'ಆತನಿಗೆ ಬೇರೆ ಅಫೇರ್ ಇದ್ಯಾ'
'ಇಲ್ಲ'
'ನಿಮಗೆ?'
'ಇಲ್ಲ'
'ಹಾಗಿದ್ರೆ ಬರೀ ಒಂದು ಏಟಿಗೋಸ್ಕರ ಡೈವೋರ್ಸ್ ಮಾಡ್ತೀರಾ? '
'ಹೌದು, ಒಂದೇ ಏಟು, ಆದರೆ, ಆತ ಹೊಡೆಯಬಾರದಲ್ವಾ?'
 ***
'ಹೌದು, ಹೊಡೆಯಬಾರದಿತ್ತು, ಹೊಡೆದಾಗಿದೆ, ಏನ್ ಮಾಡಕಾಗುತ್ತೆ, ಜಸ್ಟ್ ಮೂವ್ ಆನ್'
ಆತ ಮಾಡೋ ಸಮಾಧಾನ. ಪಾರ್ಟಿಯಲ್ಲಿ ಎಲ್ಲರ ಮುಂದೆ ಪತ್ನಿಗೆ ಹೊಡೆದ ಆತನಲ್ಲಿ ಪಶ್ಚಾತ್ತಾಪದ ಛಾಯೆಯೂ ಇಲ್ಲ.
 ***
ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಪಿರಿಯಡ್ಸ್ ಅರಿವು

'ಹೆಣ್ಣೆಂದ ಮೇಲೆ ಇಂಥ ಸಣ್ಣಪುಟ್ಟದ್ದನ್ನೆಲ್ಲ ತಾಳ್ಮೆಯಿಂದ ಸಹಿಸಿಕೊಂಡು ಹೊಂದಿಕೊಂಡು ಹೋಗಬೇಕು'
'ಒಂದೇಟಿಗೆಲ್ಲ ಯಾರಾದರೂ ಡೈವೋರ್ಸ್ ಮಾಡ್ತಾರಾ? '
'ಹೊಡ್ಯೋದು ಕೂಡಾ ಪ್ರೀತಿಯ ಎಕ್ಸ್‌ಪ್ರೆಶನ್ '
ಸುತ್ತಮುತ್ತಲಿನವರು, ಹತ್ತಿರದವರೆನಿಸಿಕೊಂಡವರ ಬುದ್ಧಿಮಾತು, ಜೊತೆಗೆ ಕೊಂಚ ಕೊಂಕು.
 ***
'ಹೌದು, ಹೊಡೆದದ್ದು ಒಂದೇ ಏಟು. ಆದರೆ ಹೊಡೆಯಬಾರದಲ್ವ? ಈ ಒಂದೇಟಿನಿಂದ ಇಷ್ಟು ದಿನ ಇಷ್ಟು ದಿನ ವಿವಾಹದಲ್ಲಿ ಮಾಡಿಕೊಂಡಿದ್ದ ಅಡ್ಜಸ್ಟ್‌ಮೆಂಟ್‌ಗಳು, ಸಣ್ಣದೆಂದು ತಳ್ಳಿ ಹಾಕಿದ ಆತನ ತಪ್ಪುಗಳೆಲ್ಲ ದೊಡ್ಡದಾಗಿ ಕಾಣಿಸಲಾರಂಭಿಸಿವೆ. ಹಾಗೆ ಬದಿಗೆ ತಳ್ಳಿದವು, ತಾಳ್ಮೆಯಿಂದ ಕಡೆಗಣಿಸಿದಂಥವಕ್ಕೆ ಲೆಕ್ಕ ಇಟ್ಟಿಲ್ಲವಲ್ಲ...'
ಡೈವೋರ್ಸ್‌ಗಾಗಿ ಪಟ್ಟು ಹಿಡಿದ ಆಕೆಯ ವಿವರಣೆ
 *** 
ನಾಡಿದ್ದು 28ಕ್ಕೆ ಬಿಡುಗಡೆಯಾಗುತ್ತಿರುವ ಹಿಂದಿ ಚಿತ್ರ 'ತಪ್ಪಡ್' ಟ್ರೇಲರ್‌, ಸಮಾಜದ ತಪ್ಪು ಯೋಚನೆಗಳಿಗೆ ಕೆನ್ನೆಗೆ ಬಾರಿಸಿದಂತಿದೆ, ಪತಿಯಾದವನು ಪತ್ನಿಯನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದೆಂಬ ಹಕ್ಕುಪತ್ರಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದೆ. 

ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಪತಿಯಾದವನು ಪತ್ನಿಯ ಕೆನ್ನೆಗೆ ಹೊಡೆವ ಸನ್ನಿವೇಶಗಳು ಸಾಮಾನ್ಯವೆಂಬಂತೆ ಬಿಂಬಿತವಾಗಿರುತ್ತದೆ. ಒಂದು ಎದುರು ಮಾತನಾಡಿದರೆ ಸಾಕು, ಅವಳ ಕೆನ್ನೆಗೆ ಬಾರಿಸುವ ಹಕ್ಕು ಪತಿಗೆ ಇದೆ ಎಂಬಂತೆ ತೋರಿಸುತ್ತವೆ. ಇದನ್ನು ಪ್ರೇಕ್ಷಕ ಕೂಡಾ ವಿಶೇಷವಲ್ಲ ಎಂಬಂತೆ ನೋಡುತ್ತಾನೆ. ಏಕೆಂದರೆ ಸಮಾಜದಲ್ಲಿ ಪತಿ ಪತ್ನಿಗೆ ಹೊಡೆಯುವುದು ಸರ್ವೇಸಾಮಾನ್ಯ ಸಂಗತಿ, ಅದನ್ನು ಸುತ್ತಮುತ್ತಲಿನವರು, ಅಷ್ಟೇ ಏಕೆ ಹೊಡೆಸಿಕೊಂಡವರೂ ಎಲ್ಲ ಹಣೆಬರಹ ಎಂದು ಒಪ್ಪಿಕೊಂಡು ಬಿಡುತ್ತಾರೆ. 

ಆದರೆ, ಇಂಥ ನಿರ್ದೇಶಕರ ಮಧ್ಯೆ, ಸೆನ್ಸಿಬಲ್ ಆದ ಗಂಡಸರೂ ಇದ್ದಾರೆ ಎಂದು ಸಾಬೀತುಪಡಿಸಿದ್ದಾರೆ ತಪ್ಪಡ್‌ನ ನಿರ್ದೇಶಕ ಅನುಭವ್ ಸಿನ್ಹಾ. ಹೌದು, ಟ್ರೇಲರ್ ನೋಡಿದಾಗ ಇದು ಮಹಿಳಾ ನಿರ್ದೇಶಕಿಯ ಚಿತ್ರವೇನೋ ಎಂದು ಬಹುತೇಕರಿಗೆ ಡೌಟ್ ಬರುತ್ತದೆ. ಏಕೆಂದರೆ, ಪುರುಷರು ಇಷ್ಟೊಂದು ಸೆನ್ಸಿಬಲ್ ಎಂಬ ನಂಬಿಕೆ ಮಹಿಳೆಯರಿಗೇಕೆ, ಸ್ವತಃ ಗಂಡಸರಿಗೂ ಇಲ್ಲ!

ಅರಸಿಕ ಪತಿದೇವನ ರೊಮ್ಯಾಂಟಿಕ್ ಪತ್ರ!...

ವಿವಾಹವೆಂದರೆ ಓನರ್‌ಶಿಪ್ ಅಲ್ಲ, ಪಾರ್ಟ್ನರ್‌ಶಿಪ್
ಬಹುತೇಕ ಪುರುಷರಿಗೆ ವಿವಾಹ ಎಂಬುದು ತನ್ನ ಪತ್ನಿಯಾದವಳ ಮೇಲೆ ತನಗೆ ಸಿಗುವ ಸಂಪೂರ್ಣ ಹಕ್ಕು, ತಾನವಳ ಯಜಮಾನ ಎಂಬ ಕಲ್ಪನೆ ಇದೆ. ಆದರೆ, ವಿವಾಹವೆಂಬುವುದು ಯಜಮಾನ ದಾಸಿಯ ಸಂಬಂಧವಲ್ಲ, ಅದೊಂದು ಸಮಾನ ಹಕ್ಕು ಕರ್ತವ್ಯಗಳನ್ನು ಹೊಂದಿದ ಇಬ್ಬರ ನಡುವಿನ ಪಾರ್ಟ್ನರ್‌ಶಿಪ್. ಉದ್ಯೋಗದಲ್ಲಿ ಯಾವುದೋ ಕಾರಣಕ್ಕೆ ನಮ್ಮ ಪಾರ್ಟ್ನರ್ ಕೆನ್ನೆಗೆ ಹೊಡೆದರೆ ಅವರು, ಒಂದು ಹೊಡೆತ ತಾನೇ ಎಂದು ಸಹಿಸಿಕೊಂಡಿರುತ್ತಾರೆಯೇ? ಆ ಪಾರ್ಟ್ನರ್‌ಶಿಪ್ ಮುಂದುವರಿಯುತ್ತದೆಯೇ? ಖಂಡಿತಾ ಇಲ್ಲ ಅಲ್ಲವೇ? ವಿವಾಹ ಸಂಬಂಧದಲ್ಲಿ ಪರಸ್ಪರ ಗೌರವಿಸಿಕೊಳ್ಳುವುದು ಪ್ರೀತಿಗಿಂತ ಮುಖ್ಯ. 

