Asianet Suvarna News Asianet Suvarna News

ಲಡಾಖ್ ಅಮೃತಯಾತ್ರೆ 2022 ಭಾಗ-14: ಕಡೆಯ ಎರಡು ದಿನ ಹೃದಯ ಭಾರ ಭಾರ

Ladakh Amrita Yatra: ಸೌಂದರ್ಯದ ಖನಿ ದೋಭಿ ಎಲ್ಲರನ್ನೂ ಅಯಸ್ಕಾಂತದಂತೆ ಸೆಳೆದಿಟ್ಟಿದ್ದೇಕೆ? ರಸಭರಿತ ತಾಜಾ ಸೇಬು ಊರಿಗೆ ಒಯ್ಯೋಣವೆಂಬ ಕನಸು ಈಡೇರಲಿಲ್ಲವೇಕೆ? 

ladakh amrita yatra 2022 part 14 last two days of adventure Ravishankar K Bhat mnj
Author
First Published Sep 24, 2022, 4:03 PM IST

-Ravishankar K Bhat, Executive Editor, Kannada Prabha (Twitter: @raveebhat)

ಸೌಂದರ್ಯದ ಖನಿ ದೋಭಿ ಎಲ್ಲರನ್ನೂ ಅಯಸ್ಕಾಂತದಂತೆ ಸೆಳೆದಿಟ್ಟಿದ್ದೇಕೆ? ರಸಭರಿತ ತಾಜಾ ಸೇಬು ಊರಿಗೆ ಒಯ್ಯೋಣವೆಂಬ ಕನಸು ಈಡೇರಲಿಲ್ಲವೇಕೆ? ದೋಭಿಯಿಂದ ಮಂಡಿಯವರೆಗೆ ಅದೆಷ್ಟು ಭೂಕುಸಿತಗಳು? ಸುಂದರನಗರದಲ್ಲಿ ಹಸಿದ ನಾವೆಲ್ಲ ತಿಂದದ್ದೇನು? ಚಂಡೀಗಢಕ್ಕೆ ತಲುಪಿದಾಗ ನಮ್ಮ ಸ್ಥಿತಿ ಏನಾಗಿತ್ತು? ಅನಂತ, ಅನಿಲ್ ರಾತ್ರೋರಾತ್ರಿ ಹೊರಟಿದ್ದೆಲ್ಲಿಗೆ? ರಾಯಲ್ ಎನ್ ಫೀಲ್ಡುಗಳಿಗೆ ವಿದಾಯ ಹೇಳುವಾಗ ಆಗಿದ್ದೇನು? ವಿವರಕ್ಕೆ ಮುಂದೆ ಓದಿ 

ದೋಭಿಯಿಂದ ಹೊರಡಲು ಅದೇಕೋ ಮನಸ್ಸೇ ಆಗಲಿಲ್ಲ:  ಯಾತ್ರೆ ಅಂತಿಮ ಚರಣ ತಲುಪಿತ್ತು. ಅವತ್ತು ಆಗಸ್ಟ್ 22. ಚಂಡೀಗಢಕ್ಕೆ ಇನ್ನೂ 285 ಕಿ.ಮೀ. ಸಾಗಬೇಕಿತ್ತು. ಒಂದೇ ದಿನ ಅಷ್ಟೂ ದೂರ ಕ್ರಮಿಸಲು ನಿರ್ಧರಿಸಿದ್ದರೂ ನಮಗೆ ಅದೇಕೋ ದೋಭಿಯನ್ನು ಬಿಟ್ಟು ಹೊರಡಲು ಆಗುತ್ತಲೇ ಇರಲಿಲ್ಲ. ನೀರಜ್ ರಾಥೋರೆಯ ಹೋಮ್ ಸ್ಟೇ ಸುತ್ತಲೂ ಹಸಿರು. ಅನತಿ ದೂರದಲ್ಲಿ ಹರಿಯುತ್ತಿದ್ದ ಬಿಯಾಸ್ ನದಿಯ ಜುಳು ಜುಳು ಸದ್ದು. 

ಅದರಿಂದಾಚೆ ಬೆಟ್ಟಗಳ ಸಾಲು. ಹಿಂಭಾಗದಲ್ಲಿ ಹೆಡೆಯೆತ್ತಿ ನಿಂತ ನಾಗರದಂತಿದ್ದ ಇನ್ನೊಂದು ಬೆಟ್ಟ. ಇಷ್ಟು ದಿನ ಬೋಳುಗುಡ್ಡ, ಪರ್ವತಗಳ ನಡುವೆ ಇದ್ದುದಕ್ಕೋ ಏನೋ, ದೋಭಿಯ ನಿಸರ್ಗ ನಮ್ಮನ್ನು ಆಕರ್ಷಿಸಿ ಬಂಧಿಸಿತ್ತು. ಸ್ನಾನ, ತಿಂಡಿ, ಪ್ಯಾಕಿಂಗ್ ಮುಗಿಸಿದರೂ ದಿನದ ಪ್ರಯಾಣ ಆರಂಭಿಸಲು ಉದಾಸೀನ. ಒಲ್ಲದ ಮನಸ್ಸಿನಿಂದ ನಮ್ಮ ಕುದುರೆಗಳನ್ನು ಏರಿದಾಗ ಮಧ್ಯಾಹ್ನಕ್ಕೆ ಕೇವಲ ಅರ್ಧ ಗಂಟೆ ಬಾಕಿ!

