Asianet Suvarna News Asianet Suvarna News

Explained: ಇಮ್ರಾನ್‌ ಖಾನ್‌ ಹತ್ಯೆ ಯತ್ನದಿಂದ ಪಾಕಿಸ್ತಾನ ಸೇನೆ ಮತ್ತು ಆರ್ಥಿಕತೆಗೆ ಆದ ನಷ್ಟವೇನು?

Attack in Imran Khan: ಇಮ್ರಾನ್‌ ಖಾನ್‌ ಮೇಲಿನ ಹತ್ಯೆ ಯತ್ನದಿಂದ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ. ಮಾಜಿ ಪ್ರಧಾನಿಯೇ ಸುರಕ್ಷಿತವಲ್ಲ ಎಂದಾಗ ಹೂಡಿಕೆದಾರರು ವಾಪಸ್‌ ಹೋಗುವ ಸಾಧ್ಯತೆ ಸೃಷ್ಟಿಯಾಗಿದೆ.

attack on imran khan might topple pakistan economy and harm army
Author
First Published Nov 4, 2022, 3:22 PM IST

ಲಾಹೋರ್‌: ಪಾಕಿಸ್ತಾನದ ಪ್ರಧಾನಿ ಸ್ಥಾನ ಕಳೆದುಕೊಂಡ ನಂತರ ಇಮ್ರಾನ್‌ ಖಾನ್‌ ದೊಡ್ಡ ರಿಸ್ಕ್‌ ತೆಗೆದುಕೊಂಡರು. ಪಾಕಿಸ್ತಾನದ ಶಕ್ತಿಶಾಲಿ ಸೇನಾ ಜನರಲ್‌ಗಳು ಮತ್ತು ಗುಪ್ತಚರ ದಳ ಐಎಸ್‌ಐನ ವಿರುದ್ಧ ರ್ಯಾಲಿಗಳನ್ನು ಮಾಡಲು ಆರಂಭಿಸಿದರು. ಇದರ ಫಲಿತಾಂಶವೇ ಗುರುವಾರ ಇಮ್ರಾನ್‌ ಖಾನ್‌ ಮೇಲಿನ ಗುಂಡಿನ ದಾಳಿ. ಅದೃಷ್ಟವಶಾತ್‌ ಇಮ್ರಾನ್‌ ಖಾನ್‌ ಬದುಕುಳಿದಿದ್ದಾರೆ. 2007ರಲ್ಲಿ ಬೆನಜೀರ್‌ ಬುಟ್ಟೋರನ್ನು ಇದೇ ರೀತಿ ಸಾರ್ವಜನಿಕ ರ್ಯಾಲಿಯಲ್ಲಿ ಹತ್ಯೆಮಾಡಲಾಗಿತ್ತು. ಇಮ್ರಾನ್‌ ಖಾನ್‌ ಮೇಲಿನ ದಾಳಿ ಬೆನಜೀರ್‌ ಬುಟ್ಟೋ ಹತ್ಯೆಯನ್ನು ನೆನಪಿಸುವಂತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್‌ ಖಾನ್‌ ಆರೋಗ್ಯ ಸ್ಥಿರವಾಗಿದೆ. 70 ವರ್ಷದ ಇಮ್ರಾನ್‌ ಖಾನ್‌ ಬಲಗಾಲಿಗೆ ಗುಂಡು ತಗುಲಿದೆ. ಅವರ ಬೆಂಬಲಿಗರಿಗೂ ಗಾಯಗಳಾಗಿವೆ. 

ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಯನ್ನು ಬೇಗ ಮಾಡಿ ಎಂಬ ಬೇಡಿಕೆಯೊಂದಿಗೆ ಇಮ್ರಾನ್‌ ಖಾನ್‌ ರ್ಯಾಲಿ ಮಾಡುತ್ತಿದ್ದರು. ಆದರೆ ಚುನಾವಣೆಗೆ ಇನ್ನೂ ಸಮಯವಿದೆ. ಪ್ರಧಾನಿ ಶಹಬಾಜ್‌ ಶರೀಫ್‌, ಐಎಸ್‌ಐ ಮೇಲೆ ಇಮ್ರಾನ್‌ ಖಾನ್‌ ಆರೋಪ ಮಾಡಿದ್ದಾರೆ. ಹತ್ಯೆ ಯತ್ನದ ಹಿಂದೆ ಇವರ ಕೈವಾಡವಿದೆ ಎಂದು ದೂರಲಾಗಿದೆ. ಇತ್ತೀಚೆಗಷ್ಟೇ ಐಎಸ್‌ಐ ಮುಖ್ಯಸ್ಥ ಇಮ್ರಾನ್‌ ಖಾನ್‌ ಅಸಂವಿಧಾನಿಕ ಸಹಾಯಗಳನ್ನು ಸೇನೆಗೆ ಮತ್ತು ಐಎಸ್‌ಐಗೆ ಕೇಳಿದ್ದರು ಎಂದಿದ್ದರು. ಐಎಸ್‌ಐಯನ್ನು ಈ ಮಟ್ಟಿಗೆ ಎದುರು ಹಾಕಿಕೊಂಡಿರುವುದು ಇಮ್ರಾನ್‌ ಖಾನ್‌ ಮಾತ್ರ. ಪಾಕಿಸ್ತಾನದಲ್ಲಿ ಸರ್ಕಾರ ಯಾವುದೇ ಇದ್ದರೂ ಅದನ್ನು ಕಂಟ್ರೋಲ್‌ ಮಾಡುವುದು ಐಎಸ್‌ಐ. 

