ಸಮಗ್ರ ನೀರಾವರಿಗಾಗಿ ಪಾದಯಾತ್ರೆ: ಯುವಕರ ಹೋರಾಟಕ್ಕೆ ರೈತರು, ಸ್ವಾಮೀಜಿಗಳು ಸಾಥ್

*  ವಿಜಯನಗರ ಜಿಲ್ಲೆಯನ್ನು ನೀರಾವರಿ ಜಿಲ್ಲೆಯನ್ನಾಗಿ ಮಾಡಲು ಪಣ
*  ಯುವಕರ ಹೋರಾಟಕ್ಕೆ ಕೈ ಜೋಡಿಸಿದ ರೈತರು ಮತ್ತು ಸ್ವಾಮೀಜಿಗಳು
*  ನೀರಾವರಿ ಯೋಜನೆಗೆ ಆಗ್ರಹಿಸಿ 168 ಕಿಮಿ ಪಾದಯಾತ್ರೆ
 

First Published May 31, 2022, 10:52 AM IST | Last Updated May 31, 2022, 10:52 AM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ಸುವರ್ಣ ನ್ಯೂಸ್, ಬಳ್ಳಾರಿ

ವಿಜಯನಗರ(ಮೇ.31):  ಆ ಜಲಾಶಯಕ್ಕೆ ರಾಜ್ಯದ ಎರಡನೇ ದೊಡ್ಡ ಜಲಾಶಯವೆನ್ನುವ ಹೆಗ್ಗಳಿಕೆ ಇದೆ. ಆದ್ರೇ ಆ ಜಲಾಶಯ ಇರೋ ಜಿಲ್ಲೆಗೆ ಮಾತ್ರ ಸಮಗ್ರ ನೀರು ಸಮರ್ಪಕವಾಗಿ ಸಿಗೋದೇ ಇಲ್ಲ. ಒಂದು ಕಡೆ ಕುಡಿಯೋ ನೀರಿನ ಅಭಾವ ಇದ್ರೇ, ಮತ್ತೊಂದು ಕಡೆ ಕೃಷಿಗೆ ನೀರು ಸಿಗೋದಿಲ್ಲ. ಅದರಲ್ಲೂ ಇದೀಗ ವಿಭಜನೆಗೊಂಡ ಬಳಿಕ ಸಣ್ಣ ಜಿಲ್ಲೆಯಾಗಿದ್ರೂ ಇಲ್ಲಿ ನೀರಿಗೆ ಇಂದಿಗೂ ಜನರು ಆಹಾಕಾರ ಪಡೋ ಸ್ಥಿತಿ ಇದೆ. ಹೀಗಾಗಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಯುವಕರ ಪಡೆಯೊಂದು ರೈತರ ಜೊತೆಗೂಡಿ ಸಮಗ್ರ ನೀರಾವರಿಗೆ ಆಗ್ರಹಿಸಿ ಇಡೀ ಜಿಲ್ಲೆಯಾದ್ಯಾಂತ 168 ಕಿ.ಮೀ. ಪಾದಯಾತ್ರೆ ಮಾಡುತ್ತಿದ್ದಾರೆ. 

ಇದೊಂದು ರೀತಿಯಲ್ಲಿ ದೀಪದ ಕಳೆಗೆ ಕತ್ತಲು ಅನ್ನೋ ಪದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಯಾಕಂದ್ರೆ, ರಾಜ್ಯದ ಎರಡನೇ ಅತಿದೊಡ್ಡ ತುಂಗಭದ್ರಾ ಜಲಾಶಯ ಇರೋ ನೂತನ ವಿಜಯನಗರ ಜಿಲ್ಲೆಯಲ್ಲಿ ಕೃಷಿ ಮತ್ತು ಕುಡಿಯೋದಕ್ಕೆ ಸಮರ್ಪಕವಾದ ನೀರು ಸಿಗೋದಿಲ್ಲ ಅಂದ್ರೇ ಯಾರಾದ್ರೂ ನಂಬುತ್ತಾರೆಯೇ ? ವಾಸ್ತವ ಚಿತ್ರಣ ನೋಡಿದ್ರೆ ನೀವಿದನ್ನು ನಂಬಲೇಬೇಕು.

