ಇದು ಕ್ಯಾಶ್‌ಮೀರಾ! ಪ್ರವಾಸ ದುಬಾರಿ, ಪ್ರವಾಸಿಗರು ಯರ್ರಾಬಿರ್ರಿ
ಇದ್ದಕ್ಕಿದ್ದಂತೆ ಎಲ್ಲರೂ ಕಾಶ್ಮೀರಕ್ಕೆ ಹೋಗಲು ಆರಂಭಿಸಿದ್ದೇ, ಈ ಪ್ರವಾಸ ಅತ್ಯಂತ ದುಬಾರಿಯಾಗುತ್ತಿದೆ. ಹತ್ತು ವರುಷಗಳ ಹಿಂದೆ ಇದ್ದದ್ದರ ಮೂರು ಪಟ್ಟು ಹಣ ಖರ್ಚು ಮಾಡಲು ಸಿದ್ಧರಿದ್ದವರಿಗೆ ಮಾತ್ರ ಶ್ರೀನಗರ. ಕುದುರೆಯ ರೇಟು ಯದ್ವಾತದ್ವಾ ಏರಿದೆ. ಕಾಶ್ಮೀರ ತಣ್ಣಗಿದೆ, ತಲೆ ಬಿಸಿಯಾಗುತ್ತದೆ.
- ಡಾ.ಕೆ.ಎಸ್. ಪವಿತ್ರ
‘ನೀವೆಷ್ಟುಕೊಟ್ರಿ ಕುದುರೆಗೆ?’
‘ಎರಡೂವರೆ ಸಾವಿರ. ಅದೂ ಚೌಕಾಸಿ ಮಾಡಿ ನಾಲ್ಕು ಸಾವಿರದಿಂದ ಇಳಿಸಿದೆವು.
ಚೌಕಾಸಿಯಲ್ಲಿ ಬಹು ಪರಿಣತೆಯಾದ ನಾನು 1800ಕ್ಕೆ ವ್ಯಾಪಾರ ಕುದುರಿಸಿದ್ದೆ! ಒಂದು ಕುದುರೆಗೆ .2500 ತೆತ್ತ ನವದಂಪತಿಗಳ ಮುಖ ಸ್ವಲ್ಪ ಮುದುಡಿತ್ತು.
ಈ ಮೊದಲು ಜಮ್ಮು -ಶ್ರೀನಗರಗಳಿಗೆ ಹೋಗುವ ಅವಕಾಶ ಬಂದಾಗ ತಪ್ಪಿಸಿಕೊಂಡಿದ್ದೆ. ಹೋಗಲು ಹೆದರಿಕೆ. ಆದರೆ ನೋಡುವ ಆಸೆ. ಈ ಬಾರಿ ಟ್ರಾವೆಲ್ ಏಜೆಂಟ್, ‘ಪ್ರವಾಸಿಗರಿಗೆ ಈಗ ಬಹಳ ಸೇಫ್. ಹಿಂದಿನ ದಿನಗಳಿಗಿಂತ 300 ಪಟ್ಟು ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಹೋಗುತ್ತಿದ್ದಾರೆ. ಈ ಅಭಯದಿಂದ ನಮ್ಮ ಪ್ರಯಾಣ ಆರಂಭವಾಯಿತು. ಪ್ರವಾಸೋದ್ಯಮವೇ ಇಲ್ಲಿಯ ಜೀವಾಳ. ಪ್ರವಾಸಿ ಕಂಪೆನಿಗಳು, ಚಾಲಕರು, ಹೋಟೆಲ್, ಕುದುರೆ ಸವಾರರು, ಗೈಡ್ ಹೀಗೆ ಹಲವು ಕೊಂಡಿಗಳ ಸರಪಣಿ.
ವೃತ್ತಿಬಾಂಧವರಾಗಿ ಒಬ್ಬರನ್ನೊಬ್ಬರು ಕಾಯುತ್ತ, ಬಂದ ಪ್ರವಾಸಿಗರ ಆರ್ಥಿಕತೆ-ಬುದ್ಧಿವಂತಿಕೆಯನ್ನು ಅಂದಾಜು ಮಾಡುತ್ತಾ ಇವರ ವೃತ್ತಿ ಬದುಕು ಸಾಗುತ್ತದೆ. ಮಾತು ಮಾತಿಗೆ ‘ನಿಮ್ಮ ಇಂಡಿಯಾದವರೇ ಇಲ್ಲಿ, ಇಂಥದ್ದನ್ನು ಕಟ್ಟಿರುವುದು’ ಎನ್ನುವುದು ಮಾಮೂಲು. ಅದಕ್ಕೆ ಪ್ರತಿಯಾಗಿ ಮಾತನಾಡದಿರುವುದೇ ಲೇಸು. ಅಭಿವೃದ್ಧಿಯ ಕೊರತೆ ಶ್ರೀನಗರದಂತಹ ರಾಜಧಾನಿಯಲ್ಲಿಯೂ ಎದ್ದು ಕಾಣುತ್ತದೆ. ಬಡತನ, ವಿದ್ಯೆಯ ಕೊರತೆ, ತತ್‌ಕ್ಷಣದ ಸುಖ-ಬರುವ ದುಡ್ಡು ಇವು ಇಲ್ಲಿನ ಜನರಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಜೊತೆಗೇ ‘ಇವರು ಪ್ರವಾಸಿಗರು, ನಮಗೆ ದುಡ್ಡು ಬರುವುದು ಇವರಿಂದಲೇ, ಹಾಗಾಗಿ ಇವರನ್ನು ಸಂತೋಷವಾಗಿಡುವುದು ಮುಖ್ಯ’ ಎಂಬ ಎಚ್ಚರವೂ ಇವರಲ್ಲಿದೆ.
