Varanasi:ವಿಶ್ವನಾಥನ ವಾರಾಣಸಿ ಪರ್ಯಟನೆ, ಡೆಲ್ಲಿ ಮಂಜು ಬರೆದ ಕಾಶಿ ಡೈರಿ!
ಮೂರು ದಿನಗಳ ಕಾಶಿ ಪ್ರವಾಸದಲ್ಲಿ ಒಮ್ಮೆಯೂ ಕೂಡ ಬೇರೆ ಊರಿನಲ್ಲಿದ್ದೇವೆ ಅನ್ನೋ ಭಾವನೆ ನಮಗೆ ಬರಲೇ ಇಲ್ಲ. ಯಾಕಪ್ಪ ಅಂದರೆ ನಮಗೆ ಬೇಕಾದ ಅದರಲ್ಲೂ ದಕ್ಷಿಣ ಭಾರತೀಯರು ಹೆಚ್ಚಾಗಿ ಸೇವಿಸುವ ದೋಸೆ, ಇಡ್ಲಿಯಿಂದ ಹಿಡಿದು ಎಲ್ಲಾ ತರಹದ ಆಹಾರಗಳು ಸಿಗುತ್ತವೆ. ಜೊತೆಗೆ ನಮ್ಮದೇ ಟೌನ್‌ನಲ್ಲಿ ಓಡಾಡಿದ ಅನುಭವ ಆಗುತ್ತದೆ.
- ಡೆಲ್ಲಿ ಮಂಜು
ವೃತ್ತಿ ಬದುಕಿನಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ ಇದು. ನಾಸ್ತಿಕ, ಆಸ್ತಿಕ, ವಿಷ್ಣು ಆರಾಧಕ, ಶಿವನ ಆರಾಧಕ ಎಂಬೆಲ್ಲ ಸಿದ್ಧಾಂತಗಳಿಗೆ, ತಾತ್ವಿಕ ನಿಲುವುಗಳಿಗೆ ಮೀರಿದ ಸ್ಥಳ ಅಂಥ ನನಗೆ ಅನ್ನಿಸಿತು. ಇಡೀ ಊರಿನಲ್ಲಿ ಎಲ್ಲೇ ಹೆಜ್ಜೆ ಇಟ್ಟರೂ ಅಲ್ಲೊಂದು ಇತಿಹಾಸದ ಪುಟ ತೆರೆದುಕೊಳ್ಳುತ್ತೆ, ಇಲ್ಲಾ ಅಧ್ಯಾತ್ಮಕತೆ ಇಣುಕುತ್ತದೆ. ಆದರೆ ಇವೆಲ್ಲಕ್ಕೂ ಮೀರಿದ ವಾಸ್ತವ ಮಾತ್ರ ಪ್ರತಿ ಕ್ಷಣವೂ ಅರಿವಿನ ಪಟಲವನ್ನು ಸ್ಪರ್ಶಿಸುತ್ತಿತ್ತು.
ಇಲ್ಲಿ ಗುಡಿಗಳಿಗೆ ಬರವಿಲ್ಲ. ಒಂದು ಹಂತದಲ್ಲಿ ಮನೆ ಯಾವುದು, ಗುಡಿ ಯಾವುದು ಅನ್ನೋ ಗೊಂದಲ ಶುರುವಾಗುತ್ತದೆ. ಜೊತೆಗೆ ನಾವು ನಡೆದು ಹೋಗಿದ್ದು ಇದೇ ಗಲ್ಲಿಯಲ್ಲಾ ಅನ್ನೋ ಪ್ರಶ್ನೆ ಕೂಡ ಮೆದುಳಿಗೆ ಬಡಿಯುತ್ತೆ. ಯಾಕಪ್ಪ ಅಂದ್ರೆ ಧಾರ್ಮಿಕ ಇಲಾಖೆಗೂ ಲೆಕ್ಕ ಸಿಗದ ಗುಡಿಗಳಿವೆ, ತೆರಿಗೆ ವಸೂಲಿಯಲ್ಲಿ(ಮುನ್ಸಿಪಾಲಿಟಿಯವರಿಗೂ) ಯಾವುದೋ ಗಲ್ಲಿ ಬಿಟ್ಟನಲ್ಲಪ್ಪ ಅನ್ನೋವಷ್ಟು ಗಲ್ಲಿಗಳಿವೆ. ಅದರೂ ಕೂಡ ಒಮ್ಮೆ ನೋಡಲೇಬೇಕು ವಿಶ್ವನಾಥ ನೆಲೆಸಿರುವ ವಾರಣಾಸಿ ಅನ್ನೋ ಈ ಊರನ್ನು.
