ಕೆಣಕಿದವರು ಉಳಿದವರಿಲ್ಲ; ಹಿಜ್ಬುಲ್ಲಾ ಟಾಪ್ ಬಾಸ್‌ಗಳನ್ನ ಮಟಾಷ್ ಮಾಡಿರೋ ಇಸ್ರೇಲ್ ಸಾಮಾರ್ಥ್ಯ ಕೇಳಿದ್ರೆ ಶಾಕ್ ಆಗ್ತೀರಿ
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಹಿಜ್ಬುಲ್ಲಾ ಪ್ರವೇಶಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಸೇರಿದಂತೆ ಹಲವು ಉಗ್ರರನ್ನು ಹತ್ಯೆ ಮಾಡಿದೆ. ಇಸ್ರೇಲ್ ತನ್ನ ಸುತ್ತಮುತ್ತಲಿನ ಶತ್ರು ರಾಷ್ಟ್ರಗಳಿಗೆ ತನ್ನನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.
ಭೀಕರ ದಾಳಿ ನಡೆಸುವ ಇಸ್ರೇಲ್ ಸಾಮರ್ಥ್ಯಕ್ಕೆ ಇದೆ ದೊಡ್ಡ ಇತಿಹಾಸ
ಕಳೆದ ಅಕ್ಟೋಬರ್‌ನಲ್ಲಿ ಆರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇನ್ನು ಮುಂದುವರೆದಿರುವಾಗಲೇ ಅದಕ್ಕೆ ಇರಾನ್, ಲೆಬನಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಪ್ರವೇಶ ಮಾಡಿದ್ದಾರೆ. ಇಸ್ರೇಲ್ ಮೇಲೆ ರಾಕೆಟ್ ದಾಳಿ ಅದನ್ನು ಕೆಣಕುವ ಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಒಂದಾದ ಮೇಲೆ ಒಂದರಂತೆ ದಾಳಿ ಮೂಲಕ ಇಸ್ರೇಲ್ ತಿರುಗೇಟು ನೀಡುತ್ತಿದೆ. ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿ, ರೇಡಿಯೋ ಸ್ಫೋಟದಿಂದ ಆರಂಭವಾದ ಸಮರ ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಮತ್ತು ಆತನ 20ಕ್ಕೂ ಹೆಚ್ಚು ಆಪ್ತರ ಸಾವಿಗೆ ಕಾರಣವಾಗಿದೆ. ಇಂಥದ್ದೊಂದು ದಾಳಿಯ ಮೂಲಕ ತನ್ನನ್ನು ಕೆಣಕಲು ಬಂದವರನ್ನು ಸುಮ್ಮನೆ ಬಿಡಲ್ಲ ಎಂದು ಇಸ್ರೇಲ್ ತನ್ನ ಸುತ್ತಲೂ ಇರುವ ವೈರಿ ದೇಶಗಳಿಗೆ ಸಂದೇಶ ರವಾನಿಸಿದೆ. ಇಂಥದ್ದೊಂದು ಸಂದೇಶ ರವಾನೆ ರೀತಿಯ ಬಗ್ಗೆ ಇಸ್ರೇಲ್‌ನದ್ದು ಸುದೀರ್ಘ ಇತಿಹಾಸವೇ ಇದೆ.
