BSFಗೆ ಮೊದಲ ಮಹಿಳಾ ಸ್ನೈಪರ್; ಶಾರ್ಪ್ ಶೂಟಿಂಗ್‌ನಲ್ಲಿ ಇವ್ರನ್ನ ಮೀರಿಸೋರಿಲ್ಲ!
ಕಠಿಣ ಪ್ರದೇಶಗಳಲ್ಲಿ ಗುರಿಕಾರರಾಗಿ ಕಾರ್ಯನಿರ್ವಹಿಸುವ ಸ್ನೈಪರ್ ಗಳು ಯಾವುದೇ ಸೇನಾ ಪಡೆಯ ಪ್ರಮುಖ ಶಕ್ತಿಯಾಗಿರುತ್ತಾರೆ. ಯಾವುದೇ ಸನ್ನಿವೇಶದಲ್ಲಿ ಇವರ ಮಾತ್ರ ಮಹತ್ವದ್ದಾಗಿರುತ್ತದೆ. ಗಡಿ ಭದ್ರತಾ ಪಡೆಯ ಇಂತಹ ಸ್ನೈಪರ್ ಹುದ್ದೆಗೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ.
ಭಾರತದ ಗಡಿ ಭದ್ರತಾ ಪಡೆಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ. ಗಡಿ ಭದ್ರತಾ ಪಡೆಗೆ ಮೊಟ್ಟಮೊದಲ ಮಹಿಳಾ ಸ್ನೈಪರ್ ದೊರೆತಿದ್ದಾರೆ. ಬಿಎಸ್ ಎಫ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಸುಮನ್ ಕುಮಾರಿ 8 ವಾರಗಳ ಕಠಿಣ ಸ್ನೈಪರ್ ಕೋರ್ಸ್ ಪೂರೈಸಿ ಬೋಧಕ ಹುದ್ದೆಗೆ ಏರುವ ಮೂಲಕ ಈ ಸ್ಥಾನ ಅಲಂಕರಿಸುತ್ತಿರುವ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಎಸ್ ಎಫ್ ನ ಇಂದೋರ್ ನಲ್ಲಿರುವ ಸಿಎಸ್ ಡಬ್ಲ್ಯೂಟಿ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, “ಬಿಎಸ್ ಎಫ್ ಎಲ್ಲರನ್ನೂ ಒಳಗೊಳ್ಳುವ ಪಡೆಯಾಗಿದ್ದು, ಮಹಿಳೆಯರು ಎಲ್ಲ ವಲಯದಲ್ಲೂ ಸ್ಥಾನ ಪಡೆಯುತ್ತಿದ್ದಾರೆ. ಇದೀಗ, ಬಿಎಸ್ ಎಫ್ ಮೊದಲ ಮಹಿಳಾ ಸ್ನೈಪರ್ ಅನ್ನು ಹೊಂದಿದೆ’ ಎಂದು ಹೇಳಿದೆ.
ಸುಮನ್ ಅವರು 2021ರಲ್ಲಿ ಬಿಎಸ್ ಎಫ್ (BSF) ಸೇರಿದ್ದಾರೆ. ಪಂಜಾಬ್ ನ ಗಡಿವಲಯದಲ್ಲಿ (Border Area) ಕಾರ್ಯನಿರ್ವಹಿಸುವ ಸಮಯದಲ್ಲಿ ಸ್ನೈಪರ್ (Sniper) ದಾಳಿಗೆ ಒಳಗಾಗುವ ಅಪಾಯವನ್ನು ಎದುರಿಸುತ್ತಿದ್ದ ಸಮಯದಲ್ಲಿ ಆ ಹುದ್ದೆಗೆ ಇರುವ ಮಹತ್ವವನ್ನು ಅರಿತರು. ತಮ್ಮ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಸ್ನೈಪರ್ ಕೋರ್ಸ್ (Course) ಪಡೆಯುವ ಆಸಕ್ತಿ ವ್ಯಕ್ತಪಡಿಸಿದರು. ಈ ಕೋರ್ಸ್ ಪಡೆಯಲು ಅರ್ಜಿ ಹಾಕಿದವರ ಪೈಕಿ ಸುಮನ್ ಮೊದಲ ಮಹಿಳೆಯಾಗಿದ್ದರು. ಅವರ ನಿರ್ಧಾರಕ್ಕೆ ಪ್ರೋತ್ಸಾಹ ದೊರೆತ ಪರಿಣಾಮವಾಗಿ ಈಗ ಅವರು 56 ಪುರುಷ ಸಹೋದ್ಯೋಗಿಗಳೊಂದಿಗೆ ಏಕಾಂಗಿಯಾಗಿ ಕಠಿಣವಾದ ತರಬೇತಿ (Training) ಪಡೆದು ಬಂದಿದ್ದಾರೆ.
