ಸಾಮಾನ್ಯ ವ್ಯಕ್ತಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಲು ಇನ್ನು ಜೆಫ್‌ ಬೆಜೋಸ್‌, ಎಲಾನ್‌ ಮಸ್ಕ್‌ ಅವರ ಕಂಪನಿಗಳಿಗೆ ಕಾಯಬೇಕಂತಿಲ್ಲ. ಮಸ್ಕ್‌ ಹಾಗೂ ಬೆಜೋಸ್‌ಗಿಂತ ಕಡಿಮೆ ಹಣಕ್ಕೆ ನೀವು ಬಾಹ್ಯಾಕಾಶದಲ್ಲಿ ಒಂದು ಗಂಟೆ ಕಾಲ ಕಳೆಯಬಹುದು.  ಇಂಥದ್ದೊಂದು ಮಹತ್ವಾಕಾಂಕ್ಷೆಯ ಪ್ಲ್ಯಾನ್‌ ಹೊಳೆದಿರೋದು ಭಾರತದ ಕಂಪನಿಗೆ. ಮುಂಬೈ ಮೂಲದ ಖಾಸಗಿ ಕಂಪನಿಯೊಂದು ಈ ಕುರಿತಾಗಿ ಇಸ್ರೋ ಹಾಗೂ ಟಾಟಾ ಇನ್ಸ್‌ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿದೆ. 

ಮುಂಬೈ (ನ.7): ಜಾಸ್ತಿ ಅಲ್ಲ, ಇನ್ನು ಮೂರೇ ವರ್ಷವಷ್ಟೇ. ಭಾರತದ ಬಾಹ್ಯಾಕಾಶ ಕಂಪನಿ ತಯಾರಿಸಿದ ಕ್ಯಾಪ್ಸೂಲ್‌ನಲ್ಲಿ ಕುಳಿತು ನೀವು ಬಾಹ್ಯಾಕಾಶ ಪ್ರಯಾಣ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಎಲಾನ್‌ ಮಸ್ಕ್‌ ಅಥವಾ ಜೆಫ್‌ ಬೆಜೋಸ್‌ ಕಂಪನಿಗೆ ಕೋಟಿಗಟ್ಟಲೆ ಹಣ ಕಟ್ಟಬೇಕಿಲ್ಲ. ಮುಂಬೈ ಮೂಲದ ಭಾರತೀಯ ಬಾಹ್ಯಾಕಾಶ ಕಂಪನಿ ಸ್ಪೇಸ್‌ ಔರಾ ಏರೋಸ್ಪೇಸ್‌ ಪ್ರೈವೇಟ್‌ ಲಿಮಿಟೆಡ್‌, 2025ರ ವೇಳೆಗೆ ಪ್ರಯಾಣಿಕರನ್ನು ಬಾಹ್ಯಾಕಾಶಕ್ಕೆ ಕಳಿಸುವ ಪ್ಲ್ಯಾನ್‌ ಹಾಕಿಕೊಂಡಿದೆ. ಆದರೆ, ಎಷ್ಟು ಹಣದಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ವಿದೇಶಿ ಕಂಪನಿಗಳಿಗಿಂತ ಬಹಳ ಕಡಿಮೆ ಹಣದಲ್ಲಿ ನಾವು ಬಾಹ್ಯಾಕಾಶಕ್ಕೆ ಹೋಗಬಹುದು ಎಂದು ತಿಳಿಸಲಾಗಿದೆ. ಈ ಕುರಿತಾಗಿ ಸ್ಪೇಸ್‌ ಔರಾ, ಇಸ್ರೋ ಹಾಗೂ ಟಾಟಾ ಇನ್ಸ್‌ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿದೆ. ಸ್ಪೇಸ್‌ ಔರಾ ಕಂಪನಿಯಿ ಬಾಹ್ಯಾಕಾಶ ಪ್ರಯಾಣಕ್ಕೆ ಕ್ಯಾಪ್ಸುಲ್‌ಅನ್ನು ಸಿದ್ಧ ಮಾಡುತ್ತಿತ್ತು. ಇದು 10 ಫೀಟ್‌ ಉದ್ದ ಹಾಗೂ 8 ಫೀಟ್‌ ಅಗಲವಾಗಿ ಇರಲಿದೆ. ಒಂದು ಕ್ಯಾಪ್ಸುಲ್‌ನಲ್ಲಿ ಆರು ಮಂದಿ ಪ್ರಯಾಣಿಕರು ಸುಲಭವಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.