ಹಿಜ್ಬುಲ್ಲಾ ಟಾಪ್ ಬಾಸ್‌ಗಳೇ ಸರ್ವನಾಶ
ಇಸ್ರೇಲ್ ವಿರುದ್ಧ ಯುದ್ಧದಲ್ಲಿ ಹಮಾಸ್‌ಗೆ ಹಿಜ್ಬುಲ್ಲಾ ಉಗ್ರರು ನೆರವು ನೀಡುತ್ತಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ ಸರಣಿಯಾಗಿ ಇಸ್ರೇಲ್‌ನ ಸೇನಾನೆಲೆ, ಜನವಸತಿ ಪ್ರದೇಶಗಳ ಮೇಲೆ ಹಿಜ್ಬುಲ್ಲಾಗಳು ರಾಕೆಟ್, ಕ್ಷಿಪಣಿ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲಿಗಳು ಉಗ್ರರು ಬಳಸುತ್ತಿದ್ದ ಪೇಜರ್, ವಾಕಿಟಾಕಿ, ರೇಡಿಯೋ ಸೆಟ್‌ಗಳನ್ನು ನಿಗೂಢ ರೀತಿಯಲ್ಲಿ ಸ್ಫೋಟಗೊಳಿಸಿ ನೂರಾರು ಉಗ್ರರ ಬಲಿ ಪಡೆದಿತ್ತು. ಏನಾಯಿತು ಎಂದು ಗೊತ್ತಾಗುವುದರೊಳಗೆ ಉಗ್ರರಿಗೆ ತಡೆಯಲಾಗದ ಏಟು ನೀಡಿತ್ತು. ಈ ದಾಳಿ ಬೆನ್ನಲ್ಲೇ ಹಿಜ್ಬುಲ್ಲಾದ ಪರಮೋಚ್ಚ ನಾಯಕ ಹಸನ್ ನಸ್ರಲ್ಲಾನನ್ನೇ ಇಸ್ರೇಲ್ ಕೊಂದು ಮುಗಿಸಿದೆ. ಬಂಕರ್‌ನಲ್ಲಿ ಅಡಗಿ ಕುಳಿತಿದ್ದ ನಸ್ರಲ್ಲಾನ ಬಿಲ ಹುಡುಕಿ, ನಿರ್ನಾಮ ಮಾಡಿದೆ. ನೆಲಮಟ್ಟದಿಂದ 60 ಅಡಿ ಆಳದ ಬಂಕರ್‌ನಲ್ಲಿದ್ದ ನಸ್ರಲ್ಲಾ ಮತ್ತು ಆತನ ಸಂಗಡಿಗರ ಸಭೆಯ ಸ್ಥಳದ ಮೇಲೆ ಇಸ್ರೇಲ್ ವಿಮಾನಗಳು 80 ಟನ್ ಬಾಂಬ್ ಹೊತ್ತ ಕ್ಷಿಪಣಿ ಮೂಲಕ ದಾಳಿ ನಡೆಸಿ ಒಂದೇ ಏಟಿಗೆ 20ಕ್ಕೂ ಹೆಚ್ಚು ನಾಯಕರನ್ನು ಕೊಂದು ಮುಗಿಸಿದೆ.
ನಿಗೂಢ, ಭೀಕರ ದಾಳಿ: ಇಸ್ರೇಲ್ ಸಾಮರ್ಥ್ಯಕ್ಕಿದೆ ದೊಡ್ಡ ಇತಿಹಾಸ
ಪುಟ್ಟ ದೇಶ ಇಸ್ರೇಲ್ ಸುತ್ತಲೂ ಹಲವು ವೈರಿ ದೇಶಗಳಿವೆ. ಅವು ಸದಾ ಇಸ್ರೇಲ್ ಅನ್ನು ನಾನಾ ರೀತಿಯಲ್ಲಿ ಕಾಡುತ್ತಿವೆ. ಆದರೂ ತನ್ನನ್ನು ಕೆಣಕಿದವರಿಗೆ ಈ ದೇಶ ಮತ್ತೆಂದೂ ಪುಟಿದೇಳುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತಿದೆ. ಇಸ್ರೇಲ್ ಬಳಸುವ ಶಸ್ತಾಸ್ತ್ರಗಳು , ರಕ್ಷಣಾ ಉಪಕರಣಗಳು, ಅವರ ನಿಗೂಢ ತಂತ್ರಗಾರಿಕೆ ವೈರಿಗಳಿಗೆ ತರ್ಕಕ್ಕೂ ನಿಲುಕದ್ದು. ಮುನ್ನುಗ್ಗಿ ಬರುವ ವಿರೋಧಿಗಳ ದಾಳಿಯನ್ನು ಹಿಮ್ಮೆಟಿಸಲು ಈ ದೇಶಕ್ಕೆ ಬಹುಮುಖ್ಯವಾಗಿ ನೆರವಾಗುವುದು ಐರನ್ ಡೋಮ್. ಎಂತಹದ್ದೇ ಹವಾಮಾನ ಪರಿಸ್ಥಿತಿಯಲ್ಲಿಯೂ ವೈರಿಗಳ ದಾಳಿಯನ್ನು ಎದುರಿಸಬಲ್ಲ ಈ ಐರನ್ ಡೋಮ್ ಕಡಿಮೆ ಸಾಮರ್ಥ್ಯ ಹೊಂದಿರುವ ರಾಕೆಟ್ , ಪಿರಂಗಿ ಶೆಲ್‌ಗಳ ದಾಳಿಯನ್ನು ಎದುರಿಸುತ್ತದೆ.
