Asianet Suvarna News Asianet Suvarna News

ದಿಗ್ಬಂಧನ ದಿನಗಳಲ್ಲಿ ಮನಸ್ಸಿಗೊಂದಷ್ಟುಮದ್ದು; ಲಾಕ್‌ಡೌನ್‌ ಹೇಗೆ ಕಳೆಯುತ್ತಿದ್ದೀರಿ?

ವರ್ಕ್ ಫ್ರಮ್‌ ಹೋಮ್‌ ಮಾಡುತ್ತಿರುವವರೂ, ಕೆಲಸವಿಲ್ಲದೇ ರಜೆಯ ಮೇಲಿರುವವರೂ, ನಾಲ್ಕು ಗೋಡೆಗಳ ನಡುವೆ ಸೆರೆಯಾದವರೂ ನೆನಪಿಸಿಕೊಳ್ಳಬೇಕಾದ ಕತೆಯೊಂದನ್ನು ನಿಮಗೆ ಹೇಳಬೇಕು.
Tips to stay mentally strong during lockdown
Author
Bangalore, First Published Apr 16, 2020, 8:40 AM IST

ಸಾಮಾನ್ಯವಾಗಿ ಮನುಷ್ಯ ಜಂಗಮ. ಅವನು ಸ್ಥಾವರ ಆದಾಗೆಲ್ಲ ಅವನನ್ನು ಚಿಂತೆಗಳು ಕಾಡುತ್ತವೆ. ಮನಸ್ಸು ಮುದುಡುತ್ತದೆ. ಆತಂಕದ ಜೊತೆಗೆ ಮಾನಸಿಕ ಒತ್ತಡಗಳು ಕಾಣಿಸಿಕೊಳ್ಳುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮತ್ತೊಬ್ಬರ ತಪ್ಪುಗಳು ದೊಡ್ಡದಾಗಿ ಕಾಣುತ್ತವೆ. ಸಿಟ್ಟು ಹೆಚ್ಚಾಗುತ್ತದೆ.

ಇದೇ ದಿಗ್ಬಂಧನದ ಬಹುದೊಡ್ಡ ಸಮಸ್ಯೆ. ವ್ಯಾಯಾಮ ಇಲ್ಲ, ತೂಕ ಹೆಚ್ಚಾಗುತ್ತದೆ ಅನ್ನುವುದು ಖಂಡಿತಾ ಸಮಸ್ಯೆಯೇ ಅಲ್ಲ. ಎರಡು ತಿಂಗಳಲ್ಲಿ ಮೂರು ಕಿಲೋ ಹೆಚ್ಚಾದರೆ ಅದನ್ನು ಆಮೇಲೆ ತೊಡೆದುಹಾಕಬಹುದು. ಆದರೆ ಮಾನಸಿಕವಾಗಿ ಆಗುವ ಆಘಾತ ಬಹಳ ವರ್ಷ ಕಾಡುತ್ತದೆ.

ನಿಮಗೇ ಶತ್ರುವಾಗೋ ನಿಮ್ಮ ಕೆಟ್ಟ ಅಭ್ಯಾಸಗಳಿವು...!

ಇಂಥ ಹೊತ್ತಲ್ಲಿ ನೀವು ಇಬ್ಬರು ಮಹಾನ್‌ ವ್ಯಕ್ತಿಗಳನ್ನು ನೆನಪಿಸಿಕೊಳ್ಳಬೇಕು. ಒಬ್ಬನ ಹೆಸರು ಆಲ್ಬರ್ಟ್‌ ಸ್ಪೀರ್‌. ಹಿಟ್ಲರ್‌ ಆಡಳಿತದಲ್ಲಿ ಆರ್ಕಿಟೆಕ್ಟ್ ಆಗಿದ್ದ ಅವನನ್ನು ಆತನೇ ಕಟ್ಟಿಸಿದ ಸ್ಪಾಂಡೋ ಜೈಲಲ್ಲಿ ಬಂಧಿಸಿಡಲಾಗುತ್ತದೆ ಎಂಬುದನ್ನು ಒಂದು ರೂಪಕವಾಗಿ ಹೇಳುತ್ತಾರೆ. ಆತ ಹೇಳುತ್ತಿದ್ದ. ನಾನು ಕಟ್ಟಿಸಿದ ಜೈಲಿನಲ್ಲಿ ನಾನೇ ಬಂಧಿತನಾಗಿದ್ದಾಗ ನನಗೆ ನಗು ಬರುತ್ತಿತ್ತು. ಎಂಥ ಸ್ಥಿತಿಯನ್ನು ನಾನು ತಂದುಕೊಂಡೆ ಎಂದು ಒಬ್ಬನೇ ನಗುತ್ತಿದ್ದೆ. ಜೈಲು ಕಟ್ಟಿಸುವಾಗ ಯಾವ ಕೈದಿಯೂ ಅಲ್ಲಿಂದ ಪಾರಾಗಬಾರದು ಎಂದು ಎಷ್ಟೆಲ್ಲ ಎಚ್ಚರ ವಹಿಸಿದ್ದೆ. ಕನಿಷ್ಠ ಒಂದಾದರೂ ತಪ್ಪಿಸಿಕೊಳ್ಳುವ ರಹಸ್ಯ ದಾರಿ ಇಟ್ಟಿದ್ದರೆ ಅಂತ ಜೈಲಿನಲ್ಲಿದ್ದಾಗ ಅನ್ನಿಸುತ್ತಿತ್ತು.