ಸುಮನ್ ಕುಮಾರಿ (Suman Kumari) ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಾಮಾನ್ಯ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, ಅವರ ತಂದೆ ಇಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಗೃಹಿಣಿ.
“ಪ್ರತಿಯೊಂದು ಚಟುವಟಿಕೆಯಲ್ಲೂ (Activity) ಸುಮನ್ ಅಚ್ಚರಿದಾಯಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೆಚ್ಚು ಮಹಿಳೆಯರು ಈ ಕೋರ್ಸ್ ತೆಗೆದುಕೊಂಡು ಕಾರ್ಯಕ್ಷೇತ್ರಕ್ಕೆ ಬರಬೇಕು ಎನ್ನುವುದನ್ನು ನಿರೀಕ್ಷೆ ಮಾಡುತ್ತೇವೆ’ ಎಂದು ಇಂದೋರ್ ನಲ್ಲಿರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ಸ್ ಆಂಡ್ ಟ್ಯಾಕ್ಟಿಕ್ಸ್ (ಸಿಎಸ್ ಡಬ್ಲ್ಯೂಟಿ-CSWT) ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ಸಿಂಗ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಮೋಸದ ಜಾಲಕ್ಕೆ ಸಿಲುಕಿ ರಷ್ಯಾ ಸೇನೆ ಸೇರಿದ್ದ ಹಲವು ಭಾರತೀಯರ ಬಿಡುಗಡೆ: ಕೇಂದ್ರ
ಕಠಿಣ ತರಬೇತಿ
ಈ ಸಾಧನೆಯ ಮೂಲಕ ಸುಮನ್ ಮತ್ತಷ್ಟು ಮಹಿಳೆಯರು ಇಂತಹ ಮಿಲಿಟರಿ ಹುದ್ದೆ ನಿಭಾಯಿಸಲು ಪ್ರೇರಣೆಯಾಗಿದ್ದಾರೆ ಎನ್ನುವುದು ನಿಸ್ಸಂಶಯ. ಸುಮನ್ ಕುಮಾರಿ ಅವರು ಈಗ ಸ್ನೈಪರ್ ಬೋಧಕ (Instructor) ಹುದ್ದೆ ನಿಭಾಯಿಸಲು ಅರ್ಹತೆ ಹೊಂದಿದ್ದಾರೆ. ಸ್ನೈಪರ್ ಕೋರ್ಸ್ ಕಮಾಂಡೋ ತರಬೇತಿಯ ಬಳಿಕ ಅತ್ಯಂತ ಕಠಿಣದಾಯಕ ತರಬೇತಿಗಳಲ್ಲಿ ಒಂದಾಗಿದೆ.
ಸ್ನೈಪರ್ ಅಂದ್ರೆ ಯಾರು?
