ಟೋಕಿಯೋ 2020: ತೂಕ ಇಳಿಸಲು ಅಥ್ಲೆಟಿಕ್ಸ್ಗೆ ಬಂದು ಚಿನ್ನ ಗೆದ್ದ ನೀರಜ್
* ಟೋಕಿಯೋ ಒಲಿಂಪಿಕ್ಸ್ ಪದಕ ವೀರ ನೀರಜ್ ಚೋಪ್ರಾ ಹಿಂದಿದೆ ರೋಚಕ ಕಥೆ
* ತೂಕ ಇಳಿಸುವ ಸಲುವಾಗಿ ಅಥ್ಲೆಟಿಕ್ಸ್‌ನಲ್ಲಿ ತೊಡಗಿಕೊಂಡಿದ್ದ ನೀರಜ್
* ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದ ಚೋಪ್ರಾ
ನವದೆಹಲಿ(ಆ.08): ಕೆಲವೊಂದು ಸಣ್ಣ ಸಣ್ಣ ನಿರ್ಧಾರಗಳು ಅನಿರೀಕ್ಷಿತ ಗುರಿಗಳನ್ನು ತಲುಪಿಸುತ್ತವೆ ಎನ್ನುವುದಕ್ಕೆ ನೀರಜ್ ಚೋಪ್ರಾ ಜೀವನ ಕತೆಯೇ ಉದಾಹರಣೆ. ನೀರಜ್, ಅಂತಾರಾಷ್ಟ್ರೀಯ ಕ್ರೀಡಾಪಟುವಾಗಬೇಕು, ದೊಡ್ಡ ದೊಡ್ಡ ಪದಕಗಳನ್ನು ಗೆಲ್ಲಬೇಕು ಎಂದು ಕ್ರೀಡೆಗೆ ಬಂದವರಲ್ಲ. ಬಾಲ್ಯದಲ್ಲಿ ತೂಕ ಜಾಸ್ತಿ ಇದ್ದ ಕಾರಣ ತೂಕ ಇಳಿಸುವ ಸಲುವಾಗಿ ಅಥ್ಲೆಟಿಕ್ಸ್‌ನಲ್ಲಿ ತೊಡಗಿಕೊಂಡರು. ಈಗ ಒಲಿಂಪಿಕ್ಸ್ ಚಾಂಪಿಯನ್.
ಹರ್ಯಾಣದ ಪಾಣಿಪತ್ ಬಳಿಯ ಸಣ್ಣ ಗ್ರಾಮದ ನೀರಜ್ ಅವರದ್ದು 17 ಸದಸ್ಯರಿರುವ ತುಂಬಿದ ಕುಟುಂಬ. ನೀರಜ್ ಬಹಳ ತುಂಟನಾಗಿದ್ದರು. ಅವರನ್ನು ಯಾವುದಾದರೂ ಒಂದು ಕ್ರೀಡೆಗೆ ಸೇರಿಸಬೇಕು ಎಂದು ಮನೆಯವರೆಲ್ಲಾ ನಿರ್ಧರಿಸಿದಾಗ, ನೀರಜ್‌ರ ಚಿಕ್ಕಪ್ಪ ಅವರನ್ನು ಪಾಣಿಪತ್‌ನ ಶಿವಾಜಿ ಕ್ರೀಡಾಂಗಣಕ್ಕೆ ಕರೆದೊಯ್ದರು. ದಪ್ಪ ದೇಹದ ನೀರಜ್‌ಗೆ ಓಟದ ಕ್ರೀಡೆಗಳಲ್ಲಿ ಆಸಕ್ತಿ ಇರಲಿಲ್ಲ. ಕ್ರೀಡಾಂಗಣದಲ್ಲಿ ಕೆಲ ಹಿರಿಯರು ಜಾವೆಲಿನ್ ಥ್ರೋ ಎಸೆಯುತ್ತಿದ್ದನ್ನು ಕಂಡು ಮನಸಾಯಿತು. ಅಲ್ಲಿಂದ ಮುಂದಿನದ್ದು ಇತಿಹಾಸ.
ಟೋಕಿಯೋ 2020: ಬೆಳ್ಳಿಯೊಂದಿಗೆ ಆರಂಭ, ಚಿನ್ನದೊಂದಿಗೆ ಮುಕ್ತಾಯ!
2016ರಲ್ಲಿ ವಿಶ್ವ ಚಾಂಪಿಯನ್: ನೀರಜ್ ಜಾವೆಲಿನ್ ಥ್ರೋ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ಒಂದೊಂದೇ ಹೆಜ್ಜೆ ಮುನ್ನಡೆದರು. 2013ರಲ್ಲಿ ಉಕ್ರೇನ್‌ನಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದರೂ ಪದಕ ಸಿಗಲಿಲ್ಲ. 2014ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಕಿರಿಯರ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಬೆಳ್ಳಿ ಜಯಿಸಿದರು. ಅದು ಅವರ ಮೊದಲ ಅಂತಾರಾಷ್ಟ್ರೀಯ ಪದಕ.
2015ರ ರಾಷ್ಟ್ರೀಯ ಹಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ 77.33 ಮೀ. ಎಸೆದು ಪದಕ ಗೆದ್ದರು. ಹಿರಿಯರ ವಿಭಾಗದಲ್ಲಿ ನೀರಜ್‌ಗದು ಮೊದಲ ಪದಕ. ಅವರ ಜೀವನಕ್ಕೆ ತಿರುವು ಕೊಟ್ಟಟೂರ್ನಿಯೆಂದರೆ 2016ರ ಕಿರಿಯರ ವಿಶ್ವ ಚಾಂಪಿಯನ್‌ಶಿಪ್. ಆ ಕ್ರೀಡಾಕೂಟದಲ್ಲಿ 86.48 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಂಡರ್-20 ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದರು. ಆ ದಾಖಲೆ ಈಗಲೂ ಅವರ ಹೆಸರಿನಲ್ಲೇ ಇದೆ. 2018ರ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, 2017ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ ಗೆದ್ದಿದ್ದಾರೆ. 2017ರಲ್ಲಿ ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ ಅಧಿಕಾರಿಯಾಗಿ ಸೇರ್ಪಡೆಗೊಂಡ ನೀರಜ್, ಈಗ ಸುಬೇದಾರ್ ಆಗಿದ್ದಾರೆ. 2018ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.