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ! ವೀರಶೈವರ ವಿರುದ್ಧ ಸಿಡಿದೆದ್ದ ಲಿಂಗಾಯತ ಸ್ವಾಮೀಜಿಗಳು

ಹೌದು, 133 ಟಿಎಂಸಿ ಸಾಮಾರ್ಥ್ಯದ ತುಂಗಭದ್ರಾ ಜಲಾಯದಲ್ಲೀಗ ಹೂಳು ತುಂಬಿದ ಪರಿಣಾಮ 100 ಟಿಎಂಸಿ ನೀರು ಪ್ರತಿವರ್ಷ ಸಂಗ್ರಹವಾಗುತ್ತದೆ. ಡ್ಯಾಂನಲ್ಲಿರೋ ನೀರು ಬಳ್ಳಾರಿ ,ಕೊಪ್ಪಳ, ರಾಯಚೂರು ಮತ್ತು ವಿಜಯಯನಗರ ಜಿಲ್ಲೆ ಸೇರಿದಂತೆ ಆಂಧ್ರದ ನಾಲ್ಕಾರು ಜಿಲ್ಲೆಗಳ ಸರಿಸುಮಾರು ಮೂರು ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ಕೃಷಿಗೆ ಮತ್ತು ಕುಡಿಯೋದಕ್ಕೆ ನೀರನ್ನು ಒದಗಿಸುತ್ತದೆ. ಆದ್ರೇ ಜಲಾಶಯದ ಹಿನ್ನಿರಿನಲ್ಲಿ ಬರುವ ಮತ್ತು ವಿಜಯನಗರ ಜಿಲ್ಲೆ ವ್ಯಾಪ್ತಿಯ ಕೂಡ್ಲಿಗಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಬಹುತೇಕ ಜಮೀನಿಗಳಿಗೆ ಮತ್ತು ಕುಡಿಯೋದಕ್ಕೆ ನೀರು ಸಿಗುತ್ತಿಲ್ಲ. ಹೀಗಾಗಿ ಇಲ್ಲಿ ಯುವಕರ ಪಡೆಯೊಂದು ಜಿಲ್ಲೆಯ ಎಲ್ಲ ಮಠಾಧೀಶರೊಂದಿಗೆ 168 ಕಿ.ಮೀ. ಪಾದಯಾತ್ರೆ ಮಾಡೋ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

ಕೊಟ್ರೇಶ್ ಪಾದಯಾತ್ರೆ ನೇತೃತ್ವ ವಹಿಸಿದ ಯುವಕ

ಒಂದು ವಾರಗಳ ಕಾಲ ಪಾದಯಾತ್ರೆ ಮಾಡೋ ಮೂಲಕ ಪ್ರತಿ ಹಳ್ಳಿ ಹಳ್ಳಿಯಲ್ಲಿ ರೈತರನ್ನು ಒಗ್ಗೂಡಿಸೋ ಕೆಲಸವನ್ನು ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸಭೆ ಮಾಡೋ ಮೂಲಕ ಜಾಗೃತಿ ಮೂಡಿಸಿದ್ರೇ, ನಗರ ಪ್ರದೇಶದಲ್ಲಿ ಎತ್ತಿನ ಬಂಡಿ ಮೂಲಕ ಮೆರವಣಿಗೆ ಮಾಡೋ ಮೂಲಕ ಜನರಿಗೆ ನೀರಿನ ಸಮಸ್ಯೆ ಬಗ್ಗೆ ಅರಿವು ಮೂಡಿಸೋ ಕೆಲಸ ಮಾಡುತ್ತಿದ್ದಾರೆ. ನೂತನ ಜಿಲ್ಲೆಯಾಗಿದೆ ಕೇವಲ ಕಚೇರಿ ಬಂತು ಅಧಿಕಾರಿಗಳು ಬಂದ್ರು ಅಂದರೇ, ಯಾವುದೇ ಉಪಯೋಗವಾಗೋದಿಲ್ಲ. ನಮ್ಮ ನೀರು ನಮಗೆ ಬೇಕು ಅದನ್ನು ನೀಡೋದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಹರಿಸಬೇಕೆಂದು ನಂದಿಪುರ ಮಠದ ಶ್ರೀ ಮಹೇಶ್ವರ ಸ್ವಾಮೀಜಿ ಈ ವೇಳೆ ಆಗ್ರಹಿಸಿದ್ದಾರೆ.

ಇತ್ತೀಚಿನ ಪಾದಯಾತ್ರೆಗಳು ರಾಜಕೀಯ ಅಥವಾ ಅಧಿಕಾರದ ಆಸೆಗಾಗಿ ಮಾಡೋದೇ ಹೆಚ್ಚು. ಆದ್ರೇ, ಯಾವುದೇ ಸ್ವಾರ್ಥ ಇಲ್ಲದೇ ಯುವಕರ ಪಡೆಯೊಂದಿಗೆ ಸ್ವಾಮೀಜಿಗಳು ಹೆಜ್ಜೆ ಹಾಕೋ ಮೂಲಕ ಸಮಗ್ರ ನೀರಾವರಿ ಗಾಗಿ ಹೋರಾಟ ಮಾಡುತ್ತಿರೋದು ನಿಜಕ್ಕೂ ಮೆಚ್ಚುವಂತಹದ್ದು, ಆದ್ರೇ, ಇವರ ಹೋರಾಟಕ್ಕೆ ಯಶಸ್ವಿ ಸಿಗುತ್ತದೆಯೇ ಅನ್ನೋದನ್ನು ಕಾದು ನೋಡಬೇಕಿದೆ.
 

Video Top Stories