ತಾಜಾ ಸೇಬು ಹೊತ್ತೊಯ್ಯುವ ಕನಸು ಈಡೇರಲೇ ಇಲ್ಲ:  ಸ್ಪಿತಿ ಕಣಿವೆಯಿಂದ ದೋಭಿಗೆ ಬಂದು ನೆಲೆಸಿದ ನೀರಜ್ ಕುಟುಂಬ ಸುಮಾರು 8 ಎಕರೆ ಸೇಬಿನ ತೋಟ ಹೊಂದಿತ್ತು. ಯಥೇಚ್ಛವಾಗಿ ಹಣ್ಣನ್ನು ಬೆಳೆಯುತ್ತಿದ್ದರು ಅವರು. ಬೆಳೆದ ಹಣ್ಣನ್ನು ಸಮೀಪದ ಬೃಹತ್ ಹಣ್ಣಿನ ಮಾರುಕಟ್ಟೆಗೆ ಕಳಿಸುತ್ತಿದ್ದರು. ಒಮ್ಮೆ ಮಾರುಕಟ್ಟೆ ತಲುಪಿದರೆ ಮತ್ತೆ ಅದರ ತಾಜಾತನ ಅಷ್ಟಕ್ಕಷ್ಟೆ. ಹಾಗಾಗಿ, ನೀರಜ್ ತೋಟದಿಂದ ಆಗಷ್ಟೇ ಬಂದ ತಾಜಾ ಸೇಬಿನ ಹಣ್ಣುಗಳನ್ನು ಒಬ್ಬೊಬ್ಬರು ಎರಡೆರಡು ಕಿಲೋಗಳಷ್ಟಾದರೂ ಬೆಂಗಳೂರಿಗೆ ತರಬೇಕೆಂದು ಅಂದುಕೊಂಡಿದ್ದೆವು. 

ಲಡಾಖ್ ಅಮೃತಯಾತ್ರೆ-2022; ಭಾಗ-13, ಲೇಹ್‌ನಿಂದ ಮರಳುವಾಗ ಮಿಂಚಿನ ಓಟ !

ಆದರೆ, ನಮಗೆ ಆ ಅದೃಷ್ಟ ಇರಲಿಲ್ಲ. ಅವರು ಕೊಯ್ದ ಹಣ್ಣುಗಳನ್ನು ಹಿಂದಿನ ದಿನವಷ್ಟೇ ಮಾರುಕಟ್ಟೆಗೆ ಹಾಕಿದ್ದರು. ಆ ದಿನ ಕೊಯ್ಲು ಮಾಡಿದ ಫಸಲು ಸಂಜೆಯಷ್ಟೇ ಬರಬೇಕಿತ್ತು. ಹಾಗಾಗಿ, ಊರಿಗೆ ಸೇಬು ಒಯ್ಯುವ ಯೋಜನೆಗೆ ತಣ್ಣೀರು ಬಿತ್ತು. ಅವರು ನಿತ್ಯ ಬಳಕೆಗೆಂದು ಇಟ್ಟುಕೊಂಡಿದ್ದ ಸೇಬುಗಳಲ್ಲಿ ಒಂದಷ್ಟನ್ನು ಹೊಟ್ಟೆಗಿಳಿಸಿದೆವು. ಕಚ್ಚಿದರೆ ರಸ ಸುರಿಯುವಂಥ ತಾಜಾ ಸೇಬಿನ ಹಣ್ಣುಗಳವು. ಇಲ್ಲಿನ ಮಾರುಕಟ್ಟೆಯಲ್ಲಿ ಸಿಗುವ ಸೇಬಿಗಿಂತ ಒಂದೂವರೆ ಎರಡು ಪಟ್ಟು ದೊಡ್ಡದಿದ್ದವು.

ಯಾತ್ರೆಯ ಕಡೆಯ ದಿನವೂ ಕಾಡಿದ ಭೂಕುಸಿತ: ನೀರಜ್ ಆತಿಥ್ಯ, ಸೇಬಿನ ನೆನಪಿನೊಂದಿಗೆ ಕಡೆಗೂ ದೋಭಿಯಿಂದ ಪ್ರಯಾಣ ಆರಂಭಿಸಿದೆವು. ಬೈಕ್ ಚಾಲನೆಗೆ ತಂಡದವರು ನನಗೆ ಹಾಕಿದ್ದ ನಿರ್ಬಂಧ ಅವಧಿ ಅಂತ್ಯಗೊಂಡಿದ್ದರಿಂದ ಕಡೆಯ ದಿನದ ಪ್ರಯಾಣಕ್ಕೆ ನಾನು ಬುಲೆಟ್ ಏರಿದ್ದೆ. ಭುಜದಲ್ಲಿ ಸಣ್ಣಗೆ ನೋವಿದ್ದರೂ, ಬೈಕ್ ಸವಾರಿಯ ಬಯಕೆ ಅದನ್ನು ಮೆಟ್ಟಿ ನಿಂತಿತು. ಅಲ್ಲಿಂದ 20 ಕಿ.ಮೀ. ದೂರದ ಕುಲು, ಅಲ್ಲಿಂದ 10 ಕಿ.ಮೀ. ದೂರದಲ್ಲಿರುವ ಹಾಗೂ ಆ ಪ್ರದೇಶದ ಏಕೈಕ ವಿಮಾನ ನಿಲ್ದಾಣವಿರುವ ಭುಂತರ್‌ವರೆಗೆ ರಸ್ತೆಯಲ್ಲಿ ತಿರುವುಗಳಿದ್ದರೂ ಪ್ರಯಾಣ ಸೊಗಸಾಗಿತ್ತು. 