ಮುಕ್ತಿ ನಗರ ಅಂತ ಪುರಾಣಗಳಲ್ಲಿ ಉಲ್ಲೇಖವಿದ್ದರೂ ವಾಸ್ತವದ ಪ್ರತಿಬಿಂಬ ಅನ್ನುವಂತೆ ನಮ್ಮಗಳ ಮುಂದೆ ನಿಲ್ಲಿಸಿದ್ದು ಮಾತ್ರ ಆ ಕೇರಿ. ವಿಶ್ವನಾಥ ಮಂದಿರದ ನಾಲ್ಕನೇ ದ್ವಾರ ದಾಟಿ ಮುಂದಕ್ಕೆ ಇಪ್ಪತ್ತು ಹೆಜ್ಜೆ ಹಾಕಿದ್ರೆ ಸಿಗುತ್ತೆ ಆ ಕೇರಿ. ಕಾಶಿಯಲ್ಲಿ ನಿಂತು ನೋಡುವಾಗ ಇದೊಂದು ಗಲ್ಲಿಯಾಗಿಯೇ ಕಾಣುತ್ತೆ. ಆ ಕೇರಿಗೆ ಹೋಗುವ ಹೆಬ್ಬಾಗಿಲಲ್ಲಿ ನಿಂತರೇ ಎರಡು ರಸ್ತೆಗಳು ಕಾಣುತ್ತವೆ. ಎಡಬದಿಯ ಗಲ್ಲಿ ರಸ್ತೆಯನ್ನು ಆಯ್ಕೆ ಮಾಡಿಕೊಂಡು ಒಂದರ್ಧ ಕಿಲೋಮೀಟರ್ ಹೊರಟರೆ ಸಾಕ್ಷಾತ್ ಜೀವನ ದರ್ಶನವಾಗುತ್ತದೆ.
Bullet Train : ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ನಡುವೆ ಹೈಸ್ಪೀಡ್ ರೈಲು!ಮಣಿಕರ್ಣಿಕಾ ಘಾಟ್‌ಗೆ ಹೋಗುವ ರಸ್ತೆ ಅದು. ಕಾಶಿ ಅಂದ ಮೇಲೆ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ಅಂತ ಹೆಸರು ಹೇಳಿದ ಕೂಡಲೇ ಹೆಚ್ಚು ವಿವರಿಸಬೇಕಿಲ್ಲ. ಮನುಷ್ಯನ ಅಂತಿಮ ಘಟ್ಟ ಅಥವಾ ಮುಕ್ತಿಯ ಘಾಟ್‌ಗಳು ಎನ್ನಬಹುದು. ಶಿವ ಪಾರ್ವತಿಯರ ಮಣಿ ಮತ್ತು ಕರ್ಣಿಕ ಕಳೆದು ಹೋದ ಕಥೆ ಹೇಳುವ ರಸ್ತೆ ಇದು. ಇನ್ನು ಹರಿಶ್ಚಂದ್ರ ಇಲ್ಲಿನ ಸ್ಮಾಶನದಲ್ಲಿ ಕೆಲಸ ಮಾಡಿದ್ದ ಅನ್ನೋ ಪುರಾಣದ ವಿವರಣೆಯೂ ಸಿಗುತ್ತದೆ. ಕಾಶಿ ಅಂದರೆ ಚಿತೆ ತಣ್ಣಗಾಗದ ಊರು. ಉಸಿರು ನಿಂತ ದೇಹಗಳ ಯಾತ್ರೆಗೆ ರಾತ್ರಿ-ಹಗಲು ಅನ್ನೋದೇ ಇಲ್ಲ. ಇಲ್ಲಿನ ಮಣಿಕರ್ಣಿಕಾ ಘಾಟ್‌ಗೆ ಹೋಗುವ ಈ ಸಂದಿಯ ರಸ್ತೆ ಅಂತೂ ಶವ ನೋಡದ ಗಂಟೆ ಇಲ್ಲ, ದಿನವಂತೂ ಇಲ್ವೇ ಇಲ್ಲ ಬಿಡಿ. ಇನ್ನು ಈ ಘಾಟ್‌ನಲ್ಲಿ ಚಿತೆ ತಣ್ಣಗಾದ ಉದಾಹರಣೆಗಳೇ ಕಡಿಮೆಯಂತೆ. ಅರ್ಧ ಗಂಟೆ ಇಲ್ಲಿ ನಿಂತರೆ ಸಾಕು ಜೀವನದ ಅನೇಕ ಸತ್ಯಗಳು ಗೋಚರಿಸುತ್ತಾ ಹೋಗುತ್ತವೆ.
