ಗಾಜಾ ನಗರದ ಹೃದಯ ಭಾಗಕ್ಕೇ ನುಗ್ಗಿ ಸುರಂಗಗಳನ್ನು ಧ್ವಂಸಗೈದ ಇಸ್ರೇಲ್: ಹಮಾಸ್ ಕ್ಷಿಪಣಿ ತಜ್ಞನ ಹತ್ಯೆ
ಮಂಗಳವಾರ ಹಾಗೂ ಬುಧವಾರ ಇಂತಹ ಹಲವಾರು ಸುರಂಗಗಳನ್ನು ಬಾಂಬ್ ಸ್ಫೋಟಿಸಿ ನಾಶಪಡಿಸಲಾಗಿದೆ ಎಂದು ಸ್ವತಃ ಇಸ್ರೇಲ್ ಸೇನೆ ತಿಳಿಸಿದೆ. ಫೆರ್ರಿಸ್ ವೀಲ್ ಹಾಗೂ ವಿಶ್ವವಿದ್ಯಾಲಯದ ಪ್ರದೇಶದಲ್ಲಿ ಇಸ್ರೇಲ್ ಸೇನಾಪಡೆ ತೀವ್ರ ಭೂದಾಳಿ ನಡೆಸಿದ್ದು, ಕನಿಷ್ಠ 2 ಬೃಹತ್ ಸುರಂಗಗಳನ್ನು ನಾಶಪಡಿಸಿದೆ
ಟೆಲ್ ಅವೀವ್ (ನವೆಂಬರ್ 9, 2023): ಉತ್ತರ ಗಾಜಾಪಟ್ಟಿಯನ್ನು ಸುತ್ತುವರೆದು ತೀವ್ರ ಭೂದಾಳಿ ನಡೆಸುತ್ತಿರುವ ಇಸ್ರೇಲ್‌ನ ಸೇನಾಪಡೆ ಇದೀಗ ಗಾಜಾದ ಹೃದಯ ಭಾಗಕ್ಕೇ ನುಗ್ಗಿ ಹಮಾಸ್ ಉಗ್ರರ ಇನ್ನಷ್ಟು ಸುರಂಗಗಳನ್ನು ಧ್ವಂಸಗೊಳಿಸಿದೆ. ಫೆರ್ರಿಸ್ ವೀಲ್ ಹಾಗೂ ವಿಶ್ವವಿದ್ಯಾಲಯದ ಪ್ರದೇಶದಲ್ಲಿ ಇಸ್ರೇಲ್ ಸೇನಾಪಡೆ ತೀವ್ರ ಭೂದಾಳಿ ನಡೆಸಿದ್ದು, ಕನಿಷ್ಠ 2 ಬೃಹತ್ ಸುರಂಗಗಳನ್ನು ನಾಶಪಡಿಸಿದೆ ಎಂದು ಇಸ್ರೇಲ್ ಪತ್ರಿಕೆಗಳು ವರದಿ ಮಾಡಿವೆ.
ಕಳೆದ ತಿಂಗಳು ಹಮಾಸ್ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ 1400ಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಸಂಪೂರ್ಣ ಹಮಾಸ್ ನೆಲೆಯನ್ನು ನಾಶಪಡಿಸುವುದಾಗಿ ಶಪಥ ಮಾಡಿರುವ ಇಸ್ರೇಲ್ ಪಡೆಗಳು ಹಂತ ಹಂತವಾಗಿ ಉತ್ತರ ಗಾಜಾವನ್ನು ವಶಕ್ಕೆ ತೆಗೆದುಕೊಳ್ಳುತ್ತಿವೆ. ಈವರೆಗೆ ಗಾಜಾದಲ್ಲಿ ಕನಿಷ್ಠ 10,000 ಜನರನ್ನು ಹತ್ಯೆಗೈದಿರುವ ಇಸ್ರೇಲ್ ಸೇನೆ, ಈಗ ಹಮಾಸ್ ಉಗ್ರರು ಅಡಗಲು ನಿರ್ಮಿಸಿಕೊಂಡಿದ್ದ ನೂರಾರು ಕಿ.ಮೀ. ಉದ್ದದ ಸುರಂಗಗಳ ಜಾಲವನ್ನು ಹುಡುಕಿ ಹುಡುಕಿ ನಾಶಪಡಿಸುತ್ತಿದೆ.
ಇದನ್ನು ಓದಿ: ಇಸ್ರೇಲ್ - ಗಾಜಾ ಯುದ್ಧದ ನಡುವೆ ಪ್ಯಾಲೆಸ್ತೀನ್ ಅಧ್ಯಕ್ಷನ ಹತ್ಯೆಗೇ ನಡೀತು ಯತ್ನ? ವಿಡಿಯೋ ವೈರಲ್!