ಸ್ನೈಪರ್ ಎಂದರೆ ಗುರಿಕಾರರು. ಸಾಮಾನ್ಯ ಪರಿಭಾಷೆಯಲ್ಲಿ ಶಾರ್ಪ್ ಶೂಟರ್ ಎನ್ನಬಹುದು. ಸೇನಾ (Army) ಭಾಷೆಯಲ್ಲಿ ಇವರನ್ನು ಸ್ನೈಪರ್ ಎನ್ನಲಾಗುತ್ತದೆ. ಗುರಿ ಇಡುವಲ್ಲಿ ಇವರು ಎಷ್ಟು ತಜ್ಞತೆ (Expertise) ಹೊಂದಿರುತ್ತಾರೆ ಎಂದರೆ ಸಾಮಾನ್ಯರು ಊಹಿಸುವುದೂ ಕಷ್ಟ. ಸೇನೆಯಲ್ಲಿ ಇವರಿಗೆ ಮಹತ್ವದ ಸ್ಥಾನವಿದೆ. ಪ್ರಮುಖ ಕಾರ್ಯಾಚರಣೆಗಳಲ್ಲಿ ಇವರನ್ನು ಬಳಕೆ ಮಾಡಲಾಗುತ್ತದೆ. ಸ್ನೈಪರ್ ಗಳು ಗುರಿ (Target) ಗುರುತಿಸುವಿಕೆ, ಗುರುತು ಪತ್ತೆ, ವಿರೋಧಿ ಬಣದ ನಿರ್ದಿಷ್ಟ ಯೋಧರ ಸ್ಥಳ ಪತ್ತೆಯಂತಹ ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಅತ್ಯಂತ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ವೈರಿ ಪಡೆಯ ಕಾರ್ಯಾಚರಣೆಗಳ ಹಾದಿ ತಪ್ಪಿಸುವುದು ಸಹ ಇವರ ಕಾರ್ಯವಾಗಿರುತ್ತದೆ. ಹುಲ್ಲುಗಾವಲು ಪ್ರದೇಶಗಳಲ್ಲಿ ಅಡಗಿರಲು ಹುಲ್ಲಿನಂಥದ್ದೇ ಗಿಲ್ಲಿ ಸೂಟ್ ಧರಿಸುವ ಯೋಧರನ್ನು ಕಾಣುತ್ತೇವವಲ್ಲ, ಅವರೇ ಸ್ನೈಪರ್ಸ್.
ಮಿಲಿಟರಿ ಹಿರಿಯ ಅಧಿಕಾರಿಯ ರಕ್ಷಣೆಗೆ ಭಾರತೀಯ ವಾಯುಸೇನೆಯ ಮಿಂಚಿನ ಕಾರ್ಯಾಚರಣೆ..!
ಇಟ್ಟ ಗುರಿ ತಪ್ಪಲ್ಲ
ಬಂದೂಕು ವಿದ್ಯೆಯಲ್ಲಿ ಅಸಾಮಾನ್ಯ ನೈಪುಣ್ಯತೆ ಇವರದ್ದು. ಅತ್ಯಂತ ದೂರದಿಂದಲೂ ಗುಂಡು ಚಲಾಯಿಸಬಲ್ಲರು. ಗುಪ್ತ ಸ್ಥಳದಿಂದ ಇಟ್ಟ ಗುರಿ ತಪ್ಪದಂತೆ ಕರಾರುವಕ್ಕಾಗಿ ಗುಂಡು ಹಾರಿಸುತ್ತಾರೆ. ಮರೆಯಲ್ಲಿದ್ದುಕೊಂಡು ಯುದ್ಧ ನಡೆಸುವುದು ಹೆಚ್ಚು. ಒಳನುಸುಳುವಿಕೆ, ಯುದ್ಧರಂಗದ ವಿಶ್ಲೇಷಣೆ, ತಂತ್ರಗಾರಿಕೆಯಲ್ಲೂ ತರಬೇತಿ ಪಡೆದಿರುತ್ತಾರೆ. ನಮ್ಮ ಗಡಿ ಭದ್ರತಾ ಪಡೆಯಲ್ಲಿ ಮಹಿಳೆಯೊಬ್ಬರು ಈ ಸ್ಥಾನಕ್ಕೇರುವುದೆಂದರೆ ಅತ್ಯಂತ ಸಾಧನೆಯೇ ಸರಿ.