ಸ್ಮಶಾನ ವಾಸಿಯ ಊರಿನ ಆ ಸಂದಿಯಲ್ಲಿ ನಡೆದು ಹೋಗುವಾಗ ಹರ ಹರ ಮಹದೇವ್ ಅನ್ನೋ ಶಬ್ದಗಳು ಕೇಳಿ ಬಂದವು ಅಂದ್ರೆ ಅಲ್ಲೊಂದು ಶವ ಬರುತ್ತಿದೆ ಅಂತಲೇ ಅರ್ಥ. ಒಂದು ಗಂಟೆಗೆ ಕನಿಷ್ಠ ಮೂರರಿಂದ ನಾಲ್ಕು ಮೃತದೇಹಗಳ ದರ್ಶನವಾಗುತ್ತವೆ. ಅಯ್ಯೋ ಇದೆಲ್ಲಾ ಸಾಮಾನ್ಯ ವಿಚಾರ ಅಂತ ಅದೇ ಸಂದಿಯಲ್ಲಿ ನಡೆದು ಮಣಿಕರ್ಣಿಕಾ ಘಾಟ್ ತಲುಪಿದರೆ ಜೀವನದ ನಿಜವಾದ ವಾಸ್ತವ ಅರಿವಿಗೆ ಬರುತ್ತೆ.
ಮನುಷ್ಯ ಅಂದ್ರೆ ಇಷ್ಟೇನಾ? ಜೀವನ ಅಂದ್ರೆ ಇಷ್ಟೇನಾ? ಇಂಥ ಹತ್ತಾರು ಪ್ರಶ್ನೆಗಳು ಇಲ್ಲಿ ಕಾಡದೇ ಬಿಡುವುದೇ ಇಲ್ಲ. ನಾನು ಕ್ರೈಮ್ ಪತ್ರಕರ್ತನಾಗಿರುವ ಕಾರಣಕ್ಕೆ ಸ್ಮಶಾನ ನೋಡುವುದು ನನಗೆ ಹೊಸದಲ್ಲ. ಆದರೂ ಕಾಶಿಯ ಮಣಿಕರ್ಣಿಕಾ ಘಾಟ್ ಅಥವಾ ಹರಿಶ್ಚಂದ್ರ ಘಾಟ್ ನೋಡಬೇಕು ಅಂತ ಮನಸ್ಸು ಹೇಳುತ್ತಿತ್ತು. ಜೊತೆಗೆ ವಾರಾಣಸಿಯಲ್ಲಿ ಸಿಗುವ ಮುಕ್ತಿಯ ವಿಚಾರವಾಗಿ ಕೇಳಿದ್ದ ಹಲವಾರು ವ್ಯಾಖ್ಯಾನಗಳ ಬಗ್ಗೆ ಮಾಹಿತಿ ಪಡೆಯದಿದ್ದರೆ ಹೇಗೆ ಅಂತ ಆ ಗಲ್ಲಿಯಲ್ಲಿ ಗೆಳೆಯನ ಜೊತೆ ಜಾಡು ಹಿಡಿದು ಹೊರಟಾಗ ಹೆಚ್ಚು ಕಡಿಮೆ ರಾತ್ರಿ ಒಂಬತ್ತು ಗಂಟೆ. ನಿಗದಿತ ಸ್ಥಳ ತಲುಪುವ ಹೊತ್ತಿಗೆ ನಮಗೂ ಕೂಡ ಎರಡು ಮೂರು ಶವಗಳು ದರ್ಶನವಾಯ್ತು.
