ಕರಾಚಿಯಲ್ಲಿ 50 ರೂಪಾಯಿಗೆ ಎಲ್ಲಾ ವಸ್ತುಗಳ ಆಫರ್ ನೀಡಿದ 'ಡ್ರೀಮ್ ಬಜಾರ್' ಅಂಗಡಿ ಲೂಟಿಗೆ ಒಳಗಾಗಿದೆ. ಉದ್ಘಾಟನಾ ದಿನದಂದೇ ಸಾವಿರಾರು ಜನರು ನುಗ್ಗಿ ಅಂಗಡಿಯನ್ನು ಖಾಲಿ ಮಾಡಿದ್ದಾರೆ.
ಇಸ್ಲಾಮಾಬಾದ್: ಶುಕ್ರವಾರ ಕರಾಚಿಯಲ್ಲಿ 'ಡ್ರೀಮ್ ಬಜಾರ್' ಹೆಸರಿನಲ್ಲಿ ಸ್ಟೋರ್ ಉದ್ಘಾಟನೆ ಮಾಡಲಾಯ್ತು. ಮಳಿಗೆಯ ಉದ್ಘಾಟನೆಗಾಗಿ ಮಾಲೀಕರು ಅದ್ದೂರಿ ಕಾರ್ಯಕ್ರಮ ಆಯೋಜನೆ ಜೊತೆ ಡಿಸ್ಕೌಂಟ್ ಸಹ ಘೋಷಿಸಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಡ್ರೀಮ್ ಬಜಾರ್ ಬಗ್ಗೆ ಪ್ರಚಾರ ನಡೆಸಲಾಗಿತ್ತು. ಕರಾಚಿ ನಗರದಲ್ಲಿಯೂ ಡ್ರೀಮ್ ಬಜಾರ್ ವಿವಿಧ ಮಾಧ್ಯಮಗಳು ಮುಖೇನ ಪ್ರಚಾರ ನೀಡಲಾಗಿತ್ತು. ಪ್ರಚಾರದಲ್ಲಿ ಯಾವುದೇ ವಸ್ತು ತೆಗೆದುಕೊಂಡರೂ ಅದರ ಬೆಲೆ ಕೇವಲ 50 ಪಾಕಿಸ್ತಾನಿ ರೂಪಾಯಿ ಎಂದು ತಿಳಿಸಲಾಗಿತ್ತು. ಆದರೆ ಇದು ಇಡೀ ಮಳಿಗೆಯ ಲೂಟಿಗೆ ಕಾರಣವಾಗುತ್ತೆ ಎಂದು ಮಾಲೀಕನಿಗೆ ಸಣ್ಣ ಸುಳಿವೂ ಸಹ ಇರಲಿಲ್ಲ.
ಡ್ರೀಮ್ ಬಜಾರ್ ಸ್ಟೋರ್ ಓಪನ್ ಆಗುತ್ತಿದ್ದಂತೆ ಮಳಿಗೆ ಮುಂದೆ ಸಾವಿರಾರು ಜನರು ಆಗಮಿಸಿದ್ದರು. ಮಳಿಗೆ ಓಪನ್ ಆಗುತ್ತಿದ್ದಂತೆ ಒಳಗೆ ನುಗ್ಗಿದ ಸಾವಿರಾರು ಕೇವಲ ಅರ್ಧ ಗಂಟೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. 30 ನಿಮಿಷದಲ್ಲಿ ತನ್ನ ಸ್ಟೋರ್ ಖಾಲಿ ಆಗಿರೋದನ್ನು ಕಂಡು ಮಾಲೀಕ ಅಕ್ಷರಶಃ ಶಾಕ್ ಆಗಿದ್ದರು. ಇಷ್ವೊಂದು ಜನರು ಬರುತ್ತಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಬೆರಳಿಣಿಕೆಯಷ್ಟಿದ್ದ ಸಿಬ್ಬಂದಿಗೂ ಜನರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನಿಯರು ಡ್ರೀಮ್ ಬಜಾರ್ ಲೂಟಿ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಳಿಗೆ ಲೂಟಿ ವಿಡಿಯೋ ನೋಡಿದ ನೆಟ್ಟಿಗರು, ಇದೊಂದು ಮೆಗಾ ಲೂಟಿ, ಅತಿಯಾದ ಪ್ರಚಾರದಿಂದ ಈ ರೀತಿ ಆಗಿದ್ದು ಇದು ಮೊದಲು ಇರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಸ್ಟೋರ್ ಸಿಬ್ಬಂದಿ ದೊಡ್ಡ ದೊಡ್ಡ ಪೈಪ್ ತೆಗೆದುಕೊಂಡು ಮಳಿಗೆಯಿಂದ ದೂರ ಕಳುಹಿಸುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹಣದುಬ್ಬರದಿಂದ ತತ್ತರಿಸುತ್ತಿರುವ ಕಾರಣ ಇಂತಹ ಘಟನೆಗಳು ನಡೆಯಲು ಕಾರಣ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾತಾಳಲೋಕ ನೋಡಲು ಹೋದವರಿಗಾಯ್ತು ಕೆಲವೇ ಕ್ಷಣದಲ್ಲಾಯ್ತು ಪಶ್ಚಾತ್ತಾಪ: ಹೊರಬಂತು ಭಯಾನಕ ವಿಡಿಯೋ!