ಈಗ ನಾವು ಕೂಡ ನಾವೇ ಕಟ್ಟಿಕೊಂಡ ಜೈಲಿನೊಳಗೆ ಬಂಧಿಸಲ್ಪಟ್ಟಿದ್ದೇವೆ. ಪಾರಾಗುವ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ಅದಕ್ಕಾಗಿ ಈಗ ನಾವು ಮಾಡಲೇಬೇಕಾದ್ದು ಇಷ್ಟು:

1. ಲಾಕ್‌ಡೌನ್‌ ಎಂದು ಸೋಮಾರಿಗಳಾಗಬೇಡಿ. ಯಾವಾಗಲೂ ಎಷ್ಟುಗಂಟೆಗೆ ಏಳುತ್ತೀರೋ ಅಷ್ಟೇ ಹೊತ್ತಿಗೆ ಏಳಿ. ಸಾಧ್ಯವಾದರೆ ಅರ್ಧಗಂಟೆ ಮುಂಚೆ ಏಳಿ.

2. ಎದ್ದು ಅರ್ಧಗಂಟೆಯೊಳಗೆ ಸ್ನಾನ ಮುಗಿಸಿ. ಬೆಳಗ್ಗೆ ಎದ್ದೊಡನೆ ಸ್ನಾನ ಮಾಡದೇ ಇರುವುದು ಬಹುದೊಡ್ಡ ಕಾಯಿಲೆ. ಅದು ಇಡೀ ದಿನವನ್ನು ಹಾಳು ಮಾಡುತ್ತದೆ.

3. ದಿನಕ್ಕೆ ಅರ್ಧಗಂಟೆಯಾದರೂ ಬೆವರಿ. ಅದಕ್ಕೆ ನೀವು ನಡೆದಾಡಬೇಕಿಲ್ಲ. ಮನೆಯೊಳಗೇ ಇಪ್ಪತ್ತು ಸಲ ಸಾಷ್ಟಾಂಗ ನಮಸ್ಕಾರ ಮಾಡಿ ಸಾಕು. ಎದ್ದು ನಿಲ್ಲುವುದು, ಸಾಷ್ಟಾಂಗ ನಮಸ್ಕಾರ ಮಾಡುವುದು ಮತ್ತೆ ಎದ್ದು ನಿಲ್ಲುವುದು. ಇದನ್ನು20 ಸಲ ಮಾಡಿದರೆ ನಿಮ್ಮ ಮನಸ್ಸು ಏಕಾಗ್ರತೆ ಪಡೆಯತ್ತದೆ.

4. ಹೆಚ್ಚು ತಿನ್ನಬೇಡಿ, ಹಾಗಂತ ಕಡಿಮೆ ತಿನ್ನಬೇಡಿ. ಮೊದಲು ಎಷ್ಟುತಿನ್ನುತ್ತಿದ್ದಿರೋ ಈಗಲೂ ಅಷ್ಟನ್ನೇ ತಿನ್ನಿ. ಮನೆಯಲ್ಲಿರುವ ಕಾರಣಕ್ಕೆ ದಿನವೂ ಹಬ್ಬ ಮಾಡಬೇಡಿ.

5. ಮನರಂಜನೆಗೆ ಮಿತಿ ಇರಲಿ. ಮನರಂಜನೆಯೇ ನಿಮ್ಮ ಮೊದಲ ಶತ್ರು ಎಂಬುದು ನೆನಪಿರಲಿ. ಅದರಲ್ಲೂ ಥ್ರಿಲ್ಲರುಗಳು ನಿಮ್ಮ ನರಗಳನ್ನು ಬಿಗಿಗೊಳಿಸುತ್ತಾ, ಹಗುರಗೊಳಿಸುತ್ತಾ ಹೋಗುತ್ತದೆ. ಅದು ಅತ್ಯಂತ ಅಪಾಯಕಾರಿ.

6. ನೆನಪಿನ ಶಕ್ತಿ ವೃದ್ಧಿಸುವ ಆಟಗಳನ್ನು ಆಡಿ. ಕ್ರಾಸ್‌ವರ್ಡ್‌, ಸುಡೋಕು, ಸ್ಪೆಲಿಂಗ್‌ ಆಟ, ಪದ್ಯಬಂಡಿಯಂಥ ಆಟಗಳು ಮನಸ್ಸನ್ನು ಚುರುಕಾಗಿಡುತ್ತವೆ.

