ನೈಟ್ ಟ್ರೆಕ್ಕರ್ಸ್‌ಗೆ ಇಲ್ಲಿದೆ ಸ್ಪಾಟ್ ಗೈಡ್
ಜೀವನದಲ್ಲಿ ಮರೆಯಲಾಗದ ಅನುಭವ ಕೊಡುವ ತಾಕತ್ತು ಕೆಲ ಟ್ರೆಕಿಂಗ್ ಸ್ಪಾಟ್‌ಗಳಿಗೆ ಇದ್ದರೆ, ಮತ್ತೆ ಕೆಲವು ಯಾರೊಂದಿಗೆ ಹೋಗುತ್ತೇವೆ ಎಂಬುದನ್ನು ಆಧರಿಸಿರುತ್ತದೆ. ಹೇಗೇ ಬನ್ನಿ, ನಿಮಗೆ ಮೋಸವಿಲ್ಲ ಎಂದು ಕೈಬೀಸಿ ಕರೆಯುವ ಕೆಲ ನೈಟ್ ಟ್ರೆಕಿಂಗ್ ಸ್ಥಳಗಳಿವು.
ನೀವು ಈಗಾಗಲೇ ಹಲವು ಚಾರಣಗಳನ್ನು ಸವಿದು ಅದರ ರುಚಿಗೆ ಮಾರು ಹೋಗಿರುವುದರಿಂದಲೇ ಈ ಲೇಖನ ಓದುತ್ತಿದ್ದೀರಿ. ಇನ್ನೂ ಎಕ್ಸೈಟಿಂಗ್ ಆಗಿರುವಂಥ ಚಾರಣಗಳನ್ನು ಪೂರೈಸಬೇಕು ಎಂಬುದು ನಿಮ್ಮ ಯೋಜನೆಯಾಗಿದ್ದಲ್ಲಿ ಮುಂದಿನ ಬಾರಿ ನೈಟ್ ಟ್ರೆಕ್ ಟ್ರೈ ಮಾಡಿ. ಬೆಳಗ್ಗೆಯೇ ಚಾರಣ ಹೋಗಬಹುದಲ್ಲ, ರಾತ್ರಿ ಹೊತ್ತೇಕೆ ಹೋಗುವುದು ಎಂಬ ಪ್ರಶ್ನೆ ನಿಮ್ಮಲ್ಲಿ ಸುಳಿದಿರಬಹುದು. ಆದರೆ, ನೀವು ಕಾಂಕ್ರೀಟ್ ಕಾಡಿನಲ್ಲೇ ಹುಟ್ಟಿ ಬೆಳೆದವರಾಗಿದ್ದಲ್ಲಿ ಇದನ್ನು ಟ್ರೈ ಮಾಡಿ ನೋಡಲೇಬೇಕು. ಆ ಕಪ್ಪನೆಯ ಆಕಾಶ, ನಿಮ್ಮ ನಗರಗಳಲ್ಲಿ ಕಾಣದಷ್ಟು ನಕ್ಷತ್ರಗಳು, ಚಂದ್ರನಿಂದ ನಿಜಕ್ಕೂ ಇಷ್ಟೊಂದು ಬೆಳಕು ಬರುತ್ತದೆಯೇ ಎಂದು ಆಶ್ಚರ್ಯ ತರಿಸುವಂಥ ಬೆಳದಿಂಗಳು, ರಾತ್ರಿಯ ಕಗ್ಗತ್ತಲಲ್ಲಿ ಬೆಂಕಿ ಹಾಕಿಕೊಂಡು ಕುಳಿತು ತಿನ್ನುವುದು, ಹರಟುವುದರಲ್ಲಿರುವ ಮಜಾ, ಓರೆಕೋರೆಯ ಹಾದಿಯನ್ನು ಕತ್ತಲಲ್ಲಿ ಸವೆಸುವ ತಲ್ಲಣಗಳೆಲ್ಲವನ್ನೂ ಸವಿದೇ ನೋಡಬೇಕು.