ಗೌರವವಿಲ್ಲದೆ, ನಾನವಳನ್ನು ಪ್ರೀತಿಸುತ್ತೇನೆ, ಹಾಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂಬ ಮನೋಭಾವವಿದ್ದರೆ ಅದನ್ನು ಪ್ರೀತಿ ಎನ್ನುವುದಿಲ್ಲ, ಸರ್ವಾಧಿಕಾರ ಎನ್ನುತ್ತಾರೆ. ಹೊಡೆಯುವುದು, ತಳ್ಳುವುದು ಮುಂತಾದವು ಖಂಡಿತಾ ಪ್ರೀತಿಯ ವ್ಯಕ್ತಪಡಿಸುವಿಕೆ ಆಗಲು ಸಾಧ್ಯವಿಲ್ಲ. ಪತಿಯ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇದೆ ಎಂದು ಪತ್ನಿಯೂ ಆತನಿಗೆ ಎಲ್ಲರೆದುರು ಕಪಾಳಮೋಕ್ಷ ಮಾಡಿದರೆ, ಆತ ಸಹಿಸಿಕೊಳ್ಳುವನೇ?

ತಪ್ಪಡ್ ಕೊಂಡಾಡಿದ ಸ್ಮೃತಿ

ಕೇವಲ ಒಂದೇಟು ತಾನೇ?
ಹೌದು, ಒಂದೇಟು ತಾನೇ ಎಂದು ಆಕೆ ಸುಮ್ಮನಿದ್ದರೆ ಆತನಿಗೆ ತನ್ನ ತಪ್ಪಿನ ಅರಿವಾಗುವುದಾದರೂ ಹೇಗೆ? ಒಂದು ಎರಡಾಗಿ, ಎರಡು ಹತ್ತಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ನಿಜಕ್ಕೂ ತಾನು ಕೌಟುಂಬಿಕ ದೌರ್ಜನ್ಯದ ಬಲಿಪಶು ಎಂದು ಆಕೆಗೆ ಅರಿವಾಗುವ ಹೊತ್ತಿಗಾಗಲೇ ನೂರಾರು ಏಟುಗಳು, ಮಾತಿನ ಚೂರಿಗಳು ಅವಳನ್ನು ಇರಿದು ದೈಹಿಕವಾಗಿ, ಮಾನಸಿಕವಾಗಿ ಜರ್ಝರಿತಗೊಳಿಸಿರುತ್ತವೆ. ಇದೇನು ಅತಿಶಯೋಕ್ತಿಯಲ್ಲ. ದೇಶದ ಎಲ್ಲೆಡೆ ಬಹುತೇಕ ವಿವಾಹಿತ ಮಹಿಳೆಯರ ಅನುಭವವೇ ಇದು. ಹೆಚ್ಚಿನವರು ತಮ್ಮ ಮರ್ಯಾದಾ ಪುರುಷೋತ್ತಮನ ಮರ್ಯಾದೆ ಉಳಿಸಲು ಬಾಯಿ ಮುಚ್ಚಿಕೊಂಡಿದ್ದರೆ, ಮತ್ತೆ ಕೆಲವರು ತಮ್ಮ ಹಣೆಬರಹ ಹಳಿದುಕೊಂಡು ಬಾಯಿಯೇ ಇಲ್ಲದವರಂತೆ ಬದುಕುತ್ತಾರೆ. 

