Belagavi: ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ? ಪಾಲಿಕೆ ಅಧಿಕಾರಿಯಿಂದಲೇ ಪತ್ರ
ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೀತಿದ್ಯಾ? ಇಂತಹ ಅನುಮಾನ ಮೂಡಲು ಕಾರಣ ಬೆಳಗಾವಿ ಮಹಾನಗರ ಪಾಲಿಕೆಯ ದುರಾಡಳಿತ ಬಗ್ಗೆ ಕಂದಾಯ ವಿಭಾಗದ ಉಪ ಆಯುಕ್ತರು ಬರೆದ ಪತ್ರ.
ಬೆಳಗಾವಿ (ಫೆ. 11): ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೀತಿದ್ಯಾ? ಇಂತಹ ಅನುಮಾನ ಮೂಡಲು ಕಾರಣ ಬೆಳಗಾವಿ ಮಹಾನಗರ ಪಾಲಿಕೆಯ ದುರಾಡಳಿತ ಬಗ್ಗೆ ಕಂದಾಯ ವಿಭಾಗದ ಉಪ ಆಯುಕ್ತರು ಬರೆದ ಪತ್ರ. ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ವಿಭಾಗ ಉಪ ಆಯುಕ್ತರು ಪತ್ರ ಬರೆದಿದ್ದೇ ತಡ ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ ಪತ್ರ ಬರೆದ ಅಧಿಕಾರಿ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೀತಿದ್ಯಾ? ಇಂತಹದ್ದೊಂದು ಅನುಮಾನ ಮೂಡಲು ಕಾರಣ ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಎಸ್.ಬಿ.ದೊಡಗೌಡರ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರ. ಹೌದು ಫೆಬ್ರವರಿ 2ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ತ ಬಿಸ್ವಾಸ್‌ರಿಗೆ ಪಾಲಿಕೆ ಉಪ ಆಯುಕ್ತ ಎಸ್.ಬಿ.ದೊಡಗೌಡರ ಪತ್ರವೊಂದನ್ನು ಬರೆದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ, ಆರೋಗ್ಯ, ಪಿಡಬ್ಲ್ಯೂಡಿ, ನಗರ ಯೋಜನಾಭಿವೃದ್ಧಿ ಸೇರಿ ವಿವಿಧ ವಿಭಾಗದಲ್ಲಿ ಅವ್ಯವಹಾರ ಆಗಿದೆ ಅಂತಾ ಆರೋಪಿಸಿದ್ದಾರೆ.
News Hour: ಸಮವಸ್ತ್ರ ಧರಿಸಿ ಕಾಲೇಜಿಗೆ ಬನ್ನಿ, ವಿದ್ಯಾರ್ಥಿಗಳಿಗೆ ಹೈಕೋರ್ಟ್ ಪಾಠ
ಮೂರು ಪುಟಗಳ ಸುದೀರ್ಘ ಪತ್ರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಕಳಪೆ ನಿರ್ವಹಣೆಯಿಂದ ಪಾಲಿಕೆ ಆದಾಯಕ್ಕೆ ನಷ್ಟವಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಹಾಲಿ ಮತ್ತು ಮಾಜಿ ಸದಸ್ಯರ ಜತೆಗೆ ಅಧಿಕಾರಿಗಳು ಶಾಮೀಲಾಗಿ ಅವ್ಯವಹಾರ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.ಬಡವರಿಗೆ ಮೀಸಲು ಇದ್ದ ನಿವೇಶನ ಕಾನೂನು ಬಾಹಿರವಾಗಿ ಒತ್ತುವರಿ ಆಗಿದ್ದು ಅದರ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಟಿಳಕವಾಡಿ, ಮಾಳಮಾರುತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ. ಟ್ರೇಡ್ ಲೈಸನ್ಸ್, ಕಮರ್ಷಿಯಲ್ ಲೈಸನ್ಸ್ ನೀಡುವ ವೇಳೆ ಮತ್ತು ನವೀಕರಣ ಮಾಡುವ ವೇಳೆ ಅವ್ಯವಹಾರ ಅಗಿದೆ.