Kashi Vishwanath Dham: ಶಿವನೇ ಸ್ಥಾಪಿಸಿದ ಮೋಕ್ಷ ನಗರಿ ಕಾಶಿ, ಇಲ್ಲಿನ ವಿಸ್ಮಯಗಳ ಬಗ್ಗೆ ತಿಳಿಯಿರಿಕಟ್ಟಿಗೆ ಮಂಡಿಯ ನಡುವೆ ಬೆಂಕಿಯ ಕೆನ್ನಾಲಿಗೆ ಕಾಣುತ್ತಿದ್ದ ಕಾರಣಕ್ಕೆ ಒಂದರ್ಧ ಗಂಟೆ ದೂರದಲ್ಲೇ ನಿಂತೆ. ಒಳಗಡೆ ಹೋಗೋಣ ಬನ್ನಿ ಅನ್ನೋ ಗೆಳೆಯನ ಮಾತಿನಂತೆ ಹೆಜ್ಜೆ ಹಾಕಿದರೆ ಶವಗಳ ಸಾಲು ದರ್ಶನ. ಆ ಹೊತ್ತಲ್ಲಿ ಹೆಚ್ಚು ಕಡಿಮೆ ೨೦ಕ್ಕೂ ಹೆಚ್ಚು ಶವಗಳು ತಮ್ಮ ಸರದಿಗಾಗಿ ಕಾಯುತ್ತಿದ್ದವು. ಆ ಘಾಟಿನ ಒಂದು ಬದಿಯಲ್ಲಿ ಶವ ಸುಡಲು ಬಳಸುವ ಕಟ್ಟಿಗೆ ಮಂಡಿಯವನ ಬಿಜಿನೆಸ್. ಮತ್ತೊಂದು ಕಡೆ ಯಾವಾಗ ನಮ್ಮ ಶವದ ಸರದಿ ಬರಬಹುದು ಅಂತ ಕಾಯುತ್ತಿರುವ ಬಂಧುಗಳು. ಜೊತೆಗೆ ಶವಕ್ಕೆ ಬೆಂಕಿ ಕೊಡುವುದಕ್ಕೇ ಅಂತಲೇ ಇರುವ ಮನೆತನದವರ ಜೊತೆ ಶವ ತಂದವರ ಮಾತುಕತೆ.
ಸರದಿಯಲ್ಲಿ ಬಂದ ಶವವನ್ನು ಚಟ್ಟದ ಸಮೇತ ಅಂದರೆ ಅನಾಮತ್ತಾಗಿ ಮೂರು ಬಾರಿ ಗಂಗೆಯಲ್ಲಿ ಮುಳುಗಿಸಿ, ಉಸಿರು ನಿಂತಿರುವ ದೇಹಕ್ಕೆ ಅಂತಿಮ ಗಂಗೆಯ ಹನಿಗಳನ್ನು ಬಿಟ್ಟು ಜೋಡಿಸಿದ್ದ ಕಟ್ಟಿಗೆ ಮಂಡಿಯ ಮೇಲೆ ಇಟ್ಟು, ಶವಕ್ಕೆ ಬೆಂಕಿ ಕೊಡುವವನಿಂದ ಅಪ್ಪಣೆ ಅಂದರೆ ಬೆಂಕಿ ಪಡೆದು ಅಂತಿಮವಾಗಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಅಲ್ಲಿ ಪುರೋಹಿತನ ಮಂತ್ರ ಇಲ್ಲ. ಆ ಸಂಪ್ರದಾಯ, ಈ ಸಂಪ್ರದಾಯ ಅನ್ನೋ ಮಾತು ಇಲ್ಲ. ಎಲ್ಲರಿಗೂ ಮತ್ತು ಎಲ್ಲಾ ಶವಗಳಿಗೂ ಒಂದೇ ರೂಲ್ಸ್. ಬೆಂಕಿ ಕೊಡುವ ಮೇಟಿ ಏನ್ ಹೇಳ್ತಾನೋ ಅದೇ ಅಂತಿಮ. ಕಾಶಿಯಲ್ಲೇ ಮುಕ್ತಿ ಅಥವಾ ನಿರ್ವಾಣ ಹೊಂದುವಾಗ ಕಿವಿ ಮೇಲ್ಭಾಗವಾಗಿಸಿ ಜೀವ ಬಿಟ್ಟರೆ ಶಿವನೇ ನೇರವಾಗಿ ಬಂದು ಅಂತಿಮ ಉಪದೇಶ ಮಾಡಿದ್ದಾನೆ ಅನ್ನೋ ಮಾತು ಕೂಡ ಇಲ್ಲಿ ಚಾಲ್ತಿಯಲ್ಲಿದೆ.
