Asianet Suvarna News Asianet Suvarna News

ಸಕತ್ ಹಾಟ್ ಮಗಾ ಅಂತಾ ಕೇಳುಗರ ಹೃದಯದ ಕದ ತಟ್ಟುವ ಆರ್‌ಜೆ ವಿಕ್ಕಿ

'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು...' ಎಂಬ ಗಾದೆ ಇದ್ದರೂ, ಮಾತು ಬಲ್ಲವನಿಗೆ ರೋಗವಿಲ್ಲ ಎನ್ನುತ್ತಾರೆ. ಮಾತು ಕರಗತವಾದವನು ಸಂಬಂಧವನ್ನಷ್ಟೇ ಮೆಂಟೈನ್ ಮಾಡೋಲ್ಲ, ಅದರಿಂದ ಹೊಟ್ಟೆ ತುಂಬಿಸಿಕೊಳ್ಳುವ ಉದ್ಯೋಗವನ್ನು ಹುಡುಕಿಕೊಳ್ಳಬಹುದು ಎನ್ನುವುದಕ್ಕೆ ಆರ್‌ಜೆ ವಿಕ್ಕಿ ಅತ್ಯುತ್ತಮ ಉದಾಹಣೆ

Sakkath Hot maga Radio jockey vickey and  his career wrote by sukanya nr rav
Author
First Published Nov 10, 2022, 12:39 PM IST

ಮಾತು ಮೃದುವಾದಷ್ಟು ಕೇಳುಗನ ಕಿವಿಯನ್ನು ಇಂಪಾಗಿಸುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ 
ಮಾತಿನ ಚಾಣಾಕ್ಷತನ ಬಲ್ಲವನು ಜೀವನದಲ್ಲಿ ಸೋತಿರುವ ಉದಾಹಣೆಯೇ ಇಲ್ಲ. ಏಕೆಂದರೆ ಮಾತು ಮನುಷ್ಯನ ಅತೀ ದೊಡ್ಡ ಬಂಡವಾಳ. ಹೀಗೆ ಮಾತಿನ ಮೂಲಕ ಜನರ ಮನ ಗೆದ್ದು, ಮಾತಿನ ಮೂಲಕವೇ ಜನರ ಮನದ ಕದ ತಟ್ಟಿ 'ಸಕತ್ ಹಾಟ್ ಮಗಾ' ಎಂದು ಶೋ ಶುರುಮಾಡುವ ವ್ಯಕ್ತಿಯೇ ಆರ್ ಜೆ ವಿಕ್ಕಿ.

ನನ್ನ ತಲೆ 100KM ಸ್ಪೀಡ್‌ನಲ್ಲಿ ಓಡುತ್ತೆ ಆದರೆ ನನ್ನ ಗಂಡಂದು ಸ್ಲೋ: RJ ಪುನೀತಾ ಆಚಾರ್ಯ

ಇವರು ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಬಾಲ್ಯ ಜೀವನವನ್ನು ಮಂಗಳೂರಿನಲ್ಲಿ ಕಳೆದರು. ಪದವಿ ಶಿಕ್ಷಣವನ್ನು ಬೆಂಗಳೂರಿನ ವಿಜಯ ಕಾಲೇಜು ಬಸವನಗುಡಿಯಲ್ಲಿ ಮುಗಿಸಿ, ಅಳಗಪ್ಪ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತೋತ್ತರ ಪದವಿ ಪಡೆದರು. ತಮ್ಮ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ,  ಶಾಲೆಯಲ್ಲಿ ನೆಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಕಲೆ  ಮೇಲೆ ಆಸಕ್ತಿ ಬೆಳೆಯಿಸಿಕೊಂಡರು.

ಐದು ವರ್ಷವಿರುವಾಗಲೇ ತಬಲ ನುಡಿಸುತ್ತಿದ್ದ ವಿಕ್ಕಿ:

ವಿಕ್ಕಿಯವರು ಐದು ವರ್ಷದ ಹುಡುಗನಾಗಿದ್ದಾಗಲೇ ಪಂಡಿತ್ ಶೇಷಾದ್ರಿ ಗವಾಯಿ ಮಾರ್ಗದರ್ಶನದಲ್ಲಿ 9 ವರ್ಷ ತಬಲ ಕಲಿತು,  ಗಣೇಶನ ಹಬ್ಬ ಹಾಗೂ ಅನೇಕ ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಜೊತೆಗೆ ಶಾಲೆಯಲ್ಲಿ ಏರ್ಪಡಿಸಿದ್ದ ಒಂದು ನಾಟಕದಲ್ಲಿ ವಿಕ್ಕಿಯವರನ್ನು ಮ್ಯೂಸಿಕ್ ಟೀಂ ನಲ್ಲಿ ಕುಳಿತುಕೊಳ್ಳುವಂತೆ ಹೇಳಿದ ಸ್ನೇಹಿತನ  ಮಾತು ಹಾಗೂ ವಿಕ್ಕಿಯವರ ಆ ಒಂದು ಅನುಭವ ಅವರನ್ನು ನಾಟಕದತ್ತ ಸೆಳೆಯುವಂತೆ ಮಾಡಿತು. 