ARY ವರದಿ ಪ್ರಕಾರ, ಜನರು ನಿಯಂತ್ರಣಕ್ಕೆ ಸಿಗದಿದ್ದಾಗ ಮಾಲೀಕರು ಡ್ರೀಮ್ ಬಜಾರ್ ಬಾಗಿಲು ಮುಚ್ಚಿದ್ರು. ಆದರೂ ಕೆಲವರು ದೊಣ್ಣೆಗಳಿಂದ ಮಳಿಗೆಯ ಗಾಜು ಒಡೆದು ಒಳಗೆ ನುಗ್ಗಿದ್ದಾರೆ. ಇನ್ನು ಮಳಿಗೆ ಮುಂದೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಂತೆ ಪ್ರಮುಖ ರಸ್ತೆಗಳಲ್ಲಿ ದೊಡ್ಡಮಟ್ಟದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಡ್ರೀಮ್ ಬಜಾರ್ ಮಾಲೀಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಮಳಿಗೆಯನ್ನು ಭಾಗಶಃ ದೋಚಲಾಗಿದೆ ಎಂದು ಹೇಳಿದ್ದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದರೂ ಸ್ಥಳದಲ್ಲಿ ಯಾವುದೇ ಪೊಲೀಸರು ಇರಲಿಲ್ಲ ಎಂದು ವರದಿಯಾಗಿದೆ.
ಮಧ್ಯಾಹ್ನ 3 ಗಂಟೆಗೆ ಸ್ಟೋರ್ ಓಪನ್ ಮಾಡಲಾಗಿತ್ತು. 3.30ರ ವೇಳೆಗೆ ಎಲ್ಲಾ ವಸ್ತುಗಳನ್ನು ಜನರು ಎತ್ತಿಕೊಂಡು ಹೋಗಿದ್ದಾರೆ. ಕರಾಚಿಯ ಜನತೆಯ ಲಾಭಕ್ಕಾಗಿ ಕಡಿಮೆ ಬೆಲೆಯ ಸ್ಟೋರ್ ಆರಂಭಿಸಲಾಗಿತ್ತು. ಆದ್ರೆ ಓಪನಿಂಗ್ ದಿನವೇ ಅರಾಜಕತೆ ಸೃಷ್ಟಿಯಾಗಿದ್ದರಿಂದ ಮಾಲೀಕರು ಸಾಕಷ್ಟು ನಷ್ಟ ಎದುರಿಸುವಂತಾಯ್ತು. ಕರಾಚಿಯಲ್ಲಿ ಯಾರೂ ಬಂಡವಾಳ ಹೂಡಿಕೆಗೆ ಮುಂದಾಗಲ್ಲ. ಒಂದು ವೇಳೆ ಹೂಡಿಕೆಗೆ ಮುಂದಾದ್ರೆ ಇಂತಹ ಪರಿಸ್ಥಿತಿ ಉಂಟಾಗುತ್ತೆ ಎಂದು ಡ್ರೀಮ್ ಬಜಾರ್ ಉದ್ಯೋಗಿ ಹೇಳಿಕೆ ನೀಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಉದ್ಯಮಿಯೊಬ್ಬರು ಡ್ರೀಮ್ ಬಜಾರ್ ಮಾಲ್ ಆರಂಭಿಸಿದ್ದರು.