ಭಾರತದಲ್ಲಿ ನೈಟ್ ಟ್ರೆಕ್‌ಗೆ ಹೇಳಿಮಾಡಿಸಿದ ಹಲವಾರು ಸುಂದರ ಜಾಗಗಳಿವೆ. ಅವುಗಳಲ್ಲಿ ಆಯ್ದ ಐದನ್ನು ಇಲ್ಲಿ ನೀಡಲಾಗಿದೆ.
ಅಂತರಗಂಗೆ
ಈ ನೈಟ್ ಟ್ರೆಕ್ಕನ್ನು ಉಳಿದವುಗಳೆಲ್ಲವಕ್ಕಿಂತ ಭಿನ್ನವಾಗಿಸುವುದು ಗುಹೆಯೊಳಗೆ ಹೋಗಿ ಅದರ ಅಂತರಂಗವನ್ನು ತಡಕಾಡುವುದು. ಇದು ಮನುಷ್ಯ ನಿರ್ಮಿತ ಮೇಜ್ ಆಟಗಳಿಲ್ಲವುಕ್ಕಿಂತ ಅಮೇಜಿಂಗ್ ಎನಿಸಲು ಕಾರಣಗಳಿವೆ. ಓರೆಕೋರೆ ನೆಲದಲ್ಲಿ, ಕತ್ತಲೆಯಿಂದಾವೃತವಾದ ಬಂಡೆಕಲ್ಲುಗಳೊಳಗೆ ಬ್ಯಾಟರಿ ಬಿಟ್ಟುಕೊಂಡು ಎಣಿಸಿ ಎಣಿಸಿ ಹೆಜ್ಜೆ ಹಾಕುವಾಗ ಕೇಳುವ ಜೀರುಂಡೆ ಸದ್ದು, ಬಾವಲಿಗಳ ರೆಕ್ಕೆಯ ಪಟಪಟ ನಿಮಗೊಂದು ಪರಮ ಸಾಹಸದ ಕೃತ್ಯ ಮಾಡುತ್ತಿರುವ ಅನುಭವ ನೀಡುವುದು. ಹಾಗೆ ನಡೆವಾಗ ಧುತ್ತೆಂದು ಕಿರಿದಾಗುವ ಗುಹೆಯೊಳಗೆ ತೆವಳುತ್ತಾ ನುಸುಳಿ, ಮತ್ತೆ ಎದ್ದು ನಡೆಯುತ್ತಾ ಹೋಗಿ, ಇದ್ದಕ್ಕಿದ್ದಂತೆ ಮೇಲೇರಿ ನಡೆವ ಆಟ ಮುಗಿಯಿತೆನ್ನುವ ಹೊತ್ತಿಗೆ ಕೋಟ್ಯಂತರ ನಕ್ಷತ್ರಗಳನ್ನು ಹೊತ್ತ ಬಾನು ಹೊರಗೆ ನಿಮ್ಮನ್ನು ಸ್ವಾಗತಿಸುತ್ತದೆ. ಆ ಕ್ಷಣ, ರೋಮಾಂಚನ...
ಆಗುಂಬೆಯಾ ಪ್ರೇಮ ಸಂಜೆಯಾ; ದಕ್ಷಿಣ ಭಾರತದ ಚಿರಾಪುಂಜಿ ಈಗ ಹೀಗಿದೆ.....
ಇಲ್ಲಿನ ದೇವಾಲಯಕ್ಕೆ ಮೆಟ್ಟಿಲೇರಿ ಸಾಗುವ ಚಾರಣ ಕೂಡಾ ನಿಮಗೊಂದಿಷ್ಟು ಸರ್ಪ್ರೈಸ್ ಕಾದಿರಿಸಿಕೊಂಡಿರುತ್ತದೆ.
