Chikkamagaluru: ಎರಡು ದಶಕಗಳಿಂದ ಸೂರಿಗಾಗಿ ಮಹಿಳೆಯ ಏಕಾಂಗಿ ಹೋರಾಟ..!
* ಸೂರಿಗಾಗಿ ಇರೋ ಬರೋ ಕಚೇರಿ ಅಲೆದ್ರೂ ಮನೆಯಂತೂ ಕಟ್ಟೋಕೆ ಅಗ್ಲಿಲ್ಲ
* ರಸ್ತೆಯಲ್ಲಿಯೇ ಗುಡಿಸಲು ಕಟ್ಟಿ ಅದ್ರಲ್ಲಿಯೇ ಬದುಕು ಸಾಗಿಸ್ತಾ ಇದೆ ಕುಟುಂಬ
* ಒಂದೆಡೆ ಸೂರಿಯಿಲ್ಲ ಮತ್ತೊಂದೆಡೆ ಅಂಗವೈಫಲ್ಯ, ಶ್ರಮಕ್ಕೆ ಬೆಲೆಯಿಲ್ಲ
ಚಿಕ್ಕಮಗಳೂರು(ಮಾ.29): ಗಂಡ ಪಾರ್ಶ್ವುವಾಯು ಪೀಡಿತ. ಮಕ್ಕಳು ವಿಶೇಷ ಚೇತನರು. ಏಕಾಂಗಿ ಮಹಿಳೆ ಹೆಗಲಿಗೆ ಸಂಸಾರದ ನೊಗ. ಇಷ್ಟು ಸಾಲ್ದು ಅಂತ ಕಿತ್ತು ತಿನ್ನೋ ಬಡತನ. ಕೊನೆ ಪಕ್ಷ ಇರೋದಕ್ಕಾದ್ರು ಒಂದು ಮನೆ ಕೊಡಿ ಅಂತ ಗೋಗರೆದ್ರು ಕೇಳೋರಿಲ್ಲ. ಎರಡು ದಶಕಗಳಿಂದ ಸೂರಿಗಾಗಿ ಸರ್ಕಾರಿ ಕಚೇರಿ ಅಲೆದು ಕೊನೆಗೆ ರಸ್ತೆ ಜಾಗದಲ್ಲೇ ಗುಡಿಸಲು ನಿರ್ಮಿಸಿಕೊಂಡು ಬದುಕುವ ದುಸ್ಥಿತಿ ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದ ಅಣ್ಣಯ್ಯ-ಕಾಂತಮಣಿ ದಂಪತಿ ತುತ್ತು ಅನ್ನಕ್ಕೂ ಪರದಾಡುವ ದಯನೀಯ ಸ್ಥಿತಿ. ಬೆಳವಾಡಿ ಹೊಯ್ಸಳರ ಶಿಲ್ಪಕಲೆಗೆ ಹೆಸರಾದ ಗ್ರಾಮ. ಈ ಗ್ರಾಮದಲ್ಲಿ ಈ ನತದೃಷ್ಟ ಕುಟುಂಬ ದಶಕಗಳಿಂದ ಒಂದು ಸೂರಿಗಾಗಿ ಹೋರಾಡುತ್ತಿದ್ದು, ರಸ್ತೆ ಜಾಗದಲ್ಲೇ ಗುಡಿಸಲು ಹಾಕಿಕೊಂಡು ಬದುಕುತ್ತಿದೆ. 14 ವರ್ಷಗಳ ಹಿಂದೆ ಕುಟುಂಬದ ಆಧಾರಸ್ತಂಭವಾಗಿದ್ದ ಅಣ್ಣಯ್ಯ ಪಾರ್ಶ್ವುವಾಯುಗೆ ತುತ್ತಾದ್ರು. ಅಂದಿನಿಂದ ಪತಿ ಜೊತೆ ಅಂಗವಿಕಲ ಮಗಳು ಹಾಗೂ ಬುದ್ಧಿಮಾಂದ್ಯ ಮಗನನ್ನ ನೋಡಿಕೊಳ್ಳುವ ಜವಾಬ್ದಾರಿ ಕಾಂತಮಣಿ ಮೇಲಿದೆ. ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದರು ಸೂರಿನಿಂದ ವಂಚಿತರಾಗಿದ್ದಾರೆ. ಎರಡು ದಶಕಗಳಿಂದ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲಾ ಕೇಂದ್ರದ ಎಲ್ಲಾ ಕಚೇರಿಗೆ ಅಲೆದರೂ ಒಂದು ಸೂರು ಸಿಕ್ಕಿಲ್ಲ. ಹತ್ತಾರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕರ್ನಾಟಕದಲ್ಲಿ ಧರ್ಮ ದ್ವೇಷ, ಸಿಎಂ ಬೊಮ್ಮಾಯಿಗೆ ಬುದ್ಧಿಜೀವಿಗಳಿಂದ ಮಹತ್ವದ ಪತ್ರ
ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರೋ ಇಲ್ಲಿನ ವೀರನಾರಾಯಣಸ್ವಾಮಿ ದೇವಾಲಯ ಜಗತ್ಪ್ರಸಿದ್ಧಿ. ವೀರನಾರಾಯಣಸ್ವಾಮಿ, ವೇಣುಗೋಪಾಲಸ್ವಾಮಿ ಹಾಗೂ ಯೋಗನರಸಿಂಹಸ್ವಾಮಿಯನ್ನ ಒಳಗೊಂಡಿರೋ ಈ ದೇಗುಲ ತ್ರಿಕೂಟಚಲ ದೇವಸ್ಥಾನ ಎಂದೇ ಖ್ಯಾತಿ. ಶೃಂಗೇರಿ ಶಾರದಾ ಮಠದ ಅಧೀನದಲ್ಲಿರೋ ಈ ದೇವಾಲಯ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಆಡಳಿತಕ್ಕೊಳಪಟ್ಟಿದೆ. ಆಕರ್ಷಕ ಮತ್ತು ಸುಂದರವಾದ ದೇವಸ್ಥಾನವೂ ಹೌದು. ಇಲ್ಲಿನ ಈ ತ್ರಿಮೂರ್ತಿ ದೇವರುಗಳೇ ಅಣ್ಣಯ್ಯ ಕುಟುಂಬಕ್ಕೆ ಕಂಟಕವಾಗಿದ್ದಾರೆ. ದೇವಾಲಯದ ನೂರು ಮೀಟರ್ ಸುತ್ತಳತೆಯಲ್ಲಿ ಯಾವುದೇ ಮನೆಗಳ ಮರು ನಿರ್ಮಾಣ ಅಥವಾ ಹೊಸದಾಗಿ ನಿರ್ಮಾಣ ಮಾಡಲು ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ, ಅಣ್ಣಯ್ಯ ಅವರ ಮನೆ ದೇವಾಲಯ ಸಮೀಪವೇ ಇದ್ದು, ದುರಸ್ತಿಗೆ ಅವಕಾಶವಿಲ್ಲದ ಕಾರಣ ಗಾಳಿ-ಮಳೆಗೆ ಮನೆ ನೆಲಕಚ್ಚಿತು. ಅಂದಿನಿಂದ ಅಣ್ಣಯ್ಯ ಕುಟುಂಬ ಬೀದಿಗೆ ಬಿದ್ದಿತು.