7. ಉಲ್ಲಾಸಗೊಳಿಸುವ ಆಟಗಳೂ ಇರಲಿ. ಕೇರಂ, ಲೂಡೋ, ಹಾವು ಏಣಿಯಾಟ, ಚೆನ್ನೆಮಣೆ, ಚೌಕಾಬಾರದಂಥ ಆಟಗಳು ಹೊತ್ತು ಕಳೆಯುವಂತೆ ಮಾಡುತ್ತವೆ.

ನಿದ್ರೆ ಕಸಿದ ಲಾಕ್‍ಡೌನ್; ರಾತ್ರಿ ನಿದ್ರೆ ಬರುತ್ತಿಲ್ಲ ಎನ್ನೋದೇ ಬಹುತೇಕರ ಅಳಲು

8. ಏಕಾಂತದಲ್ಲಿ ಇರುವವರಿಗೆ ಅತ್ಯುತ್ತಮ ಸಂಗಾತಿಯೆಂದರೆ ಓದು. ದಿನಕ್ಕೆ ಹತ್ತು ಪುಟವನ್ನಾದರೂ ಓದಲು ಯತ್ನಿಸಿ.

9. ಚರ್ಚೆಗೆ ಇಳಿಯಬೇಡಿ. ಇಂಥ ಹೊತ್ತಲ್ಲಿ ಎಲ್ಲವೂ ತಪ್ಪಾಗಿ ಕಾಣಿಸುವುದರಿಂದ ಚರ್ಚೆ ಮಾಡಲು ಹೋಗಬೇಡಿ. ಸುಮ್ಮನಿರಿ. ಮೌನವೇ ಮದ್ದು.

10. ಗಂಟೆಗಟ್ಟಲೆ ಫೋನಲ್ಲಿ ಮಾತಾಡಬೇಡಿ. ಸಾಮಾನ್ಯವಾಗಿ ಪುರುಸೊತ್ತಿದೆ ಎಂಬ ಕಾರಣಕ್ಕೆ ನೀವು ಗಂಟೆಗಟ್ಟಲೆ ಫೋನಲ್ಲಿ ಮಾತಾಡುತ್ತಿದ್ದರೆ, ಮನೆಯಲ್ಲಿರುವವರ ಮನಸ್ಥಿತಿ ಕೆಡುತ್ತದೆ. ಅದರಿಂದ ನಿಮ್ಮ ಮನಸ್ಸೂ ಕೆಡುತ್ತದೆ.

ಇವಕ್ಕಿಂತ ಮುಖ್ಯವಾಗಿ ಮಾಡಬೇಕಾದ ಮತ್ತೊಂದು ಕೆಲಸವೆಂದರೆ ಮನಸ್ಸನ್ನು ಸಂತುಷ್ಟವಾಗಿ ಇಟ್ಟುಕೊಳ್ಳುವುದು. ಹೆನ್ರಿ ಚಾರಿಯರ್‌ ಒಂದು ದ್ವೀಪದಲ್ಲಿ ಬಂಧಿತನಾಗಿದ್ದ. ಆತ ಹೇಳುತ್ತಾನೆ: ಈ ಜೈಲು ಸಮುದ್ರದ ನಡುವೆ ಇತ್ತು. ಅಲ್ಲಿಂದ ಪಾರಾಗಲು ಸಾಧ್ಯವೇ ಇರಲಿಲ್ಲ. ಯಾರೂ ತಪ್ಪಿಸಿಕೊಂಡ ಉದಾಹರಣೆ ಇರಲಿಲ್ಲ. ಹೀಗಾಗಿ ಅಲ್ಲಿಗೆ ಹೋದವರೆಲ್ಲ ಒಂದೆರಡು ತಿಂಗಳಲ್ಲೇ ಅದೇ ಖಿನ್ನತೆಯಿಂದ ಸಾಯುತ್ತಿದ್ದರು. ಆದರೆ ನಾನು ಅಲ್ಲಿಂದ ತಪ್ಪಿಸಿಕೊಳ್ಳುವ ಆಸೆಯನ್ನು ಎಂದೂ ಬಿಟ್ಟು ಕೊಡಲೇ ಇಲ್ಲ. ನಾನು ಇಲ್ಲಿಂದ ತಪ್ಪಿಸಿಕೊಳ್ಳುತ್ತೇನೆ, ಈ ಜೈಲುವಾಸ ಮುಗಿಯುತ್ತದೆ ಅನ್ನುವ ಆಶಾವಾದದಲ್ಲೇ ಇದ್ದೆ.

ನಾವು ಕೂಡ ಈಗ ಉಳಿಸಿಕೊಳ್ಳಬೇಕಾದದ್ದು ಅದೇ ಆಶಾವಾದವನ್ನು. ಅದೇ ನಮ್ಮನ್ನು ಕಾಪಾಡುವ ಇಮ್ಯೂನಿಟಿ, ರೋಗ ನಿರೋಧಕ ಶಕ್ತಿ ಎಂದರೆ ಜೀವನೋತ್ಸಾಹ.

Follow Us:
Download App:
  • android
  • ios