ಶಿಂಜೋ ಅಬೆ ಬಳಿಕ ಜಪಾನ್ ಪ್ರಧಾನಿ ಹತ್ಯೆಗೂ ಯತ್ನ: ಕಿಶಿದಾ ಭಾಷಣ ಮಾಡ್ತಿದ್ದ ಸ್ಥಳದಲ್ಲಿ ಬಾಂಬ್ ಸ್ಫೋಟ
ಜುಲೈ 2022 ರಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಬಳಿಕ ಜಪಾನ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಟೋಕಿಯೋ, ಜಪಾನ್ (ಏಪ್ರಿಲ್ 15, 2023): ಕಳೆದ ವರ್ಷ ಜುಲೈನಲ್ಲಿ ಜಪಾನ್ ಪ್ರಧಾನಿಯಾಗಿದ್ದ ಶಿಂಜೋ ಅಬೆ ಅವರನ್ನು ಹತ್ಯೆ ಮಾಡಲಾಗಿತ್ತು. ಈಗ ಅದೇ ರೀತಿ, ಜಪಾನ್‌ನ ಪ್ರಸ್ತುತ ಪ್ರಧಾನಿ ಫೂಮಿಯೋ ಇಶಿದಾ ಅವರನ್ನೂ ಹತ್ಯೆ ಮಾಡಿರುವ ಪ್ರಯತ್ನ ನಡೆದಿದೆಯಾ ಎಂಬ ಅನುಮಾನ ಕಾಡ್ತಿದೆ. ಇದಕ್ಕೆ ಕಾರಣ ಜಪಾನ್ ಪ್ರಧಾನಿ ಭಾಷಣ ಮಾಡ್ತಿದ್ದ ಸ್ಥಳದಲ್ಲಿ ಬಾಂಬ್ ಸ್ಫೋಟ ನಡೆದಿದೆ.
ಜಪಾನ್ ಪ್ರಧಾನಿ ಫೂಮಿಯೋ ಕಿಶಿದಾ ಭಾಷಣ ಮಾಡ್ತಿದ್ದ ಸ್ಥಳದಲ್ಲಿ ಸ್ಫೋಟದ ಶಬ್ದ ಕೇಳಿದ ನಂತರ ಅವರನ್ನು ವಕಾಯಾಮಾದ ಬಂದರೊಂದರಿಂದ ಸ್ಥಳಾಂತರಿಸಲಾಗಿದೆ. ಆದರೆ ಈ ಘಟನೆಯಲ್ಲಿ ಅದೃಷ್ಟವಶಾತ್ ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಸ್ಥಳದಲ್ಲಿ ಸ್ಮೋಕ್ ಬಾಂಬ್ ಅನ್ನು ಎಸೆಯಲಾಗಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ಸೇರಿದಂತೆ ಹಲವಾರು ವರದಿಗಳು ಮಾಹಿತಿ ನೀಡಿವೆ. ಆದರೆ ಘಟನಾ ಸ್ಥಳದಲ್ಲಿ ಯಾರಿಗೂ ಗಾಯವಾಗಿರುವ ಬಗ್ಗೆ ಅಥವಾ ಹಾನಿಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
ಇನ್ನು, ಪಶ್ಚಿಮ ಜಪಾನ್‌ನ ವಕಾಯಾಮಾದಲ್ಲಿ ಫೂಮಿಯೋ ಕಿಶಿದಾ ಭಾಷಣ ಮಾಡಲು ಬಂದಿದ್ದ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಪ್ರಸಾರಕ NHK ಮತ್ತು ಇತರ ಮಾಧ್ಯಮಗಳು ತಿಳಿಸಿವೆ. ಆದರೆ, ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿಸಿದ್ದು, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣದ ವರದಿ ಈವರೆಗೆ ಬಂದಿಲ್ಲ. ಘಟನಾ ಸ್ಥಳದಲ್ಲಿ ಜನಸಂದಣಿಯು ಚದುರಿದಂತೆ ಭದ್ರತೆ ಮತ್ತು ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ ದೃಶ್ಯಗಳನ್ನು NHK ಪ್ರಸಾರ ಮಾಡಿದೆ.
ಜುಲೈ 2022 ರಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಬಳಿಕ ಜಪಾನ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಮಧ್ಯೆ, ಜಪಾನ್ ಉತ್ತರ ಸಪ್ಪೋರೋ ಮತ್ತು ನಾಗಾನೋದ ಕರುಯಿಜಾವಾ ನಗರದಲ್ಲಿ G7 ಮಂತ್ರಿಗಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವಾಗ ಹಾಗೂ ಮೇ ತಿಂಗಳಲ್ಲಿ ಹಿರೋಷಿಮಾದಲ್ಲಿ ನಡೆಯುವ ಶೃಂಗಸಭೆಗೆ ಮುಂಚಿತವಾಗಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಶಿಂಜೋ ಅಬೆ to ಇಂದಿರಾ ಗಾಂಧಿ, ಗುಂಡೇಟಿಗೆ ಬಲಿಯಾದ ಜನಪ್ರಿಯ ನಾಯಕರು!