Belagavi: ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ: ಜನಸಾಗರ ನೋಡಿ ಭಾವುಕರಾದ ವೀರಯೋಧ..!
* ಸೇವಾ ನಿವೃತ್ತಿ ಹೊಂದಿದ ಶೌರ್ಯ ಚಕ್ರ ಪುರಸ್ಕೃತ ಸೇನಾಧಿಕಾರಿಗೆ ಅದ್ಧೂರಿ ಸ್ವಾಗತ
* ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಬಳಿಕ ಸನ್ಮಾನ
* ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಲೆಫ್ಟಿನೆಂಟ್ ಬಸಪ್ಪ ರಾಚಪ್ಪ ಮುಗಳಿಹಾಳ
ಬೆಳಗಾವಿ(ಮಾ.05): ಕುಂದಾನಗರಿ ಬೆಳಗಾವಿಗೆ ಸೇವಾ ನಿವೃತ್ತಿ ಹೊಂದಿ ಬಂದ ವೀರಯೋಧ ಗೌರವ ಲೆಫ್ಟಿನೆಂಟ್ ಬಸಪ್ಪ ರಾಚಪ್ಪ ಮುಗಳಿಹಾಳರನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಉತ್ತರಾಖಂಡ್‌ನ ಡೆಹ್ರಾಡೂನ್‌ನಿಂದ ಬೆಳಗಾವಿ ರೇಲ್ವೆ ನಿಲ್ದಾಣಕ್ಕೆ ಬಂದಿದ್ದ ವೀರಯೋಧ ಬಸಪ್ಪ ಮುಗಳಿಹಾಳ ರೇಲ್ವೆ ನಿಲ್ದಾಣದಲ್ಲಿ ನೆರೆದ ಜನರ ನೋಡಿ ಭಾವುಕರಾದರು. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಕೆ.ಎಸ್. ಗ್ರಾಮದ ವೀರಯೋಧ ಶೌರ್ಯ ಪ್ರಶಸ್ತಿ ಪುರಸ್ಕೃತ ಬಸಪ್ಪ ರಾಚಪ್ಪ ಮುಗಳಿಹಾಳ 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಬೆಳಗಾವಿಗೆ ಮರಳಿದ್ರು. ಉತ್ತರಾಖಂಡದ ಡೆಹ್ರಾಡೂನ್‌ನಿಂದ ತಾಯ್ನಾಡಿಗೆ ವಾಪಸ್ ಆದ ವೀರಯೋಧ ಬಸಪ್ಪ ಮುಗಳಿಹಾಳರನ್ನು ತುಂಬು ಹೃದಯದಿಂದ ಸ್ವಾಗತಿಸಿ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಯಿತು.
ರಾಯರ ಶ್ರೀಗುರು ವೈಭವೋತ್ಸವಕ್ಕೆ ಚಾಲನೆ, ವೀರೇಂದ್ರ ಹೆಗ್ಗಡೆ, ಕಿಚ್ಚ ಸುದೀಪ್ ಭಾಗಿ
ಬೆಳಗಾವಿಯ ರೇಲ್ವೆ ನಿಲ್ದಾಣದಿಂದ ಚನ್ನಮ್ಮ ವೃತ್ತದವರೆಗೆ ತೆರೆದ ವಾಹನದಲ್ಲಿ ಭಾರತ್ ಮಾತಾ ಕೀ ಜೈ ಘೋಷವಾಕ್ಯದೊಂದಿಗೆ ಕರೆತರಲಾಯಿತು. ಚನ್ನಮ್ಮ ವೃತ್ತದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಪತ್ನಿ ಸುಜಾತಾ ಜೊತೆ ಮಾಲಾರ್ಪಣೆ ಮಾಡಿದ್ರು. ಇದೇ ವೇಳೆ ಬೆಳಗಾವಿ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಹೂಗುಚ್ಛ ನೀಡಿ ಗೌರವ ಲೆಫ್ಟಿನೆಂಟ್ ಬಸಪ್ಪ ಮುಗಳಿಹಾಳರನ್ನು ಸ್ವಾಗತಿಸಿದ್ರು. ಬಳಿಕ ಚನ್ನಮ್ಮ ವೃತ್ತದಿಂದ ಅಶೋಕ ವೃತ್ತದ ಮಾರ್ಗವಾಗಿ ಬೆಳಗಾವಿ ಹೊರವಲಯ ಕಣಬರಗಿ ಬಳಿ ಸಂಕಲ್ಪ ಗಾರ್ಡನ್‌ನಲ್ಲಿ ಅದ್ಧೂರಿ ಸನ್ಮಾನ ಸಮಾರಂಭದ ವೇದಿಕೆಗೆ ಆಗಮಿಸಿದ್ರು. ಇದೇ ವೇಳೆ ಮಾತನಾಡಿದ ಯೋಧ ಬಸಪ್ಪ ಮುಗಳಿಹಾಳ ತಾವು 28 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಈ ದೇಹ ಮಾತ್ರ ನಿವೃತ್ತಿ ಆಗಿದೆ. ಆದ್ರೆ ನನ್ಮ ರಕ್ತದ ಕಣಕಣದಲ್ಲೂ ದೇಶಭಕ್ತಿ ಇದೆ. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಉಗ್ರರ ಜೊತೆ ಕಾಳಗದ ವೇಳೆ ಉಗ್ರನ ಗನ್ ವಶಕ್ಕೆ ಪಡೆದು ಆತನ ಸದೆಬಡಿದಿದ್ದೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನನಗೆ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣ್, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಶೌರ್ಯ ಚಕ್ರ ನೀಡಿ ಗೌರವಿಸಿದ್ರು. ಇಷ್ಟೊಂದು ಜನ ನನ್ನ ಸ್ವಾಗತಿಸಿರುವುದನ್ನ ನೋಡಿ ತುಂಬಾ ಸಂತಸವಾಗುತ್ತಿದೆ. ಯುವಕರು ಸೇನೆ ಸೇರಲು ಮುಂದೆ ಬರಬೇಕು ಅಂತಾ ಕರೆ ಕೊಟ್ರು.
ಇದೇ ವೇಳೆ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ದೇಶ ಕಾಯುವ ಯೋಧ ಅಂದ್ರೆ ದೇವರಿಗಿಂತ ಮಿಗಿಲಾದವರು. ಶೌರ್ಯಚಕ್ರ ಪುರಸ್ಕೃತ ಬಸಪ್ಪ ಮುಗಳಿಹಾಳ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ತನ್ನನ್ನೇ ತಾನು ಸಮರ್ಪಿಸಿ ದೇಶ ಕಾಯುವ ವೀರ ಯೋಧರು. ಬಸಪ್ಪರ ನಿವೃತ್ತಿ ಬದುಕು ಯುವಕರಿಗೆ ದೇಶಪ್ರೇಮ ಹುಟ್ಟಿಸುವ ಕಾರ್ಯ ಮಾಡಲಿ ಅಂತಾ ಶುಭಕೋರಿದ್ರು. ಬಸಪ್ಪ ಮುಗಳಿಹಾಳರ ಆದರ್ಶ ನಮ್ಮ ಎಲ್ಲಾ ಯುವಕರಿಗೆ ಇರಲಿ ಅಂತಾ ಹೇಳಿದ್ರು.