12 ವರ್ಷಗಳ ನಂತರ ತಾಯಿ-ಮಗ ಸಮ್ಮೀಲನ, ಓರಿಸ್ಸಾ ಟು ಉಡುಪಿ
* ಹನ್ನೆರಡು ವರ್ಷಗಳ ನಂತರ ಒಂದಾದ ತಾಯಿ ಮಗ
* ಮಂಗಳೂರಿನ ಬೀದಿಯಲ್ಲಿ ಅಲೆಯುತ್ತಿದ್ದವಳು ಮರಳಿ ಮನೆಗೆ
* ತಾಯಿ ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ್ದ ಮಕ್ಕಳು
* ನನ್ನವರು ಯಾರು ಇಲ್ಲ ಎಂದು ರೋಧಿಸುತ್ತಿದ್ದ ತಾಯಿ
* ವಿಶ್ವಾಸದ ಮನೆಯಲ್ಲಿ ತಾಯಿ-ಮಕ್ಕಳ ಪುನರ್ಮಿಲನ
ಉಡುಪಿ(ಸೆ. 19) ಅದೊಂದು ಅಪೂರ್ವ ಸಮ್ಮಿಲನ, ಹನ್ನೆರಡು ವರ್ಷಗಳ ಬಳಿಕ ತಾಯಿ ಮತ್ತು ಮಗ ಒಂದಾದ ಅಪೂರ್ವ ಕ್ಷಣ! ಅಮ್ಮ ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ್ದ ಮಗ ನನ್ನವರು ಯಾರಿದ್ದಾರೆ ಎಂಬ ಅರಿವು ಕೂಡಾ ಇಲ್ಲದ ತಾಯಿ... ಅವರಿಬ್ಬರ ಈ ಪುನರ್ಮಿಲನ ಕಟುಕರ ಕಣ್ಣಲ್ಲೂ ಕಣ್ಣೀರು ತರಿಸುವಂತಿತ್ತು. ಉಡುಪಿಯ ವಿಶ್ವಾಸದ ಮನೆ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು!
ಆಕೆಗೆ ಪತಿಯನ್ನು ಕಳೆದುಕೊಂಡ ನೋವು, ಒಂದೇ ಜೀವ ಎರಡು ದೇಹದ ನಿಂತಿದ್ದ ದಾಂಪತ್ಯ. ಐವರು ಮಕ್ಕಳನ್ನು ಹೇಗೆ ಸಾಕೋದಪ್ಪಾ ಅನ್ನೋ ಚಿಂತೆ. ಚಿಂತೆ ವಿಪರೀತವಾಗಿ ಮನಸ್ಸು ಸ್ಥಿಮಿತ ಕಳೆದುಕೊಂಡಿತ್ತು. ಒರಿಸ್ಸಾದ ಮಲ್ಲಕಾ ಬೇಗಮ್ ಅದು ಹೇಗೆ ಬಂದು ಕರ್ನಾಟಕ ಕರಾವಳಿ ಸೇರಿದರೋ ಗೊತ್ತಿಲ್ಲ. 12 ವರ್ಷಗಳ ಹಿಂದೆ ಮಂಗಳೂರಿನ ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ಮಹಿಳೆ, ಮಾನಸಿಕ ಅಸ್ವಸ್ಥೆಯಾಗಿ ಕಂಡವರ ಮೇಲೆ ರೇಗುತ್ತಿದ್ದರು. ಈ ಮಹಿಳೆಯ ಸ್ಥಿತಿ ಕಂಡು ಜನ ಮಮ್ಮಲ ಮರುಗಿದರೂ ಏನೂ ಮಾಡುವಂತಿರಲಿಲ್ಲ.
ಯಾರನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಕೊನೆಗೆ ಉಡುಪಿ ಜಿಲ್ಲೆಯ ಶಂಕರಪುರದ ವಿಶ್ವಾಸದ ಮನೆಗೆ ಸುದ್ದಿ ಮುಟ್ಟಿಸಲಾಯಿತು. ಮಾನಸಿಕ ಅಸ್ವಸ್ಥರು ಮತ್ತು ಅನಾಥರನ್ನು ಸಲಹುವ ಈ ಕೇಂದ್ರದಲ್ಲಿ, ಸೂಕ್ತ ಚಿಕಿತ್ಸೆ ನೀಡಲಾಯಿತು. ಒಂದೇ ತಿಂಗಳಲ್ಲಿ ಈ ಮಹಿಳೆ ಸುಧಾರಿಸಿದರು. ಆದರೆ ಆಕೆ ಮಾತನಾಡುತ್ತಿದ್ದ ಒರಿಯಾ ಭಾಷೆ ಯಾರಿಗೂ ಬರುತ್ತಿರಲಿಲ್ಲ. ಮಾಹಿತಿ ಸಂಗ್ರಹಿಸಿ ಕೊನೆಗೂ ಒರಿಸ್ಸಾದ ಕೆಲ ಜಿಲ್ಲೆಗಳನ್ನು ಸಂಪರ್ಕ ಮಾಡಿದರೂ ಪ್ರಯೋಜನವಾಗಲಿಲ್ಲ. ಕಳೆದ 12 ವರ್ಷಗಳಿಂದ ವಿಶ್ವಾಸದ ಮನೆಯಲ್ಲಿ ಇದ್ದ ಈ ಅಸ್ವಸ್ಥ ಮಹಿಳೆಗೆ ಬರೋಬ್ಬರಿ 12 ವರ್ಷಗಳ ನಂತರ ತನ್ನ ಮನೆ ಸೇರುವ ಸೌಭಾಗ್ಯ ಒದಗಿ ಬಂದಿದೆ. ಅಮ್ಮ ಉಡುಪಿಯಲ್ಲಿ ಇದ್ದಾಳೆ ಎಂಬುದು ಗೊತ್ತಾದ ನಂತರ ಮಗ ನೇರ ಆಶ್ರಮಕ್ಕೆ ಬಂದಿದ್ದಾನೆ. ಇವರಿಬ್ಬರು ಭೇಟಿಯಾದ ಸನ್ನಿವೇಶವನ್ನು ಕಂಡವರು ಭಾವುಕರಾಗಿದ್ದಾರೆ.
ಅಮ್ಮನ ಅನೈತಿಕ ಸಂಬಂಧವನ್ನೇ ತನ್ನ ಬಂಡವಾಳ ಮಾಡಿಕೊಂಡ ಮಗಳು
ಎಷ್ಟೇ ಪ್ರಯತ್ನಪಟ್ಟರೂ ಒರಿಸ್ಸಾದಲ್ಲಿ ಈಕೆಯ ಊರು ಯಾವುದು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡ ಆಶ್ರಮಕ್ಕೆ ಭೇಟಿ ಕೊಟ್ಟಿತ್ತು. ಅವರಲ್ಲಿ ಒರಿಸ್ಸಾ ಮೂಲದ ಕೆಲ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು. ಒಂದು ತಿಂಗಳ ಸತತ ಪ್ರಯತ್ನದಿಂದ ವಿದ್ಯಾರ್ಥಿಗಳು ಮಲ್ಲಕ ಬೇಗಂಳ ಮನೆ ಪತ್ತೆಮಾಡಿದ್ದಾರೆ. ಈಕೆ ಮನೆಬಿಟ್ಟು ಹೋದ ನಂತರ ಐವರು ಮಕ್ಕಳು, ಅನಾಥರಾಗಿಯೇ ಬೆಳೆದಿದ್ದರು. ಹರಿಯುವ ನದಿಯಲ್ಲಿ ತಾಯಿ ಕೊಚ್ಚಿಹೋಗಿರಬೇಕು ಎಂದೇ ಭಾವಿಸಿದ್ದರು. ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಪ್ರತಿದಿನ ಕಣ್ಣೀರಿಡುತ್ತಿದ್ದರು.
ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ್ದ ತಾಯಿ 12 ವರ್ಷಗಳ ನಂತರ ಸಿಕ್ಕಾಗ, ಇಡೀ ಕುಟುಂಬ ಖುಷಿ ಪಟ್ಟಿದ್ದೆ. ತಾಯಿ ಕಣ್ಮರೆಯಾದಾಗ ಹತ್ತು ವರ್ಷ ಪ್ರಾಯ ವಾಗಿದ್ದ ತಹಜುದ್ದೀನ್‌ಗೆ ಈಗ 22 ರ ಹರೆಯ! ಈತ ಉಡುಪಿಗೆ ಬಂದು, ತಾಯಿಯನ್ನು ಕರೆದೊಯ್ಯುವ ಸಿದ್ಧತೆಯಲ್ಲಿದ್ದಾನೆ. ಈ ನಡುವೆ ಒರಿಸ್ಸಾದಿಂದ ಈ ಕುಟುಂಬದ ಪ್ರತಿಯೊಬ್ಬ ಸದಸ್ಯರು ವಿಡಿಯೋ ಕಾಲ್ ಮೂಲಕ ಮಲ್ಲಕಾ ಬೇಗಂ ಜೊತೆ ಮಾತನಾಡಿದ್ದಾರೆ. ನೂರಾರು ಅಸ್ವಸ್ಥರನ್ನು ಮರಳಿ ಮನೆಗೆ ಸೇರಿಸಿರುವ ವಿಶ್ವಾಸದ ಮನೆಯ ಸದಸ್ಯರಿಗೂ ಈ ಪುನರ್ಮಿಲನ ಖುಷಿಕೊಟ್ಟಿದೆ.