Travel Tips : ಬೇಸಿಗೆ ರಜೆಯಲ್ಲಿ ಕಡಿಮೆ ಖರ್ಚಿನಲ್ಲಿ ಈ ದೇಶ ಸುತ್ತಾಡಿ ಬನ್ನಿ
ಹೂವು-ಹಿಮ-ಪರ್ವತ-ಕಣಿವೆ-ನೀರುಗಳ ಕಾಶ್ಮೀರ ‘ಸುಂದರ’ ಎನ್ನುವುದು ಹೆಜ್ಜೆ ಹೆಜ್ಜೆಗೆ ತೋರುತ್ತದೆ. ಆದರೆ ಇವೆಲ್ಲವನ್ನೂ ಆನಂದಿಸುವಾಗಲೂ ಅಸುರಕ್ಷತೆಯ ಭಯ ಹಿನ್ನೆಲೆಯಲ್ಲೇ ಇರುತ್ತದೆ. ಮೋಸವಂತೂ ಜೊತೆ ಜೊತೆಯಲ್ಲೇ ಬರುತ್ತದೆ! ಪ್ರವಾಸಕ್ಕೆ ಹೋದಾಗ ಸ್ವಲ್ಪ ಹೆಚ್ಚು ದುಡ್ಡು ತೆರುವುದು, ಸ್ವಲ್ಪ ಮೋಸ ಹೋಗುವುದು ಅಡ್ಡಿಯಿಲ್ಲ. ಆದರೆ ಕಾಶ್ಮೀರದ ಸೌಂದರ್ಯ ನಮ್ಮನ್ನು ಮರುಳು ಮಾಡುವಂತೆಯೇ, ಅಲ್ಲಿಯ ಮೋಸ ನಮ್ಮನ್ನು ಕಂಗಾಲು ಮಾಡುತ್ತದೆ.
ಮೊದಲ ದಿನ ಶ್ರೀನಗರದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಾಡಿದೆವು. ಶಂಕರಾಚಾರ್ಯ ಬೆಟ್ಟ, ಹಲವು ಮುಘಲ್ ಉದ್ಯಾನಗಳು, ಪ್ರವಾದಿ ಮೊಹಮ್ಮದರ ಗಡ್ಡದ ಕೂದಲಿರುವ ಹಜರತ್ ಬಾಲ್ ಮಸೀದಿ, ಜಾಮಿಯಾ ಮಸೀದಿ, ಕಾಶ್ಮೀರದ ಹಲವು ಕಡೆಗಳಿಂದ ಢಾಳಾಗಿ ಕಾಣುವ ‘ಡಲ್’ ಸರೋವರ, ಇವೆಲ್ಲವೂ ನೋಡುವ ತಾಣಗಳು. ಆದರೆ ಯಾವ ಸ್ಥಳದಲ್ಲಿಯೂ ವಿವರವಿರುವ ಫಲಕವಾಗಲೀ, ನಿಂತು ವಿವರಣೆ ಓದುವ ಅವಕಾಶವಾಗಲೀ ಇರುವುದು ಕಡಿಮೆಯೇ. ನಾವು ಹೋದ ಸಮಯ ಟ್ಯೂಲಿಪ್ ಹೂಗಳ ಕಾಲವಲ್ಲದಿದ್ದರೂ, ಬಣ್ಣ ಬಣ್ಣದ ಹೂಗಳು ಎಲ್ಲೆಡೆ ಇದ್ದವು.
