ವಾಷಿಂಗ್ಟನ್‌ [ಜ.10]: ಅಮೆರಿಕ- ಇರಾನ್‌ ನಡುವೆ ಸಮರ ನಡೆಯಬಹುದು, ಅದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಜಗತ್ತು ಚಿಂತಿತವಾಗಿರುವಾಗಲೇ, ಯುದ್ಧದ ಕಾರ್ಮೋಡ ಸರಿದು ಶಾಂತಿ ನೆಲೆಸುವ ಸುಳಿವು ಕಂಡುಬಂದಿದೆ. ಇದಕ್ಕೆ ಕಾರಣವಾಗಿದ್ದು, ಎರಡೂ ದೇಶಗಳ ನಡುವೆ ಹಿಂಬಾಗಿಲ ಮಾತುಕತೆ ಫಲಪ್ರದವಾಗಿದ್ದು ಎಂದು ಮೂಲಗಳು ತಿಳಿಸಿವೆ. ಇದರ ಅನುಸಾರವಾಗಿಯೇ, ಇರಾನ್‌ನಿಂದ ಅಮೆರಿಕದ ವಾಯುನೆಲೆಗಳ ಮೇಲೆ ಕ್ಷಿಪಣಿಗಳ ದಾಳಿ ನಡೆದಿದೆ ಎಂಬ ವರದಿಗಳು ಕುತೂಹಲಕ್ಕೆ ಕಾರಣವಾಗಿವೆ.

ಇರಾಕ್‌ನಲ್ಲಿ ಅಮೆರಿಕ ಹೊಂದಿರುವ ಅತಿದೊಡ್ಡ ವಾಯುನೆಲೆ ಸೇರಿ 2 ಸ್ಥಳಗಳ ಮೇಲೆ ಇರಾನ್‌ ಬರೋಬ್ಬರಿ 22 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದರೂ ಒಬ್ಬ ಕೂಡ ಸಾಯುವುದಿಲ್ಲ. ತನ್ನ ವಾಯುನೆಲೆ ಮೇಲೆ ವಿರೋಧಿ ದೇಶ ದಾಳಿ ಮಾಡಿದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದಾಳಿ ಮಾಡಿದ ಇರಾನ್‌ಗೆ ಉಜ್ವಲ ಭವಿಷ್ಯವಿದೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಹಿಂಬಾಗಿಲ ಮಾತುಕತೆ ಮೂಲಕ ಎರಡೂ ದೇಶಗಳು ಮ್ಯಾಚ್‌ ಫಿಕ್ಸಿಂಗ್‌ ರೀತಿಯ ನಡವಳಿಕೆ ಪ್ರದರ್ಶಿಸಿ ಸಂಭಾವ್ಯ ಯುದ್ಧವನ್ನು ತಪ್ಪಿಸಿವೆ ಎಂದು ಹೇಳಲಾಗುತ್ತಿದೆ.

ಇರಾನ್‌ ಸೇನೆಯ ಉನ್ನತ ಕಮಾಂಡರ್‌ ಆಗಿದ್ದ ಖಾಸಿಂ ಸುಲೈಮಾನಿ ಹತ್ಯೆ ಬಳಿಕ ಪರಿಸ್ಥಿತಿ ಕೈಮೀರಬಹುದು ಎಂಬುದನ್ನು ಅರಿತ ಅಮೆರಿಕ ಸರ್ಕಾರ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿರುವ ಸ್ವಿಜರ್ಲೆಂಡ್‌ ರಾಯಭಾರ ಕಚೇರಿ ಮೂಲಕ ಆಫರ್‌ವೊಂದನ್ನು ಮುಂದಿಟ್ಟಿತ್ತು. ಸುಲೈಮಾನಿ ಹತ್ಯೆಗೆ ಪ್ರತೀಕಾರ ರೂಪದಲ್ಲಿ ಅಷ್ಟೇ ಸಮ ಪ್ರಮಾಣದ ದಾಳಿಯನ್ನು ನಡೆಸುವಂತೆ ಮುಕ್ತ ಆಹ್ವಾನ ನೀಡಿತ್ತು. ಆದರೆ ಇದನ್ನು ಇರಾನ್‌ ವಿದೇಶಾಂಗ ಸಚಿವಾಲಯ ತಿರಸ್ಕರಿಸಿತ್ತು ಎನ್ನಲಾಗಿದೆ. ಇಂತಹದ್ದೊಂದು ಆಫರ್‌ ಬಂದಿತ್ತು ಎಂಬುದಕ್ಕೆ ಪುಷ್ಟಿನೀಡುವಂತೆ, ಇದೊಂದು ಮೂರ್ಖತನದ ಸಂದೇಶವಾಗಿತ್ತು ಎಂದು ಇರಾನ್‌ ಅಧಿಕಾರಿಗಳು ಬಣ್ಣಿಸಿದ್ದಾರೆ.