ಇಮ್ರಾನ್‌ ಖಾನ್‌ ಬೆಂಬಲಿಗರು ಈ ಹತ್ಯೆ ಯತ್ನದಿಂದ ಆಗಲೇ ಸಿಟ್ಟಿಗೆದ್ದಿದ್ದಾರೆ. ಇದು ಗಲಭೆಗಳಿಗೂ ಮುಂದಿನ ದಿನಗಳಲ್ಲಿ ಪ್ರೇರೇಪಿಸಬಹುದು. ಮತ್ತು ಆಡಳಿತ ಪಕ್ಷಕ್ಕೆ ಇದರಿಂದ ದೊಡ್ಡ ಮಟ್ಟದ ಘಾಸಿಯಾಗಿದೆ. ಆಡಳಿತ ಪಕ್ಷವೇ ಇದರ ಹಿಂದಿದೆ ಎಂಬ ಆರೋಪ ಎಲ್ಲೆಡೆ ಇಂದ ಕೇಳಿ ಬರುತ್ತಿದೆ. ಇಮ್ರಾನ್‌ ಖಾನ್ ವಿರುದ್ಧ ಸಾರ್ವಜನಿಕವಾಗಿ ಆರೋಪ ಮಾಡಿದ ಐಎಸ್‌ಐ ಕೂಡ ಈಗ ಸಮಸ್ಯೆ ಅನುಭವಿಸುವಂತಾಗಿದೆ. ಈಗಾಗಲೇ ರಾಜಕೀಯ ಬಿಕ್ಕಟ್ಟುಗಳನ್ನು ಕಂಡಿರುವ ಪಾಕಿಸ್ತಾನದ ರಾಜಕೀಯದಲ್ಲಿ ಮತ್ತೆ ಅನಿಶ್ಚಿತತೆ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಇನ್ನೊಂದೆಡೆ ಆರ್ಥಿಕವಾಗಿ ನಷ್ಟ ಆಗುವುದು ಬಹುತೇಕ ನಿಶ್ಚಿತ. ಮಾಜಿ ಪ್ರಧಾನಿ ಮತ್ತು ಪ್ರತಿಪಕ್ಷದ ನಾಯಕನ ಮೇಲೆ ಹತ್ಯೆ ಯತ್ನ ನಡೆಯುತ್ತದೆ ಎಂದಾಗ ಹೂಡಿಕೆ ಹಿಮ್ಮುಖವಾಗುತ್ತದೆ. ಅಂತಾರಾಷ್ಟ್ರೀಯ ಹೂಡಿಕೆದಾರರು ಪಾಕಿಸ್ತಾನದಿಂದ ಕಾಲ್ಕೀಳುವ ಸಾಧ್ಯತೆಯಿದೆ. ದೇಶದಲ್ಲಿ ಭದ್ರತೆ ಎಷ್ಟಿದೆ ಎಂಬುದರ ಮೇಲೆ ಹೂಡಿಕೆ ನಿರ್ಧರಿತವಾಗಿರುತ್ತದೆ. ಆದರೆ ಈಗ ನಡೆದಿರುವ ಘಟನೆಯಿಂದ ಜಾಗತಿಕ ಹೂಡಿಕೆ ಪಾಕಿಸ್ತಾನದಿಂದ ಹೊರ ಹೋಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. 

ಪಾಕಿಸ್ತಾನದ ಆರ್ಥಿಕತೆ ಈಗಾಗಲೇ ಕೆಟ್ಟ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಮಾಡಲಾದ ಇಮ್ರಾನ್‌ ಖಾನ್‌ ಹತ್ಯೆ ಯತ್ನ ದೇಶದ ಆರ್ಥಿಕತೆಯನ್ನು ಸಂಪೂರ್ಣ ಬುಡಮೇಲಾಗಿಸುವ ಸಾಧ್ಯತೆಯಿದೆ. 

ಏನಿದು ಘಟನೆ?:

