ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದರೂ ನಿರ್ವಹಣೆ ಇಲ್ಲದೆ ಸೊರಗಿದ ರಾಕ್‌ ಗಾರ್ಡನ್‌

ಅದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬುಡಕಟ್ಟು ಜನಾಂಗಗಳ ಕಲೆ, ಸಂಸ್ಕೃತಿ ಬಿಂಬಿಸುವ ಶಿಲ್ಪಕಲಾಕೃತಿಗಳ ತೋಟ. ಅದರಲ್ಲೂ ಈ ತೋಟ ಹೆದ್ದಾರಿಗೆ ಹೊಂದಿಕೊಂಡು ಕಡಲತೀರದಲ್ಲೇ ಇರೋದ್ರಿಂದ ಸಾಕಷ್ಟು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ತೆರಳುತ್ತಿದ್ದರು. ಆದ್ರೆ, ಇದೀಗ ಈ ಗಾರ್ಡನ್‌‌ ಸರಿಯಾದ ನಿರ್ವಹಣೆಯಿಲ್ಲದೇ, ಪ್ರವಾಸಿಗರ ಈ ಆಕರ್ಷಣೆಯ ತಾಣ ತನ್ನ ಅಂದ ಕಳೆದುಕೊಳ್ಳುವಂತಾಗಿದೆ. 

First Published Mar 13, 2022, 4:01 PM IST | Last Updated Mar 13, 2022, 4:01 PM IST

ಒಂದೆಡೆ ವಿವಿಧ ಸಮುದಾಯಗಳ ಸಂಪ್ರದಾಯವನ್ನು ತಿಳಿಸುವ ಶಿಲ್ಪಕಲಾಕೃತಿಗಳು ಬಣ್ಣ ಕಳೆದುಕೊಂಡು ಧೂಳು ಹಿಡಿಯುತ್ತಿದ್ದರೆ, ಇನ್ನೊಂದೆಡೆ ಕಲಾಕೃತಿಗಳು ಇದ್ದ ಸ್ಥಳದಲ್ಲಿ ಬೆಳೆದುಕೊಂಡಿರುವ ಗಿಡ ಗಂಟಿಗಳು. ಮತ್ತೊಂದೆಡೆ ಹೆದ್ದಾರಿಗೆ ಹೊಂದಿಕೊಂಡೇ ಇದ್ರೂ ಬೆರಳೆಣಿಕೆಯಷ್ಟು ಪ್ರವಾಸಿಗರೂ ಬರದೇ ಬಿಕೋ ಎನ್ನುತ್ತಿರುವ ಪ್ರವಾಸಿ ತಾಣ. ಈ ಎಲ್ಲ ದೃಶ್ಯಗಳು ಕಂಡುಬರೋದು ಉತ್ತರಕನ್ನಡ ಜಿಲ್ಲೆಯ ಕಾರವಾರ(karwar)ದ ರಾಕ್ ಗಾರ್ಡನ್‌ನಲ್ಲಿ. 

ಒಂದು ಕಾಲದಲ್ಲಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುವಂಥ ಪ್ರವಾಸಿ ತಾಣವಾಗಿದ್ದ ರಾಕ್‌ಗಾರ್ಡನ್‌(Rock Garden)ನತ್ತ ಇದೀಗ ಪ್ರವಾಸಿಗರೇ ಸುಳಿಯದ ಸ್ಥಿತಿ ನಿರ್ಮಾಣವಾಗಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡು ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಕಳೆದ 2018ರಲ್ಲಿ ರಾಕ್‌ಗಾರ್ಡನ್ ನಿರ್ಮಾಣವಾಗಿತ್ತು. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಕಲೆ, ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳನ್ನು ರಚಿಸಿ ಸ್ಥಾಪಿಸಲಾಗಿತ್ತು. ಕೋಟೆಯ ಮಾದರಿಯಲ್ಲಿ ಸುತ್ತಲೂ ಕಲ್ಲುಗಳನ್ನೇ ಬಳಸಿ ನಿರ್ಮಿಸಲಾಗಿದ್ದ ಈ ರಾಕ್ ಗಾರ್ಡನ್ ದೂರದಿಂದಲೇ ಪ್ರವಾಸಿಗರನ್ನು ಸೆಳೆಯುವಂತೆ ನಿರ್ಮಾಣವಾಗಿದ್ದು, ಉದ್ಘಾಟನೆಯಾದ ವರ್ಷದಲ್ಲೇ ಕೋಟ್ಯಂತರ ರೂಪಾಯಿ ಆದಾಯವನ್ನೂ ತಂದುಕೊಟ್ಟಿತ್ತು.