ಇಷ್ಟೆಲ್ಲಾ ನೋಡಿದ ಮೇಲೆ ಲೈಫ್ ಅಂದರೆ ಇಷ್ಟೇನಾ ಅನ್ನೋ ಪ್ರಶ್ನೆ ಬಹಳವಾಗಿ ನನಗೆ ಕಾಡಿತು. ಜೀವನದಲ್ಲಿ ಗಳಿಸಿದ್ದ ಕೋಟಿಗಳು, ಜೊತೆಗೆ ನಿಂತವರು, ಜೀವನದಲ್ಲಿ ಜೊತೆಯಾದವರು, ಬಂಧು-ಬಳಗ ಯಾರೂ ಹಿಂದೆ ಬರಲ್ಲ ಅನ್ನೋ ಮಾತು ಪದೇ ಪದೇ ವೇದ್ಯವಾಗುತ್ತಿತ್ತು. ಮುಕ್ತಿಯ ನಗರಿಯಲ್ಲಿ ಮುಕ್ತಿಗಾಗಿ ಹೋಗುವ ಈ ಗಲ್ಲಿಯಲ್ಲಿ ಮತ್ತೆ ಹಿಂದಿರುಗಿ ಬರುವಾಗ ಸಾವು ಮತ್ತು ಸಾಧನೆ ಅನ್ನೋ ಪದಗಳು ಇನ್ನಿಲ್ಲದಂತೆ ಕಿವಿಗೆ ಅಪ್ಪಳಿಸುತ್ತಿದ್ದವು. ಜೊತೆಗೆ ಈ ರಸ್ತೆಯ ಜನ ಅಥವಾ ಈ ರಸ್ತೆಯ ನಿವಾಸಿಗಳು ಮದುವೆಗೆ ಮನೆಯ ಮುಂದೆ ಚಪ್ಪರ ಹಾಕಬೇಕಾದ್ರೆ ಏನ್ ಮಾಡ್ತಾರೆ ಅನ್ನೋ ಕೊಂಕು ಪ್ರಶ್ನೆ ಕೂಡ ಸ್ಮತಿ ಪಟಲದಲ್ಲಿ ಹಾದು ಹೋಯ್ತು.
ಸಿದ್ಧಾಂತ, ಆಸ್ತಿಕ, ನಾಸ್ತಿಕ ಅಂತೆಲ್ಲಾ ತತ್ವ ಹೇಳುವವರು ಒಮ್ಮೆ ಬದುಕಿನ ವಾಸ್ತವತೆ ಅಥವಾ ಜೀವನದ ಕೊನೆಯ ಯಾತ್ರೆ ಹೇಗಿರುತ್ತೆ ಅಂತ ಆ ಜಾಗದಲ್ಲಿ ನಿಂತು ನೋಡಿದರೆ ಆಯಸ್ಸು ಇರುವಾಗಲೇ ಮಾಡಿದ ತಪ್ಪುಗಳಿಗೆ ತಿದ್ದುಪಡಿ ಹಾಕಿಕೊಳ್ಳುವುದಕ್ಕೆ ಹಾದಿ ಸಿಗಬಹುದು. ಅದಕ್ಕೆ ಅಲ್ಲಿ ಒಮ್ಮೆ ಕಾಶಿಗೆ ಹೋಗಿ. ಹೋಗುವಾಗ ಸಿದ್ಧಾಂತ, ತತ್ವ ಪಕ್ಕಕ್ಕೆ ಇಟ್ಟು ಸಾಮಾನ್ಯನಂತೆ ಹೋಗಿ.