ದೊಡ್ಡ ಬಲೂನ್‌ನ ಸಹಾಯದಿಂದ ಈ ಕ್ಯಾಪ್ಸುಲ್‌ ಭೂಮಿಯಿಂದ 35 ಕಿಲೋಮೀಟರ್ ಮೇಲೆ ಹಾರಲಿದೆ. ಈ ಎತ್ತರದಿಂದ ಕ್ಯಾಪ್ಸುಲ್‌ನಲ್ಲಿ ಕುಳಿತುಕೊಂಡಿರುವ ಪ್ರಯಾಣಿಕರು, ಸಂಪೂರ್ಣ ಗುಂಡಗಿನ ಭೂಮಿಯನ್ನು ಕಾಣಬಹುದು ಹಾಗೂ ಭೂಮಿಯ ಬೆನ್ನಿಗೆ ಇರುವ ಕತ್ತಲೆಯನ್ನೂ ಕೂಡ ಕಾಣಬಹುದಾಗಿದೆ.

ಸ್ಪೇಸ್‌ ಔರಾ ತನ್ನ ಕಂಪನಿಯ ಕ್ಯಾಪ್ಸುಲ್‌ಗೆ ಎಸ್‌ಕೆಎಪಿ-1 ಎಂದು ಹೆಸರನ್ನಿಟ್ಟಿದೆ. ಈ ಕ್ಯಾಪ್ಸುಲ್‌ನ ಮಾದರಿಯನ್ನು ಇತ್ತೀಚೆಗೆ ಆಕಾಶ್‌ ಎಲೆಮೆಂಟ್ಸ್‌ ಎಕ್ಸಿಬಿಷನ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಕೂಡ ಆಗಿರುವ ಆಕಾಶ್‌ ಪೊರ್ವಾಲ್‌, 2025ರ ವೇಳೆಗೆ ಜನರನ್ನು ಬಾಹ್ಯಾಕಾಶಕ್ಕೆ ಕಳಿಸಲು ಖಂಡಿತವಾಗಿಯೂ ಯಶಸ್ವಿಯಾಗಲಿದ್ದೇವೆ ಎಂದು ಹೇಳಿದ್ದಾರೆ. ಈ ಕ್ಯಾಪ್ಸುಲ್‌ನ ಉಡಾವಣೆಗಾಗಿ ಎರಡು ಸ್ಥಳಗಳನ್ನು ಈಗಾಗಲೇ ನಿಶ್ಚಯ ಮಾಡಲಾಗಿದೆ. ಮಧ್ಯಪ್ರದೇಶ ಹಾಗೂ ಕರ್ನಾಟಕವನ್ನು ಉಡಾವಣಾ ಸ್ಥಳಗಳನ್ನಾಗಿ ಕಂಪನಿ ಆಯ್ಕೆ ಮಾಡಿಕೊಂಡಿದೆ. ಅದರೆ, ಯಾವ ಪ್ರದೇಶದಿಂದ ಕ್ಯಾಪ್ಸುಲ್‌ ಉಡಾವಣೆ ಮಾಡಬಹುದು ಎನ್ನುವ ನಿರ್ಧಾರವನ್ನು ಕಂಪನಿ ಶೀಘ್ರವೇ ತಗೆದುಕೊಳ್ಳಲಿದೆ.