Food And Mood: ಮೂಡ್‌ ಕೆಟ್ಟಾಗ ಹ್ಯಾಪಿಯಾಗೋಕೆ ಬೆಸ್ಟ್ ಆಹಾರವಿದು

ಬಳಿಕ ರಾಕ್‌ಗಾರ್ಡನ್ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿದ್ದು, ಈ ನಡುವೆ 2020ರಲ್ಲಿ ಅಪ್ಪಳಿಸಿದ ಚಂಡಮಾರುತ ಹಾಗೂ ಕೊರೊನಾ ಕಾರಣದಿಂದಲೂ ರಾಕ್‌ಗಾರ್ಡನ್ ಬಂದ್ ಆಗಿತ್ತು. ಕೋವಿಡ್ ನಿಯಮಗಳನ್ನು ಸಡಿಲಿಕೆ ಮಾಡಿದ ಬಳಿಕವೂ ಸೂಕ್ತ ನಿರ್ವಹಣೆ ಕಾಣದ ಕಾರಣ ಶಿಲ್ಪಕಲಾಕೃತಿಗಳು ಬಣ್ಣ ಕಳೆದುಕೊಂಡಿದ್ದು, ರಾಕ್ ಗಾರ್ಡನ್‌ ಅಂದ ಕಳೆದುಕೊಳ್ಳುವಂತಾಗಿದೆ.  

 Viral Video: ಜೀವಂತ ಹಲ್ಲಿಯನ್ನು ತಿನ್ನಲು ಮುಂದಾದ ಮಗು. ಮುಂದೆ ಆಗಿದ್ದೇನು ?

 ಇನ್ನು ಈ ರಾಕ್‌ಗಾರ್ಡನ್ ಪ್ರಾರಂಭಗೊಂಡ 2018-19ರಲ್ಲಿ ಸುಮಾರು 2.13 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2019-20ರಲ್ಲಿ 1.48 ಲಕ್ಷ ಹಾಗೂ ಕೊರೊನಾ ಮೊದಲನೇಯ ಅಲೆಯ ಬಳಿಕ 2020-21ರಲ್ಲಿ 24 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಅಂಕಿ ಅಂಶಗಳ ಪ್ರಕಾರ ಕೋವಿಡ್ ಅವಧಿ ಹೊರತುಪಡಿಸಿ ಉಳಿದ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡಿದ್ದು ಸಾಕಷ್ಟು ಆದಾಯವನ್ನು ತಂದುಕೊಟ್ಟಿದೆ. ರಾಕ್ ಗಾರ್ಡನ್ ನಿರ್ವಹಣೆ ಸಂಪೂರ್ಣವಾಗಿ ಖಾಸಗಿ ಸಂಸ್ಥೆ ನಡೆಸುತ್ತಿದ್ದರೂ, ಸರಕಾರದಿಂದ ಸಾಕಷ್ಟು ಹಣ ಬಿಡುಗಡೆಯಾಗಲು ಬಾಕಿಯಿದೆ. ಈ ಕಾರಣದಿಂದ ಕಲಾಕೃತಿಗಳಿಗೆ ಪೈಂಟಿಂಗ್ ಮಾಡದೇ, ಬೆಳೆದಿರುವ ಕಳೆಹುಲ್ಲು ತೆರವುಗೊಳಿಸದೇ ನಿರ್ಲಕ್ಷ್ಯ ವಹಿಸಿರುವುದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ರಾಕ್‌ ಗಾರ್ಡನ್ ನಿರ್ವಹಣಾ ಕೆಲಸಕ್ಕೆ ಕೆಲವು ಹಳೆಯ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ. ಆದರೆ, ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ ಪ್ರವಾಸಿಗರಿಗೆ ರಾಕ್ ಗಾರ್ಡನ್ ವೀಕ್ಷಣೆಗೆ ಅನುಕೂಲ ಮಾಡಿಕೊಡೋದಾಗಿ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದ್ದ ರಾಕ್‌ಗಾರ್ಡನ್ ಇದೀಗ ಸೂಕ್ತ ನಿರ್ವಹಣೆಯಿಲ್ಲದೇ ಹಾಳು ಕೊಂಪೆಯಂತಾಗುತ್ತಿದೆ. ಇನ್ನಾದ್ರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ರಾಕ್‌ಗಾರ್ಡನ್‌ ಅನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಪ್ರವಾಸಿಗರಿಗೆ ಅತ್ಯುತ್ತಮ ತಾಣವಾಗಿ ಮಾರ್ಪಡಿಸಬೇಕಿದೆ.

Video Top Stories