ದಿವಾಳಿಯ ಅಂಚಿನಲ್ಲಿದ್ದರೂ, ಸಂಸದರ ನಿಧಿಯನ್ನು ಏರಿಸಿದ ಪಾಕಿಸ್ತಾನ ಸರ್ಕಾರ!
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅಂತಾರಲ್ಲ.. ಪಾಕಿಸ್ತಾನದ ಕಥೆ ಅದೇ ರೀತಿ ಆಗಿದೆ. ದೇಶ ದಿವಾಳಿಯಾಗುವ ಹಂತ ತಲುಪಿದ್ದರೂ, ಪಾಕಿಸ್ತಾನದಲ್ಲಿ ಸಂಸದರ ನಿಧಿಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ನ್ಯಾಯಮೂರ್ತಿಗಳ ಮನೆಗಳ ನವೀಕರಣಕ್ಕೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ನವದೆಹಲಿ (ಜ.27): ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಸಂಕಷ್ಟಗಳು ಸದ್ಯದಲ್ಲಿ ಅಂತ್ಯ ಕಾಣುವ ಹಾಗೆ ಕಾಣುತ್ತಿಲ್ಲ. ಶುಕ್ರವಾರ ಸತತ ಎರಡನೇ ದಿನವೂ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ 11.17 ರೂಪಾಯಿ ಕುಸಿತ ಕಂಡಿದೆ. ಇದರರ್ಥ ಪಾಕಿಸ್ತಾನವು ಈಗ ವಿದೇಶದಿಂದ ಏನನ್ನಾದರೂ ಆಮದು ಮಾಡಿಕೊಳ್ಳಬೇಕಾದಲ್ಲಿ ಪ್ರತಿ ಡಾಲರ್‌ಗೆ 266 ಪಾಕಿಸ್ತಾನ ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಈ ನಡುವೆ, ಪಾಕಿಸ್ತಾನದ ಸಂಸದರಿಗೆ ಮೀಸಲಾಗಿರುವ ನಿಧಿಯಲ್ಲಿ 30% ರಷ್ಟು ಏರಿಕೆ ಮಾಡಲಾಗಿದೆ. ಬುಧವಾರ ನಡೆದ ಆರ್ಥಿಕ ಸಮನ್ವಯ ಸಮಿತಿ (ಇಸಿಸಿ) ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಾನ್ ಪತ್ರಿಕೆಯ ವರದಿ ಪ್ರಕಾರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆ ಮತ್ತು ವಿಶ್ರಾಂತಿ ಗೃಹಗಳ ನಿರ್ವಹಣೆಗೆ ಬರೋಬ್ಬರಿ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಪಾಕಿಸ್ತಾನದ ಅಭಿವೃದ್ಧಿಗೆ ಸಂಸದರ ನಿಧಿಗೆ 90 ಸಾವಿರ ಕೋಟಿ: ಇಸಿಸಿ ಸಭೆಯಲ್ಲಿ ಅಲ್ಲಿನ ಸಂಸದರಿಗೆ 90 ಸಾವಿರ ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಅಭಿವೃದ್ಧಿ ನಿಧಿಯಾಗಿ ನೀಡಲು ನಿರ್ಧರಿಸಲಾಗಿದೆ. ಇಸಿಸಿ ಸಭೆಯ ಅಧ್ಯಕ್ಷತೆಯನ್ನು ಹಣಕಾಸು ಸಚಿವ ಇಶಾಕ್ ದಾರ್ ವಹಿಸಿದ್ದರು ಎಂದು ಡಾನ್ ವರದಿ ಮಾಡಿದೆ. ಗರ್ಭಾವಸ್ಥೆಯ ಪರೀಕ್ಷೆಗೆ ಬಳಸುವ ಔಷಧಿಗಳ ಬೆಲೆಯಲ್ಲಿ ಶೇ.25 ರಷ್ಟು ಹೆಚ್ಚಳಕ್ಕೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇನ್ನೊಂದೆಡೆ ಇತರೆ 54 ಔಷಧಿಗಳ ಬೆಲೆ ನಿಗದಿ ನಿರ್ಧಾರವನ್ನು ಸಭೆ ಮುಂದೂಡಿಕೆ ಮಾಡಿದೆ.