ನಾವು ಕುಲು ನಗರದ ಒಳಗೆ ಹೋಗದೆ ಬೈಪಾಸ್ ನಿಂದಲೇ ಆ ನಂಗರದ ಸೌಂದರ್ಯ ಆಸ್ವಾದಿಸಿ ಮುಂದುವರಿದೆವು. ಆದರೆ, ಭುಂತರ್‌ ದಾಟುತ್ತಿದ್ದಂತೆ ಶುರುವಾಯ್ತು ನೋಡಿ ಭೂಕುಸಿತ. ಅಲ್ಲಿಂದ ಮಂಡಿ 60 ಕಿ.ಮೀ. ಇತ್ತು. ಆ 60 ಕಿ.ಮೀ. ಸಾಗಲು ನಮಗೆ ಏನಿಲ್ಲವೆಂದರೂ 4 ತಾಸು ಬೇಕಾಯಿತು. ಅಷ್ಟೊಂದು ಭೂಕುಸಿತಗಳು. ಅವುಗಳನ್ನು ತೆರವು ಮಾಡಲು ಜೆಸಿಬಿಗಳ ನಿರಂತರ ಕಾರ್ಯಾಚರಣೆ. ಕೆಲವು ಕಡೆ ರಸ್ತೆಗೆ ಬಿದ್ದ ಬಂಡೆಗಳನ್ನು ಡೈನಮೈಟ್ ಮೂಲಕ ಸ್ಫೋಟಿಸಿ ನಂತರ ತೆರವು ಕಾರ್ಯಾಚರಣೆ. 

ಯಾತ್ರೆಯ ಮೊದಲ ದಿನ ನಾವು ಮಂಡಿಯಿಂದ ದೋಭಿಗೆ ಹಳೆಯ ಮನಾಲಿ ಹೆದ್ದಾರಿ ಮೂಲಕ ಹೋಗಿದ್ದರೆ, ಈ ಬಾರಿ ದೋಭಿಯಿಂದ ಮಂಡಿಗೆ ಹೊಸ ಹೆದ್ದಾರಿ ಮಾರ್ಗವಾಗಿ ಬಂದಿದ್ದೆವು. ರಸ್ತೆಯುದ್ದಕ್ಕೂ ಕನಿಷ್ಠ 5 ಭಾರೀ ಭೂಕುಸಿತ ಪ್ರದೇಶಗಳಿದ್ದವು. ರಸ್ತೆಗೆ ಬಿದ್ದ ಬಂಡೆ, ಮಣ್ಣನ್ನು ಕಣಿವೆಗೆ ತಳ್ಳಿ ವಾಹನ ಸಂಚಾರಕ್ಕೆ ಅನುವು ಮಾಡಿದ ಬಳಿಕವಷ್ಟೇ ಪ್ರಯಾಣ ಆರಂಭ. ಕೆಲವೊಮ್ಮೆ ಒಂದೊಂದು ಕಡೆ 8-10 ತಾಸು ಕಾದು ನಿಂತದ್ದೂ ಉಂಟಂತೆ. ಅಷ್ಟರಲ್ಲಿ ಮೇಲಿಂದ ಮತ್ತೊಂದು ಬಂಡೆ ಉರುಳುವುದೋ, ಇನ್ನೊಂದು ಭೂಕುಸಿತವೇ ಸಂಭವಿಸುವುದೋ ಆಗದಿದ್ದರೆ ಪುಣ್ಯ. 

ನಮ್ಮ ಅದೃಷ್ಟ ಚೆನ್ನಾಗಿತ್ತು. ಎಲ್ಲೂ ಹಾಗಾಗಲಿಲ್ಲ. ಅಲ್ಲದೆ, ವರುಣ ದೇವನ ಕೃಪೆಯಿಂದ ಎಲ್ಲೂ ಮಳೆಯೂ ಆಗಲಿಲ್ಲ. ಅಂತೂ ಇಂತೂ ಮಂಡಿ ತಲುಪಿದಾಗ 4 ಕಳೆದಿತ್ತು. ಎಲ್ಲರಿಗೂ ಹಸಿವಾಗತೊಡಗಿತ್ತು. ಮುಂದೆ ಸಿಗುವ 'ಒಳ್ಳೆಯ ಹೋಟೆಲ್‌'ನಲ್ಲಿ ಊಟ ಮಾಡುವುದು ಎಂದು ನಿರ್ಧರಿಸಿದ್ದೆವು.

ಸುಂದರನಗರದಲ್ಲಿ ತಿಂದ ಹಿಮಾಚಲಿ ಥಾಲಿಯ ಕತೆ: ರಸ್ತೆಯುದ್ದಕ್ಕೂ ಅಲ್ಲಲ್ಲಿ ಡಾಬಾಗಳು, ಹೋಟೆಲ್‌ಗಳು, ಸಣ್ಣ ಸಣ್ಣ ಉಪಾಹಾರ ಮಂದಿರಗಳು, ಬೇಕರಿಗಳು ಇದ್ದುವಾದರೂ ಯಾವುದೂ ನಮಗೆ ಇಷ್ಟವಾಗಲಿಲ್ಲ. ಹೆಚ್ಚಿನವು ವೆಜ್ ಮತ್ತು ನಾನ್ ವೆಜ್. ನಮಗೆ ಶುದ್ಧ ಶಾಕಾಹಾರಿ ಹೋಟೆಲ್ ಬೇಕಿತ್ತು. ಮಂಡಿಯಿಂದ ಸುಮಾರು 25 ಕಿ.ಮೀ. ಸಾಗಿದ್ದೆವು. ಸುಂದರ ನಗರ ಎಂಬ ಸುಂದರವಾದ ಪಟ್ಟಣ ತಲುಪಿದ್ದೆವು. ಗಂಟೆ 4.30 ಕಳೆದಿತ್ತು. 

