Asianet Suvarna News Asianet Suvarna News

Stop Violence against Women: ಹೆಣ್ಣಿಗೆ ದೌರ್ಜನ್ಯರಹಿತ ಭವಿಷ್ಯದ ಅಗತ್ಯವೇನಿದೆ?

ಇಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ. ಕಳೆದೆಲ್ಲ ವರ್ಷಗಳಂತೆ ಈ ವರ್ಷ ಕೂಡಾ ವಿಶ್ವಸಂಸ್ಥೆ ಈ ಸಂಬಂಧ 16 ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಿಂಸೆ, ದೌರ್ಜನ್ಯರಹಿತ ಭವಿಷ್ಯದ ಅಗತ್ಯವನ್ನು ಸಾರುವ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

International Day for the Elimination of Violence against Women skr
Author
Bangalore, First Published Nov 25, 2021, 5:26 AM IST

ಕಾಲ ಬದಲಾಗಿದೆ ಎಂದು ನಾವೆಷ್ಟೇ ಬಡಕೊಳ್ಳಬಹುದು. ಆದರೆ ಇಂದಿಗೂ ಪ್ರತಿ 3ರಲ್ಲಿ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ದೌರ್ಜನ್ಯಕ್ಕೊಳಗಾಗಿರುತ್ತಾಳೆ ಎನ್ನುತ್ತದೆ ಅಂಕಿಅಂಶ. ಅದರಲ್ಲೂ ಯುದ್ಧ, ಭಯೋತ್ಪಾದಕತೆ, ಬಡತನ, ಪ್ರಕೃತಿ ವಿಕೋಪ ಮತ್ತಿತರ ಸಮಸ್ಯೆಗಳು ಹೆಚ್ಚಿದ್ದಲ್ಲಿ ಈ ದೌರ್ಜನ್ಯವೂ ಮಿತಿ  ಮೀರುತ್ತದೆ. ಈ ಕೋವಿಡ್ ಸಾಂಕ್ರಾಮಿಕ ರೋಗ ಜಗತ್ತನ್ನು ಬಾಧಿಸಿದ ಬಳಿಕ 13 ದೇಶಗಳಿಂದ ಸಂಗ್ರಹಿಸಿದ ಮಾಹಿತಿಯಂತೆ ಪ್ರತಿ ಮೂರರಲ್ಲಿ ಎರಡು ಮಹಿಳೆಯರು ತಾವು ಒಂದಿಲ್ಲೊಂದು ರೀತಿಯ ಹಿಂಸೆ, ದೌರ್ಜನ್ಯ ಅನುಭವಿಸಿದ್ದಾಗಿ ಹೇಳಿದ್ದನ್ನು ವಿಶ್ವಸಂಸ್ಥೆಯ ಮಹಿಳಾ ಆಯೋಗ ವರದಿ ಮಾಡಿದೆ. ದುಃಖಕರ ವಿಷಯವೆಂದರೆ ಇಂಥ ಸಂತ್ರಸ್ತರಲ್ಲಿ ಕೇವಲ 10ರಲ್ಲೊಬ್ಬ ಮಹಿಳೆ ಮಾತ್ರ ಸಹಾಯಕ್ಕಾಗಿ ಪೋಲೀಸ್  ಮೊರೆ ಹೋಗುತ್ತಾಳೆ. 
ಮಹಿಳೆ ಮೇಲಿನ ದೌರ್ಜನ್ಯ(Violence) ಈ ಮಟ್ಟದಲ್ಲಿದ್ದಾಗಲೂ ಅದನ್ನು ತಡೆಯಲು, ಆ ಬಗ್ಗೆ ಜಾಗೃತಿ(awareness) ಮೂಡಿಸಲು ಮುಂದಾಗದಿದ್ದರೆ ಭವಿಷ್ಯದ ದಿನಗಳು ಇನ್ನೂ ಕೆಟ್ಟದಾಗಲಿವೆ. ಹಾಗಾಗಿ ಈ ದೌರ್ಜನ್ಯಕ್ಕೆ ಅಂತ್ಯ ಹಾಡುವುದಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಬೇರು ಮಟ್ಟದಲ್ಲೇ ಕಾರಣಗಳನ್ನು ಗುರುತಿಸುವುದು, ಅಪಾಯಕಾರಿ ಸಾಮಾಜಿಕ ಕಟ್ಟುಪಾಡುಗಳನ್ನು ಬದಲಾಯಿಸುವುದು, ಮಹಿಳೆಯರನ್ನು ಸಬಲರಾಗಿಸುವುದು. 