CMs Wives Day Out in Varanasi: ಮೀಟಿಂಗಲ್ಲಿ ಪತಿಯರು ಬ್ಯುಸಿ, ಶಾಪಿಂಗಲ್ಲಿ ಮಡದಿಯರು!ಮೂರು ದಿನಗಳ ಕಾಶಿ ಪ್ರವಾಸದಲ್ಲಿ ಒಮ್ಮೆಯೂ ಕೂಡ ಬೇರೆ ಊರಿನಲ್ಲಿದ್ದೇವೆ ಅನ್ನೋ ಭಾವನೆ ನಮಗೆ ಬರಲೇ ಇಲ್ಲ. ಯಾಕಪ್ಪ ಅಂದರೆ ನಮಗೆ ಬೇಕಾದ ಅದರಲ್ಲೂ ದಕ್ಷಿಣ ಭಾರತೀಯರು ಹೆಚ್ಚಾಗಿ ಸೇವಿಸುವ ದೋಸೆ, ಇಡ್ಲಿಯಿಂದ ಹಿಡಿದು ಎಲ್ಲಾ ತರಹದ ಆಹಾರಗಳು ಸಿಗುತ್ತವೆ. ಜೊತೆಗೆ ನಮ್ಮದೇ ಟೌನ್‌ನಲ್ಲಿ ಓಡಾಡಿದ ಅನುಭವ ಆಗುತ್ತದೆ.
ಇನ್ನು ಮೋದಿ ಸಾಹೇಬರ ಧಾರಾಳತನ, ರಾಜೀಸಂಧಾನದ ಮೂಲಕ ಜನರ ಮನಸ್ಸು ಗೆಲುವ ಮೂಲಕ ಮಾಡಿದ ಅಭಿವೃದ್ಧಿ ಕಾರ್ಯಗಳು ಎದ್ದು ಕಾಣುತ್ತವೆ. ಹಳೇ ಕೆಟ್ಟ, ಕೊಳಕು ಹಾಗು ಗಬ್ಬುನಾರುವ ಗಲ್ಲಿಗಳನ್ನು ನೋಡಿದ್ದ ಜನರು ಈಗ ಅಥವಾ ಐದಾರು ತಿಂಗಳು ಬಿಟ್ಟು ಕಾಶಿಗೆ ಹೋದರೆ ಅವರ ಅಭಿಪ್ರಾಯವೇ ಬದಲಾಗಬಹುದು.
ದಾರಿಯಲ್ಲಿ ನಾರದ ಸಿಕ್ಕಾಗ
ಮೋದಿ ಸಾಹೇಬರ ಸಂಸತ್ ಕ್ಷೇತ್ರದಲ್ಲಿ ಹೊಸ ಕಾರಿಡಾರ್ ಎಲ್ಲಾ ಸುತ್ತಾಡಿದ ಮೇಲೆ ದಶಾಶ್ವಮೇಧ ಘಾಟ್‌ನಲ್ಲಿ ಸಿಗುವ ಒಂದು ಬೋಟ್ ಹಿಡ್ಕೊಂಡು ಗಂಗೆಗೆ ಇಳಿದರೆ ಅಲ್ಲಿ ಇತಿಹಾಸ, ಪುರಾಣದ ಪಾತ್ರಗಳು ಬಂದು ಹೋಗುತ್ತವೆ. ಅಸ್ಸಿ ಘಾಟ್‌ನಿಂದ ಮಣಿಕರ್ಣಿಕಾ ಘಾಟ್ ತನಕ ಹೆಚ್ಚು ಕಡಿಮೆ ೮೪ ಘಾಟ್‌ಗಳು ಸಿಗುತ್ತವೆ. ಬೋಟ್ ನಡೆಸುವವನು ಒಂದಷ್ಟು ಇತಿಹಾಸ, ಪುರಾಣ ತುಣುಕುಗಳನ್ನು ಹೇಳುತ್ತಾನೆ. ಆದರೆ ಕಾಶಿ ಇತಿಹಾಸ, ಪುರಾಣ ಕಥೆಗಳು ಗೊತ್ತಿದ್ದವರು ಜೊತೆಗೆ ಸಿಕ್ಕರೆ ಇನ್ನೂ ಚೆನ್ನಾಗಿ ಮಾಹಿತಿ ಸಿಗುತ್ತದೆ. ನಮ್ಮ ಈ ಐಡಿಯಾದ ಪಾಲು ಹಂಚಿಕೊಂಡವರು ಪಂಚಪೀಠಗಳಲ್ಲಿ ಒಂದಾದ ಕಾಶಿ ಜಂಗಮವಾಡಿ ಪೀಠದ ಶ್ರೀಗಳ ಶಿಷ್ಯರು. ಸಿದ್ಧಲಿಂಗ ದೇವರು ಮತ್ತು ಬಸವ ದೇವರು.