ಇಸ್ರೇಲ್‌ಗೆ ದೊಡ್ಡ ಬಲ ಮೊಸಾದ್
ತನ್ನ ಎದುರಾಳಿಗಳನ್ನು ಅವರ ಅರಿವಿಗೆ ಕಿಂಚಿತ್ತೂ ಬರದಂತೆ ಗಮನಿಸುವ ಮತ್ತು ನಿಖರವಾಗಿ ಅವರ ಮೇಲೆ ದಾಳಿ ನಡೆಸುವ ತನ್ನ ಸಾಮರ್ಥ್ಯವನ್ನು ಇಸ್ರೇಲ್ ಪ್ರದರ್ಶಿಸುತ್ತಲೇ ಬಂದಿದೆ. ಅದರ ಹಿಂದೆ ಇಸ್ರೇಲ್‌ಗೆ ಬಹು ದೊಡ್ಡ ವರವಾಗಿರುವುದು ಇಸ್ರೇಲ್‌ನ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್. ವಿಶ್ವದಲ್ಲೇ ಬೇಹುಗಾರಿಕೆ ಸಂಸ್ಥೆಗಳ ಪೈಕಿ ಮೊಸ್ಸಾದ್ ಹೆಚ್ಚು ಪ್ರಖ್ಯಾತ. ಮೊಸ್ಸಾದ್ ಸಂಸ್ಥೆ ಇಸ್ರೇಲ್ ಹೊರಗೆ ತನ್ನ ಶತ್ರುಗಳ ಹತ್ಯೆ ನಡೆಸುವುದಕ್ಕೆ ಹೆಸರುವಾಸಿಯಾಗಿದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ಇತ್ತೀಚಿಗೆ ಇರಾನ್‌ನಲ್ಲಿ ನಡೆದ ಹಮಾಸ್ ನಾಯಕನ ಹತ್ಯೆ.
ಸೆ.14ರಂದು ಹಿಜ್ಬುಲ್ಲಾ ಉಗ್ರ ಸಂಘಟನೆ ನಡುಗಿಸಿದ ಪೇಜರ್ ಸ್ಫೋಟದ ಹಿಂದೆ ಇರುವುದು ಕೂಡ ಇದೇ ಮೊಸಾದ್ ಕೈವಾಡ. ಪೇಜರ್‌ನಲ್ಲಿರುವ ರೆಡಿಯೋ ತರಂಗಗಳನ್ನು ಹ್ಯಾಕ್ ಮಾಡಿ , ಅದನ್ನು ಸ್ಫೋಟಿಸುವ ಹಿಂದೆ ಮೊಸಾದ್ ತಂತ್ರವಿತ್ತು ಎಂದು ಹಿಜ್ಬುಲ್ಲಾ ಉಗ್ರರೇ ಆರೋಪಿಸಿದ್ದರು. ಆಗಸ್ಟ್ 1 ರಂದು ಇರಾನ್‌ನಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಹಮಾಸ್ ನಾಯಕ ಹನಿಯೇ, ರಾಜಧಾನಿ ಟೆಹರಾನ್‌ನಲ್ಲಿ ತನ್ನ ಮನೆಗೆ ಮರಳಿದ್ದರು. ಆಗ ಮನೆಯಲ್ಲಿಯೇ ಆತನನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಇಸ್ರೇಲ್ ನಡೆದ ವೈಮಾನಿಕ ದಾಳಿಯೆ ಕಾರಣ ಎನ್ನಲಾಗಿದೆ.