ಗಂಡ ಊರಲ್ಲಿಲ್ಲ ಅಂದ್ರೆ ಹೆಂಡ್ತಿಗೆ ಹಾಲಿ ಡೇ, ಜಾಲಿ ಡೇ...

2018ರ ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇ.30ರಷ್ಟು ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಂದಿಲ್ಲೊಂದು ಬಾರಿ ಒಳಗಾಗುತ್ತಾರೆ. ಅದರಲ್ಲಿ ಶಾಕಿಂಗ್ ಎಂದರೆ 40ರಿಂದ 49 ವರ್ಷದ ಮಹಿಳೆಯರಲ್ಲಿ ಶೇ. 59ರಷ್ಟು ಜನ ತಮಗೆ ಪತಿಯಿಂದಾಗುವ ದೌರ್ಜನ್ಯ ಸರಿಯೆಂದೇ ಭಾವಿಸುತ್ತಾರೆ. ಹಾಗಾಗಿ, ಮೊದಲನೇ ಏಟಿಗೆೇ ಆಕೆ ಧ್ವನಿ ಎತ್ತುವಂತಾಗಬೇಕು. ಆಗಲೇ ನಿಧಾನವಾಗಿಯಾದರೂ ಸಮಾಜದ ಮನಸ್ಥಿತಿ ಬದಲಾಗಲು ಸಾಧ್ಯ. 

ಸಮಾಜ ಬದಲಾಗಬೇಕು
ವಿವಾಹದಲ್ಲಿ ಎಷ್ಟೇ ದೌರ್ಜನ್ಯ ಅನುಭವಿಸಿದರೂ ಬಹುತೇಕ ಮಹಿಳೆಯರು ಅದರ ವಿರುದ್ಧ ದನಿ ಎತ್ತದಿರಲು ಪ್ರಮುಖ ಕಾರಣ ಯಾರೂ ಆಕೆಯ ಬೆಂಬಲಕ್ಕೆ ಬರದಿರುವುದು. ಗಂಡ-ಹೆಂಡತಿ ಜಗಳದ ಮಧ್ಯೆ ಮತ್ತೊಬ್ಬರು ಮೂಗು ತೂರಿಸಬಾರದು ಎಂಬ ಸಮಾಜದ ನಂಬಿಕೆ. ಮತ್ತೊಂದು ವಿಚ್ಚೇದಿತರನ್ನು ಸಮಾಜ ನಡೆಸಿಕೊಳ್ಳುವ ರೀತಿ. ಯಾರದ್ದೇ ತಪ್ಪಿನಿಂದ ವಿಚ್ಚೇದನವಾಗಲಿ, ವಿಚ್ಚೇದಿತರೂ ಬದುಕಲು ಅರ್ಹರು, ಅವರು ಪ್ರೀತಿಗೆ ಅರ್ಹರು, ಮರು ಮದುವೆಗೆ ಅರ್ಹರು ಎಂದು ಸಮಾಜ ನೋಡುವುದಿಲ್ಲ. ಅದರಲ್ಲೂ ವಿಚ್ಚೇದಿತ ಮಹಿಳೆಯನ್ನು ಆಕೆ ಮಾಡಬಾರದ ತಪ್ಪು ಮಾಡಿದ್ದಾಳೆಂಬಂತೆ ಅಗೋಷಿತ ಬಹಿಷ್ಕಾರಕ್ಕೆ ಒಳಪಡಿಸುತ್ತದೆ. ಇದರಿಂದಾಗಿ ಬಹುತೇಕ ಮಹಿಳೆಯರು ವೈವಾಹಿಕ ದೌರ್ಜನ್ಯ ಅನುಭವಿಸಿಕೊಂಡು ಬಾಯಿ ಮುಚ್ಚಿಕೊಂಡಿರುತ್ತಾರೆ. 