ಭಾರೀ ಹೊಡೆತ ಕಾದಿದೆ: ಇರಾನ್‌ಗೆ ಇಸ್ರೇಲ್ ಎಚ್ಚರಿಕೆಯ ಸಂದೇಶ!.

ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್‌ ದಾಳಿ ನಡೆಸಿದರೆ ಕೆಲವು ನಾಗರಿಕರು ಅಥವಾ ಯೋಧರ ಸಾವು ಸೇರಿದಂತೆ ಸಣ್ಣ ಪ್ರಮಾಣದ ಹಾನಿ ಎದುರಿಸಲು ಅಮೆರಿಕ ಕೂಡ ಸಜ್ಜಾಗಿತ್ತು ಎಂದು ಹೇಳಲಾಗಿದೆ.

ಇದೇ ವೇಳೆ, ಅಮೆರಿಕದಂತಹ ದೈತ್ಯ ದೇಶದ ಜತೆ ಯುದ್ಧ ಮಾಡಿದರೆ ಭಾರಿ ಪ್ರಮಾಣದ ಆರ್ಥಿಕ ನಷ್ಟವಾಗುವುದಲ್ಲದೆ, ರಾಜಕೀಯವಾಗಿಯೂ ಬೆಲೆ ತೆರಬೇಕಾಗುತ್ತದೆ. ಇರಾಕ್‌ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್‌ ಪರಿಸ್ಥಿತಿಯೇ ತಮಗೂ ಬರುತ್ತದೆ ಎಂಬುದನ್ನು ಇರಾನ್‌ ನಾಯಕತ್ವ ಅರ್ಥ ಮಾಡಿಕೊಂಡಿತು ಎನ್ನಲಾಗಿದೆ. ಇದೆಲ್ಲದರ ಫಲವಾಗಿ ಇರಾನ್‌ 22 ಕ್ಷಿಪಣಿ ದಾಳಿಗಳನ್ನು ಮಾಡಿದರೂ ಒಬ್ಬನೇ ಒಬ್ಬ ಅಮೆರಿಕ ಪ್ರಜೆ ಸತ್ತಿಲ್ಲ. ತನ್ಮೂಲಕ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬ ವರ್ತನೆಯನ್ನು ಉಭಯ ದೇಶಗಳು ತೋರಿವೆ ಎಂದು ಹೇಳಲಾಗಿದೆ.

ಅಮೆರಿಕ ಸಂಸತ್ತು ಬ್ರೇಕ್‌?

ವಾಷಿಂಗ್ಟನ್‌: ಇರಾನ್‌ ಮೇಲೆ ಯುದ್ಧ ಸಾರದಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕೈಗಳನ್ನು ಕಟ್ಟಿಹಾಕಲು ಅಮೆರಿಕ ಸಂಸತ್ತಿನಲ್ಲಿ ಪ್ರಯತ್ನವೊಂದು ಆರಂಭವಾಗಿದೆ. ಸಮರ ವಿಷಯವನ್ನು ಸಂಸತ್ತಿನ ಕೆಳಮನೆಯಾದ ಹೌಸ್‌ ಆಫ್‌ ರೆಪ್ರೆಸೆಂಟೀಟಿವ್‌್ಸನಲ್ಲಿ ಮತಕ್ಕೆ ಹಾಕಲು ಡೆಮೊಕ್ರಟಿಕ್‌ ಪಕ್ಷ ನಿರ್ಧರಿಸಿದೆ.