ಇನ್ನು ಇಲ್ಲೇ ಸಿಗುವ ಯಾವುದಾದರೂ ಹೋಟೆಲ್‌ಗೆ ಹೊಗುವುದು ಅಂದುಕೊಳ್ಳುತ್ತಿರುವಾಗಲೇ ಆ ಪಟ್ಟಣದ ಸರೋವರದ ಸಮೀಪ ಒಂದು ಫಲಕ ಕಣ್ಣಿಗೆ ಬಿತ್ತು. 'ಅನ್ನಪೂರ್ಣ ಮಂಡ್ಯಾಲಿ ಧಾಮ್ - ಪ್ಯೂರ್ ವೆಜ್' ಎಂಬ ಫಲಕ ನಮ್ಮನ್ನು ಆಕರ್ಷಿಸಿತು. ನಾನು, ದಿಲೀಪ ಮುಂದೆ ಇದ್ದೆವು. ಥಾರ್ ಸ್ವಲ್ಪ ಹಿಂದೆ ಇತ್ತು. ನಾವು ಬೈಕನ್ನು ರಸ್ತೆ ಬದಿ ಹಾಕಿದವರೇ ಆ ಹೋಟೆಲ್‌ಗೆ ನುಗ್ಗಿದೆವು. ಕ್ಯಾಷ್ ಕೌಂಟರಿನಲ್ಲಿ ಗತ್ತಿನಿಂದ ಕೂತಿದ್ದ ವ್ಯಕ್ತಿಯ ಬಳಿ ಹೋಗಿ 'ಖಾನಾ ಮಿಲೇಗಾ ಕ್ಯಾ' ಅಂತ ಕೇಳಿದೆವು. ಆತ ಮುಖ ಗಂಟಿಕ್ಕಿಕೊಂಡೇ 'ಥಾಲಿ ಮಿಲೇಗಾ' ಅಂದ. 

'ಥಾಲೀ ಕೇ ಬಿನಾ ರೋಟಿ ಯಾ ಪರಾಠಾ ಅಲಗ್ ಅಲಗ್ ಮಿಲೇಗಾ ಕ್ಯಾ' ಅಂತ ಕೇಳಿದರೆ ಮುಗುಮ್ಮಾಗಿ, 'ಥಾಲಿ ಹೈ. ಉಸ್ ಪೇ ಚಾವಲ್, ರೋಟಿ ಸಭೀ ಆಯೆಗಾ. ಅಲಗ್ ಅಲಗ್ ನಹೀ ಮಿಲೇಗಾ. ಚಾಹಿಯೇ ತೋ ಖಾವೋ' ಅಂದುಬಿಟ್ಟ. ನಾವು ಮುಖಮುಖ ನೋಡಿಕೊಂಡೆವು. ಥಾರ್‌ನಲ್ಲಿದ್ದವರಿಗೆ ಕರೆ ಮಾಡಿ ಹೀಗಂತೆ ವಿಷಯ ಅಂದರೆ, ಇನ್ನು ಬೇರೆಲ್ಲಿ ಹುಡುಕುವುದು ಅಲ್ಲೇ ಕೂತರಾಯಿತು ಅಂತ ಅಭಿಪ್ರಾಯ ಬಂತು. ಅಲ್ಲೊಂದು ಟೇಬಲ್ ಬಳಿ ಹೆಲ್ಮೆಟ್, ಜಾಕೆಟ್ ಕಳಚಿಟ್ಟು ಕೈ-ಮುಖ ತೊಳೆದುಕೊಂಡು ಬರೋಣ ಎಂದು ಅನುವಾದರೆ, ಆ ಕ್ಯಾಷಿಯರ್ ಬಂದು 'ಇಸ್‌ ಕೋ ಇಧರ್ ಮತ್ ರಖ್‌ನಾ. ಕೋಯಿ ಆಯಾ ತೋ ತಕ್‌ಲೀಫ್‌ ಹೋ ಜಾಯೇಗಾ. ವಹಾ ಬಾಜೂ ಮೇ ರಖೋ' ಅಂದ. 

ಖಾಲಿ ಹೊಡೆಯುತ್ತಿದ್ದ ಹೋಟೆಲಿಗೆ ಇನ್ಯಾರು ಬರುತ್ತಾರೆ, ಇವನಿಗೇನು ನಾವು ಇಲ್ಲಿ ತಿನ್ನುವುದು ಇಷ್ಟವಿಲ್ಲವಾ ಅಂದುಕೊಂಡೆವು. ಆತನ ಅನಾದರ ಕಂಡು ಒಳಗೊಳಗೇ ಕೋಪ ಕೆದರುತ್ತಿತ್ತು. ಆ ವೇಳೆಗೆ ಥಾರ್ ಕೂಡ ಬಂತು. ಅದರಲ್ಲಿದ್ದವರು ಜತೆಗೂಡಿದರು. ಥಾಲಿ ಅಂದರೆ ಬಹಳ ಆಗುತ್ತದೆ. ಆರು ಜನರಿಗೆ ಐದು ಸಾಕು ಎಂದು ಆರ್ಡರ್ ಮಾಡಿದರೆ ಆತ ಬಂದು 'ಛಹ್ ಆದ್ಮೀ ಹೈ ನಾ. ಪಾಂಚ್ ಕೈಸಾ ಹೋ ಜಾಯೆಗಾ' ಅಂದ. ನಮಗೋ ತಾಳ್ಮೆ ತಪ್ಪುತ್ತಿತ್ತು. 'ಜಿತ್ ನಾ ಹಮೇ ಚಾಹಿಯೇ ಉತ್‌ನಾ ಹೀ ಆರ್ಡರ್ ಕರೇಂಗೇ. ಹಮೇ ಪಾಂಚ್ ಥಾಲಿ ಚಾಹಿಯೇ' ಅಂದೆವು. ಆತ ಮತ್ತೆ, 'ತುಮ್ ಲೋಗ್ ಚಾವಲ್ ನಹೀ ಖಾವೋಗೇ ಕ್ಯಾ?' ಅಂತ ಕೇಳಿದ. 