ಏಕಕಾಲಕ್ಕೆ 5 ಕಡೆ ಯುದ್ಧ ಇಸ್ರೇಲ್ ಹೆಗ್ಗಳಿಕೆ
1. ಹಮಾಸ್ ಉಗ್ರರಿಂದ ಯುದ್ಧಕ್ಕೆ ನಾಂದಿ: ಪ್ಯಾಲೆಸ್ತೇನ್‌ನ ಉಗ್ರ ಗುಂಪಾದ ಹಮಾಸ್ ಅ.7ರಂದು ದಕ್ಷಿಣ ಇಸ್ರೇಲ್‌ನ ಮೇಲೆ ಅಸಂಖ್ಯ ರಾಕೆಟ್ ಹಾರಿಸಿ ಅನಿರೀಕ್ಷಿತ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ತೇನ್‌ನ ಗಾಜಾದ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸಿತು. ಈ ಮೂಲಕ ಒಂದು ಕಡೆ ಉಗ್ರರ ವಶವಾಗಿದ್ದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದ ಇಸ್ರೇಲ್, ಮತ್ತೊಂದೆಡೆ ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಹೊಸಕಿಹಾಕುವ ಸಲುವಾಗಿ ಅವರ ಮೂಲಸೌಕರ್ಯ, ಸಿಬ್ಬಂದಿ ಮತ್ತು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು.
2. ಹಿಜ್ಬುಲ್ಲಾ ಉಗ್ರರೊಂದಿಗೆ ಮುಖಾಮುಖಿ: ಲೆಬನಾನ್ ಮೂಲದ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಉತ್ತರ ಇಸ್ರೇಲ್‌ನ ಮೇಲೆ ರಾಕೆಟ್, ಮಿಸೈಲ್ ಹಾಗೂ ಡ್ರೋನ್‌ಗಳನ್ನು ಬಳಸಿ ಮುಗಿಬಿದ್ದರು. ಇದಕ್ಕೆ ಉತ್ತರವಾಗಿ ತಿರುಗಿಬಿದ್ದ ಇಸ್ರೇಲ್ ಸೇನೆ ಹಿಜ್ಬುಲ್ಲಾಗಳ ಉನ್ನತ ಅಧಿಕಾರಿಗಳನ್ನು ಹೊಡೆದುರುಳಿಸತೊಡಗಿತು. ಇದಕ್ಕೆ ಇತ್ತೀಚೆಗೆ ಬಲಿಯಾದುದು ನಾಯಕ ಹಸನ್ ನಸ್ರಲ್ಲಾ ಮತ್ತು ಉಪ ಮುಖ್ಯಸ್ಥ ನಬಿಲ್ ಕೌಕ್. ಜೊತೆಗೆ ಹಿಜ್ಬುಲ್ಲಾಗಳು ಸಂವಹನಕ್ಕೆ ಬಳಸುತ್ತಿದ್ದ ವಾಕಿಟಾಕಿಗಳನ್ನೂ ಸ್ಫೋಟಿಸುವ ಮೂಲಕ ಅವರ ಸಂಘಟನಾ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ನೀಡಿತು.
3. ಹೌತಿಗಳ ಹುಟ್ಟಡಗಿಸಿದ ಇಸ್ರೇಲ್: ಮೆಡಿಟರೇನಿಯನ್ ಮತ್ತು ಅರೇಬಿಯನ್ ಸಮುದ್ರಗಳ ನಡುವೆ ಸಂಚರಿಸುವ ಹಡಗುಗಳ ಮೇಲೆ ದಾಳಿ ಮಾಡಿ ತನ್ನ ಸಾಗರಯಾನಕ್ಕೆ ಅಡ್ಡಿಪಡಿಸುತ್ತಿದ್ದ ಯೆಮೆನ್‌ನ ಹೌತಿಗಳ ಮೇಲೆ ಮುಗಿಬಿದ್ದ ಇಸ್ರೇಲ್, ಈ ಮೂಲಕ ಇರಾನ್‌ನ ಪ್ರಾದೇಶಿಕ ಪ್ರಾಬಲ್ಯಕ್ಕೂ ಪೆಟ್ಟು ಕೊಡಲು ಮುಂದಾಯಿತು. ಹಿಜ್ಬುಲ್ಲಾಗಳ ಮೇಲಿನ ದಾಳಿಗೆ ಪ್ರತಿಯಾಗಿ ಇಸ್ರೇಲ್‌ನತ್ತ ಮಿಸೈಲ್ ಮತ್ತು ಡ್ರೋನ್ ಹಾರಿಸಿ ಹೌತಿಗಳು ಮೆರೆದ ಪುಂಡಾಟಕ್ಕೆ ಪ್ರತಿಯಾಗಿ ಯೆಮೆನ್‌ನ ವಿದ್ಯುತ್ ಸ್ಥಾವರಗಳು ಮತ್ತು ಬಂದರುಗಳ ಮೇಲೆ ಇಸ್ರೇಲ್ ತನ್ನ ಯುದ್ಧ ವಿಮಾನಗಳನ್ನು ಬಳಸಿ ಮುಗಿಬಿತ್ತು.