ಹೆಣ್ಣನ್ನು ಗೌರವಿಸುವುದು ಮಗನಿಗೆ ಕಲಿಸಿ
ಏನೋ ಕೋಪದಲ್ಲಿ ಹೊಡೆದದ್ದು ಅರಿವಿಗೆ ಬರಲಿಲ್ಲ ಎಂದು ಬಹಳಷ್ಟು ಪತಿ ಮಹಾಶಯರು ಹೇಳಿ ನುಣುಚಿಕೊಳ್ಳಬಹುದು. ಆದರೆ, ಎಷ್ಟೇ ಕೋಪ ಬಂದರೂ ತಂದೆತಾಯಿಗೆ ಯಾರೂ ಹೊಡೆಯುವುದಿಲ್ಲ. ಏಕೆಂದರೆ ತಂದೆತಾಯಿಗೆ ಹೊಡೆಯಬಾರದೆಂಬ ನೈತಿಕ ಪ್ರಜ್ಞೆ ಚಿಕ್ಕವರಿರುವಾಗಿನಿಂದಲೇ ಬೆಳೆಸಲಾಗಿರುತ್ತದೆ. ಆದರೆ ಪತ್ನಿಯ ವಿಷಯ ಹಾಗಲ್ಲ. ಆಕೆ ತನ್ನ ಸ್ವಂತ. ಹೊಡೆದರೂ ಬಡಿದರೂ ವಿವಾಹವಾದ ಮೇಲೆ ತನ್ನೊಂದಿಗೇ ಇರುತ್ತಾಳೆ ಎಂಬ ನಂಬಿಕೆ. ಅದೇ ಬಾಲ್ಯದಿಂದಲೇ ಗಂಡುಮಕ್ಕಳಿಗೆ ಮಹಿಳೆಯರನ್ನು ಗೌರವಿಸುವುದನ್ನು, ಅವರಿಗೆ ನೋವಾಗದಂತೆ ನಡೆಸಿಕೊಳ್ಳುವುದನ್ನು ಹೇಳಿಕೊಟ್ಟು ಬೆಳೆಸಿದರೆ ಅದೂ ಕೂಡಾ ಮುಂದೆ ನೈತಿಕ ಪ್ರಜ್ಞೆಯಾಗಿ ಪ್ರತೀ ಪುರುಷನ ಜೊತೆಗಿರುತ್ತದೆ. ಪರಸ್ಪರ ಗೌರವಿಸಿಕೊಳ್ಳುವ ವಿವಾಹವು ಖಂಡಿತಾ ಸುಖವಾಗಿ ಬಹುಕಾಲ ಬಾಳುತ್ತವೆ. ಹಾಗಾಗಿಯೇ ಅಣ್ಣ ತಂಗಿಗೆ ಹೊಡೆದಾಗಲೇ ಆತನಿಗೆ ಆ ತಪ್ಪನ್ನು ಅರಿವು ಮಾಡಿಸಿ. ಹೆಣ್ಣಿಗೆ ಹೊಡೆಯುವುದು ಪುರುಷ ಲಕ್ಷಣವಲ್ಲ ಎಂದು ಹೇಳಿಕೊಡಿ. ಹಾಗೆ ತಪ್ಪನ್ನು ಪುನರಾವರ್ತಿಸಿದಾಗ ಹೆಣ್ಣನ್ನು ಗೌರವಿಸದವನೊಂದಿಗೆ ಊಟ ಮಾಡುವುದು ನಮಗೆ ಅವಮಾನ ಎನಿಸುತ್ತದೆ ಎಂದು ಹೇಳಿ ಆತನಿಗೆ ಪ್ರತ್ಯೇಕವಾಗಿ ಊಟ ಹಾಕುವುದು, ಒಂದೆರಡು ಸರಿಯಾಗಿ ಮಾತನಾಡಿಸದಿರುವುದು ಮಾಡಿದರೆ, ತಾನು ಮಾಡಿದ್ದು ದೊಡ್ಡ ತಪ್ಪೆಂಬುದು ಆತನಿಗೆ ಅರಿವಾಗುತ್ತದೆ. ಮತ್ತಾತ ಅದನ್ನು ಪುನರಾವರ್ತಿಸಲಾರ. ಹಾಗೆಂದ ಮಾತ್ರಕ್ಕೆ ಮಗಳು ಮಾಡುವುದೆಲ್ಲ ಸರಿಯೆಂದಲ್ಲ, ಆಕೆಗೂ ಎಲ್ಲರನ್ನೂ ಗೌರವಿಸುವುದನ್ನು, ಯಾರಿಗೂ ನೋಯಿಸದಿರುವುದನ್ನು ಹೇಳಿಕೊಡಬೇಕು.