ್ರ ನೋವಿಗೆ ಒಳಗಾದ ಕಾರಣ, ಪಂದ್ಯದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದರು.
ಮೊದಲ ಸೆಟ್ 7-5ರಲ್ಲಿ ಜೈರೆವ್ ಪಾಲಾಗಿತ್ತು. ಕಳೆದ ವರ್ಷ ಫ್ರೆಂಚ್ ಓಪನ್‌ನ ಕ್ವಾರ್ಟರ್ ಫೈನಲ್ ವೇಳೆ ಮಂಡಿ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದಿದ್ದ ಜೋಕೋವಿಚ್, ಶಸ್ತ್ರಚಿಕಿತ್ಸೆಗೆ ಒಳಗಾಗಿ 2 ತಿಂಗಳು ವಿಶ್ರಾಂತಿ ಪಡೆದಿದ್ದರು. ಟೆನಿಸ್‌ಗೆ ಮರಳಿದ ಬಳಿಕ ಅತ್ಯುತ್ತಮ ಲಯ ಪ್ರದರ್ಶಿಸಿದ್ದ ಜೋಕೋ, ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದರು. ಆದರೆ, ಕಾರ್ಲೋಸ್ ಆಲ್ಕರಜ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಆಡುವಾಗಲೇ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಜೋಕೋ, ತಮಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಒಂದು ವೇಳೆ ತಾವು ಮೊದಲ ಸೆಟ್ ಗೆದ್ದಿದ್ದರೂ ತಮ್ಮಿಂದ ಪಂದ್ಯದಲ್ಲಿ ಮುಂದು ವರಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಜೋಕೋವಿಚ್ ಹೇಳಿದ್ದಾರೆ. ಇನ್ನು, ಜೈರೆವ್ 3ನೇ ಬಾರಿಗೆ ಫೈನಲ್‌ಗೇರಿದ್ದು ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ.
ವಿಶ್ವಕಪ್ ಖೋ ಖೋ ವಿಜೇತ ತಂಡದ ರಾಜ್ಯದ ಆಟಗಾರರಿಗೆ ₹5 ಲಕ್ಷ ಬಹುಮಾನ; ಸಿಎಂ ಸಿದ್ದರಾಮಯ್ಯ
ಸಿನ್ನರ್‌ಗೆ ಸತತ 2ನೇ ಪ್ರಶಸ್ತಿ ಗೆಲ್ಲುವ ಗುರಿ
ವಿಶ್ವ ನಂ.1 ಆಟಗಾರ, ಇಟಲಿಯ ಯಾನ್ನಿಕ್ ಸಿನ್ನರ್ ಸತತ 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ 7-6(7/2), 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಸಿನ್ನರ್ ಸತತ 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆಲ್ಲಲು ಕಾಯುತ್ತಿದ್ದಾರೆ.
ಇಂದು ಫೈನಲ್‌ನಲ್ಲಿ ಸಬಲೆಂಕಾ - ಕೀಸ್ ಕದನ
ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಶನಿವಾರ ಹಾಲಿ ಚಾಂಪಿಯನ್ ಬೆಲಾರುಸ್‌ನ ಅರೈನಾ ಸಬಲೆಂಕಾ ಹಾಗೂ ಅಮೆರಿಕದ ಮ್ಯಾಡಿಸನ್ ಕೀಸ್ ಸೆಣಸಲಿದ್ದಾರೆ. 2023, 2024ರಲ್ಲಿ ಚಾಂಪಿಯನ್ ಆಗಿದ್ದ ಸಬಲೆಂಕಾ, ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮ್ಯಾಡಿಸನ್ ಚೊಚ್ಚಲ ಪ್ರಶಸ್ತಿ ಗೆಲ್ಲಲು ಕಾಯುತ್ತಿದ್ದಾರೆ.