ಉರುಳಿದ ಮರಗಳಲ್ಲಿ ಅರಳುವ ಕಲೆ; ಗುಡ್ಡಳ್ಳಿಯಲ್ಲೊಬ್ಬ ಅಪರೂಪದ ಕಲಾವಿದ

ಕಾರವಾರದ ಗುಡ್ಡಳ್ಳಿಯಲ್ಲೊಬ್ಬ ಅನಕ್ಷರಸ್ಥ ಕಲಾವಿದ ಉರುಳಿದ ಮರಗಳಿಂದ ಅದ್ಭುತ ಕೆತ್ತನೆಗಳನ್ನು ಮಾಡಿ ಗುಡ್ಡದ ಸೌಂದರ್ಯ ಹೆಚ್ಚಿಸುತ್ತಾರೆ. ಅವರೆಂಥ ಅಪರೂಪದ ಕಲಾವಿದರು ನೋಡಿ..

First Published Apr 4, 2022, 1:53 PM IST | Last Updated Apr 4, 2022, 1:53 PM IST

ಕಾರವಾರ(Karwar)ದ ಗುಡ್ಡಳ್ಳಿಗೆ ಟ್ರಕ್ಕಿಂಗ್(Trekking) ಹೋದವರು ಗುಡ್ಡ ಭಾಗದಿಂದ ಇಳಿಯುತ್ತಿದ್ದಂತೇ ಮನೆಯೊಂದು ಸಿಗುತ್ತದೆ.. ಮನೆಯ ಅಂಗಣ ಪ್ರವೇಶಿಸುತ್ತಿದ್ದಂತೇ ಮರದ ಗದೆ, ಹಾರ್ನ್‌ಬಿಲ್, ಹುಲಿ, ಹಕ್ಕಿ, ಮೊಸಳೆ, ಕಡವೆ ಮುಂತಾದ ಕಾಡು ಪ್ರಾಣಿ ಹಾಗೂ ಪಕ್ಷಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಇನ್ನು ಸ್ವಲ್ಪ ಮುಂದಕ್ಕೆ ಹೋದಂತೆ ಸಿನಿಮಾ ನಟ ಪುನೀತ್ ರಾಜ್ ಕುಮಾರ್, ಪೊಲೀಸರು, ಮದುಮಗಳು ಮುಂತಾದ ಅತ್ಯದ್ಭುತ ಕಲಾಕೃತಿಗಳು ಕೂಡಾ ಇಲ್ಲಿದ್ದು, ಜಿಂಕೆ ತಲೆ, ಖಡ್ಗ, ಕೋವಿಗಳನ್ನು ಕೂಡಾ ಇಲ್ಲಿ ಕಾಣಬಹುದಾಗಿದೆ. ಇದೇ ಕಲಾವಿದ ವಿಶ್ರಾಮ್ ಬಾಬು ಗೌಡ ಅವರ ಮನೆ.