ಹೀಗೆ ಬೋಟ್ ಹಿಡಿದು ಹೊರಟ ನಮಗೆ ನಾರದ ಘಾಟ್ ಸ್ಟೋರಿ ಹೇಳಿದರು. ಈ ಘಾಟ್‌ನಲ್ಲಿ ಸ್ನಾನ ಮಾಡಬಾರದು ಅಂದರು. ಯಾಕೆ ಅಂದರೆ ಇಲ್ಲಿ ಸ್ನಾನ ಮಾಡಿದವರು ವಿವಾದಗಳಿಗೆ ಆಹಾರವಾಗ್ತಾರೆ. ಅದರಲ್ಲೂ ಪತಿ-ಪತ್ನಿ ಸ್ನಾನ ಮಾಡಿದರೇ ಮುಗಿದೇ ಹೋಯ್ತು, ಇಬ್ಬರ ನಡುವೆ ಜಗಳಕ್ಕೆ ಫುಲ್ ಸ್ಟಾಪ್ ಬೀಳುವುದೇ ಇಲ್ವಂತೆ ಅಂದರು. ಪುರಾಣಗಳ ಪ್ರಕಾರ ಇಲ್ಲಿಗೆ ನಾರದ ಬಂದು ಸ್ನಾನ ಮಾಡಿದ್ದನಂತೆ ಅಂದರು.
ನಾವು ಪತ್ರಕರ್ತರು ಕೂಡ ಒಂದು ರೀತಿಯಲ್ಲಿ ನಾರದನ ವೇಷಧಾರಿಗಳೇ ಬಿಡಿ. ಅವರು ಹೇಳಿದ್ದು, ಇವರು ಕೇಳಿದ್ದು ಅಂತ ಒಬ್ಬರ ವಿಷಯ ಮತ್ತೊಬ್ಬರಿಗೆ ತಂದಿಡುವ ಕೆಲಸ ಮಾಡ್ತಾನೆ ಇರ್ತೇವೆ ಅಂದಾಗ ಎಲ್ಲರೂ ನಗೆಗಡಲ್ಲಿ ತೇಲಿದರು. ಆದರೆ ಪಕ್ಕದಲ್ಲಿ ಮೋಕ್ಷ ಮಹದೇಶ್ವರ ಅನ್ನೋ ದೇವಾಲಯ ಇದೆ. ಅಲ್ಲಿ ಹೋಗಿ ತಿಳಿಯದೇ ಸ್ನಾನ ಮಾಡಿ, ತಪ್ಪು ಮಾಡಿದೆವು ಕ್ಷಮೆ ಕೊಡು ತಂದೆ ಅಂದರೆ ಮಹದೇಶ್ವರ ಕ್ಷಮೆ ಕೊಡ್ತಾನೆ ಅಂತ ಮೋಕ್ಷದ ವಿಧಾನ ಕೂಡ ಹೇಳಿದರು.
ಕರ್ನಾಟಕ ಘಾಟ್ ಕೂಡ ಅಲ್ಲಿ ಇದೆ. ಮೈಸೂರಿನ ಒಡೆಯರು ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ಆ ಘಾಟ್ ಕಥೆ ಹೇಳುತ್ತೆ. ಕಾಶಿಗೂ ನಾಲ್ವಡಿ ಕೃಷ್ಣರಾಜ ಒಡೆಯರಿಗೂ ಅವಿನಾಭಾವ ಸಂಬಂಧ ಇದೆ. ಇಲ್ಲಿಗೆ ಏಳೆಂಟು ಬಾರಿ ಬಂದು ಗಂಗೆಯ ತೀರದಲ್ಲಿ ಧ್ಯಾನಕ್ಕೆ ಕೂರುತ್ತಿದ್ದರು ಎನ್ನುತ್ತೆ ಕಾಶಿಯಲ್ಲಿ ಮೈಸೂರು ಒಡೆಯರ ಇತಿಹಾಸ.