VSSC Recruitment 2022: 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ವಾಕ್‌ ಇನ್ ಸಂದರ್ಶನ

ಈ ಯೋಜನೆಗಾಗಿ ನಾವು ಇಸ್ರೋ ಹಾಗೂ ಟಿಐಎಫ್‌ಆರ್‌ ಸಹಾಯ ಹಾಗೂ ಸಲಹೆಯನ್ನೂ ಕೂಡ ಪಡೆದುಕೊಂಡಿದ್ದೇವೆ. ನಮ್ಮ ಈ ಮಿಷನ್‌ ಸಂಪೂರ್ಣವಾಗಿ ಯಶಸ್ವಿಯಾಗಬೇಕು ಎನ್ನುವ ನಿಟ್ಟಿನಲ್ಲಿ ತಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ. ಈ ಕ್ಯಾಪ್ಸುಲ್‌ ಬಹಳ ಆಧುನಿಕವಾಗಿದೆ. ಜೀವ ಉಳಿಸುವ ಸಾಧನಗಳನ್ನು ಕೂಡ ಈ ಕ್ಯಾಪ್ಸುಲ್‌ ಹೊಂದಿದೆ. ಅತ್ಯಾಧುನಿಕವಾದ ಸಂವಹನ ವ್ಯವಸ್ಥೆಗಳು ಕೂಡ ಇದರಲ್ಲಿ ಇರುತ್ತದೆ. ಹೀಲಿಯಂ ಬಲೂನ್‌ ಇದರ ಮೇಲೆ ಇರಲಿದೆ. ಬಾಹ್ಯಾಕಾಶಕ್ಕೆ ಹೋದ ನಂತರ, ಈ ಬಲೂನ್ ನಿಧಾನವಾಗಿ ಡಿಫ್ಲೇಟ್ ಆಗಲು ಪ್ರಾರಂಭವಾಗುತ್ತದೆ. ಕೆಳಗೆ ಬರುತ್ತಿರುವಾಗ, ಕ್ಯಾಪ್ಸುಲ್ ಮೇಲಿನ ಪ್ಯಾರಾಚೂಟ್ ತೆರೆಯುತ್ತದೆ. ಇದರಿಂದ ಪ್ರಯಾಣಿಸುವ ಜನರು ಸುರಕ್ಷಿತವಾಗಿ ಭೂಮಿಗೆ ಇಳಿಯಬಹುದು. 

ಚೀನಾದಿಂದ ಮಹತ್ವದ ಹೆಜ್ಜೆ, ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಕೋತಿ ಕಳುಹಿಸಲು ನಿರ್ಧಾರ!

ಭಾರತೀಯ ವಿಜ್ಞಾನ, ಸಂಸ್ಕೃತಿಯನ್ನು ಜಗತ್ತಿನ ಜನತೆಗೆ ಪರಿಚಯಿಸಲು ಬಯಸುತ್ತೇವೆ ಎನ್ನುತ್ತಾರೆ ಆಕಾಶ್. ಜೊತೆಗೆ ಬಾಹ್ಯಾಕಾಶ ಪ್ರಯಾಣ. ನಾವು ಸ್ಪೇಸ್‌ ಎಕ್ಸ್‌ ಮತ್ತು ಬ್ಲೂ ಆರಿಜಿನ್‌ಗಿಂತ ಅಗ್ಗದ ದರದಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಬಹುದು. ಆದರೆ, ಪ್ರಯಾಣಕ್ಕೆ ಎಷ್ಟು ಹಣವಿರಬಹುದು ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ. ಹೆಚ್ಚೂ ಕಡಿಮೆ 1 ಗಂಟೆಯ ಪ್ರಯಾಣಕ್ಕೆ 50 ಲಕ್ಷ ಇರಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ಆಕಾಶ್‌ ತಿಳಿಸಿದ್ದಾರೆ.