ಲಡಾಖ್ ಅಮೃತಯಾತ್ರೆ-2022: ಭಾಗ-12, ನೋಡಿದಷ್ಟೂ ಮುಗಿಯೋದಿಲ್ಲ ಲೇಹ್ !

ಅನ್ನ ಬ್ರಹ್ಮನ ಊರಿಂದ ಬಂದ ನಮಗೆ 'ನೀವು ಅನ್ನ ತಿನ್ನುವುದಿಲ್ಲವಾ' ಅಂತ ಕೇಳ್ತಾನಲ್ಲ ಎಂಬ ಕೋಪದಲ್ಲೇ, 'ಹಮ್ ಬ್ಯಾಂಗಲೋರ್ ಲೋಗ್ ಹೈ. ಚಾವಲ್ ಹೀ ಹಮಾರಾ ಪ್ರಮುಖ್‌ ಖಾನಾ ಹೈ. ಏ ಕ್ಯಾ ಪೂಛ್ ರಹೇ ಹೋ ತುಮ್' ಅಂದೆ. ಆತ ಇದ್ದಕ್ಕಿದ್ದಂತೆ ಪ್ರಸನ್ನವದನನಾದ. 'ಆಪ್ ಲೋಗ್ ಏಕ್ ಕಾಮ್ ಕೀ ಜಿಯೇ. ಛಹ್ ಥಾಲಿ ಮಂಗ್‌ವಾಯಿಯೇ. ಹಮಾರಾ ಖಾನಾ ಜೋ ಬಾಹರ್ ಕಾ ಡಾಬಾ ಮೆ ಮಿಲ್ತಾ ಹೈ ವೈಸಾ ನಹೀ ಹೈ. ಏ ಶಾದಿ ವಗೈರೆ ಶುಭ್ ಸಮಾರೋಹ್ ಮೈ ಕರನೇವಾಲಾ ಶುದ್ಧ್ ಹಿಮಾಚಲಿ ಥಾಲಿ ಹೈ. ಏಕ್ ಬಾರ್ ಖಾ ಕೇ ದೇಖೋ' ಅಂದ. ಆಯ್ತೆಂದೆವು. 

ತಟ್ಟೆಯೊಂದಕ್ಕೆ 150 ರೂಪಾಯಿ. ಅನಿಯಮಿತ ಊಟ. ಬೇಕಾದಷ್ಟು ರೋಟಿ, ಅನ್ನ. ಐದು ಬಗೆಯ ಪದಾರ್ಥ. ಒಂದು ಸಿಹಿ ತಿನಿಸು. ಜತೆಗೆ ಸೌತೆಕಾಯಿ, ಹಸಿಮೆಣಸು. ಸೊಗಸಾದ ಆಹಾರ. ಆತನ ಬಗೆಗಿನ ಸಿಟ್ಟು ಜರ್ರನೆ ಇಳಿಯುತ್ತಿತ್ತು. ನಮಗೆ ಬೇಕಾದುದನ್ನು ಕೇಳಿ ಕೇಳಿ ಹಾಕಿಸಿಕೊಂಡೆವು. ಆತ ಆಗಾಗ್ಗೆ ನಮ್ಮ ಟೇಬಲ್ ಬಳಿ ಬಂದು 'ಕೈಸಾ ಹೈ ಖಾನಾ?' ಅಂತ ಕೇಳುತ್ತಿದ್ದ. 'ಔರ್ ಭೀ ಚಾಹಿಯೇ ತೋ ಪೂಚ್‌ ಲೋ' ಅನ್ನುತ್ತಿದ್ದ. ಅನಂತ ಎಲ್ಲ ಪದಾರ್ಥಗಳನ್ನೂ ಇಷ್ಟಿಷ್ಟರಂತೆ ತಟ್ಟೆಗೆ ಹಾಕಿಕೊಂಡಿದ್ದು ಕಂಡು ಓಡಿ ಬಂದ. 'ಯೇ ಕ್ಯಾ... ಸಭೀ ಮಿಕ್ಸ್ ಕಿಯಾ ತೋ ಉಸ್ ಕಾ ಸ್ವಾದ್ ಕೈಸಾ ಪತಾ ಚಲೇಗಾ? ಅಲಗ್‌ ಅಲಗ್‌ ಸೇ ಖಾವೋನಾ' ಅಂತ ಹುಸಿ ಮುನಿಸು ತೋರಿದ. ಅವನ ಅವತಾರ, ಅನಂತನ ಸಪ್ಪೆ ಮುಖ ಕಂಡು ನಾವು ನಕ್ಕೆವು. ಎಲ್ಲರೂ ತಟ್ಟೆ ಖಾಲಿ ಮಾಡಿ ಎದ್ದು ಕೈ ತೊಳೆದಾಗ ಆತ ಬೇರೆಯೇ ವ್ಯಕ್ತಿಯಾಗಿ ಕಂಡ. 