ಮಂಗಳವಾರ ಹಾಗೂ ಬುಧವಾರ ಇಂತಹ ಹಲವಾರು ಸುರಂಗಗಳನ್ನು ಬಾಂಬ್ ಸ್ಫೋಟಿಸಿ ನಾಶಪಡಿಸಲಾಗಿದೆ ಎಂದು ಸ್ವತಃ ಇಸ್ರೇಲ್ ಸೇನೆ ತಿಳಿಸಿದೆ. ಈ ವೇಳೆ ಗಾಜಾ ನಗರಕ್ಕೆ ಔಷಧಗಳನ್ನು ಕೊಂಡೊಯ್ಯುತ್ತಿದ್ದ ರೆಡ್ ಕ್ರಾಸ್‌ನ ಟ್ರಕ್‌ಗಳ ಮೇಲೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
400 ಅಮೆರಿಕನ್ನರು ಗಾಜಾದಿಂದ ಪಾರು:
ಈ ನಡುವೆ, ಗಾಜಾದಿಂದ 400ಕ್ಕೂ ಹೆಚ್ಚು ಅಮೆರಿಕದ ಪ್ರಜೆಗಳು ಸುರಕ್ಷಿತವಾಗಿ ರಫಾ ಗಡಿಯ ಮೂಲಕ ಈಜಿಪ್ಟ್‌ಗೆ ತೆರಳಿದ್ದಾರೆ. ಇಸ್ರೇಲ್‌ನ ದಾಳಿ ತೀವ್ರಗೊಳ್ಳುತ್ತಿರುವುದರಿಂದ ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಸಾವಿರಾರು ಪ್ಯಾಲೆಸ್ತೀನ್ ಪ್ರಜೆಗಳು ಕೂಡ ಇದೇ ಗಡಿಯಲ್ಲಿ ಪಲಾಯನ ಮಾಡಲು ಕಾಯುತ್ತಿದ್ದಾರೆ.
ಇದನ್ನೂ ಓದಿ: ಗಾಜಾ ಮೇಲೆ ಪರಮಾಣು ಬಾಂಬ್ ಹಾಕೋದೂ ಒಂದು ಆಯ್ಕೆ ಎಂದ ಇಸ್ರೇಲ್ ಸಚಿವ: ಪ್ರಧಾನಿ ನೆತನ್ಯಾಹು ಹೇಳಿದ್ದೀಗೆ..
ಹಮಾಸ್ ಕ್ಷಿಪಣಿ ತಜ್ಞನ ಹತ್ಯೆ
ಹಮಾಸ್‌ನ ಶಸ್ತ್ರಾಸ್ತ್ರ ಹಾಗೂ ಕ್ಷಿಪಣಿ ಉತ್ಪಾದನಾ ತಜ್ಞ ಮುಹ್ಸಿನ್ ಅಬು ಜಿನಾ ಎಂಬುವನನ್ನು ಇಸ್ರೇಲ್ ಪಡೆಗಳು ವಾಯುದಾಳಿಯಲ್ಲಿ ಹತ್ಯೆಗೈದಿವೆ. ಹಮಾಸ್‌ನ ಶಸ್ತ್ರಾಸ್ತ್ರ ಉತ್ಪಾದನಾ ವ್ಯವಸ್ಥೆಯಲ್ಲಿ ಈತ ಬಹಳ ಪ್ರಮುಖ ವ್ಯಕ್ತಿಯಾಗಿದ್ದ ಎಂದು ಹೇಳಲಾಗಿದೆ. ‘ವ್ಯೂಹಾತ್ಮಕ ಶಸ್ತ್ರಾಸ್ತ್ರಗಳು ಹಾಗೂ ಕ್ಷಿಪಣಿ ತಯಾರಿಕೆಯಲ್ಲಿ ಮುಹ್ಸಿನ್ ಅಬು ಜಿನಾ ಸಾಕಷ್ಟು ಪರಿಣತಿ ಪಡೆದಿದ್ದ. ಅವನನ್ನು ಹತ್ಯೆಗೈಯಲಾಗಿದೆ’ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇದನ್ನು ಓದಿ: ಇಸ್ರೇಲ್ ಭಾರಿ ದಾಳಿ ಮಾಡಿದ್ರೂ ಹಮಾಸ್ ಸುರಂಗ ಸೇಫ್: ಪೂರ್ಣ ಪ್ರಮಾಣದ ಭೂದಾಳಿ ಹಿಂದೇಟಿಗೂ ಇದೇ ಕಾರಣ!