ಕಾಂಗ್ರೆಸ್ ಶಾಂತಿ, ಅಭಿವೃದ್ಧಿ ವಿರೋಧಿ, ಅದು ಅಧಿಕಾರಕ್ಕೆ ಬಂದ್ರೆ ರಾಜ್ಯವೇ ನಾಶವಾಗುತ್ತದೆ: ಪ್ರಧಾನಿ ಮೋದಿ
ಮುಲ್ಕಿಯಲ್ಲಿ ನವಕರ್ನಾಟಕ ಸಂಕಲ್ಪ ಸಮಾವೇಶ ಆಯೋಜಿಸಲಾಗಿದ್ದು, ಇಲ್ಲಿ ಪ್ರಧಾನಿ ಮೋದಿ ಮಾತನಾಡಿ ಕಾಂಗ್ರೆಸ್ -ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲು ಕಾಂಗ್ರೆಸ್ ಮತ ಕೇಳುತ್ತಿದೆ ಎಂದು ಕಿಡಿಕಾರಿದರು.
ಮುಲ್ಕಿ: ವಿಧಾನಸಭಾ ಚುನಾವಣೆಗೆ ಇನ್ನೊಂದು ವಾರ ಬಾಕಿ ಇದ್ದು, ಪ್ರಧಾನಿ ಮೋದಿ ಕೊನೆಯ ಸುತ್ತಿನಲ್ಲಿ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮುಲ್ಕಿಯಲ್ಲಿ ನವಕರ್ನಾಟಕ ಸಂಕಲ್ಪ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿ ಅವರಿಗೆ ರುದ್ರಾಕ್ಷಿ ಮಾಲೆ, ಕೇಸರಿ ಶಾಲು, ಗಣೇಶ, ಕೃಷ್ಣನ ವಿಗ್ರಹ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಕಟೀಲು ದುರ್ಗಾಪರಮೇಶ್ವರಿ ಪ್ರತಿಮೆ ನೀಡಿ ಸ್ವಾಗತಿಸಲಾಯಿತು. ಜೊತೆಗೆ ಧರ್ಮಸ್ಥಳದ ಪ್ರಸಾದ ನೀಡಿ ಶುಭ ಹಾರೈಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ತುಳುವಿನಲ್ಲಿ ಮಾತನ್ನು ಆರಂಭಿಸಿದರು. ಅಲ್ಲದೇ ಭಜರಂಗ ಬಲಿಗೆ ಜೈ ಎಂದರು. ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ ಪ್ರಗತಿಯೇನು ಆಗಿಲ್ಲ, ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ವನಾಶ ಆಗುವುದು ಖಂಡಿತ. ಕಾಂಗ್ರೆಸ್ ಶಾಂತಿ ಮತ್ತು ಅಭಿವೃದ್ಧಿಯ ವೈರಿಯಾಗಿದ್ದು, ಆತಂಕವಾದಿಗಳ ರಕ್ಷಣೆಗೆ ಮುಂದಾಗುತ್ತದೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡಿಕೊಂಡು ಬರುತ್ತಿದೆ. ನಿಮ್ಮ ಒಂದು ಮತ ದೆಹಲಿಯಲ್ಲಿ ಭದ್ರವಾದ ಸರ್ಕಾರವನ್ನು ರಚನೆ ಮಾಡಿದ್ದರಿಂದ ಇಡೀ ವಿಶ್ವದಲ್ಲಿ ಭಾರತದ ಪರ ಘೋಷಣೆಗಳು ಕೇಳುತ್ತಿದೆ. ಕರ್ನಾಟಕದಲ್ಲಿ ಸ್ಥಿರ ಮತ್ತು ಬಲಿಷ್ಠ ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂದು ಹೇಳಿದರು.
ಇದನ್ನೂ ವೀಕ್ಷಿಸಿ: ಕರಾವಳಿಯಲ್ಲಿ ಮೋದಿಗೆ ಭರ್ಜರಿ ಸ್ಪಂದನೆ: ರುದ್ರಾಕ್ಷಿ ಹಾರ ಹಾಕಿ ಸ್ವಾಗತ