ಹನಿಮೂನ್ ಹೋಗೋಕೆ ಭಾರತದಲ್ಲಿರೋ ಸೇಫ್ ಜಾಗಗಳಿವು
ಮರುದಿನ ಗುಲ್‌ಮಾಗ್. ಗೊಂಡೋಲಾ ಎರಡೂ ಹಂತಗಳ ಟಿಕೆಟ್ ಮೊದಲೇ ಖರೀದಿಸಿದ್ದರೂ, ಕ್ಯೂನಲ್ಲಿ ಕಾಯಬೇಕಾದ ಅವಧಿ ಬರೋಬ್ಬರಿ 2-3 ಗಂಟೆಗಳು. ಅಲ್ಲಿಯೂ ಅಷ್ಟೆ, ‘ದುಡ್ಡಿದ್ದರೆ ಮುಂದಪ್ಪ’! ಚಾಲಕ ಮೊದಲೇ ಗೊತ್ತು ಮಾಡಿರುವ ಗೈಡ್, ತನ್ನ ಸಂಪರ್ಕದ ಹಿಮಕ್ರೀಡೆ ಆಡಿಸುವ ಜನರತ್ತಲೇ ಕರೆದೊಯ್ಯುತ್ತಾನೆ. ಸ್ಕೀಯಿಂಗ್ ಆಡಿಸಿದಂತೆ ಮಾಡಿಸಿ, ಸ್ಲೆಜ್‌ನಲ್ಲಿ ಗಟ್ಟಿಕುಳ್ಳಿರಿಸಿ, ಹಿಗ್ಗಾಮುಗ್ಗಾ ಎಳೆದು ದೂಡಿ ಬಿಡುತ್ತಾರೆ. ಜನರ ತೂಕವನ್ನು ಈ ಪಾಟಿ ಹೊರುವ ಅವರ ದಣಿವು ನೋಡಲಾರದೆ ಕನಿಕರದಿಂದ ದುಡ್ಡು ಕೊಡಲೇಬೇಕಾಗುತ್ತದೆ. ಇವಿಷ್ಟಕ್ಕೇ ಜನ ಸುಸ್ತಾಗಿರುತ್ತಾರೆ. ಹಾಗಾಗಿ ‘ಗುಲ್ಮಾಗ್‌ರ್‍ನಲ್ಲಿ ಇರುವ ಉಳಿದ ಸ್ಥಳಗಳೇನು?’ ಅಂತ ನಾನು ಕೇಳಿದಾಗ ನಮ್ಮ ಗೈಡ್ ಮಹಾಶಯ ಕಣ್ಣು ಕಣ್ಣು ಬಿಟ್ಟ. ಬಿಡದೆ ‘ಗೂಗಲ್’ ಹಾಕಿ ತೋರಿಸಿದೆ. ಮತ್ತೆ ಪರ್ಸ್‌ಗೆ ಕತ್ತರಿ. ‘ನನ್ನ ಸ್ನೇಹಿತನದ್ದೇ ಸ್ಕಾರ್ಪಿಯೋ ಇದೆ. ನಿಮ್ಮ ಗಾಡಿ ಇಲ್ಲೆಲ್ಲೂ ಹೋಗುವ ಹಾಗಿಲ್ಲ, ನಾಲ್ಕು ಸಾವಿರ ಕೊಡಿ’ ಎಂದ. ಗಾಲ್ಫ್ ಕ್ಲಬ್, ಹತ್ತಿರದ ನದೀ ತೀರ, ರಾಜ ಹರಿಸಿಂಗರ ಅರಮನೆ, ಮಾತಾ ಮಂದಿರ ನೋಡಿದೆವು. ‘ಸಾವಿರಗಳಲ್ಲೇ ತಿರುಗಾಟ’ ಎಂದು ಮಾತಾಡಿಕೊಂಡೆವು.
ನಂತರದ್ದು ತಲೆಗೆ ದೊಡ್ಡ ಟೋಪಿ ಹಾಕಿಸಿಕೊಳ್ಳುವ ದಿನ! ಪೆಹಲ್‌ಗಾಂಗೆ ಹೋಗುವ ದಾರಿಯಲ್ಲಿಯೇ ಸೇಬು, ಸೇಬಿನ ರಸ, ಕೆಹವಾ ಚಾ, ಚಾದ ಜೊತೆಗೆ ‘ಶುದ್ಧ’ ಕೇಸರಿ, ಒಣಹಣ್ಣುಗಳು ಎಲ್ಲದರ ನೋಡುವಿಕೆ-ಮಾರಾಟ. ಎಲ್ಲವೂ ಮತ್ತೆ ಸಾವಿರಗಳಲ್ಲೇ. ಅಲ್ಲಿಂದ ಪೆಹಲ್‌ಗಾಂ ತಲುಪಿದರೆ ಕುದುರೆಗಳು ಮತ್ತೆ ಮುಂದೆ ಬಂದು ನಿಲ್ಲುತ್ತವೆ. ‘ನಾವೆಲ್ಲ ಮುಂದಿನ ಒಲಿಂಪಿಕ್ಸ್‌ಗೆ ಕುದುರೆ ಸವಾರಿಗೆ ಸ್ಪರ್ಧಿಸುತ್ತೇವೇನೋ’ ಎಂಬ ಅನುಮಾನ ಬರುವಷ್ಟುಕುದುರೆ ಸವಾರಿಯ ‘ಓವರ್‌ಡೋಸ್’. ನೀವು ನಿಲ್ಲುವ ಪ್ರತಿಯೊಂದು ತಾಣದಲ್ಲಿಯೂ ದುಬಾರಿ ಪಾಶ್‌ಮೀನಾ ಶಾಲು- 50 ರೂಪಾಯಿ ಚಹಾ , ಒಣ ಹಣ್ಣುಗಳು ದಿಗಿಲು ಮೂಡಿಸುತ್ತವೆ. ಬಡಪೆಟ್ಟಿಗೆ ಬಿಡುವುದೂ ಇಲ್ಲ.