ನಾಟಕ ಪ್ರಪಂಚದ ಮಿನುಗು ತಾರೆ ವಿಕ್ಕಿ :

1998ರಿಂದ 2008ರವರಿಗೆ ನಾಟಕ ಪ್ರಪಂಚದಲ್ಲಿ ತೇಲಿದ ವಿವೇಕ್ ಚಂದ್ರಹಾಸ, ಸಿರಿ ಸಂಪಿಗೆ, ಒಂದು ಸೈನಿಕ ವೃತ್ತಾಂತ ಹಾಗೂ ಅನೇಕ ನಾಟಕಗಳ ಜೊತೆಗೆ ಮ್ಯೂಸಿಕ್, ನೀನಾಸಂ ಮೇಳಗಳ ತಂಡದೊಂದಿಗೆ ಕಾರ್ಯನಿರ್ವಹಿಸಿ, ನಾಟಕದಲ್ಲಿ ನಟಿಸುತ್ತಾ ಹಲವು ಕಾರ್ಯಗಾರವನ್ನು ನೀಡುತ್ತಿದ್ದರು.

ಆರ್ ಜೆಯಾಗಿ ಮಿರ್ಜಿ ಪಯಣ:

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ,  98.3 ಎಫ್ಎಂ ರೇಡಿಯೋದಲ್ಲಿ ಒಂದು ಕಾರ್ಯಕ್ರಮ ನಡೆಸಿಕೊಡುವಂತೆ ಹತ್ತು ದಿನಕ್ಕೆಂದು ವಿಕ್ಕಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಪಟ್ ಪಟ್ ಅರಳು ಹುರಿದಂತೆ ಮಾತನಾಡುವ ಇವರ ಮಾತಿನ ವೈಖರಿಗೆ ಮರುಳಾಗಿ ಮನಸೋತ ಮಿರ್ಚಿ ರೇಡಿಯೋದಲ್ಲಿ ಆರ್‌ಜೆಯಾಗಿ ಮುಂದುವರಿಯುವಂತೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಇವರ ಜೀವನದ ದಿಕ್ಕನ್ನೇ ಬದಲಿಸಿತು. ಹತ್ತು ದಿನಕ್ಕೆ  ಆರ್‌ಜೆಯಾಗಿ ಬಂದ ಇವರು, ಹತ್ತು ವರ್ಷವಾದರೂ ತಮ್ಮ ವೃತ್ತಿ ಜೀವನವನ್ನು ಕೈ ಬಿಡದೇ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು  ಹಲವಾರು ಕನಸುಗಳನ್ನು ಹೊತ್ತು ಸಾಗುತ್ತಿದ್ದಾರೆ. 

ಸಕತ್ ಹಾಟ್ ಮಗನ ಸಕತ್ ಶೋ :

ಮಂಗಳೂರಿನಲ್ಲಿ ರೇಡಿಯೋ ಜಾಕಿ ಹಾಗೂ ಕಾರ್ಯಕ್ರಮದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬೆಂಗಳೂರಿನ ರೇಡಿಯೋ ಮಿರ್ಚಿಯಲ್ಲಿ ರಾತ್ರಿ  9 ರಿಂದ 12ರವರಿಗೆ 'ಲಾಂಗ್ ಡ್ರೈವ್' ಎಂಬ ಶೋ  ಮೈಸೂರು ಹಾಗೂ ಬೆಂಗಳೂರಿನ ಸ್ಥಳಗಳಿಗೆ ಪ್ರಸಾರವಾಗುತ್ತಿದ್ದ ಏಕೈಕ ಕಾರ್ಯಕ್ರಮವಾಗಿತ್ತು. ಮಧ್ಯಾಹ್ನ 3 ರಿಂದ 5ರವರಿಗೆ  ಮೈಸೂರಿನಲ್ಲಿ ಪ್ರಸಾರವಾಗುವ  'Afternoon with vicky'ಎಂಬ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದಾರೆ.