'ಯೇ ಧಾಮ್ ಖೋಲ್ ನೇ ಕೇ ಬಾದ್ ಇತನೇ ಸಾಲ್ ಮೇ ಆಪ್ ಜೈಸಾ ಲೋಗ್‌ ಮೈನೇ ದೇಖಾ ನಹೀ. ಬಹುತ್ ಅಚ್ಛೇ ತರೀಖೇ ಸೇ ಖಾಯಾ ಆಪ್ ನೇ. ಮುಝೇ ಬಹುತ್ ಖುಷೀ ಹುಯೀ' ಅಂತಂದು ಗೋಡೆ ಮೇಲೆ ಬರೆದಿದ್ದ ವಾಕ್ಯಗಳನ್ನು ತೋರಿಸಿದ. 'ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ. ಆದರೆ, ಆಹಾರವನ್ನು ಪೋಲು ಮಾಡಬೇಡಿ' ಎನ್ನುವುದು ಅದರ ಸಾರಾಂಶ. ಬರುವ ಗ್ರಾಹಕರು ಬೇಕಾಬಿಟ್ಟಿ ತಿಂದು, ತಟ್ಟೆಯಲ್ಲೇ ಬಿಟ್ಟು ಹೋಗುವುದನ್ನು ಕಂಡು ಆತ ಅದೆಷ್ಟು ಕಿರಿಕಿರಿಗೊಂಡಿದ್ದ, ನಾವು ಗಡದ್ದಾಗಿ ಊಟ ಮಾಡಿದ್ದು ಆತನಿಗೆ ಅದೆಷ್ಟು ಸಮಾಧಾನ ಕೊಟ್ಟಿತ್ತು, ಸರಿಯಾಗಿ ಊಟ ಮಾಡುವ ಗ್ರಾಹಕರಿಗಾಗಿ ಆತ ಶಬರಿಯಂತೆ ಕಾದಿದ್ದ ಎಂದೆಲ್ಲ ಅನ್ನಿಸಿ ಆತನ ಬಗೆಗಿನ ಅಭಿಪ್ರಾಯ ಇದ್ದಕ್ಕಿದ್ದಂತೆ ಬದಲಾಗಿ ಹೋಯಿತು. 

ಅಷ್ಟಕ್ಕೆ ಸುಮ್ಮನಿರದ ಆತ, ನಮ್ಮ ಹಾಗೂ ನಮ್ಮ ಯಾತ್ರೆಯ ಕುರಿತ ವಿವರಗಳನ್ನು ಕೇಳಿ ತಿಳಿದುಕೊಂಡ. ಹೆಸರು, ಫೋನ್ ನಂಬರ್ ತೆಗೆದುಕೊಂಡು ತನ್ನ ವಿಸಿಟಿಂಗ್ ಕಾರ್ಡ್ ಅನ್ನೂ ನೀಡಿದ. 'ಆಪ್‌ ಕೋ ಔರ್‌ ಭೀ 180 ಕಿಲೋಮೀಟರ್‌ ಜಾನಾ ಹೈ. ಹೋಶಿಯಾರೀ ಸೇ ರೈಡ್ ಕರೋ. ಮೈ ಕಭೀ ಬ್ಯಾಂಗಲೋರ್ ಆಯಾ ತೋ ಆಪ್‌ ಕೋ ಮಿಲೂಂಗಾ' ಅಂದು ಎದ್ದು ನಿಂತು ಕೈಮುಗಿದು ನಮ್ಮನ್ನು ಬೀಳ್ಕೊಟ್ಟ!

ಚಂಡೀಗಢ ತಲುಪಿದಾಗ ಮನಸ್ಸು ಮುದುಡಿತ್ತು: ಆಗಲೇ ಸಂಜೆ 5 ಕಳೆದಿತ್ತು. ಇನ್ನೂ ಕನಿಷ್ಠ 4.30 ತಾಸಿನ ಪ್ರಯಾಣ ಬಾಕಿ ಇತ್ತು. ಒಂದೇ ಒಂದು ಕಡೆ ಚಹಾ ಸೇವನೆ, ಮತ್ತೊಂದು ಕಡೆ ಗಟ್ಟಿಯಾಗಿದ್ದ ಬೈಕಿನ ಕ್ಲಚ್ ಲಿವರ್‌ಗೆ ಆಯಿಲ್‌ ಹಾಗೂ ಕಿತ್ತು ಹೋಗಿದ್ದ ಹಾರ್ನ್ ವಯರ್ ಬದಲಾವಣೆಗೆಂದು ನಿಲ್ಲಿಸಿದ್ದು ಬಿಟ್ಟರೆ ನಿರಂತರವಾಗಿ ಪ್ರಯಾಣಿಸಿದೆವು. ಬಿಲಾಸ್‌ಪುರ ದಾಟುವಷ್ಟರಲ್ಲಿ ಕತ್ತಲಾವರಿಸತೊಡಗಿತ್ತು. ಬಳಿಕ ಸ್ವರ್ ಘಾಟ್‌ ಇಳಿದು ಹಿಮಾಚಲ ಪ್ರದೇಶದಿಂದ ಪಂಜಾಬ್ ಪ್ರವೇಶಿಸಿದೆವು. 