ಹೌದು, ಕಾರವಾರದಲ್ಲಿ ಚಾರಣ ಪ್ರಿಯರಿಗೆ ಅತ್ಯಂತ ಫೇವರೇಟ್ ಸ್ಪಾಟ್ ಆಗಿರುವ ಗುಡ್ಡಳ್ಳಿಯನ್ನು ಮತ್ತಷ್ಟು ಆಕರ್ಷಕವಾಗಿ ರೂಪಿಸಿರುವುದು ಇಲ್ಲಿನ ಕಲಾವಿದ ವಿಶ್ರಾಮ್ ಬಾಬು ಗೌಡ. ಅರಣ್ಯಾಧಿಕಾರಿಗಳ ಅನುಮತಿಯೊಂದಿಗೆ ಕಾಡಿ‌ನಲ್ಲಿ ಬಿದ್ದ ಮರಗಳು ಹಾಗೂ ಅವುಗಳ ಬೇರುಗಳ‌ನ್ನು ಮನೆಗೆ ತೆಗೆದುಕೊಂಡು ಬಂದು ಅವುಗಳಿಗೆ ಸುಂದರ ರೂಪ ನೀಡುವ ಕಾರ್ಯ ಮಾಡುವ ಈ ಕಲಾವಿದ(artist) ಇದಕ್ಕೆ ತೆಗೆದುಕೊಳ್ಳುವ ಸಮಯ ಬರೋಬ್ಬರಿ 20-25ದಿನ. ಕೂಲಿ ಕೆಲಸದೊಂದಿಗೆ ತನ್ನ ಬಿಡುವಿನ ಸಮಯದಲ್ಲಿ ಇವುಗಳ ನಿರ್ಮಾಣಕ್ಕೆ ತೊಡಗುವ ವಿಶ್ರಾಮ್ ಗೌಡರಿಗೆ ತನ್ನ ಅಣ್ಣ ತಮ್ಮಂದಿರು ಸಾಥ್ ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ಈ ಮೂರ್ತಿಗಳು ಇವರ ಮನೆಯ ಎದುರಲ್ಲೇ ನಿಲ್ಲಿಸಲ್ಪಟ್ಟಿದ್ದು, ಅವುಗಳನ್ನು ಜಾಗ್ರತೆಯಾಗಿ ನೋಡಿಕೊಳ್ಳುತ್ತಿದ್ದಾರೆ. ಸರಕಾರದಿಂದ ಸಹಾಯ ದೊರಕಿದಲ್ಲಿ ಇವುಗಳಿಗೆ ಶೆಡ್ ನಿರ್ಮಾಣ ಮಾಡಿ ಸಂರಕ್ಷಿಸುವ ಹಾಗೂ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಾನ ಮಾಡುವ ಯೋಚನೆ ಹೊಂದಿದ್ದಾರೆ.

Super Photo: ಈ ಚಿತ್ರದಲ್ಲಿ ಅಡಗಿರುವ ಪಕ್ಷಿ ಗುರುತಿಸಿ... ಅದ್ಭುತ ಪೋಟೋ!

ಕಾರವಾರ ನಗರ ಹೊರಭಾಗದಿಂದ ನಡೆಯಲು ಪ್ರಾರಂಭಿಸಿ ಸುಮಾರು 10-15 ಕಿ.ಮೀ. ಗುಡ್ಡದ ಮೇಲ್ಭಾಗದತ್ತ ಸಾಗಿದರೆ ಗುಡ್ಡಳ್ಳಿ(Guddalli)ಯ ತುತ್ತತುದಿಯನ್ನು ತಲುಪಬಹುದು. ಕಾಡಿನ ಮಧ್ಯೆ ಕಡಿದಾದ ದಾರಿಯಲ್ಲಿ ಸಾಗಿ ಗುಡ್ಡಳ್ಳಿ ತುದಿ ಭಾಗದಲ್ಲಿರುವ ಬಂಡೆಗಳ ಮೇಲೆ ಹತ್ತಿ ನೋಡಿದರೆ ಸಮುದ್ರ ಭಾಗ, ಮಂಜು ಮುಸುಕಿದ ಸಹ್ಯಾದ್ರಿ ಬೆಟ್ಟ, ಹಚ್ಚಹಸುರಿನ ಕಾನನ, ಸಮುದ್ರಕ್ಕೆ ಸೇರುವ ಕಾಳಿ ನದಿ ಸೇರಿದಂತೆ ಪ್ರಕೃತಿಯ ನಯನ ಮನೋಹರ ದೃಶ್ಯಗಳನ್ನು ಕಾಣಬಹುದಾಗಿದೆ. ಇದೇ ಗುಡ್ಡದ ತಪ್ಪಲನ್ನು ಮತ್ತಷ್ಟು ಸುಂದರವಾಗಿಸುತ್ತಿರುವ ವಿಶ್ರಾಮ್ ಅವರಿಗೆ ಸರ್ಕಾರದ ನೆರವು ಸಿಗಬೇಕಿದೆ. ಇದರಿಂದ ಕಲೆಗೆ ಪ್ರೋತ್ಸಾಹ ಸಿಗುವ ಜೊತೆಗೆ, ಪ್ರವಾಸೋದ್ಯಮವೂ ಅಭಿವೃದ್ಧಿಗೊಳ್ಳುತ್ತದೆ.