ಅನುಭವದ ಹಂಚಿಕೆ :

ಬೆಂಗಳೂರು, ಮಂಗಳೂರು, ಉಡುಪಿ ಅನೇಕ ಕಡೆ ರೇಡಿಯೋ ಪ್ರಾಮುಖ್ಯತೆಯನ್ನು  ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಮಾಹಿತಿಯನ್ನು ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಶೀಘ್ರದಲ್ಲೇ ಶುರು ಮಾಡಲ್ಲಿರುವ 'TENT CINEMAS' ಸಂಸ್ಥೆಯ ಮುಖಾಂತರ ನಡೆಯುತ್ತಿರುವ ಅನೇಕ ಕಾರ್ಯಕ್ರಮಗಳಲ್ಲಿ ರೇಡಿಯೋ ಕುರಿತು ಹಾಗೂ ಸಿನಿಮಾ ರಂಗಕ್ಕೆ  ಸಂಬಂಧಿಸಿದಂತೆ ಯಾವ ರೀತಿ  ರೇಡಿಯೋದಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡಬಹುದು ಎಂಬ ಕಾರ್ಯಗಾರವನ್ನು ನಡೆಸಿಕೊಡುತ್ತಾರೆ.

ಮನದ ಮಾತು :

ವೃತ್ತಿ ಹಾಗೂ ಪ್ರವೃತ್ತಿ ಒಂದೇ ದೋಣಿಯಲ್ಲಿ ಸಾಗುತ್ತಿರುವುದರಿಂದ ಸಿನಿಮಾ ಕೂಡ ನನ್ನ ಜೀವನದ ಒಂದು ಭಾಗ ಕೂಡ ಹೌದು. ನನಗೆ ಹಾಸ್ಯಾತ್ಮಕ ಪಾತ್ರ ಅಂದ್ರೆ ತುಂಬಾ ಇಷ್ಟ. ಜನರನ್ನು ನಗಿಸಬೇಕೆಂಬುವುದು ನನ್ನ ಆಸೆ. ಯಾಕಂದ್ರೆ ಜನರ ಮುಖದಲ್ಲಿ ಬೇಜಾರು ಮೂಡುವಂತೆ ಮಾಡುವುದು ಅಷ್ಟು ಕಷ್ಟವಲ್ಲ. ಆದರೆ, ಅವರ ಮುಖದಲ್ಲಿ ನಗು ಮೂಡಿಸುವುದು ಒಬ್ಬ ನೈಜ ಕಲಾವಿದನಿಗೆ ಚಾಲೆಂಜ್ ಕೂಡ ಆಗಿರುತ್ತದೆ. ಆ ಕಾರಣಕ್ಕೆ ಕಾಮಿಡಿ ಪಾತ್ರಗಳನ್ನು ಹೆಚ್ಚು ಪ್ರೀತಿಸುತ್ತೇನೆ ಗೌರವಿಸುತ್ತೇನೆ. ಸ್ವೀಕರಿಸುತ್ತೇನೆ, ಎನ್ನುತ್ತಾರೆ.

ಪುನೀತ್ ಸ್ನೇಹಕ್ಕೆ ಜ್ಯೂ. ಎನ್.ಟಿ.ಆರ್ ಪ್ರೀತಿಯ ಬೆಸುಗೆ: ಹೇಗಿತ್ತು ಇಬ್ಬರ ನಡುವಿನ ಬಾಂಧವ್ಯ?

ಸಿನಿ ಕನಸ ಕಂಡ ವಿಕ್ಕಿ:

14 ವರ್ಷ ಆರ್‌ಜೆ ಆಗಿ ಕಾರ್ಯನಿರ್ವಹಿಸಿದ ವಿಕ್ಕಿ ,ಸಿನಿಮಾ ರಂಗದಲ್ಲೂ ತಮ್ಮ ಛಾಪನ್ನು  ಮೂಡಿಸುತ್ತಿದ್ದಾರೆ. ಪೊಲೀಸ್ ಎಂಬ ಕನ್ನಡ ವೆಬ್ ಸಿರಿಸ್‌ನಲ್ಲಿ ಕಾಸರಗೋಡಿನ ಸೀರಿಯಲ್ ಕಿಲ್ಲರ್ ಪಾತ್ರದಲ್ಲಿ ನಟಿಸಿದ್ದು, ಮಾತ್ರವಲ್ಲದೇ 'ಗೌಜಿ ಗಮ್ಮತ್' ತುಳು ಸಿನಿಮಾದಲ್ಲಿಯೂ ಅನೇಕ ತುಳುನಾಡ ಹಿರಿಯ ಕಲಾವಿದರೊಂದಿಗೆ ನಟಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅತೀ ಶೀಘ್ರದಲ್ಲಿಯೇ ಈ ಸಿನಿಮಾ ತೆರೆ ಕಾಣಲಿದೆ.

- ಸುಕನ್ಯಾ ಎನ್. ಆರ್
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ
ಆಳ್ವಾಸ್ ಕಾಲೇಜು ಮೂಡುಬಿದಿರೆ

Follow Us:
Download App:
  • android
  • ios