ಧೋಟ್ರೆ ಟೊಂಗ್ಲು ಟಾಪ್
ಡಾರ್ಜಿಲಿಂಗ್ ಪಟ್ಟಣದಿಂದ ಕೆಲವೇ ಮೈಲುಗಳ ದೂರದಲ್ಲಿರುವ ಟೊಂಗ್ಲುವಿನತ್ತ ನಡೆವ ಟ್ರೆಕ್ ಬೆಳಗಿನ ಹೊತ್ತು ಕೂಡಾ ಬಹಳ ಚೆನ್ನಾಗಿರುತ್ತದೆ. ಆದರೆ, ಇಲ್ಲಿ ಸೂರ್ಯ ಹುಟ್ಟೋ ಸುಸಮಯಕ್ಕೆ ಸಾಕ್ಷಿಯಾದ್ರೆ ಅದು ನಿಮ್ಮ ಜೀವನದಲ್ಲೇ ಸುಮಧುರ ಸೂರ್ಯೋದಯವಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ರಾತ್ರಿ ಚಾರಣ ಮಾಡಿ ಇಲ್ಲಿ ಟೊಂಗ್ಲು ಟಾಪ್ ಹೋಗಿ, ಬೆಳಗಿನ ಜಾವಕ್ಕೆ ಸೂರ್ಯೋದಯವನ್ನು ನೋಡಲು ಕಾತರರಾಗಿ ಕುಳಿತುಕೊಳ್ಳಿ. ಜೊತೆಗೆ ಸಮಾನ ಮನಸ್ಕ ಗೆಳೆಯರಿದ್ದರೆ ಸಮಯ ಸರಿದದ್ದೇ ತಿಳಿಯುವುದಿಲ್ಲ.
ರಂಗನಾಥಸ್ವಾಮಿ ಬೆಟ್ಟ
ಬೆಂಗಳೂರಿನಿಂದ 80 ಕಿಲೋಮೀಟರ್ ದೂರದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿದೆ ರಂಗನಾಥ ಸ್ವಾಮಿ ಬೆಟ್ಟ. ಬಿಆರ್ ಹಿಲ್ಸ್ ಎಂದೇ ಖ್ಯಾತಿ ಪಡೆದಿರುವ ಈ ಬೆಟ್ಟವು ದಕ್ಷಿಣ ಭಾರತದಲ್ಲೇ ಅತಿ ಜನಪ್ರಿಯ ಚಾರಣ ತಾಣ. ಅದರಲ್ಲೂ ನೈಟ್ ಟ್ರೆಕ್‌ಗೆ ಹೇಳಿಮಾಡಿಸಿದಂತಿದೆ. ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಚಾರಣ ಆರಂಭಿಸಿದಿರಾದರೆ ಬಿಆರ್ ಹಿಲ್ಸ್‌ನಲ್ಲಿ ಬೆಳಕು ಮೂಡಿಸುವ ಹೊತ್ತಿಗೆ ನಿಮ್ಮ ಬದುಕಲ್ಲಿ ಹೇಳಲು ರಮ್ಯ ಕತೆಗಳು ಹುಟ್ಟಿಕೊಂಡಿರುತ್ತವೆ. ಕಾವೇರಿ ನದಿ ಹಾಗೂ ಸಾವನ್‌ದುರ್ಗ ಬೆಟ್ಟಗಳ ಸಾಲಿನ ದೃಶ್ಯವೈಭವ ನೆನಪಿನ ಪಟಲದಲ್ಲಿ ಅಚ್ಚೊತ್ತುತ್ತವೆ.