ಪೆಟ್ರೋಲ್ ಲೀಟರ್‌ಗೆ 300 ರೂಪಾಯಿ: ಪಾಕಿಸ್ತಾನದ ರೂಪಾಯಿ ಎರಡು ದಿನಗಳಲ್ಲಿ 10% ಕ್ಕಿಂತ ಹೆಚ್ಚು ಕುಸಿತವನ್ನು ದಾಖಲಿಸಿದೆ, ಅಂತಹ ಪರಿಸ್ಥಿತಿಯಲ್ಲಿ ವಸ್ತುಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಲಿದೆ ಎಂದು ಡಾನ್ ತನ್ನ ವರದಿಯಲ್ಲಿ ಬರೆದಿದೆ. ಅದೇ ಸಮಯದಲ್ಲಿ ಬಡ್ಡಿದರಗಳು ಸಹ ಹೆಚ್ಚಾಗುತ್ತವೆ. ಪಾಕಿಸ್ತಾನದ ಕೊರಂಗಿ ಅಸೋಸಿಯೇಶನ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರು ಅಲ್ಲಿನ ಪೆಟ್ರೋಲ್ ಬೆಲೆ ಲೀಟರ್‌ಗೆ 300 ರೂಪಾಯಿ ಆಗುವ ಸಾಧ್ಯತೆ ಇದೆ ಎಂದಿಇದ್ದಾರೆ. ವರದಿಯೊಂದರ ಪ್ರಕಾರ ಜನವರಿ 16 ರಿಂದ ಪಾಕಿಸ್ತಾನದಲ್ಲಿ ಪೆಟ್ರೋಲ್ ಲೀಟರ್ ಗೆ 214 ರೂಪಾಯಿ ಆಗಿದೆ. ಸಾಲ ತೆಗೆದುಕೊಳ್ಳುವುದು ದುಬಾರಿಯಾದ ತಕ್ಷಣ, ಪಾಕಿಸ್ತಾನದಲ್ಲಿ ಕೈಗಾರಿಕೆಗಳು ಬಾಗಿಲು ಮುಚ್ಚಲಿವೆ ಮತ್ತು ಜನರು ಉದ್ಯೋಗದಿಂದ ವಜಾ ಆಗುತ್ತಾರೆ ಎಂದು ವ್ಯಾಪಾರಿಗಳು ಭಯಪಟ್ಟಿದ್ದಾರೆ.
ಆರ್ಥಿಕ ಆಘಾತದ ಜೊತೆಗೆ ಅಂತರ್ಯುದ್ಧಕ್ಕೆ ಸಿದ್ಧವಾಯ್ತಾ ಪಾತಕಿಸ್ತಾನ್?
ಪೆಟ್ರೋಲ್ ಬೆಲೆ ಏರಿಕೆ ಮಾಡಿ ಎಂದ ಐಎಂಎಫ್: ಪಾಕಿಸ್ತಾನ ಸರ್ಕಾರ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 6 ಶತಕೋಟಿ ಅಮೆರಿಕನ್ ಡಾಲರ್ ಸಹಾಯವನ್ನು ಕೋರಿತ್ತು. ಆದರೆ, ಸಹಾಯ ಕೈತಲುಪುವ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲು ಷರತ್ತುಗಳನ್ನು ವಿಧಿಸಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವಾದ್ಯಂತ ಇಂಧನ ಬೆಲೆಯಲ್ಲಿ ಹೆಚ್ಚಳದ ನಡುವೆ ಪಾಕಿಸ್ತಾನದ ಹಿಂದಿನ ಇಮ್ರಾನ್ ಸರ್ಕಾರ ಇಂಧನ ಬೆಲೆಗಳಲ್ಲಿ ಸಬ್ಸಿಡಿ ಘೋಷಿಸಿತ್ತು. ಈಗ ಈ ವರ್ಷದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶೆಹಬಾಜ್ ಷರೀಫ್ ಸರ್ಕಾರವು ಬೆಲೆ ಏರಿಕೆಯಂತಹ ಯಾವುದೇ ಜನಪ್ರಿಯವಲ್ಲದ ಕ್ರಮವನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ.
2019ರಲ್ಲಿ ಭಾರತ - ಪಾಕ್ ಪರಮಾಣು ಯುದ್ಧ ಮಾಡುವುದರಲ್ಲಿತ್ತು, ಅಮೆರಿಕ ಅದನ್ನು ತಡೆದಿದೆ: ಮೈಕ್ ಪಾಂಪಿಯೊ
ವಿಶ್ಲೇಷಕರನ್ನು ಉಲ್ಲೇಖಿಸಿ, ಫೈನಾನ್ಷಿಯಲ್ ಟೈಮ್ಸ್ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯು "ಸಮರ್ಥನೀಯವಾಗುವುದಿಲ್ಲ" ಎಂದು ವರದಿ ಮಾಡಿದೆ ಮತ್ತು ಪರಿಸ್ಥಿತಿ ಮುಂದುವರಿದರೆ ಶ್ರೀಲಂಕಾದಂತೆಯೇ ಪಾಕಿಸ್ತಾನದ ಪರಿಸ್ಥಿತಿ ಆಗುತ್ತದೆ. "ಪರಿಸ್ಥಿತಿ ಮುಂದುವರಿದರೆ" ಮೇ ತಿಂಗಳಲ್ಲಿ ದೇಶವು ಡೀಫಾಲ್ಟ್ ಆಗಬಹುದು ಎಂದು ಪ್ರಕಟಣೆ ಎಚ್ಚರಿಸಿದೆ.