ದೂಧ್ ಮಂಡಿ
ಕಾಶಿಯಲ್ಲಿ ಸುತ್ತುವಾಗ ಅದರಲ್ಲೂ ಗೋಧೂಲಿ ಸರ್ಕಲ್‌ನಲ್ಲಿ ಹೋಗುವಾಗ ಕಣ್ಣಿಗೆ ಬಿದ್ದದ್ದು ಗೋಧೂಲಿ ದೂಧ್ ಮಂಡಿ. ಇಲ್ಲಿ ಫ್ರೆಶ್ ಹಾಲು ಸಿಗುತ್ತವೆ. ಸುತ್ತಲೂ ಊರಿನವರು ಈ ದೂಧ್ ಮಂಡಿಗೆ ಕ್ಯಾನುಗಳಲ್ಲಿ ಹಾಲು ತಂದು ಮಾರಾಟ ಮಾಡಿಕೊಂಡು ಹೋಗ್ತಾರೆ. ದಿನದ ೨೪ ಗಂಟೆ ಕೂಡ ಇಲ್ಲಿ ಹಾಲು ಸಿಗುತ್ತೆ ಅನ್ನೊ ಮಾಹಿತಿ ಸಿಕ್ಕಿತು. ನೋಡಿಯೇ ಬಿಡೋಣ ಅಂತ ಹೋದರೆ ಹಾಲಿನ ಕ್ಯಾನುಗಳ ರಾಶಿ. ತಮ್ಮ ಮನೆಗಳಿಂದ ಹಾಲು ಕರೆದು ತಂದು ಲೀಟರ್‌ಗಳ ಅಳತೆಯಲ್ಲಿ ಮಾರಾಟ ಮಾಡಲಾಗುತ್ತದೆ. ದೆಹಲಿಯಲ್ಲಿ ನಿತ್ಯವೂ ಮಿಲ್ಕ್ ಬೂತ್ ಹೋಗಿ ಹಾಲು, ಮೊಸರು ಖರೀದಿ ಮಾಡುವ ನಮಗೆ ದೂಧ್ ಮಂಡಿ ವಿಶೇಷವಾಗಿ ಕಂಡಿತು. ದೂಧ್ ಮಂಡಿಯ ಇರುವಿಕೆಯ ಬಗ್ಗೆ ಕೆದಕಿದರೆ ಎರಡು ಉತ್ತರ ಸಿಕ್ಕವು. ಅವು ಕೂಡ ಪಕ್ಕಾ ಆಗಿದ್ದವು. ಒಂದು ದೂಧ್ ಮಂಡಿಯ ಮುಂದೆಯೇ ಕಾಶಿ ವಿಶ್ವನಾಥ ದರ್ಶನಕ್ಕೆ ಹೋಗುವ ದಾರಿ. ವಿಶ್ವನಾಥನ ದರ್ಶನಕ್ಕೆ ಹೋಗುವ ಮಂದಿ ಅಭಿಷೇಕದ ಸಲುವಾಗಿ ಹಾಲು ಹಿಡಿದು ಹೋಗಲು ಸಹಾಯಕವಾಗುತ್ತೆ. ಮತ್ತೊಂದು ಕಾಶಿಯಲ್ಲಿ ಹಾಲಿನಿಂದ ತಯಾರಿಸುವ ವಿಶೇಷ ತಿನಿಸುಗಳನ್ನು ತಯಾರಿಕೆ, ಮಾರಾಟ ಜಾಸ್ತಿ.
ಲಸ್ಸಿ, ರಮಂಡಿ ಸೇರಿ ಹಲವು ಹಾಲಿನ ತಿನಿಸುಗಳು ಸಿಗುತ್ತೆವೆ. ಅದರಲ್ಲೂ ವಿಶ್ವನಾಥ ದೇವಾಲಯಕ್ಕೆ ಹೋಗುವ ಎಲ್ಲಾ ಗಲ್ಲಿಗಳಲ್ಲೂ ಈ ಹಾಲಿನ ಉತ್ಪನ್ನ ತಿನಿಸುಗಳು ಸಿಗುತ್ತವೆ. ಹಾಗಾಗಿ ರುಚಿ ನೋಡೋದು ಮರೆಯಬೇಡಿ. ಲವಂಗ್ ಲಫ ಅನ್ನೋ ಸ್ವೀಟ್ ಸಿಗುತ್ತೆ. ಒಮ್ಮೆ ಇದರ ಟೇಸ್ಟ್ ಮಾಡದೇ ಇರಬೇಡಿ.