4. ಇರಾಕ್, ಸಿರಿಯಾ ಉಗ್ರರಿಗೂ ಪೆಟ್ಟು: ಇರಾನ್ ಬೆಂಬಲಿತ ಇರಾಕ್ ಮತ್ತು ಸಿರಿಯಾ ಉಗ್ರರನ್ನೂ ಇಸ್ರೇಲ್ ಸೇನೆ ಸೆದೆಬಡಿಯಿತು. ಇದರಲ್ಲಿ ಪ್ರಮುಖವಾದುದು ಇರಾಕ್‌ನ ಅಲ-ನುಜಬಾ ಸಶಸ್ತ್ರ ಚಳುವಳಿಯನ್ನು ಗುರಿಯಾಗಿಸಿ ನಡೆಸಿದ ದಾಳಿ. ಶಿಯಾ ಪಂಗಡಕ್ಕೆ ಸೇರಿದ ಈ ಉಗ್ರ ಗುಂಪುಗಳು ಹಲವು ಸ್ಥಳೀಯ ಸಂಘರ್ಷ ಮತ್ತು ಯುದ್ಧಗಳಲ್ಲಿ ತೊಡಗಿದ್ದು, ಇಸ್ರೇಲ್ ಇವುಗಳ ಸಾಮಾನ್ಯ ಶತ್ರುವಾಗಿದ್ದ ಕಾರಣ ಪುಟಾಣಿ ದೇಶದ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದವು. ಯುದ್ಧದಲ್ಲಿ ಇವುಗಳ ಉಪಸ್ಥಿತಿ ಹೆಚ್ಚು ವರದಿಯಾಗದಿದ್ದರೂ, ಇವು ಇಸ್ರೇಲ್ ಪಾಲಿಗೆ ಸಮರವನ್ನು ಕ್ಲಿಷ್ಟಕರಗೊಳಿಸಿವೆ.
5. ಇರಾನ್ ಪ್ರಾಕ್ಸಿಗಳೊಂದಿಗೆ ಸಮರ: ಇಸ್ರೇಲ್‌ನ ಸರ್ವನಾಶವೇ ಪಶ್ಚಿಮ ಏಷ್ಯಾದ ಸಮಸ್ಯೆಗಳಿಗೆ ಸಮಾಧಾನ ಎಂದು ನಂಬಿರುವ ಇರಾನ್, ಹಮಾಸ್, ಹಿಜ್ಬುಲ್ಲಾ, ಹೌತಿ, ಇರಾಕ್ ಮತ್ತು ಸಿರಿಯಾದ ಉಗ್ರರಿಗೆ ಹಣಕಾಸು, ಶಸ್ತ್ರಾಸ್ತ್ರ ಹಾಗೂ ಯುದ್ಧತಂತ್ರಗಳ ಮೂಲಕ ಸಹಕರಿಸುತ್ತಿತ್ತು. ಸಿರಿಯಾದ ತನ್ನ ರಾಯಭಾರ ಕಚೇರಿ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್ ಏಪ್ರಿಲ್‌ನಲ್ಲಿ ಮೊದಲ ಬಾರಿ ತನ್ನ ಭೂಪ್ರದೇಶದಿಂದ ನೇರವಾಗಿ ಡ್ರೋನ್, ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿತ್ತು. ಇದರಿಂದ ಕೆರಳಿದ ಇಸ್ರೇಲ್ ಅದರ ಪ್ರಾಕ್ಸಿಗಳ ಮೇಲೆ ಮುಗಿಬಿದ್ದು, ಪ್ರತಿಕಾರ ತೀರಿಸಿಕೊಳ್ಳುತ್ತಿದೆ.
60 ಅಡಿ ಆಳದಲ್ಲಿದ್ದರೂ ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆಗೈದ ಇಸ್ರೇಲ್! ಬಾಂಬ್ ಶಬ್ದಕ್ಕೆ ಬೆಚ್ಚಿ ಸತ್ತಿರುವ ಶಂಕೆ