ಇಸ್ರೇಲ್ ಸರ್ಜಿಕಲ್ ದಾಳಿ: ಗಾಜಾ ಉಗ್ರರ ಬಳಿ ಇದ್ದ 250 ಒತ್ತೆಯಾಳು ರಕ್ಷಣೆ; 60 ಹಮಾಸ್ ಉಗ್ರರ ಹತ್ಯೆ
ಕಿಬ್ಬುಟ್ಜ್ ಬರಿ, ಮಿಟ್ಜ್‌ವಾ ಸೋಫ, ಖಫರ್ ಗಾಜಾ, ಸಾದ್, ಮೆಫಾಸ್ಲಿಮ್, ನೀರ್ ಓಜ್ ಮೊದಲಾದ ಸ್ಥಳಗಳಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಒಟ್ಟು 250 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆ ವೇಳೆ ಒಟ್ಟು 60 ಹಮಾಸ್ ಉಗ್ರರನ್ನು ಹತ್ಯೆಗೈಯಲಾಗಿದೆ.
ಜೆರುಸಲೇಂ (ಅಕ್ಟೋಬರ್ 14, 2023): ವಿಶೇಷ ರಹಸ್ಯ ಕಾರ್ಯಾಚರಣೆಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಇಸ್ರೇಲ್ ಸೇನಾಪಡೆಯ ವಿಶೇಷ ವಿಭಾಗವಾದ ಸಾಯರೆಟ್ ಮಟ್ಕಲ್, ಗುರುವಾರ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಉಗ್ರರ ವಶದಲ್ಲಿದ್ದ 250 ಒತ್ತೆಯಾಳುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಗಾಜಾದ ವಿವಿಧ ಕಟ್ಟಡಗಳಲ್ಲಿ ಒತ್ತೆಯಾಳುಗಳನ್ನು ಇಡಲಾಗಿದ್ದ ಕಟ್ಟಡಗಳ ಮೇಲೆ ಯೋಜಿತ ದಾಳಿ ನಡೆಸಿದ ಇಸ್ರೇಲಿ ಯೋಧರು, ಒಂದೊಂದೇ ಕಟ್ಟಡದಲ್ಲಿ ಅಡಗಿದ್ದ ಉಗ್ರರನ್ನು ಗುಂಡಿಟ್ಟು ಹತ್ಯೆ ಮಾಡಿ, ಅದರಲ್ಲಿದ್ದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಬ್ಬುಟ್ಜ್ ಬರಿ, ಮಿಟ್ಜ್‌ವಾ ಸೋಫ, ಖಫರ್ ಗಾಜಾ, ಸಾದ್, ಮೆಫಾಸ್ಲಿಮ್, ನೀರ್ ಓಜ್ ಮೊದಲಾದ ಸ್ಥಳಗಳಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಒಟ್ಟು 250 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆ ವೇಳೆ ಒಟ್ಟು 60 ಹಮಾಸ್ ಉಗ್ರರನ್ನು ಹತ್ಯೆಗೈಯಲಾಗಿದೆ. ಜೊತೆಗೆ ಹಮಾಸ್‌ನ ದಕ್ಷಿಣ ನೌಕಾ ವಿಭಾಗದ ಕಮಾಂಡರ್ ಮುಹಮ್ಮದ್ ಅಬು ಆಲಿ ಸೇರಿದಂತೆ 26 ಉಗ್ರರನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೇಲಿ ಸೇನಾ ಪಡೆ ಮಾಹಿತಿ ನೀಡಿದೆ.
ಇದನ್ನು ಓದಿ: ಗಾಜಾಪಟ್ಟಿ ಒಳಗೆ ಇಸ್ರೇಲ್ ಸೇನೆ, ಯುದ್ಧ ಟ್ಯಾಂಕರ್ ಲಗ್ಗೆ: ಗುಳೆ ಹೊರಟ ಸಾವಿರಾರು ಜನ
ಯೋಧರು ಗುಂಪು ಶಸ್ತ್ರ ಸಜ್ಜಿತರಾಗಿ ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೋ ದೃಶ್ಯಗಳನ್ನು ಇಸ್ರೇಲಿ ಸೇನಾ ಪಡೆ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದೆ. ಒಂದು ವಿಡಿಯೋದಲ್ಲಿ ಉಗ್ರರ ಹತ್ಯೆಯ ಬಳಿಕ ಬಂಕರ್‌ನೊಳಗೆ ತೆರಳುವ ಯೋಧರು, ನೀವೆಲ್ಲಾ ಸುರಕ್ಷಿತವಾಗಿದ್ದೀರಿ. ಭಯಪಡಬೇಡಿ. ನಿಮಗೆ ಏನಾದರೂ ತಕ್ಷಣದ ವೈದ್ಯಕೀಯ ನೆರವು ಬೇಕೇ ಎಂದು ಕೇಳಿದ ಅಂಶಗಳಿವೆ.
ಇಸ್ರೇಲ್‌ನೊಳಗೆ ದಾಳಿ ನಡೆಸಿದ್ದ ಹಮಾಸ್ ಉಗ್ರರು ಕನಿಷ್ಠ 150 ಜನರನ್ನು ಅಪಹರಿಸಿ ಅವರನ್ನು ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದಾರೆ ಎಂದೇ ಹೇಳಿಕೊಂಡು ಬರಲಾಗಿತ್ತು. ಮತ್ತೊಂದೆಡೆ ಇಸ್ರೇಲಿ ಸೇನೆ ವಶದಲ್ಲಿರುವ ನಮ್ಮ ಸಾವಿರಾರು ಯೋಧರನ್ನು ಬಿಡಿಸಿಕೊಳ್ಳುವಷ್ಟು ಪ್ರಮಾಣದಲ್ಲಿ ಒತ್ತೆಯಾಳುಗಳು ನಮ್ಮ ಬಳಿ ಇದ್ದಾರೆ ಎಂದು ಹಮಾಸ್ ಸಂಘಟನೆ ಹೇಳಿಕೊಂಡಿತ್ತು. ಹೀಗಾಗಿ ಈ ಹಿಂದೆ ಅಂದುಕೊಂಡಿದ್ದ 150ಕ್ಕಿಂತ ಹೆಚ್ಚು ಜನರನ್ನು ಹಮಾಸ್ ಉಗ್ರರು ಒತ್ತೆ ಇಟ್ಟುಕೊಂಡಿರುವುದು ಇದೀಗ ಖಚಿತವಾಗಿದೆ.
ಇದನ್ನು ಓದಿ: ಆಪರೇಷನ್ ಅಜಯ್: 9 ಕನ್ನಡಿಗರು ಸೇರಿ 235 ಮಂದಿ ಭಾರತೀಯರು ಇಸ್ರೇಲ್‌ನಿಂದ ತಾಯ್ನಾಡಿಗೆ ಎಂಟ್ರಿ