ಪಾಕಿಸ್ತಾನದ ವಜೀರಾಬಾದ್‌ನಲ್ಲಿ ತೆಹ್ರೀಕ್‌ ಎ ಇನ್ಸಾಫ್‌ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿಯಾದ ಬಳಿಕ ಆಸ್ಪತ್ರೆಯಲ್ಲಿ ಅವರು ಮಾತನಾಡಿದ್ದು ದೇವರು ಜೀವದಾನ ಮಾಡಿದ್ದಾನೆ ಎಂದಿದ್ದಾರೆ. ಗುರುವಾರ ರ್ಯಾಲಿಯಲ್ಲಿ ಇಮ್ರಾನ್‌ ಖಾನ್‌ ಮೇಲೆ ಗುಂಡು ಹಾರಿಸಲಾಗಿದೆ. ಇಮ್ರಾನ್‌ ಖಾನ್‌ ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟೂ ಮೂರು ಗುಂಡುಗಳನ್ನು ಹಾರಿಸಲಾಗಿದ್ದು ಒಂದು ಇಮ್ರಾನ್‌ ಖಾನ್‌ಗೆ ತಾಗಿದರೆ ಇನ್ನುಳಿದವು ಅವರ ಬೆಂಬಲಿಗರಿಗೆ ಬಿದ್ದಿದೆ. ಇಮ್ರಾನ್‌ ಖಾನ್‌ ದಾಳಿಯಲ್ಲಿ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮೇಲೆ ಮತ್ತು ಪ್ರಧಾನಿ ಶಹಬಾಜ್‌ ಶರೀಫ್‌ ಮೇಲೆ ಆರೋಪ ಮಾಡಿದ್ದಾರೆ. 

ಪಾಕಿಸ್ತಾನದ ಎಆರ್‌ವೈ ನ್ಯೂಸ್‌ನಲ್ಲಿ ವಿಡಿಯೋ ಒಂದನ್ನು ಪ್ರಸಾರ ಮಾಡಲಾಗಿದ್ದು, ಇಮ್ರಾನ್‌ ಖಾನ್‌ ಆಸ್ಪತ್ರೆಯಲ್ಲಿ ಗಾಯಾಳುವಾಗಿ ಮಲಗಿದ್ದಾರೆ. ಅವರ ಬಲಗಾಲಿಗೆ ಬ್ಯಾಂಡೇಜ್‌ ಹಾಕಲಾಗಿದ್ದು ಅವರು ಏನನ್ನೋ ಹೇಳುತ್ತಿರುವುದು ಕಾಣುತ್ತದೆ. ಮೂಲಗಳ ಪ್ರಕಾರ ಈ ಘಟನೆಯನ್ನು ಇಮ್ರಾನ್‌ ಖಾನ್‌ ಮರುಜೀವ ಎಂದು ಪರಿಗಣಿಸಿದ್ದಾರೆ. ದೇವರು ನನಗೆ ಇನ್ನೊಮ್ಮೆ ಬದುಕಲು ಅವಕಾಶ ಕೊಟ್ಟಿದ್ದಾನೆ, ನಾನು ಮರಳಿ ಬರುತ್ತೇನೆ ಎಂದೂ ಅವರು ಹೇಳಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: "ದೇವರು ನನಗೆ ಮರುಜೀವ ನೀಡಿದ್ದಾನೆ": ಗುಂಡಿನ ದಾಳಿಯ ನಂತರ ಇಮ್ರಾನ್‌ ಖಾನ್‌ ಹೇಳಿಕೆ

ಪಾಕಿಸ್ತಾನದಲ್ಲಿ ಪ್ರಧಾನಿ, ಸಚಿವರು, ಮಾಜಿ ಪ್ರಧಾನಿಗಳನ್ನು ಟಾರ್ಗೆಟ್ ಮಾಡುವುದು ಹೊಸದೇನಲ್ಲ. ಈಗಾಗಲೇ ಹಲವು ಪ್ರಮುಖರು ಈ ದಾಳಿಯಲ್ಲಿ ಹತರಾಗಿದ್ದಾರೆ. ಇದೀಗ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನದ ವಾಜಿರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿ ಗುರಿ ತಪ್ಪಿದ ಕಾರಣ ಇಮ್ರಾನ್ ಖಾನ್ ಕಾಲಿಗೆ ತುಗುಲಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಸಂಬಂಧ ಒರ್ವನ ಅರೆಸ್ಟ್ ಮಾಡಲಾಗಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಪಾಕ್ ಸಚಿವ ಮೊಹಮ್ಮದ್ ಬಶರತ್ ರಾಜಾ, ಈ ಘಟನೆ ಹಿಂದಿರುವ ಎಲ್ಲರನ್ನು ಬಂಧಿಸಿ ನ್ಯಾಯ ಒದಗಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಬೆನಜೀರ್ ಭುಟ್ಟೋ ರೀತಿ ಹತ್ಯೆಗೆ ಪ್ಲಾನ್, ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಮೇಲಿನ ಗುಂಡಿನ ದಾಳಿ ವಿಡಿಯೋ!

ಇಮ್ರಾನ್ ಖಾನ್ ಗುರಿಯಾಗಿಸಿ ದಾಳಿ ನಡೆಸಲಾಗಿದೆಯಾ? ಈ ಘಟನೆ ಹಿಂದೆ ಉಗ್ರರ ಅಥವಾ ಪ್ರಭಾವಿಗಳ ಕೈವಾಡವಿದೆಯಾ ಅನ್ನೋ ಕುರಿತು ಪಾಕಿಸ್ತಾನ ಸರ್ಕಾರ ತನಿಖೆ ನಡೆಸಲಿದೆ ಎಂದು ಮೊಹಮ್ಮದ್ ಬಶರತ್ ರಾಜಾ ಹೇಳಿದ್ದಾರೆ. 

 

Follow Us:
Download App:
  • android
  • ios