ರಾಜ್‌ಮಾಚಿ ಟ್ರೆಕ್
ಇದು ಸುಮಾರು 18 ಕಿಲೋಮೀಟರ್‌ಗಳ ಟ್ರೆಕ್ ಆಗಿದ್ದು, ಲೋನಾವಾಲಾದಿಂದ ಆರಂಭವಾಗುತ್ತದೆ. ಹಸಿರು ದಟ್ಟ ಕಾಡು, ವಿವಿಧ ಸುಂದರ ಕೀಟಗಳು, ಬೆಳಕಿನೊಂದಿಗೆ ಸೆಣೆಸಾಡಲು ಹೋಗಿ ಜೀವ ಕಳೆದುಕೊಳ್ಳುವ ಹುಳುಗಳು, ಜೀರುಂಡೆಯ ಝೇಂಕಾರ- ನಿಮ್ಮ ಮೀಟರ್ ಚೆಕ್ ಮಾಡುತ್ತವೆ. ಸಾಮಾನ್ಯವಾಗಿ 10ರಿಂದ 12 ಗಂಟೆಯ ಟ್ರೆಕ್ ಇದು. ಹಾಗಾಗಿ, ಹಲವರು ದಾರಿಯಲ್ಲಿ ಸಿಗುವ ಹಳ್ಳಿಯೊಂದರಲ್ಲಿ ಕ್ಯಾಂಪ್ ಹಾಕಿಯೋ ಅಥವಾ ಹೋಂಸ್ಟೇಯಲ್ಲಿ ಉಳಿದೋ ಮುಂದೆ ತೆರಳುತ್ತಾರೆ. ಹಾಗೆ ಕ್ಯಾಂಪ್ ಹಾಕಿದರೂ, ಸೂರ್ಯೋದಯಕ್ಕೆ ಮುನ್ನ ರಾಜ್‌ಮಾಚಿ ಕೋಟೆ ಸೇರಿಕೊಳ್ಳಲು ಗುರಿಯಿಟ್ಟುಕೊಳ್ಳಿ. ನಿಮ್ಮ ಸುಸ್ತಾದ ದೇಹಕ್ಕೆ ಆಗ ಸಿಗುವ ರಿಫ್ರೆಶ್ಮೆಂಟ್ ಮರೆಯಲಾಗದ್ದು.
ಟ್ರಾವೆಲ್ ಅಂದ್ರೆ ದೀಪಿಕಾ ಸೂಟ್‌ಕೇಸ್‌ನಲ್ಲಿ ಏನೆಲ್ಲ ಇರುತ್ತೆ ಗೊತ್ತಾ?...
ಹರಿಶ್ಚಂದ್ರಗಢ್ ಟ್ರಕ್
ಮಹಾರಾಷ್ಟ್ರದ ಅತಿ ಜನಪ್ರಿಯ ಹಾಗೂ ಅಷ್ಟೇ ಕಠಿಣವಾದ ಚಾರಣ ಹಾದಿ ಹರಿಶ್ಚಂದ್ರಗಢ್‌ದು. ಸಾಮಾನ್ಯವಾಗಿ ಚಾರಣಿಗರು ತಮ್ಮ ತಾಳ್ಮೆ ಹಾಗೂ ಶಕ್ತಿಯನ್ನು ಪರೀಕ್ಷಿಸುವ ಸಲುವಾಗಿಯೇ ಈ ಸ್ಥಳ ಆಯ್ದುಕೊಳ್ಳುತ್ತಾರೆ. ಇಲ್ಲಿ ನೈಟ್ ಟ್ರೆಕ್ ಕೈಗೊಂಡಾಗ ಮಧ್ಯದಲ್ಲಿ ಸಿಗುವ ಗುಹೆ ಹಾಗೂ ದೇವಾಲಯಗಳಲ್ಲಿ ಕ್ಯಾಂಪಿಂಗ್ ನಡೆಸುವುದನ್ನು ಮಿಸ್ ಮಾಡಬೇಡಿ. ಚಾರಣದ ಕಷ್ಟಕರ ಹಾದಿ ಎಷ್ಟು ಸುಸ್ತಾಗಿಸುತ್ತದೋ, ಮೇಲಿನ ದೃಶ್ಯಾವಳಿ ಕ್ಷಣಾರ್ಧದಲ್ಲಿ ರಿಫ್ರೆಶ್ ಮಾಡುತ್ತದೆ. ನಿಮ್ಮೆಲ್ಲ ಪರಿಶ್ರಮ ಸಾರ್ಥಕವಾಯಿತು ಎಂಬ ಭಾವ ನೀಡುತ್ತದೆ. ನಡೆವಾಗ ಹಾದಿ ಮಧ್ಯೆ ಸಿಗುವ ತೊರೆಗಳು, ಎತ್ತರ ಬೆಳೆದ ಹುಲ್ಲು, ಕಾಡು ಮುಂತಾದವು ಈ ಚಾರಣವನ್ನು ಹೆಚ್ಚು ಖಡಕ್ ಆಗಿಸುತ್ತವೆ.