ಎದೆ ಹಾಲು ಗಂಟಲಿಗೆ ಸಿಕ್ಕು ಅಸುನೀಗಿದ ಮಗು, ಹಾಲು ಕುಡಿಯುವಾಗಲೂ ನಿದ್ರಿಸಿದರೆ?

ನವಜಾತ ಶಿಶುಗಳ ಆರೈಕೆ ಬಹಳ ಕಷ್ಟ. ಮಕ್ಕಳಿಗೆ ಏನಾಗ್ತಿದೆ ಎಂಬುದು ಪಾಲಕರಿಗೆ ತಿಳಿಯೋದಿಲ್ಲ. ಮಕ್ಕಳಿಗೆ ಸ್ತನ್ಯಪಾನ ಬಹಳ ಮುಖ್ಯ. ಆದ್ರೆ ಕೆಲ ಮಕ್ಕಳು ಸರಿಯಾಗಿ ಹಾಲು ಕುಡಿಯದೆ ನಿದ್ರೆ ಮಾಡುತ್ವೆ. ಇದು ಅರೆ ಹೊಟ್ಟೆ ಮಾಡುವ ಜೊತೆಗೆ ಗ್ಯಾಸ್ ಗೆ ಕಾರಣವಾಗುತ್ತದೆ. ಆ ಸಂದರ್ಭದಲ್ಲಿ ತಾಯಿ ಬುದ್ಧಿ ಉಪಯೋಗಿಸಿ ಕೆಲಸ ಮಾಡ್ಬೇಕು.
 

Mother Tips Baby Sleeps While Breastfeeding

 ತಾಯಿ ಎದೆಹಾಲು ಅಮೃತಕ್ಕೆ ಸಮಾನ ಅಂತ ಹೇಳ್ತಾರೆ. ಮಗು ಹುಟ್ಟಿದ ದಿನದಿಂದಲೇ ಅದು ತಾಯಿಯ ಹಾಲನ್ನು ಕುಡಿಯಲು ಆರಂಭಿಸುತ್ತದೆ. ಪುಟ್ಟ ಮಕ್ಕಳು ಪದೇ ಪದೇ ತಾಯಿಯ ಹಾಲನ್ನು ಅಪೇಕ್ಷಿಸುತ್ತವೆ. ಏಕೆಂದರೆ ಒಮ್ಮೆಲೇ ಅವರ ಹೊಟ್ಟೆಗೆ ಬೇಕಾಗುವಷ್ಟು ಹಾಲನ್ನು ಕುಡಿಯುವ ಶಕ್ತಿ ಶಿಶುಗಳಿಗೆ ಇರುವುದಿಲ್ಲ. ಸ್ವಲ್ಪ ಹಾಲು ಕುಡಿಯುವಷ್ಟರಲ್ಲಿಯೇ ಅವು ನಿದ್ದೆ ಮಾಡಿಬಿಡುತ್ತವೆ. ಶಿಶಗಳು ಹಾಗೆ ಮಾಡಿದಾಗ ಅಮ್ಮಂದಿರಿಗೆ ಅವು ಹೊಟ್ಟೆ ತುಂಬ ಹಾಲು ಕುಡಿದಿವಿಯೋ ಇಲ್ಲವೋ ಎಂಬ ಚಿಂತೆ ಕಾಡುತ್ತದೆ. ಅದೂ ಕೇರಳದ ಕಾಸರಗೋಡಿನಲ್ಲಿ ಎದೆ ಹಾಲು ಕುಡಿಯುತ್ತಿದ್ದ ಮಗುವೇ ಉಸಿರುಗಟ್ಟಿ ಕೊನೆಯುಸಿರೆಳೆದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಈ ಬಗ್ಗೆ ಅಮ್ಮಂದಿರಿಗೆ ಮತ್ತೂ ಆತಂಕ ಹೆಚ್ಚಾಗಿದೆ.