ಪೋಲೀಸರ ರಕ್ಷೆ, ನ್ಯಾಯ ಸಿಗುವವರೆಗೂ ಹೋರಾಟ, ಆರೋಗ್ಯ ಕಾಪಾಡಿಕೊಳ್ಳುವುದು, ಸಾಮಾಜಿಕ ಸಮಸ್ಯೆಗಳು, ಕಟ್ಟುಪಾಡುಗಳ ವಿರುದ್ಧ ಸಾಂಘಿಕವಾಗಿ ದನಿ ಎತ್ತುವುದು, ಮಹಿಳಾ ಹಕ್ಕುಗಳ(women rights) ರಕ್ಷಣಾ ಕಾರ್ಯಕ್ಕೆ ಸಾಕಷ್ಟು ಆರ್ಥಿಕ ನೆರವು ಪಡೆವ ಮೂಲಕ ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ಕೊನೆಗೊಳಿಸಲು ಸಾಧ್ಯ. 

'ಆರೇಂಜ್ ದ ವರ್ಲ್ಡ್: ಎಂಡ್ ವಯೋಲೆನ್ಸ್ ಎಗೈನೆಸ್ಟ್ ವಿಮೆನ್ ನೌ!'
ಮಹಿಳಾ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಈ ವರ್ಷ ಬಳಸಿರುವ ಥೀಮ್ 'ಆರೇಂಜ್ ದ ವರ್ಲ್ಡ್: ಎಂಡ್ ವಯೋಲೆನ್ಸ್ ಎಗೈನೆಸ್ಟ್ ವಿಮೆನ್ ನೌ!' ಆರೇಂಜ್ ಬಣ್ಣವು ಮಹಿಳೆಯರ ಮೇಲೆ ದೌರ್ಜನ್ಯರಹಿತವಾದ ಭವ್ಯ ಭವಿಷ್ಯವನ್ನು ಸೂಚಿಸುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಈ ಆರೇಂಜ್ ಚಳುವಳಿಗೆ ಕೈ ಜೋಡಿಸುವುದು ಅಗತ್ಯ. 
16 ದಿನಗಳ ಚಳುವಳಿ(activism)
ಈ ಬಾರಿ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನದ ಅಂಗವಾಗಿ 16 ದಿನಗಳ ಕಾಲ ಜಾಗೃತಿ ಕಾರ್ಯಕ್ರಮಗಳನ್ನು ವಿಶ್ವಸಂಸ್ಥೆ ಹಮ್ಮಿಕೊಂಡಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನವಾದ ಡಿಸೆಂಬರ್ 10ರಂದು ಈ ಚಳುವಳಿಯ ಕಡೆ ದಿನ. ವಿಶ್ವಸಂಸ್ಥೆಯ ಅಧ್ಯಕ್ಷರು ಹಾಗೂ ವಿಶ್ವಸಂಸ್ಥೆ(UN) ಮಹಿಳಾ ಆಯೋಗ ಜಂಟಿಯಾಗಿ ಈ ಕಾರ್ಯಕ್ರಮಗಳನ್ನು 2008ರಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ  ಕುರಿತು ಚರ್ಚೆಗೆ ಅವಕಾಶಗಳನ್ನು ಹುಟ್ಟು ಹಾಕಲಾಗುತ್ತಿದೆ. 