ಕೀರತ್ ಪುರ್ ಸಾಹಿಬ್ ಎಂಬಲ್ಲಿಂದ ಸಮತಟ್ಟಾದ ಹೆದ್ದಾರಿ ಆರಂಭವಾಯಿತು. ಗಂಟೆ 8.30 ಆಗಿತ್ತು. ಚಂಡೀಗಢ ಇನ್ನೂ 75 ಕಿ.ಮೀ. ಇತ್ತು. ಒಂದೇ ತಾಸಲ್ಲಿ ಆ ದೂರ ಕ್ರಮಿಸಿದೆವು. ಮಾನಸ-ದೀಪ್ತಿ ಥಾರ್‌ನಲ್ಲಿ ಕುಳಿತೇ ಹೋಟೆಲ್ ಬುಕ್ ಮಾಡಿದ್ದರು. ಸಣ್ಣಗೆ ಮಳೆ ಹನಿಯುತ್ತಿತ್ತು. ಹೋಟೆಲ್‌ ತಲುಪಿದಾಗ ಯಾತ್ರೆ ಮುಗಿದ ಬೇಸರದಲ್ಲಿ ಎಲ್ಲರ ಹೃದಯಗಳೂ ಭಾರವಾಗಿದ್ದವು. ಮನಸ್ಸು ಮುದುಡಿತ್ತು.

ಅನಂತ್, ಅನಿಲ್ ನಿಲ್ಲದೆ ಹೋದದ್ದೆಲ್ಲಿಗೆ?: ಲಗೇಜ್‌ ಇಳಿಸಿದ ಅನಂತ ಹಾಗೂ ಅನಿಲ್ ಥಾರ್‌ ಹತ್ತಿಯೇ ಬಿಟ್ಟರು. ಇಲ್ಲೇ ಉಳಿದುಕೊಳ್ಳಿ ಬೆಳಗ್ಗೆ ಹೋದರಾಯಿತು ಅಂದರೂ ಕೇಳದೆ ಹೊರಟರು. 'ಎಲ್ಲಿಯವರೆಗೆ ಸಾಧ್ಯವೋ, ಅಷ್ಟು ದೂರ ಹೋಗುತ್ತೇವೆ. ಬರುವಾಗ ಉತ್ತರ ಪ್ರದೇಶ ಮೂಲಕ ಬಂದಿದ್ವಿ. ಈಗ ರಾಜಸ್ಥಾನ ಮೂಲಕ ಮರಳುತ್ತೇವೆ. ಸಾಧ್ಯ ಆದರೆ ಇವತ್ತೇ ಜೈಪುರಕ್ಕೆ ಹೋಗಿಬಿಡುತ್ತೇವೆ' ಅಂದ ಅನಂತ. ಅಲ್ಲಿಂದ ಜೈಪುರ 480 ಕಿ.ಮೀ. ಇತ್ತು. ಆಗಲೇ ರಾತ್ರಿ 10 ಕಳೆದಿತ್ತು. 

ಈಗಾಗಲೇ 280 ಕಿ.ಮೀ. ಪ್ರಯಾಣಿಸಿದ್ದಾಗಿದೆ, ಇನ್ನೂ 480 ಕಿ.ಮೀ. ಸಾಗುವುದು ಎಂದರೆ ತಮಾಷೆಯ ಮಾತೇ? ನನಗೆ ಕಣ್ಣು ಕತ್ತಲೆ ಬಂದ ಹಾಗಾಯಿತು. ಆದರೆ, ಅವರು ನಿರ್ಧಾರ ಬದಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅವರನ್ನು ಬೀಳ್ಕೊಟ್ಟ ನಾವು ರೂಮಿನಲ್ಲಿ ಲಗೇಜ್ ಇಟ್ಟು ಫ್ರೆಶ್‌ ಆಗಿ ಉತ್ತರ ಭಾರತೀಯ ಹೋಟೆಲೊಂದರಲ್ಲಿ ಊಟ ಮಾಡಿ ಬಂದೆವು. ಸ್ನಾನ ಮುಗಿಸುವಷ್ಟರಲ್ಲಿ ಮಧ್ಯರಾತ್ರಿ ಕಳೆದಿತ್ತು. 

ಥಾರ್‌ ನಲ್ಲಿ ಹೊರಟವರು ಎಲ್ಲಿಗೆ ತಲುಪಿದರು ಎಂದು ತಿಳಿಯಲು ಕರೆ ಮಾಡಿದರೆ, ಅವರು ದುಸ್ಸಾಹಸ ಕೈಬಿಟ್ಟು ಸುಮಾರು 150 ಕಿ.ಮೀ. ಸಾಗಿ ದಾಬಾವೊಂದರಲ್ಲಿ ಊಟ ಮಾಡಿ ಅಲ್ಲೇ ಠಿಕಾಣಿ ಹೂಡಲು ಸಿದ್ಧತೆ ನಡೆಸಿದ್ದರು. ಮರುದಿನ ಬೈಕನ್ನು ಶೋರೂಮಿಗೆ ತಲುಪಿಸಿ ಮಧ್ಯಾಹ್ನ 1.30ಕ್ಕೆ ವಿಮಾನ ಹತ್ತಬೇಕಿದ್ದ ಕಾರಣ ಹೆಚ್ಚು ತಡಮಾಡದೆ ಮಲಗಿದೆವು. 