ಎದೆ ಹಾಲು (Milk) ಕುಡಿಯೋವಾಗ್ಲೇ ನಿದ್ರೆ ಏಕೆ ಬರುತ್ತೆ? : ಕುಡಿಯುವಾಗ ಮಕ್ಕಳು ಮಲಗುವುದೇಕೆ? : ಅಮ್ಮನ ಮಡಿಲಿನಲ್ಲಿ ಮಕ್ಕಳಿಗೆ ಬಹಳ ನೆಮ್ಮದಿ ಮತ್ತು ಸುರಕ್ಷಿತ ಭಾವನೆ ಸಿಗುತ್ತದೆ. ಹಾಲನ್ನು ಕುಡಿಯುವಾಗ ಮಕ್ಕಳಿಗೆ ಸುಸ್ತಾಗಿ ಕೂಡ ಅವು ಮಲಗು (Sleep) ವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳು ಹಾಲು ಕುಡಿಯುತ್ತಲೇ ನಿದ್ದೆಗೆ ಜಾರುತ್ತವೆ. ಅದೇ ನೀವು ಮಕ್ಕಳಿಗೆ ಬಾಟಲಿ ನಿಪ್ಪಲ್ ಮೂಲಕ ಹಾಲುಣಿಸಿದರೆ ಅಷ್ಟು ಬೇಗ ಅವು ಮಲಗುವುದಿಲ್ಲ. ಏಕೆಂದರೆ ನಿಪ್ಪಲ್ (Nipple) ನಲ್ಲಿ ಹಾಲು ಬಹಳ ಬೇಗ ಹೊರಬರುತ್ತದೆ. ಅದಕ್ಕೆ ಮಗುವಿನ ಶಕ್ತಿ ಹೆಚ್ಚು ವ್ಯಯ ಆಗುವುದಿಲ್ಲ. ಅದರಿಂದ ಮಗುವಿಗೆ ಆಯಾಸವಾಗದೇ ನಿದ್ದೆ ಕೂಡ ಬರುವುದಿಲ್ಲ. ನಿಪ್ಪಲ್ ಮೂಲಕ ಹಾಲು ಹೀರುವುದರಿಂದ ಮಕ್ಕಳ ಪೋಷಣೆ (Nutrition) ಕುಂಠಿತವಾಗಬಹುದು.

ಅಯ್ಯೋ ವಿಧಿಯೇ..ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಸಾವು

ಸ್ತನ್ಯಪಾನ ಮಾಡುವಾಗ ಮಗು ಮಲಗೋದು ಎಷ್ಟು ಸರಿ? : ಎದೆಹಾಲು ಕುಡಿಯುವಾಗಲೇ ಮಕ್ಕಳು ಮಲಗುತ್ತಾರೆಂದು ತಾಯಿಯರು ಚಿಂತೆ ಮಾಡುವ ಅಗತ್ಯವಿಲ್ಲ. ಮಲಗುವುದು ಮತ್ತು ಹಾಲು ಕುಡಿಯುವುದು ಎರಡೂ ಬೇರೆ ಬೇರೆ ರೀತಿಯ ಕಾರ್ಯಗಳಾದ್ದರಿಂದ ಅವೆರಡಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಮಕ್ಕಳನ್ನು ಮಲಗಿಸುವುದಕ್ಕಾಗಿಯೇ ಕೆಲವರು ಶಿಶುಗಳಿಗೆ ಹಾಲುಣಿಸುತ್ತಾರೆ. ಇದೇ ಮಕ್ಕಳಿಗೆ ಅಭ್ಯಾಸವಾಗಿ ಮಲಗುವಾಗಲೆಲ್ಲ ಅವು ಹಾಲು ಕುಡಿಯಲು ಬಯಸುತ್ತವೆ. ಆ ಸಮಯದಲ್ಲಿ ತಾಯಿ ಎದೆಹಾಲು ನೀಡದೇ ಇದ್ದಲ್ಲಿ ಮಗುವಿನ ನಿದ್ರೆ ಸರಿಯಾಗಿ ಆಗದೇ ಇರಬಹುದು.