ಪಾಲಿಕೆ ಬೆಲೆಬಾಳುವ ಜಮೀನು ಒತ್ತುವರಿ ತೆರವು ಮಾಡದೇ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಕಂದಾಯ ವಿಭಾಗದ ಸಿಬ್ಬಂದಿ ಉಪ ಆಯುಕ್ತರ ಮಾತು ಕೇಳುತ್ತಿಲ್ಲ. ಕಂದಾಯ ವಿಭಾಗದ ಜತೆಗೆ ಕಾನೂನು ವಿಭಾಗದ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆಯಿದೆ ಅಂತಾ ಪಾಲಿಕೆ ದುರಾಡಳಿತದ ಬಗ್ಗೆ ಸವಿವರ ಪತ್ರ ಬರೆದಿದ್ದಾರೆ. ಬೆಳಗಾವಿ ನಗರದಲ್ಲಿ 1960ರಲ್ಲಿ ಮಾಳಮಾರುತಿ ಬಡಾವಣೆ ನಿರ್ಮಾಣವಾಗಿತ್ತು. ಇದರಲ್ಲಿ 5124 ವಸತಿ ನಿವೇಶನಗಳ ನಿರ್ಮಾಣವಾಗಿತ್ತು. ಸರ್ಕಾರಿ ಇಲಾಖೆಗೆ ಮೀಸಲಿದ್ದ 1140 ನಿವೇಶನಗಳ ಪೈಕಿ ಹಲವು ನಿವೇಶನಗಳು ಒತ್ತುವರಿ ಆಗಿದ್ದು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದೇ ಲ್ಯಾಂಡ್ ಮಾಫಿಯಾಗೆ ಕುಮ್ಮಕ್ಕು ನೀಡಲಾಗುತ್ತಿದೆ. ಹೀಗಾಗಿ ಸರ್ಕಾರಕ್ಕೆ ಆಗುತ್ತಿರುವ ನಷ್ಟ ತಡೆಯುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಎಸ್.ಬಿ.ದೊಡಗೌಡರ ಮನವಿ ಮಾಡಿದ್ದಾರೆ. ಪಾಲಿಕೆ ದುರಾಡಳಿತದ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದ ಎಸ್.ಬಿ. ದೊಡಗೌಡರ್ ವಿರುದ್ಧ ಪಾಲಿಕೆ ಸಿಬ್ಬಂದಿ ರೊಚ್ಚಿಗೆದ್ದಿದ್ದಾರೆ. ಪತ್ರ ಬರೆದ ಎಸ್.ಬಿ.ದೊಡಗೌಡರ ವಿರುದ್ಧ ಕರ್ತವ್ಯಕ್ಕೆ ಗೈರಾಗಿ ಮಹಾನಗರ ಪಾಲಿಕೆ ಕಚೇರಿ ಮುಂದೆ ಸಿಬ್ಬಂದಿ ಧರಣಿ ನಡೆಸಿದ್ರು. ಎಸ್.ಬಿ.ದೊಡಗೌಡರ ಸುಳ್ಳು ಪತ್ರ ಬರೆದಿದ್ದಾರೆ. ಎಸ್.ಬಿ.ದೊಡಗೌಡರ್ ವರ್ಗಾವಣೆ ಮಾಡಬೇಕು ಅಂತಾ ಆಗ್ರಹಿಸಿದ್ರು. ಈ ವೇಳೆ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಭೇಟಿ ನೀಡಿದ್ರು. ಮಹಾನಗರ ಪಾಲಿಕೆ ಸಿಬ್ಬಂದಿ ಮುಷ್ಕರದಿಂದ ವಿವಿಧ ಕೆಲಸಕ್ಕೆ ಆಗಮಿಸಿದ ಸಾರ್ವಜನಿಕರು ಪರದಾಡುವಂತಾಯಿತು.
ಒಟ್ಟಾರೆಯಾಗಿ ಪಾಲಿಕೆಯ ದುರಾಡಳಿತ ಬಗ್ಗೆ ಪಾಲಿಕೆ ಅಧಿಕಾರಿಯೇ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಹಾನಗರ ಪಾಲಿಕೆ ಅವ್ಯವಹಾರ ಬಗ್ಗೆ ಅಧಿಕಾರಿಯೇ ಪತ್ರ ಬರೆದಿದ್ದು ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸರ್ಕಾರದ ಆದಾಯಕ್ಕೆ ನಷ್ಟ ಆಗುತ್ತಿದ್ರೆ ಅದಕ್ಕೆ ಕಾರಣ ಏನು ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ ಎಂಬುದು ಸಾರ್ವಜನಿಕರ ಆಗ್ರಹ.