ರಾಯಲ್ ಎನ್‌ಫೀಲ್ಡುಗಳಿಗೆ ಭಾವುಕ ವಿದಾಯ: ಬೆಳಗ್ಗೆ ಎದ್ದು ನಾವು ಉಳಿದಿದ್ದ ಹೋಟೆಲಲ್ಲೇ ತಿಂಡಿ ತಿಂದು ಬಂದು ಪ್ಯಾಕಿಂಗ್ ಎಲ್ಲ ಮುಗಿಸಿದೆವು. ಬಳಿಕ ನಾನು, ದಿಲೀಪ ರಾಯಲ್ ಎನ್‌ಫೀಲ್ಡ್ ಶೋ ರೂಮ್‌ಗೆ ಹೋದೆವು. ಅಲ್ಲಿ ಕೀಲಿ ಹಸ್ತಾಂತರ ಸೇರಿದಂತೆ ಕೆಲವು ಕಂಪನಿ ಪ್ರಕ್ರಿಯೆಗಳನ್ನು ಮುಗಿಸಿ ನಮ್ಮನ್ನು ಬರೋಬ್ಬರಿ 2490 ಕಿ.ಮೀ. ಸುರಕ್ಷಿತವಾಗಿ ಹೊತ್ತೊಯ್ದ ಬೈಕ್‌ಗಳ ಜೊತೆಗೆ ಒಂದಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡೆವು. 

ಶೋರೂಮ್‌ನವರಿಗೂ, ಬೈಕ್‌ಗಳಿಗೂ ವಿದಾಯ ಹೇಳಿ ಇಬ್ಬರೂ ಮುಖಮುಖ ನೋಡಿಕೊಂಡೆವು. ಏನೋ ಕಳೆದುಕೊಂಡ ಭಾವ ಇಬ್ಬರ ಮುಖದಲ್ಲೂ. ಕಣ್ಣಾಲಿಗಳಲ್ಲಿ ಇನ್ನೇನು ಉಕ್ಕಿ ಹರಿಯಬಹುದು ಎನ್ನುವಷ್ಟು ನೀರು. ತಡಮಾಡದೆ ಆಟೋ ಹತ್ತಿ ಹೋಟೆಲಿಗೆ ಬಂದು ಚೆಕ್ ಔಟ್ ಮಾಡಿ ಏರ್‌ ಪೋರ್ಟ್‌ ತಲುಪಿದಾಗ 12 ಆಗಿತ್ತು. ಅಷ್ಟೇನೂ ರಶ್ ಇರಲಿಲ್ಲ. 15 ನಿಮಿಷದಲ್ಲಿ ಚೆಕ್‌ ಇನ್ ಪ್ರಕ್ರಿಯೆ ಮುಗಿದು ಭದ್ರತಾ ತಪಾಸಣೆಯೂ ಆಯಿತು. ವಿಮಾನಕ್ಕೆ ಇನ್ನೂ ಟೈಮ್ ಇದ್ದ ಕಾರಣ ಏರ್‌ಪೋರ್ಟಿನ ಈಟರಿ ಒಂದರಲ್ಲಿ ಊಟದ ಶಾಸ್ತ್ರ ಮಾಡಿದೆವು.

ವಿಮಾನ ಹತ್ತಿ ಕುಳಿತರೆ, ಗಗನಸಖಿಯರು ಎಂದಿನಂತೆ ಸುರಕ್ಷತಾ ವ್ಯವಸ್ಥೆಯ ವಿವರಣೆ ಶಾಸ್ತ್ರ ಮಾಡಿದರು. ಟೇಕ್‌ ಆಫ್‌ ಆಗಿ ಸ್ವಲ್ಪ ಹೊತ್ತಿಗೆ ಕ್ಯಾಪ್ಟನ್ ಕಡೆಯಿಂದ ಒಂದು ಅನೌನ್ಸ್‌ಮೆಂಟ್‌ ಕೇಳಿ ಬಂತು. 'ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿರುವ ನಿಮಗೆ ಧನ್ಯವಾದ. ನೀವೀಗ 16000 ಅಡಿ ಎತ್ತರದಲ್ಲಿ ಹಾರುತ್ತಿದ್ದೀರಿ. ಮುಂದೆ ಸ್ವಲ್ಪ ಹವಾಮಾನ ವೈಪರೀತ್ಯವಿದೆ. ನಿಮ್ಮ ಸೀಟುಬೆಲ್ಟುಗಳನ್ನು ಬಿಗಿಯಾಗಿ ಧರಿಸಿ ಆರಾಮವಾಗಿ ಕುಳಿತುಕೊಳ್ಳಿ' ಅಂತ. 

ವಿಮಾನ ಹಾರುತ್ತಿರುವ ಎತ್ತರಕ್ಕಿಂತಲೂ 3000 ಅಡಿ ಎತ್ತರದಲ್ಲಿರುವ ಉಮ್ಲಿಂಗ್ ಲಾಕ್ಕೆ ರಸ್ತೆಯಲ್ಲಿ ಹೋಗಿದ್ದೆವಲ್ಲ ಎಂದು ಮಾತಾಡಿಕೊಂಡೆವು. ನಾವು ಲಡಾಖ್ ಸುತ್ತಾಟದ ಮೆಲುಕು ಹಾಕುತ್ತಿದ್ದರೆ ವಿಮಾನ ಬೆಂಗಳೂರು ನಿಲ್ದಾಣದಲ್ಲಿ ಇಳಿದು ತನ್ನ ಅವತ್ತಿನ ಪ್ರಯಾಣ ಮುಗಿಸಿತ್ತು. ನಾವು ಇಡೀ ಜೀವಮಾನ ನೆನಪಿಡುವಂಥ ಅಮೃತಯಾತ್ರೆ ಮುಕ್ತಾಯವಾಗಿತ್ತು.

Follow Us:
Download App:
  • android
  • ios