ಹಾಲುಣಿಸುವಾಗ ಮಗು ಮಲಗಬಾರದು ಅಂದ್ರೆ ಇದು ವರ್ಕ್ ಔಟ್ ಆಗುತ್ತೆ :  
• ಮಗುವಿಗೆ ಎದೆಹಾಲು ಕುಡಿಸುವಾಗ ಮಗುವಿನ ಸೊಂಟ ಮತ್ತು ಮುಖವನ್ನು ಮೃದುವಾಗಿ ತಟ್ಟುತ್ತಿರಿ. ಹೀಗೆ ಮಾಡುವುದರಿಂದ ಮಗುವಿನ ನರಗಳೆಲ್ಲ ಅಲರ್ಟ್ ಆಗಿರುತ್ತದೆ. ಆಗ ಮಗು ನಿದ್ದೆ ಮಾಡುವುದಿಲ್ಲ.
• ಮಗುವಿಗೆ ಹಾಲು ಕುಡಿಸುವಾಗ ತಾಯಿ ಮಗುವಿನ ಜೊತೆ ನಿರಂತರವಾಗಿ ಮಾತನಾಡುತ್ತಿದ್ದರೂ ಮಗು ನಿದ್ರೆ ಮಾಡುವುದಿಲ್ಲ.
• ಮಗುವಿಗೆ ಹಾಲುಣಿಸುವ ಕೋಣೆಯಲ್ಲಿ ಬೆಳಕು ಚೆನ್ನಾಗಿ ಬರುತ್ತಿದ್ದರೆ ಮಗು ಬೇಗ ಮಲಗುವುದಿಲ್ಲ.

ಹಾಲುಣಿಸುವ ಭಂಗಿ ಹೀಗಿರಲಿ : ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಮಗುವಿಗೆ ಹಾಲುಣಿಸುತ್ತಾರೆ. ಕೆಲವರು ಕುಳಿತು ಮಗುವಿಗೆ ಹಾಲು ಕೊಡುತ್ತಾರೆ. ಕೆಲವರು ತಾವೂ ಕೂಡ ಮಲಗಿಕೊಂಡು ಎದೆಹಾಲು ಕೊಡುತ್ತಾರೆ. ತಾಯಿ ಮಲಗಿ ಪಕ್ಕದಲ್ಲಿ ಮಗುವನ್ನು ಕೂಡ ಮಲಗಿಸಿಕೊಂಡು ಹಾಲು ಕುಡಿಸುವುದರಿಂದ ಮಗು ಬೇಗ ನಿದ್ರೆ ಮಾಡಿಬಿಡಬಹುದು. ಆದ್ದರಿಂದ ತಾಯಿ ಕುಳಿತುಕೊಂಡೇ ಹಾಲುಣಿಸುವುದು ಒಳ್ಳೆಯದು. ಕುಳಿತು ಎದೆಹಾಲು ಕೊಡುವಾಗ ಸ್ವಲ್ಪ ಸಮಯಕ್ಕೆ ಮಗುವನ್ನು ಇನ್ನೊಂದು ಕಡೆ ಬದಲಿಸಬಹುದು. ಎರಡೂ ಎದೆಯ ಹಾಲನ್ನು ಕುಡಿಸುವ ಮಧ್ಯದಲ್ಲಿ ಸ್ವಲ್ಪ ವಿರಾಮವನ್ನು ಕೂಡ ಕೊಡಬಹುದು. ಇದರಿಂದ ಮಗುವಿಗೆ ಹಾಲು ಕುಡಿಯುವಾಗಲೇ ನಿದ್ದೆ ಬರುವುದು ತಪ್ಪುತ್ತದೆ.

ಹೆರಿಗೆ ನಂತ್ರ ಯೋನಿಗೆ ಬರುತ್ತೆ ಈ ಅಂಗ, ಕುಳಿತುಕೊಳ್ಳೋದು ಸಹ ಕಷ್ಟ

ಹಾಲು ಕುಡಿಯುತ್ತಲೇ ಮಗು ನಿದ್ದೆಗೆ ಜಾರುವುದರಿಂದ ಮಗುವಿಗೆ ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮಕ್ಕಳು ವಾಂತಿ ಕೂಡ ಮಾಡಿಕೊಳ್ಳುತ್ತವೆ. ಹಾಗಾಗಿ ಮಗು ಹಾಲು ಕುಡಿದ ತಕ್ಷಣ ಅದರ ಬೆನ್ನನ್ನು ಮೃದುವಾಗಿ ಉಜ್ಜಿ. ಇದರಿಂದ ಮಗುವಿಗೆ ತೇಗು ಬರುತ್ತದೆ. ಆಗ ಹೊಟ್ಟೆಯಲ್ಲಿನ ಗ್ಯಾಸ್ ಹೊರಹೋಗುತ್ತದೆ. ಇದರಿಂದ ಮಗುವಿಗೆ ಹೊಟ್ಟೆನೋವಿನ ಸಮಸ್ಯೆ ಉಂಟಾಗುವುದಿಲ್ಲ.

Latest Videos
Follow Us:
Download App:
  • android
  • ios