Rain: ಮಳೆ ಎಂಬ ಮನೋಹರಿ ಮನೆಹಾಳಿ ಆಗಿದ್ದಾಳಲ್ಲಾ..
ಮಹಿಳಾ ದೌರ್ಜನ್ಯ
ಮಹಿಳಾ ದೌರ್ಜನ್ಯವು ಜಗತ್ತಿನಾದ್ಯಂತ ಅತಿ ಹೆಚ್ಚಾಗಿ ನಡೆವ ಮಾನವ ಹಕ್ಕುಗಳ(Human rights) ಉಲ್ಲಂಘನೆಯಾಗಿದೆ. ಆದರೂ ಮಹಿಳೆಯರ ಮೇಲೆ ಹೇರಿರುವ ಕಟ್ಟುಪಾಡುಗಳು ಹಾಗೂ ಅವರನ್ನು ಅವಮಾನಿಸುವ ಕಾರಣಗಳಿಗಾಗಿ ಈ ದೌರ್ಜನ್ಯ ಸುದ್ದಿಯಾಗದೆ ಹೋಗುತ್ತಿದೆ. 
ದೈಹಿಕವಾಗಿ, ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಯಾವುದೇ ವಿಧದಲ್ಲಿ ಮಹಿಳೆಯರನ್ನು ನೋಯಿಸುವುದು ಕೂಡಾ ಮಹಿಳಾ ದೌರ್ಜನ್ಯವೆನಿಸಿಕೊಳ್ಳುತ್ತದೆ. ಅಂದರೆ ಹೆಣ್ಣು ಭ್ರೂಣ ಹತ್ಯೆ, ಹೆಣ್ಣುಮಕ್ಕಳ ಮಾರಾಟ, ಹೊಡೆಯುವುದು, ವೈವಾಹಿಕ ಅತ್ಯಾಚಾರ, ಮಾನಸಿಕ ಹಿಂಸೆ ನೀಡುವುದು, ಶಿಕ್ಷಣದಿಂದ ವಂಚಿತರಾಗಿಸುವುದು, ಬೆದರಿಸುವುದು, ಅತ್ಯಾಚಾರ, ಒತ್ತಾಯದ ವಿವಾಹ, ಬಾಲ್ಯವಿವಾಹ, ಲೈಂಗಿಕ ಕಿರುಕುಳ, ಹಿಂಬಾಲಿಸುವುದು, ಸೈಬರ್ ದೌರ್ಜನ್ಯ, ವೇಶ್ಯಾವಾಟಿಕೆಗೆ ತಳ್ಳುವುದು, ಸೇವಕಿಯಂತೆ ನಡೆಸಿಕೊಳ್ಳುವುದು- ಇವೆಲ್ಲವೂ ಮಹಿಳಾ ದೌರ್ಜನ್ಯದ ವಿವಿಧ ಮುಖಗಳು. 
ಈ ಯಾವುದೇ ರೀತಿಯ ದೌರ್ಜನ್ಯವು ಮಹಿಳೆಯನ್ನು ಬದುಕಿನ ಪ್ರತಿ ಹಂತದಲ್ಲೂ ಕಾಡುತ್ತದೆ. 
ಜಗತ್ತು ಸಮಾನತೆ ಕಾಣಬೇಕೆಂದರೆ, ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಸಾಧಿಸುವ ಕನಸು ನನಸಾಗಬೇಕೆಂದರೆ ಮೊದಲು ಮಹಿಳೆಯ ವಿರುದ್ಧ ನಡೆವ ದೌರ್ಜನ್ಯಕ್ಕೆ ಇತಿ ಹಾಡಲೇಬೇಕು. 

Crib Death: ಹಸುಗೂಸುಗಳಿಗೆ ತೊಟ್ಟಿಲಲ್ಲೇ ಕಾಡುತ್ತಿದೆ ಸಾವು!

Follow Us:
Download App:
  • android
  • ios